ರೋಡಿಗೆ ಬರ್ತಾವ್ನೆ ಡ್ರೈವರಿಲ್ಲದ ಲೆಜೆಂಡ್! ಚಾಲಕ ರಹಿತ ಕಾರಿನ ಮೊದಲ ಹಂತವಾಗಿ ಹೋಂಡಾ ಕಂಪನಿ ಸೆನ್ಸರ್ ಒಳಗೊಂಡಿರುವ ಚಾಲನಾ ಸಹಾಯ ವ್ಯವಸ್ಥೆಯನ್ನು ಬಿಡುಗಡೆ ಮಾಡಿದೆ. ಚಾಲಕ ರಹಿತ ಕಾರಿನ ಮೊದಲ ಹಂತವಾಗಿ ಹೋಂಡಾ ಕಂಪನಿ ಸೆನ್ಸರ್ ಒಳಗೊಂಡಿರುವ ಚಾಲನಾ ಸಹಾಯ ವ್ಯವಸ್ಥೆಯನ್ನು ಬಿಡುಗಡೆ ಮಾಡಿದೆ. 2015ರ ಅಂತ್ಯಕ್ಕೆ ಜಪಾನ್‌ನಲ್ಲಿ ಬಿಡುಗಡೆಯಾಗಲಿರುವ 'ಲೆಜೆಂಡ್‌' ಹೆಸರಿನ ಕಾರಿನಲ್ಲಿ ಈ ಸಾಧನ ಅಳವಡಿಸಲು ಕಂಪನಿ ಚಿಂತನೆ ನಡೆಸಿದೆ. ಹಿಂಬದಿಯಲ್ಲಿ ಬರುವ ವಾಹನಗಳನ್ನು ನೋಡಲೆಂದು ಅಳವಡಿಸಲಾಗುವ ಕನ್ನಡಿಯ ಹಿಂಭಾಗದಲ್ಲಿ ಅಂದರೆ ಮುಂಬದಿ ಗ್ಲಾಸ್‌ನ ಮೇಲ್ಭಾಗದಲ್ಲಿ ಬ್ಯಾನೆಟ್ ನಡುವೆ ಇರುವ ಹೋಂಡಾ ಕಂಪನಿ ಲೋಗೋ ಇರುವಲ್ಲಿ ಒಂದು ಮಿಲಿಮೀಟರ್ ವೇವ್ ರಾಡಾರ್ ಅಳವಡಿಸಲಾಗುತ್ತದೆ. ಈ ಎರಡೂ ವ್ಯವಸ್ಥೆಗಳು ಜತೆಗೂಡಿ ಕಾರು ಡಿಕ್ಕಿಯಾಗುವುದನ್ನು ತಪ್ಪಿಸುತ್ತದೆ. ಅಥವಾ ಕಾರಿನ ಚಾಲಕನಿಗೆ ಎಚ್ಚರಿಕೆ ನೀಡುತ್ತದೆ. ಮಿಲಿ ಮೀಟರ್ ವೇವ್ ರಾಡಾರ್ ವಿಶೇಷವಾಗಿ ಪಾದಚಾರಿಗಳನ್ನು ಪತ್ತೆ ಮಾಡಿ ಚಾಲಕನಿಗೆ ತಿಳಿಸಲು ಸಹಕಾರಿಯಾಗಲಿದೆ. ಕ್ಯಾಮೆರಾ ಮತ್ತು ಮಿಲಿಮೀಟರ್ ರಾಡಾರ್‌ಗಳು ಕಾರಿಗಿಂತ 60 ಮೀಟರ್ ಮುಂದೆ ಇರುವ ವಸ್ತು ಅಥವಾ ವಾಹನಗಳನ್ನು ಗ್ರಹಿಸಬಲ್ಲವು. ಇವುಗಳಿಂದ ದೊರೆತ ಮಾಹಿತಿ ಆಧರಿಸಿ ಚಾಲಕನಿಗೆ ಶಬ್ದ ಮತ್ತು ದೃಶ್ಯ ಆಧಾರಿತ ಎಚ್ಚರಿಕೆ ನೀಡುತ್ತದೆ. ಚಾಲಕ ಯಾವುದೇ ಪ್ರತಿಕ್ರಿಯೆ ತೋರದಿದ್ದಲ್ಲಿ ಆಟೋ ಬ್ರೇಕ್ ವ್ಯವಸ್ಥೆ ಜಾರಿಯಾಗುತ್ತದೆ. ಎಕ್ಸಿಲರೇಟರ್‌ಗಳ ಸ್ಥಬ್ದಗೊಳ್ಳುತ್ತದೆ. ಒಂದು ಲೇನ್‌ನಲ್ಲಿ ಕಾರು ಚಲಿಸುತ್ತಿದ್ದಾಗ ಅದನ್ನು ಬಿಟ್ಟು ಬೇರೆಡೆ ಹೋದಾಗಲೂ ಈ ವ್ಯವಸ್ಥೆ ಚಾಲಕನನ್ನು ಎಚ್ಚರಿಸುತ್ತದೆ. ಸ್ಟೇರಿಂಗ್ ವೈಬ್ರೇಟ್ ಆಗುತ್ತದೆ. ಚಾಲಕ ಪ್ರತಿಕ್ರಿಯಿಸದಿದ್ದಲ್ಲಿ ಮೊದಲಿನ ಲೇನ್‌ಗೆ ಕಾರನ್ನು ತರಲೆತ್ನಿಸುತ್ತದೆ. ಕಾರು ರಸ್ತೆ ಬಿಟ್ಟು ಹೋಗುವ ಸ್ಥಿತಿ ನಿರ್ಮಾಣವಾದರೆ ಕಾರು ತನ್ನಿಂದ ತಾನೇ ಬ್ರೇಕ್ ಹಾಕುತ್ತದೆ. ನಿಂತಿದ್ದ ಕಾರು ಹೊರಡಿಸುವಾಗಲೂ ಈ ವ್ಯವಸ್ಥೆ ಚಾಲಕನಿಗೆ ಸಹಾಯ ಮಾಡುತ್ತದೆ. ಎದುರಿಗಿರುವ ಕಾರಿನಿಂದ ಇರುವ ದೂರದ ಆಧಾರದಲ್ಲಿ ಚಾಲಕ ಹೆಚ್ಚು ವೇಗವಾಗಿ ಕಾರನ್ನು ಹೊರಡಿಸಿದರೆ ಆ ಕಾರಿನ ಹಿಂಬದಿಗೆ ಡಿಕ್ಕಿಯಾಗಬಹುದು. ಅದನ್ನು ತಪ್ಪಿಸಲು ಚಾಲಕ ಹೆಚ್ಚು ಎಕ್ಸಿಲರೇಟ್ ಮಾಡುತ್ತಿದ್ದಂತೆ ಎಕ್ಸಿಲರೇಟರ್ ನಿಷ್ಕ್ರಿಯವಾಗುವುದರ ಜತೆಗೆ ಬ್ರೇಕ್ ಹಾಕುತ್ತದೆ. ಹಾಗೆಯೇ ಕೆಲವೊಮ್ಮೆ ರಸ್ತೆಯಲ್ಲಿ ನಿಂತಿದ್ದಾಗ ಮುಂದೆ ಹೊರಟ ತಕ್ಷಣ ಈ ಕಾರು ಚಾಲಕನಿಗೆ ಮಾಹಿತಿ ನೀಡುತ್ತದೆ. ಕೆಲವೊಮ್ಮೆ ಟ್ರಾಫಿಕ್ ನಲ್ಲಿ ನಿಂತಿದ್ದಾಗ ಎಸ್‌ಎಂಎಸ್ ಮಾಡುತ್ತಲೋ, ಫೋನ್‌ನಲ್ಲಿ ಏನೋ ಮಾಡುತ್ತಲೋ ಇರಬಹುದು. ಕಣ್ಮುಚ್ಚಿ ರೆಸ್ಟ್ ತೆಗೆದುಕೊಳ್ಳುವವರೂ ಇದ್ದಾರೆ. ಅಂಥವರಿಗೂ ಈ ವ್ಯವಸ್ಥೆ ಸಹಕಾರಿ. ಇದರ ಜತಗೆ ಒಂದೇ ಲೇನ್‌ನಲ್ಲಿ ಕಾರು ಹೋಗುವಂತೆ ನೋಡಿ ಕೊಳ್ಳುವ, ಟ್ರಾಫಿಕ್ ಸಿಗ್ನಲ್ ಗುರುತಿಸುವ, ಎದುರಿಗಿರುವ ಕಾರನ್ನು ಹಿಂಬಾಲಿಸುವ ವ್ಯವಸ್ಥೆಗಳನ್ನು ಕೂಡ ಈ ತಂತ್ರಜ್ಞಾನ ಒಳಗೊಂಡಿದೆ. ಬಹುಶಃ 2015ರ ಅಂತ್ಯಕ್ಕೆ ಈ ತಂತ್ರಜ್ಞಾನ ಹೊಂದಿರುವ ಕಾರನ್ನು ಜಪಾನ್‌ನಲ್ಲಿ ನೋಡಬಹುದೇನೋ... ಭಾರತಕ್ಕೆ ಸದ್ಯ ಈ ಕಾರು ಬರಲಿಕ್ಕಿಲ್ಲ. ಬಂದರೂ ಸ್ಪಷ್ಟವಾಗಿಲ್ಲದ ರಸ್ತೆಗಳ ಲೇನ್ ವ್ಯವಸ್ಥೆಗಳಿಂದ ತಂತ್ರಜ್ಞಾನಕ್ಕೂ ಕನ್‌ಫ್ಯೂಸ್ ಆಗಬಹುದು.