ಟಾಟಾ ಮೋಟಾರ್ಸ್‌ನ ವಿನೂತನ ಶೋರೂಂ ಟಾಟಾ ಮೋಟಾರ್ಸ್ ಬೆಂಗಳೂರಿನಲ್ಲಿ ಹೊಸ ವಿನ್ಯಾಸದ, ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ, ಐಷಾರಾಮಿಯಾದ, ಗ್ರಾಹಕರಿಗೆ ವಿರಾಮದಾಯಕ ಖರೀದಿಯ ಅನುಭವ ನೀಡುವಂಥ ಷೋ ರೂಂ ಆರಂಭಿಸಿದೆ. ಬಹಳ ಭಿನ್ನಸ್ವರೂಪದ್ದಾಗಿರುವ ಈ ವಿನೂತನ ಬಗೆಯ ಶೋ ರೂಂ ಗ್ರಾಹಕರಿಗೆ ಒಂದೇ ನೆಲೆಯಲ್ಲಿ ಮೂರು ಬಗೆಯ 'ಎಸ್‌' (ಸೇಲ್ಸ್, ಸರ್ವೀಸ್, ಸ್ಪೇರ್ಸ್) ಸೇವೆಗಳನ್ನು ಒದಗಿಸಲು ಸಜ್ಜಾಗಿದೆ. ಈ ನೂತನ ಶೋ ರೂಂ ಅನ್ನು ಟಾಟಾ ಮೋಟಾರ್ಸ್ ಕಂಪನಿಯ ವಾಣಿಜ್ಯ ಬಳಕೆ, ಪ್ರಯಾಣಿಕ ವಾಹನಗಳ ವಿಭಾಗದ ಹಿರಿಯ ಉಪಾಧ್ಯಕ್ಷ ಅಂಕುಶ್ ಅರೋರಾ ಉದ್ಘಾಟಿಸಿದರು. 'ಭಾರತದ ಗ್ರಾಹಕರ ಬೇಡಿಕೆಗಳು, ಅಗತ್ಯಗಳೂ ವಿಶೇಷ ಸ್ವರೂಪ ಪಡೆದುಕೊಳ್ಳುತ್ತಿವೆ. ನಮ್ಮ ಗ್ರಾಹಕರೂ ಈಗ ಜಾಗತಿಕ ಗುಣಮಟ್ಟದ, ಅತ್ಯಾಧುನಿಕವಾದ ಹಾಗೂ ಐಷಾರಾಮಿ ಸೇವೆಗಳನ್ನು ಬಯಸುತ್ತಿದ್ದಾರೆ. ಟಾಟಾ ಮೋಟಾರ್ಸ್ ಸಹ ಗ್ರಾಹಕರ ನಿರೀಕ್ಷೆಗಳಿಗೆ ಅನುಗುಣವಾಗಿ ಅತ್ಯಾಧುನಿಕ ತಂತ್ರಜ್ಞಾನ ಆಧರಿಸಿದ ಸೇವೆಗಳನ್ನು ಒದಗಿಸಲು ಮುಂದಾಗಿದೆ' ಎನ್ನುತ್ತಾರೆ ಅಂಕುಶ್. ಟಾಟಾ ಮೋಟಾರ್ಸ್ ಕಂಪನಿ ಮಾರಾಟಕ್ಕೆ ಸಂಬಂಧಿಸಿದ ಗ್ರಾಹಕ ಅನುಭವಗಳಿಗೆ ಸಂಬಂಧಿಸಿದ ಜೆಡಿ ಪವರ್ ಸಮೀಕ್ಷೆಯಲ್ಲಿ 825 ಅಂಶಗಳ ಸೂಚ್ಯಂಕದೊಂದಿಗೆ ಈ ಬಾರಿ 7ನೇ ಸ್ಥಾನಕ್ಕೇರಿದೆ. 2012ರಲ್ಲಿ 12ನೇ ಸ್ಥಾನದಲ್ಲಿತ್ತು. ನೂತನ ಶೋ ರೂಂ 4000 ಚದರಡಿಗಳಷ್ಟು ವಿಶಾಲವಾದ ಒಳಾಂಗಣ, 7000 ಚದರಡಿಗಳಷ್ಟು ಸುವಿಶಾಲವಾದ ಹೊರಾಂಗಣ ಪ್ರದೇಶ ಹೊಂದಿದೆ. ಈ ವಿಶಾಲತೆಯೇ ಶೋ ರೂಂಗೆ ಒಂದು ವಿಶಿಷ್ಟ ಅದ್ಧೂರಿತನವನ್ನೂ ತಂದುಕೊಟ್ಟಿದೆ. ವಿಭಿನ್ನ ಶೈಲಿಯ ಪೀಠೋಪಕರಣ ವ್ಯವಸ್ಥೆ, ವೈ-ಫೈ ಸಂಪರ್ಕ, ಕೆಫೆ ಸೇವೆ, ಅತ್ಯಾಧುನಿಕವಾದ ವಿಡಿಯೊ ಸೌಲಭ್ಯವನ್ನಳವಡಿಸಿದ ಸ್ಕ್ರೀನ್‌ಗಳಿವೆ. ಈ ಸ್ಕ್ರೀನ್‌ಗಳ ಮೂಲಕ ಗ್ರಾಹಕರು ತಮ್ಮ ಕನಸಿನ ಕಾರಿನ ಚಾಲನೆಯ ಅನುಭವವನ್ನೂ ಶೀಘ್ರದಲ್ಲೇ ಪಡೆದುಕೊಳ್ಳಬಹುದು.