ಕಲ್ಯಾಣಮಸ್ತ್ ಜಲಪಾತಗಳ ತವರು ಎಂದೇ ಖ್ಯಾತಿಯನ್ನು ಹೊಂದಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಹತ್ತು ಹಲವು ಜಲಪಾತಗಳು ವಿಶ್ವವಿಖ್ಯಾತ. ಆದರೆ ನೂರಕ್ಕೂ ಹೆಚ್ಚಿನ ಜಲಪಾತಗಳು ಇನ್ನೂ ತೆರೆಯ ಮರೆಯಲ್ಲೇ ಉಳಿದಿವೆ. ಅವುಗಳಲ್ಲಿ ಕಲ್ಯಾಣೇಶ್ವರ ಜಲಪಾತ ಕೂಡ ಒಂದು. ಸಿದ್ದಾಪುರ ತಾಲೂಕಿನ ಹಸರಗೋಡ ಗ್ರಾ.ಪಂ. ವ್ಯಾಪ್ತಿಯ ಕುಚಗುಂಡಿ ಊರಿನಲ್ಲಿರುವ ಕಲ್ಯಾಣೇಶ್ವರ ಜಲಪಾತ 15-20 ಅಡಿಗಳ ಎತ್ತರದಿಂದ ಜಿಗಿಯುತ್ತದೆ. ಈ ಜಲಪಾತದ ಮೂಲ ಯಾವುದೋ ದೊಡ್ಡ ನದಿಯಲ್ಲ. ಚಿಕ್ಕದೊಂದು ಹಳ್ಳ. ಜೂನ್‌ನಿಂದ ಡಿಸೆಂಬರ್ ವರೆಗೂ ಇದು ವೈಭವದಿಂದ ಧುಮುಕುತ್ತದೆ. ಆ ನಂತರ ಹಳ್ಳದ ನೀರು ಬತ್ತಿ ಹೋಗುವ ಕಾರಣ ಮತ್ತೆ ಜಲಪಾತಕ್ಕೆ ಜೀವಕಳೆ ಬರುವುದು ಮುಂದಿನ ಮಳೆಗಾಲದಲ್ಲಿಯೇ. ಹಸಿರು ವೃಕ್ಷ ಸಮೂಹ, ಅಡಿಕೆ ತೋಟಗಳ ನಡುವೆ ಜುಳು ಜುಳು ಸದ್ದು ಮಾಡುತ್ತ ಇಳಿದುಬರುವ ಕಲ್ಯಾಣೇಶ್ವರ ಜಲಪಾತದ ದೃಶ್ಯ ಮನಮೋಹಕ. ಜಲಪಾತದ ಬುಡದಲ್ಲಿರುವ 5-10 ಅಡಿ ಆಳದ ಗುಂಡಿಯಲ್ಲಿ ಪ್ರವಾಸಿಗರು ಖುಷಿಯಿಂದ ಈಜಬಹುದು. ಈ ಜಲಪಾತದ ಬುಡದಲ್ಲಿ ಕಲ್ಲಿನ ಸಾಲುಗಳಿಲ್ಲ. ಮಣ್ಣಿನ ಹಂದರ ಇರುವ ಕಾರಣ ಪ್ರವಾಸಿಗರಿಗೆ ಯಾವುದೇ ಅಪಾಯವೂ ಇಲ್ಲ. ಅಡ್ಕಳ್ಳಿ- ಕೋಡ್ಸರ ಸಂಪರ್ಕ ರಸ್ತೆಯ ಪಕ್ಕದಲ್ಲೇ ಸದ್ದು ಮಾಡುತ್ತಿದ್ದರೂ ಈ ಜಲಪಾತ ಹೆಚ್ಚಿನ ಜನರ ಗಮನಕ್ಕೆ ಬಾರದೇ ಇರುವುದು ವಿಶೇಷವೇ ಹೌದು. ರಸ್ತೆಯ ಪಕ್ಕವೇ ಇರುವುದರಿಂದ ಚಾರಣ ಮಾಡಬೇಕಿಲ್ಲ. ಸಾಹಸಿಗರಾಗಬೇಕಿಲ್ಲ. ಜಲಪಾತದ ಒಡಲಿನವರೆಗೂ ವಾಹನ ಒಯ್ಯಬಹುದು. ಕುಚಗುಂಡಿ ಊರಿನ ಆರಾಧ್ಯ ದೈವ ಕಲ್ಯಾಣೇಶ್ವರನಿಂದ ಜಲಪಾತಕ್ಕೆ ಈ ಹೆಸರು ಬಂದಿದೆ. ಒಳ್ಳೆಯ ಪಿಕ್ನಿಕ್ ತಾಣವಾಗಿರುವ ಈ ಜಲಪಾತದ ಆಜುಬಾಜಿನಲ್ಲಿ ಪರಿಸರ ಮಾಲಿನ್ಯಕ್ಕೆ ಅವಕಾಶವಿಲ್ಲ. ಜಲಪಾತದ ಎದುರಿನಲ್ಲೇ ಮಹಾಬಲಗೌಡ ಎನ್ನುವವರ ಮನೆಯಿದ್ದು, ಪ್ರವಾಸಿಗರಿಗೆ ಅಗತ್ಯವಾದ ಸಹಾಯ ಅವರಿಂದ ಸದಾ ಲಭ್ಯ. ಈ ಜಲಪಾತಕ್ಕೆ ಬಂದವರು ಸನಿಹದಲ್ಲಿನ ಕಲ್ಯಾಣೇಶ್ವರ ದೇಗುಲ, ಗುಡ್ಡೇತೋಟದ ಕೋಟೆ ವಿನಾಯಕ ದೇವಾಲಯ, ಯಲೂಗಾರಿನ ಸಳ್ಳೆ ವಿನಾಯಕ ಎಂಬ ಉದ್ಭವ ಗಣಪತಿಯನ್ನು ವೀಕ್ಷಣೆ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಅಘನಾಶಿನಿ ನದಿ ತೀರದಲ್ಲಿಯೂ ವಿಹಾರ ಮಾಡಬಹುದಾಗಿದೆ. ಬಿಡುವಿಲ್ಲದ ಸಮಯದಲ್ಲಿ ತುರ್ತಾಗಿ ಪ್ರಕೃತಿ ವೀಕ್ಷಣೆ ಮಾಡುವವರಿಗೆ ಹೇಳಿಮಾಡಿಸಿದ ತಾಣ ಇದಾಗಿದೆ. ಕಷ್ಟಪಡಬೇಕಿಲ್ಲ. ಗುಡ್ಡ ಹತ್ತಿಳಿಯಬೇಕಿಲ್ಲ. ಸುಮ್ಮನೆ ಗಾಡಿ ಹತ್ತಿ ಬಂದರಾಯಿತು. ಒಂದು ದಿನ ಅರಾಮವಾಗಿ ಕಳೆಯಲು ಈ ತಾಣ ಹೇಳಿಮಾಡಿಸಿದಂತದ್ದಾಗಿದೆ. ಹೋಗೋದು ಹೇಗೆ? ಈ ಜಲಪಾತಕ್ಕೆ ಬರುವ ಬಗೆ ಬಹಳ ಸುಲಭ. ಶಿರಸಿಯಿಂದ ಸಿದ್ದಾಪುರಕ್ಕೆ ಬರುವ ಮಾರ್ಗದಲ್ಲಿ ಕಾನಸೂರಿನಿಂದ ಬಾಳೆಸರದ ಕಡೆ ಹೋಗು ಮಾರ್ಗದಲ್ಲಿ 2 ಕಿ.ಮೀ. ಚಲಿಸಿದರೆ ಕೋಡ್ಸರ ಎಂಬ ಊರು ಸಿಗುತ್ತದೆ. ಈ ಊರಿನ ಬಳಿಯಲ್ಲಿ ಕುಚಗುಂಡಿಗೆ ಹೋಗುವ ಕಚ್ಚಾ ದಾರಿ ಕಾಣಬಹುದು. ಈ ದಾರಿಯಲ್ಲಿ 2 ಕಿ.ಮೀ. ಸಾಗಿದರೆ ಮರಲಮನೆ ಹಾಗೂ ಕುಚಗುಂಡಿ ಊರುಗಳ ನಡುವೆ ಹಳ್ಳದ ಸೇತುವೆ ಎದುರಾಗುತ್ತದೆ. ಈ ಸೇತುವೆಯ ಬಳಿ ಜಲಪಾತ ಕಾಣಬಹುದು. ಇದು ಒಂದು ಮಾರ್ಗವಾದರೆ ಶಿರಸಿಯಿಂದ ಅಡಕಳ್ಳಿ, ದಂಟಕಲ್ ಮೂಲಕ 22 ಕಿ.ಮೀ. ಹಾದು ಬಂದರೆ ಕುಚಗುಂಡಿ ಸಿಗುತ್ತದೆ. ಆ ಊರಿನ ಸರಹದ್ದಿನಲ್ಲಿಯೇ ಇದೆ ಜಲಪಾತ. - ವಿನಯ ದಂಟಕಲ್