ಭದ್ರೆಯ ಸಿರಿವನ ನಾಡಿನ ಪುಣ್ಯದ ಪೂರ್ವದಿಗಂತದಿ ನವ ಅರುಣೋದಯ ಹೊಮ್ಮುತಿದೆ..ಚಿರನೂತನ ಚೇತನದುತ್ಸಾಹದಿ ನವೀನ ಜೀವನ ಚಿಮ್ಮುತಿದೆ ... ನಾಡಿನ ಪುಣ್ಯದ ಪೂರ್ವದಿಗಂತದಿ ನವ ಅರುಣೋದಯ ಹೊಮ್ಮುತಿದೆ.. ಚಿರನೂತನ ಚೇತನದುತ್ಸಾಹದಿ ನವೀನ ಜೀವನ ಚಿಮ್ಮುತಿದೆ ಹೀಗೆಂದು ಜೀವ-ಪ್ರಕೃತಿ ಚೇತನವನ್ನು ಅಕ್ಷರಗಳಲ್ಲಿ ಸೆರೆ ಹಿಡಿಯುತ್ತಾರೆ ರಾಷ್ಟ್ರಕವಿ ಕುವೆಂಪು. ಇಂತಹ ಅಪೂರ್ವ ಅನುಭವದ ಜಗತ್ತು ನಮ್ಮದಾಗಬೇಕಾದರೆ ಕುವೆಂಪು ವಿ.ವಿ.ಯ ಪಕ್ಕದಲ್ಲೇ ಇರುವ ಭದ್ರಾ ಹಿನ್ನೀರಿಗೆ ಒಮ್ಮೆ ಭೇಟಿ ಕೊಡಬೇಕು. ಶಿವಮೊಗ್ಗದಿಂದ ಭದ್ರಾವತಿ ಮಾರ್ಗವಾಗಿ ಇಲ್ಲಿಗೆ ಕೇವಲ 30 ಕಿಲೋ ಮೀಟರ್ ದೂರ ಅಷ್ಟೆ. ಭೋರ್ಗರೆಯುತ್ತ ಲಕ್ಕವಳ್ಳಿ ಜಲಾಶಯದಿಂದ ಧುಮ್ಮಿಕ್ಕುವ ಭದ್ರಾ ನದಿ ಸೊಬಗು. ಹಸಿರು ಹುಲ್ಲಿನ ಮೇಲೆ ಹೊಳೆವ ವಜ್ರದ ಅಮೃತ ಬಿಂದುಗಳಂತೆ ಕಂಗೊಳಿಸುವ ನೀರ ಹನಿಗಳು, ಪ್ರಕೃತಿ ನಿರ್ಮಿತ ಮರದ ಕಲಾಕೃತಿಗಳು. ಆಗೊಮ್ಮೆ ಈಗೊಮ್ಮೆ ಇಣುಕುವ ಕಾಡುಕೋಣ, ಜಿಂಕೆ, ಹಂದಿ, ಚಿರತೆ, ಹುಲಿ, ಕಾಡುಕೋಳಿ, ಕೆಂಬೂತ, ಕಪಿಹಿಂಡು, ಗಜಪಡೆ ಮೊದಲಾದ ವನಸಂಸ್ಕೃತಿಯ ಪ್ರತಿನಿಧಿಗಳು. ಇಂತಹ ಸೌಂದರ್ಯ ಬರಡು ಜೀವನದಲ್ಲೂ ಜೀವನೋತ್ಸಾಹ ಪುಟಿದೆಬ್ಬಿಸುವುದು ದಿಟ. ಇನ್ನು ಕುವೆಂಪು ವಿಶ್ವವಿದ್ಯಾಲಯದ ಆವರಣ ಪ್ರವೇಶಿಸುತ್ತಿದ್ದಂತೆ ಮೈ ಜುಂ ಎನ್ನಿಸುವ ನಿಶ್ಯಬ್ದ. ಬೆರಗು ಹುಟ್ಟಿಸುವ ಪಂಪವನ. ಹೃನ್ಮನಗಳನ್ನು ಕೆದಕುವ ಸಸ್ಯಸಂಕುಲ. ಜಿರಾಫೆ, ಆನೆ, ಡೈನೋಸಾರ್ ಕಲಾಕೃತಿಗಳು. ಕನ್ನಡ ಭಾರತಿ ವಿಭಾಗದ ಜನಪದ ವಸ್ತು ಸಂಗ್ರಹಾಲಯವಂತೂ ಒಂದು ಕ್ಷಣ ನಮ್ಮನ್ನು ಸ್ತಬ್ಧರಾಗಿ ನಿಲ್ಲುವಂತೆ ಮಾಡುತ್ತದೆ. ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಹೊಂದಿಕೊಂಡಂತಿರುವ ಶಂಕರಮಠ ವಿಹಾರ ಬಯಸುವ ಮನಸುಗಳಿಗೆ ಆನಂದಮಯ ತಾಣ. ಇಲ್ಲಿ ಶಿವನ ಸ್ವರೂಪ ಹೋಲುವ ಆಕೃತಿ ಇದೆ. ಹೀಗಾಗಿ ಈ ಸ್ಥಳಕ್ಕೆ ಶಂಕರಘಟ್ಟ ಎಂಬ ಹೆಸರು ಬಂದಿದೆ. ಮನುಜ ಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಎಂಬ ಕುವೆಂಪು ಅವರ ಪಂಚಮಂತ್ರಗಳಿಗೆ ವೇದಿಕೆಯಂತಿರುವ ಶಂಕರಘಟ್ಟ ಕವಿಚೇತನದ ಪ್ರತಿರೂಪವೇ ಸರಿ. -- ಸಂಪತ್ ಬೆಟ್ಟಗೆರೆಚಿತ್ರಗಳು: ಪ್ರದೀಪ್ ಸಿರಿಬಡಿಗೆ