ಹೊಸ ನೋಟ ಇತಿಹಾಸದ ತ್ಯಾಗ ಮಾತ್ರವಲ್ಲದೆ, ನಾಡಿನ ವಿದ್ಯುತ್ ಬೆಳಕಿಗಾಗಿ ಸರ್ವಸ್ವವನ್ನು ಬರಿದು ಮಾಡಿಕೊಂಡ ಬಿದನೂರು ಇಂದಿನ ನಗರ ಹೋಬಳಿಗೆ ಹೊಸ ಚೈತನ್ಯ ನೀಡುವ ಕೆಲಸ ಸರ್ಕಾರದಿಂದ ಆಗಬೇಕಿದೆ. ಇಲ್ಲಿಯ ಪ್ರತಿಯೊಂದು ಕಲ್ಲುಗಳು ಕೂಡ ತನ್ನದೇ ಇತಿಹಾಸ ಸಾರುತ್ತವೆ. ಅದರಲ್ಲಿ ಕೆಲವು ಮಹತ್ವದ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿ ಇಲ್ಲಿದೆ... ಬಿದನೂರು ಕೋಟೆ ಅಂದಿನ ಬಿದನೂರು ಇಂದಿನ ನಗರದ ಹೃದಯ ಭಾಗದಲ್ಲಿರುವ ಕೋಟೆ ಇತಿಹಾಸದ ಗತವೈಭವ ಸಾರುವ ಜ್ವಲಂತ ಸಾಕ್ಷಿ. ಕೋಟೆ ಒಳಹೊಕ್ಕುತ್ತಿದ್ದಂತೆ ಎದುರಾಗುವ ಅಕ್ಕತಂಗಿ ಕೆರೆ, ರಾಜ ದರ್ಬಾರ್, ಬುರುಜುಗಳು ಸೇರಿದಂತೆ ಪ್ರತಿಯೊಂದು ಪಳೆಯುಳಿಕೆಗಳಳು ಕೋಟೆ ಮೆರುಗನ್ನು ಇನ್ನಷ್ಟು ಹೆಚ್ಚಿಸುವಲ್ಲಿ ಅನುಮಾನವಿಲ್ಲ. ಪಂಚಮುಖಿ ಆಂಜನೇಯ ದೇಶದಲ್ಲೇ ಅಪರೂಪ ಎಂಬ ಹೆಗ್ಗಳಿಕೆಗೆ ಪಾತ್ರವಾದ ಪಂಚಮುಖಿ ಆಂಜನೇಯ ಮೂರ್ತಿ ನಗರ-ಚಿಕ್ಕಪೇಟೆಯಿಂದ ಕೊಲ್ಲೂರಿಗೆ ಸಾಗುವ ಮಾರ್ಗದ ತುಸು ಹತ್ತಿರದಲ್ಲಿಯೇ ಕಂಡುಬರುತ್ತದೆ. ಕೆಳದಿ ಅರಸರ ಸಮಾಧಿ ಶಿಸ್ತಿನ ಶಿವಪ್ಪ ನಾಯಕ, ಕೆಳದಿ ಚನ್ನಮ್ಮ ಸೇರಿದಂತೆ ಹಲವು ಕೆಳದಿ ಅರಸರ ಸಮಾಧಿಗಳಿರುವ ಅತ್ಯಂತ ಮಹತ್ವದ ಸ್ಥಳ ಚಿಕ್ಕಪೇಟೆಯಿಂದ ಕೊಲ್ಲೂರು ಮಾರ್ಗವಾದ ಶ್ರೀಧರಪುರದಲ್ಲಿದೆ. 90ರ ದಶಕದಲ್ಲಿ ಬೆಳಕಿಗೆ ಬಂದ ಇದರ ಸಂರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ. ಭುವನಗಿರಿ ಕೊಡಚಾದ್ರಿ ಪಶ್ಚಿಮಘಟ್ಟದ ಬೆಟ್ಟಗುಡ್ಡಗಳ ಸಾಲಿನಲ್ಲಿ ನಿಲುಕುವ ಕೊಡಚಾದ್ರಿ ಶಿಖರ ತನ್ನ ರಮಣೀಯತೆಯಿಂದಲೇ ಪ್ರವಾಸಿಗರನ್ನು ಸೆಳೆದುಕೊಂಡಿದೆ. ಮೂಲ ಮೂಕಾಂಬಿಕೆಯ ನೆಲೆವೀಡು ಎಂಬ ಹೆಗ್ಗಳಿಕೆ ಹೊಂದಿರುವ ಕೊಡಚಾದ್ರಿಗಿರಿಯಲ್ಲಿ ಸೂರ್ಯೋದಯ, ಸೂರ್ಯಾಸ್ತ ನೋಡುವುದೇ ಒಂದು ಅವಿಸ್ಮರಣೀಯ ಅನುಭವ. ದೇವಗಂಗೆ ಕೊಳ ಸರ್ ಎಂ. ವಿಶ್ವೇಶ್ವರಯ್ಯ ಅವರಿಗೆ ಮೈಸೂರಿನ ಬೃಂದಾವನ ನಿರ್ಮಿಸಲು ಪ್ರೇರಣೆ ನೀಡಿದ ಸ್ಥಳ ಇದು. ಇಲ್ಲಿ ನೀರು ಹರಿಯುವ ರೀತಿ ಎಂಥವರನ್ನೂ ಅಚ್ಚರಿಪಡಿಸುತ್ತದೆ. ಗಂಗಾಧರೇಶ್ವರ ಸನ್ನಿಧಿಯಿರುವ ಇಲ್ಲಿ ಗುಲಾಬಿ ತೋಟವಿತ್ತು. ರಾಜ-ರಾಣಿಯರ ವಿಹಾರ ಕೇಂದ್ರವಾಗಿತ್ತು ಎಂದು ಹೇಳಲಾಗುತ್ತದೆ. ಮಾಣಿ ಜಲಾಶಯ ಯಡೂರಿನಿಂದ ಅಡ್ಡಲಾಗಿ 5 ಕಿ.ಮೀ. ದೂರದಲ್ಲಿರುವ ಮಾಣಿ ಜಲಾಶಯ ರಾಜ್ಯದ ಪ್ರಮುಖ ಡ್ಯಾಂಗಳಲ್ಲೊಂದು. ಜಲ ವಿದ್ಯುತ್ ಮಾತ್ರವಲ್ಲದೇ ಅದೇ ನೀರನ್ನು ಭೂಗರ್ಭ ವಿದ್ಯುದಾಗಾರಕ್ಕೆ ಹರಿಸಲಾಗುತ್ತದೆ. ಎರಡು ಘಟಕಗಳಿಂದ 469 ಮೆ.ವ್ಯಾ. ವಿದ್ಯುತ್ ಉತ್ಪಾದಿಸಲಾಗುತ್ತಿರುವ ದೇಶದಲ್ಲಿ ಅಪರೂಪದ ಯೋಜನೆ ಇದು. ಅಲ್ಲದೆ, ಮಾಣಿ ಹಿನ್ನೀರಿನ ವಿಹಂಗಮ ನೋಟ ಮನೋಹರ. ಚಕ್ರಾ-ಸಾವೇಹಕ್ಲು ಲಿಂಗನಮಕ್ಕಿ ಹಿನ್ನೀರು ಬಳಸಿ ಹೆಚ್ಚಿನ ವಿದ್ಯುತ್ ಉತ್ಪಾದಿಸುವ ಸಲುವಾಗಿ ಮೈದಳೆದಿದ್ದೇ ಚಕ್ರಾ-ಸಾವೇಹಕ್ಲು ಅವಳಿ ಡ್ಯಾಂ. ಸುತ್ತಲೂ ಸಸ್ಯಕಾಶಿ ನಡುವೆ ಇರುವ ಈ ಜಲಾಶಯಗಳ ನೋಟವೇ ಅಂದ. ಅಲ್ಲದೇ ಜಲಾಶಯ ತುಂಬಿ ಕಂಡುಬರುವ ಓವರ್ ಫ್ಲೋ ಸೊಬಗು ಎಂಥವರನ್ನೂ ಮೂಕವಿಸ್ಮಿತರನ್ನಾಗಿಸುತ್ತದೆ. ಹುಲಿಕಲ್ ಘಾಟ್ ಕರ್ನಾಟಕದ ಚಿರಾಪುಂಜಿ ಎಂದರೆ ತಕ್ಷಣಕ್ಕೆ ಆಗುಂಬೆ ನೆನಪಾಗುತ್ತದೆ. ಆದರೆ, ಕಳೆದ 20 ವರ್ಷಗಳ ಮಳೆ ಪ್ರಮಾಣದ ಅಂಕಿಅಂಶ ಗಮನಿಸಿದರೆ ಆ ಸ್ಥಾನಕ್ಕೆ ಹೊಸನಗರ ತಾಲೂಕಿನ ಹುಲಿಕಲ್ ಲಗ್ಗೆ ಇಟ್ಟಿದೆ ಎಂದರೆ ಅಚ್ಚರಿಯ ಸಂಗತಿಯೇ. ಇದು ಕರ್ನಾಟಕದ ಸದ್ಯದ 'ಚಿರಾಪುಂಜಿ'. ಹೊಸನಗರದಿಂದ ಮಾಸ್ತಿಕಟ್ಟೆ-ಕುಂದಾಪುರ ಮಾರ್ಗದಲ್ಲಿ ಕಾಣಸಿಗುವ ಹುಲಿಕಲ್ ಅತ್ಯುತ್ತಮ ಪ್ರವಾಸಿ ತಾಣ. ಬಾಳೆಬರೆ ಜಲಧಾರೆ ಹುಲಿಕಲ್‌ನ ಚಂಡಿಕಾವನ ದೇವಸ್ಥಾನದ ಕೆಳಭಾಗದಲ್ಲಿ ಕಂಡುಬರುವ ಬಾಳೆಬರೆ ಜಲಧಾರೆಯ ಸವಿ ಸವಿಯಲು ಕಾಡುಮೇಡು ಸುತ್ತಬೇಕಿಲ್ಲ. ಚಾರಣ ಮಾಡಬೇಕಿಲ್ಲ. ಇಂಬಳಗಳ ಕಾಟ ಎದುರಿಸಬೇಕಿಲ್ಲ. ಬೆವರಿಳಿಸಿಕೊಳ್ಳದೇ, ಅನಾಯಾಸವಾಗಿ ನೋಡಬಹುದಾದ ಅತ್ಯದ್ಭುತ ಜಲಸಿರಿ ಈ ಬಾಳೆಬರೆ ಫಾಲ್. ಮಾಸ್ತಿಕಟ್ಟೆ- ಕುಂದಾಪುರ ಪ್ರಮುಖ ಮಾರ್ಗಕ್ಕೆ ತಾಗಿಕೊಂಡಂತೆ ಭೋರ್ಗರೆಯುತ್ತದೆ. ಸುಮಾರು 300 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ. ಚಂಡಿಕಾಂಬೆ ಸನ್ನಿಧಿ ಬಾಳೆಬರೆ ಘಾಟಿಯ ಅಧಿದೇವತೆ ಶ್ರೀ ಚಂಡಿಕೇಶ್ವರಿ ಸನ್ನಿಧಿ ಕೂಡ ತನ್ನ ಮಹಿಮೆಯಿಂದಾಗಿ ಪವಿತ್ರ ಸ್ಥಳವಾಗಿ ಅಸಂಖ್ಯಾತ ಭಕ್ತರ ಗಮನ ಸೆಳೆಯುತ್ತಿದೆ. ನವರಾತ್ರಿ ಮತ್ತು ವರ್ಷದ ಉತ್ಸವಗಳು ಅದ್ಧೂರಿಯಿಂದ ಜರುಗುತ್ತವೆ. ತೂಗು ಸೇತುವೆ ನಿಟ್ಟೂರಿನಿಂದ 3 ಕಿ.ಮೀ. ದೂರದಲ್ಲಿ ಕುದುರೆಕಳು ಹೊಳೆಗೆ ಹಾಕಲಾಗಿರುವ ತೂಗುಸೇತುವೆ ಸಂಪರ್ಕರಹಿತ ಕುಟುಂಬಗಳಿಗೆ ಆಸರೆಯಾಗಿ ಮೈದಳೆಯುವುದರ ಜೊತೆಗೆ ಪ್ರಕೃತಿ ಪ್ರಿಯರ ಮನತಣಿಸುವ ರಮಣೀಯ ಸೌಂದರ್ಯದಿಂದ ಕೂಡಿದೆ. ಹಿನ್ನೀರಿನ ಎರಡೂ ದಂಡೆ ಸಂಪರ್ಕಿಸುವ ಸುಮಾರು 192 ಮೀ. ಉದ್ದವಿರುವ ಈ ತೂಗುಸೇತುವೆ ಉದ್ದದಲ್ಲಿ ರಾಜ್ಯದಲ್ಲೇ ಎರಡನೆಯದು. ಹೊಸನಗರ ತಾಲೂಕಿನಲ್ಲಿ ಪ್ರವಾದ್ಯೋಮಕ್ಕೆ ಇವಿಷ್ಟೇ ತಾಣಗಳಲ್ಲ. ಕೊಡಚಾದ್ರಿ ತಪ್ಪಲಿನ ಹಿಡ್ಲುಮನೆ ಫಾಲ್ ನಿಟ್ಟೂರಿನ ನಿಸರ್ಗಧಾಮ, ಶ್ರೀರಾಮಚಂದ್ರಾಪುರಮಠ, ನಗರ ವ್ಯಾಪ್ತಿಯಲ್ಲಿರುವ ಈಶ್ವರ-ಪಾರ್ವತಿ ದೇಗುಲ, ಬರೇಕಲ್ಲಿನ ಬತೇರಿ, ಮಅಷುಂಶಾ ವಲಿಯುಲ್ಲಾ ದರ್ಗಾ, ದಿಲ್ಲಿಬಾಗಿಲು, ಗಳಿಗೆಬಟ್ಟಲು, ಅಬ್ಬಿ ಫಾಲ್ ಸೇರಿದಂತೆ ನೂರಾರು ಐತಿಹಾಸಿಕ, ಧಾರ್ಮಿಕ ಹಾಗೂ ಪ್ರಕೃತಿ ಸಂಪತ್ತಿನಿಂದ ಮನಮೋಹಕವೆನಿಸುವ ತಾಣಗಳು ಇಲ್ಲಿವೆ. - ಚಿತ್ರ-ಲೇಖನ: ರವಿ ಬಿದನೂರು @.