ಇದೇ ನಮ್ಮನೆ! 'ಎಲ್ಲೋ ಇದ್ದವರು ನಾವು. ಆದರೆ, ಇಲ್ಲಿ ಬದುಕು ಕಟ್ಟಿಕೊಂಡಿದ್ದೇವೆ. 70ಕ್ಕೂ ಹೆಚ್ಚು ವರ್ಷಗಳಾಗಿವೆ ಹುಟ್ಟೂರಿನ ಮುಖ ನೋಡದೆ, ಹುಟ್ಟೂರಿನ ಮಣ್ಣು ತುಳಿಯದೆ. ನೆಲೆ ನಿಂತ ಕನ್ನಡ ನೆಲವೇ ನಮಗೆ ಸರ್ವಸ್ವ' - ಇಂಥದ್ದೊಂದು ಮಾತು ಹೊರಬಂದಿದ್ದು ಹುಬ್ಬಳ್ಳಿಯ ಸಿಖ್ ಶೇರ್‌ಸಿಂಗ್‌ನಿಂದ. ಭಾರತ-ಪಾಕ್ ವಿಭಜನೆ ವೇಳೆ ನಿರಾಶ್ರಿತರಾಗಿ ಹುಬ್ಬಳ್ಳಿಗೆ ಬಂದು ಬದುಕು ಕಟ್ಟಿಕೊಂಡ ಸಿಖ್ ಸಮುದಾಯದವರ ಕಥೆ ಇದು. ನೋಡಲಷ್ಟೆ ಇವರು ಸಿಖ್ ಸಮುದಾಯದವರಾದರೂ, ಶಿಕ್ಷಣ, ಆಹಾರ ವೈವಿಧ್ಯ ಎಲ್ಲವೂ ಅಪ್ಪಟ ಕನ್ನಡದ್ದೇ! ಸುಮಾರು 70 ವರ್ಷಗಳಿಂದ ಶೇರ್‌ಸಿಂಗ್ ರಬಾಬಿ ಕುಟುಂಬ ಹುಬ್ಬಳ್ಳಿಯ ಪತ್ರಕರ್ತನಗರದಲ್ಲಿ ವಾಸಿಸುತ್ತಿದೆ. ಕೆಎಸ್‌ಆರ್‌ಟಿಸಿಯಲ್ಲಿ ಮೆಕ್ಯಾನಿಕ್ ಎಂದು ಸೇವೆ ಸಲ್ಲಿಸಿ ಈಗ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಇವರ ಮಗ ಅರ್ಬನ್ ಸಿಂಗ್ ರಬಾಬಿ 10ನೇ ತರಗತಿಯವರೆಗೆ ಓದಿ ಕಬ್ಬಿಣದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅರ್ಬನ್ ಹುಟ್ಟಿದಾಗಿನಿಂದ ಒಂದು ಬಾರಿಯೂ ಸಿಖ್‌ರ ನಾಡು ಪಂಜಾಬ್ ನೋಡಿಲ್ಲ. ಈಗಾಗಲೇ ಮೂರನೇ ತಲೆಮಾರು ಮೂಲ ಸಮುದಾಯದೊಂದಿಗೆ ಸಂಪರ್ಕ ಕಡಿದುಕೊಂಡಿರುವ ಪರಿಣಾಮ ಪಂಜಾಬಿ ಭಾಷೆ ಕೂಡ ಅಷ್ಟಕಷ್ಟೆ ಎನ್ನುವಂತಾಗಿದೆ. ಯಾರೇ ಬಂದು ಕೇಳಿದರೂ, 'ನಾವು ಕರ್ನಾಟಕದವರು ನಮ್ಮೂರು ಹುಬ್ಬಳ್ಳಿ' ಎಂದು ಎದೆ ತಟ್ಟಿ ಹೇಳಿಕೊಳ್ಳುತ್ತಾರೆ. ಕಬ್ಬಿಣದಲ್ಲಿ ಈಳಿಗೆ, ಕಬ್ಬಿಣದ ಬುಟ್ಟಿ, ಕೊಡಲಿ ಹಾಗೆ ಅನೇಕ ತರಹದ ಸಾಮಗ್ರಿಗಳನ್ನು ತಯಾರಿಸುವ ಕೆಲಸದಲ್ಲಿ ಈ ಸಿಖ್ ಸಮುದಾಯ ತೊಡಗಿಸಿಕೊಂಡಿದೆ. ಅರ್ಬನ್ ಮಕ್ಕಳು ಶಿರಡಿನಗರದ ಕನ್ನಡ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಾರೆ. ಮಕ್ಕಳು ಕೂಡ ಇಲ್ಲಿನ ಕನ್ನಡ ಶಾಲೆಗಳಿಗೆ ಹೊಂದಿಕೊಂಡಿದ್ದಾರೆ. ಶಾಲೆಗೆ ಹೊಗುವ ಮಕ್ಕಳು ಸಿಖರ್ ಸಾಂಪ್ರದಾಯಿಕ ಪೇಟಾ ಧರಿಸಿಕೊಂಡು ಹೋಗುತ್ತಾರೆ. ಇತರ ಮಕ್ಕಳ ಮಧ್ಯೆ ಸಿಖ್ ಮಕ್ಕಳ ವೇಷಭೂಷಣ ಎದ್ದು ಕಾಣುತ್ತದೆಯಾದರೂ ಮಕ್ಕಳ ಮಧ್ಯೆ ಬೆಳೆಯುವ ಸ್ನೇಹ ಸಂಬಂಧಕ್ಕೆ ಅಡ್ಡಿಯಾಗಿಲ್ಲ. ದೇಶ ವಿಭಜನೆ ವೇಳೆ ಬದುಕು ಕಟ್ಟಿಕೊಳ್ಳುವುದಕ್ಕೆ ಹುಬ್ಬಳ್ಳಿಗೆ ಆಗಮಿಸಿದ ನೂರಾರು ಸಿಖ್ ಕುಟುಂಬಗಳು ಹುಬ್ಬಳ್ಳಿಯಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಂಡದ್ದು ಸತ್ಯ. ಪತ್ರಕರ್ತ ನಗರದಲ್ಲಿ ಮೂರು ಸಿಖ್ ಕುಟುಂಬಗಳಿದ್ದರೆ ಉಣಕಲ್, ಗಣೇಶಪೇಟ, ದೇಶಪಾಂಡೆ ನಗರ, ನವನಗರ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲೂ ಸಿಖ್ ಸಮುದಾಯಕ್ಕೆ ಸೇರಿದವರಿದ್ದಾರೆ. ಬರಿಗೈ ದಾಸರಾಗಿ ಹುಬ್ಬಳ್ಳಿಗೆ ಕಾಲಿರಿಸಿದ ಅನೇಕ ಸಿಖ್ ಕುಟುಂಬಗಳ ಪೈಕಿ ಕೆಲವು ಆರ್ಥಿಕವಾಗಿ ಪ್ರಾಬಲ್ಯ ಸಾಧಿಸಿದ್ದರೆ. ಇನ್ನು ಕೆಲವರು ಕೃಷಿಗೆ ಅಗತ್ಯವಿರುವ ಕಬ್ಬಿಣದ ಸಾಮಗ್ರಿಗಳನ್ನು ತಯಾರಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿವೆ. ಆದರೆ ಅವರೆಲ್ಲ ಕನ್ನಡ ಸಂಸ್ಕೃತಿ ರೂಢಿಸಿಕೊಂಡು ಕನ್ನಡಿಗರೇ ಆಗಿದ್ದಾರೆ ಎನ್ನುವುದು ಮೆಚ್ಚುವ ಸಂಗತಿ. ನಾವೂ ಹುಬ್ಬಳ್ಳಿಗರೇ ಕನ್ನಡ ನಾಡಿನ ಎಲ್ಲ ಹಬ್ಬಗಳನ್ನು ಆಚರಿಸುತ್ತೇವೆ. ಆದರೆ, ಅಷ್ಟೊಂದು ಅದ್ಧೂರಿಯಾಗಿರುವುದಿಲ್ಲ. ಗೌರಿ ಹುಣ್ಣಿಮೆಯಂದು ಬರುವ ಗುರುನಾನಕ್ ಜಯಂತಿಯಿಂದ ನಮ್ಮ ಹಬ್ಬಗಳ ಪರ್ವ ಆರಂಭವಾಗುತ್ತದೆ. ಜನವರಿಯಲ್ಲಿ ಗುರುಗೋವಿಂದ ಸಿಂಗ್ ಜಯಂತಿ, ನಂತರ ಬಸಂತಿ ಹಬ್ಬ ಆಚರಿಸುತ್ತೇವೆ. ಸರ್ಕಾರ ನಮಗೆ ಅನೇಕ ಸೌಲಭ್ಯ ಕೊಟ್ಟಿದೆ. ಹುಬ್ಬಳ್ಳಿ ನಾಗರಿಕರಿಗೆ ಏನೇನು ಸೌಲಭ್ಯ ಕಲ್ಪಿಸಿದೆಯೊ ಅದನ್ನೆಲ್ಲವನ್ನು ನಮಗೂ ಒದಗಿಸಿದೆ ಎನ್ನುತ್ತಾರೆ ಅರ್ಬನ್ ಸಿಂಗ್. - ಚಿತ್ರ- ಬರಹ: ಡಿ. ಹೇಮಂತ್