ವಿಜಯ ಪತಾಕೆ ಜೀವನದಲ್ಲಾಗುವ ಅನುಭವಗಳೇ ಪಾಠವಾಗುತ್ತದೆ. ಆ ಪಾಠ ದಾರಿದೀಪವೂ ಆಗುತ್ತದೆ ಎಂಬುದಕ್ಕೆ ದಾವಣಗೆರೆಯ ಚೇತನ ಎಜುಕೇಷನ್ ಟ್ರಸ್ಟ್‌ನ ಸಂಸ್ಥಾಪಕಿ ಡಾ. ವಿಜಯಲಕ್ಷ್ಮಿ ವೀರ ಮಾಚಿನೇನಿ ಸಾಕ್ಷಿ. ಕೇವಲ ಮಧ್ಯ ಕರ್ನಾಟಕವಷ್ಟೇ ಅಲ್ಲ, ರಾಜ್ಯದ ಗಡಿಯಾಚೆಗೂ ಇವರು ಶೈಕ್ಷಣಿಕ ಕ್ಷೇತ್ರದಲ್ಲಿ ಪರಿಚಿತ ಸಾಧಕಿ. 9ನೇ ತರಗತಿ ಓದಿದ್ದ ಗೃಹಿಣಿ, ಈಗ ಹಲವು ಪದವಿಗಳನ್ನು ಬಾಚಿಕೊಂಡವರು. ಅಲ್ಲದೇ ಉನ್ನತ ಶಿಕ್ಷಣ ಪಡೆದವರಿಗೂ ಉಪನ್ಯಾಸ ನೀಡುವ ಮಟ್ಟಕ್ಕೆ ಬೆಳೆದವರು. 80ರ ದಶಕದ ಮಧ್ಯದಲ್ಲಿ ಮಗಳಿಗೆ ದಾವಣಗೆರೆಯ ಪ್ರತಿಷ್ಠಿತ ಆಂಗ್ಲ ಮಾಧ್ಯಮದ ಶಾಲೆಯಲ್ಲಿ ಪ್ರವೇಶ ನೀಡಲು ನಿರಾಕರಿಸಿದ್ದ ಕ್ಷಣ ಆ ತಾಯಿಯಲ್ಲಿ ಸುಪ್ತವಾಗಿ ಅಡಗಿದ್ದ ಸಾಧಕಿ ಜಾಗೃತಳಾದಳು. ಪತಿ, ಪುತ್ರಿ, ಪುತ್ರನೊಂದಿಗೆ ಸಾಮಾನ್ಯ ಗೃಹಿಣಿಯಾಗಿದ್ದ ವಿಜಯಲಕ್ಷ್ಮಿ, 1986ರಲ್ಲಿ ಚೇತನ ಎಜುಕೇಷನ್ ಟ್ರಸ್ಟ್ ಸ್ಥಾಪಿಸಿಯೇಬಿಟ್ಟರು. ಹೀಗೆ 28 ವರ್ಷದ ಹಿಂದೆ ದಾವಣಗೆರೆಯಲ್ಲಿ, ಸಣ್ಣ ಕೊಠಡಿಯಲ್ಲಿ ಸ್ಥಾಪನೆಯಾದ ಶಾಲೆಯನ್ನು ಸ್ಥಾಪಿಸಿದ ವಿಜಯಲಕ್ಷ್ಮಿ ಏನು ಮಾಡಲು ಹೊರಟಿದ್ದಾರೆ ಎಂಬುದು ಸ್ವತಃ ವೀರ ಮಾಚಿನೇನಿ ರಾಘವೇಂದ್ರ ಪ್ರಸಾದ್‌ಗೂ ಅರಿವಿರಲಿಲ್ಲ. ಆದರೆ, ಮೌನ ಸಾಧಕಿಯಂತೆ ಮುಂದಡಿ ಇಟ್ಟ ವಿಜಯಲಕ್ಷ್ಮಿ ವೀರ ಮಾಚಿನೇನಿ ಬರಿಗೈನಲ್ಲಿ ಸಂಸ್ಥೆ ಸ್ಥಾಪಿಸಲು ಮುಂದಾದಾಗ ದಾವಣಗೆರೆ ಹಿರೇಮಠದ ಲಿಂಗೈಕ್ಯ ಡಾ. ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ, ಸಮಾಜ ಸೇವಕಿ ಅಜ್ಜಂಪುರಶೆಟ್ರು ಸುಶೀಲಮ್ಮ, ಸಚಿವ ಡಾ. ಶಾಮನೂರು ಶಿವಶಂಕರಪ್ಪ ಸೇರಿದಂತೆ ಅನೇಕರು ಸ್ಪಂದಿಸಿ, ಸಹಕಾರ ನೀಡಿದ್ದನ್ನು ಇಂದಿಗೂ ಕೃತಜ್ಞತಾ ಭಾವದಿಂದ ಸ್ಮರಿಸುತ್ತಾರೆ. ಲಿಂಗೈಕ್ಯ ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಅಂದು ವಿಜಯಲಕ್ಷ್ಮಿ ಅವರ ಕೈಗೆ 1001 ರು. ನೀಡಿ, ನಿಮ್ಮ ಸಂಸ್ಥೆ ಹೆಮ್ಮರವಾಗಿ ಬೆಳೆಯಲಿ, ಲಕ್ಷಾಂತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಆಲಯವಾಗಲಿ ಎಂದು ಹರಸಿದ್ದರು. ಅಂದು ಗುರುಗಳು ನೀಡಿದ ಆಶೀರ್ವಾದ, ಹಿರಿಯರ ಪ್ರೋತ್ಸಾಹದಿಂದಾಗಿ ಇಂದು ತಮ್ಮಿಂದ ಇಂಥದ್ದೊಂದು ಸಾಧನೆ ಸಾಧ್ಯವಾಗಿದೆ. ನನ್ನ ಮಕ್ಕಳನ್ನು ಶಾಲೆಗೆ ಸೇರಿಸುವಾಗ ಆದ ಕಹಿ ಅನುಭವ ಬೇರಾರಿಗೂ ಆಗಬಾರದೆಂಬುದು ನನ್ನ ನಿಲುವಾಗಿತ್ತು. ಅದಕ್ಕೆ ನಾನು ಈಗಲೂ ಬದ್ಧಳಿದ್ದೇನೆ. ಅನಕ್ಷರಸ್ಥರು, ರೈತರು, ಅತ್ಯಂತ ಕಡು ಬಡವರ ಮಕ್ಕಳು ತಮ್ಮ ಸಂಸ್ಥೆಯಲ್ಲಿ ಇಂದು ಸಾಧನೆ ಮಾಡುತ್ತಿರುವುದು ನನ್ನ ಶ್ರಮ ಸಾರ್ಥಕತೆ ಪಡೆದಿದೆ ಎಂಬುದಕ್ಕೆ ಸಾಕ್ಷಿ ಎಂಬುದು ವಿಜಯಲಕ್ಷ್ಮಿಯವರ ಹೇಳಿಕೆ. ಅದೇ ಸ್ಕೂಲಲ್ಲೇ ಅವಕಾಶ ಕೇವಲ 9ನೇ ತರಗತಿ ಓದಿದ್ದ ವಿಜಯಲಕ್ಷ್ಮಿ ವೀರ ಮಾಚಿನೇನಿ ತಮಗೆ ತೆಲುಗು ಭಾಷೆಯನ್ನು ಬಿಟ್ಟರೆ, ಕನ್ನಡವೂ ಬರೊಲ್ಲ. ಇಂಗ್ಲಿಷ್ ಗೊತ್ತೇ ಇಲ್ಲವೆಂಬ ಕಾರಣಕ್ಕೆ ಮಗಳಿಗೆ ಪ್ರವೇಶ ನೀಡಲು ನಿರಾಕರಿಸಿದ್ದ ಅದೇ ಶಾಲೆಯಲ್ಲಿ ವೈದ್ಯರೊಬ್ಬರ ನೆರವಿನಿಂದ ಸೇರಿಸುವ ಅವಕಾಶ ಸಿಕ್ಕಿತ್ತು. ಯಾವ ತಾಯಿಗೆ ಇಂಗ್ಲಿಷ್ ಬರುವುದಿಲ್ಲವೋ ಅಂಥವರ ಮಗಳಿಗೆ ಪ್ರವೇಶ ನೀಡಲು ನಿರಾಕರಿಸಿದ್ದ ಶಾಲೆಯಲ್ಲೇ ಮಗಳಿಗೆ ಪ್ರವೇಶ ಸಿಕ್ಕಿತು. ಅಷ್ಟೇ ಏಕೆ, ಮಗಳಿಗೆ ಪ್ರವೇಶ ನೀಡಲೊಪ್ಪದ ಶಾಲೆಯಲ್ಲೇ ತಾವೂ 10ನೇ ತರಗತಿಗೆ ಪ್ರವೇಶ ಪಡೆದರು. ಅಲ್ಲಿಂದ ಆರಂಭಗೊಂಡ ವಿಜಯಲಕ್ಷ್ಮಿ ವಿದ್ಯಾ ಕ್ಷೇತ್ರದಲ್ಲಿ ಸಾಧನೆಯ ಒಂದೊಂದೇ ಮೆಟ್ಟಿಲನ್ನು ಏರುತ್ತಾ ಸಾಗಿದರು. ಅದೊಂದು ಆಲದಮರ ಪುಟ್ಟ ಕೊಠಡಿಯಲ್ಲಿ ಶುರುವಾದ ಈ ಚೇತನ ಶಾಲೆ ಈಗ ಚೇತನಾ ಎಜುಕೇಷನ್ ಟ್ರಸ್ಟ್ ಆಗಿ ಸಾವಿರಾರು ಪಕ್ಷಿಗಳಿಗೆ ಆಶ್ರಯ ನೀಡುವಂಥ ಆಲದ ಮರವಾಗಿ ಬೆಳೆಯುತ್ತಲೇ ಇದೆ. ಈ ಸಂಸ್ಥೆಯಲ್ಲಿ ಓದಿ, ಬೆಳೆದವರು ಇಂದು ರಾಜ್ಯ, ರಾಷ್ಟ್ರ, ವಿದೇಶಗಳಲ್ಲೂ ಸಾಧನೆ ಮಾಡುತ್ತಿರುವುದು ವಿಜಯಲಕ್ಷ್ಮಿ ಅವರಲ್ಲಿ ಹೆಮ್ಮೆ ತಂದಿದೆ. ದಾವಣಗೆರೆ ಅಲ್ಲದೆ ಬೆಂಗಳೂರು, ಹುಬ್ಬಳ್ಳಿ- ಧಾರವಾಡ, ಕೋಲಾರ, ಹಾಸನ, ಬೆಳಗಾವಿ, ಬಾಗಲಕೋಟೆ, ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ವಿವಿಧೆಡೆ ಸಂಸ್ಥೆಯ ಶಾಲಾ- ಕಾಲೇಜುಗಳಿವೆ. ಮಾತೃಭಾಷೆ ತೆಲುಗು ಆಗಿದ್ದರೂ ಇಂಗ್ಲಿಷಿನ ಗಂಧ ಗಾಳಿಯೂ ಗೊತ್ತಿಲ್ಲದ, ಕನ್ನಡವನ್ನೇ ತಿಳಿಯದ ವಿಜಯಲಕ್ಷ್ಮಿ ಇಂದು ನಾಲ್ಕೈದು ಭಾಷೆ ಬಲ್ಲರು. ಎಲ್ಲಕ್ಕಿಂತ ಮಿಗಿಲಾದ ಮಕ್ಕಳ ಮನಸ್ಸಿನ ಭಾಷೆಯನ್ನು ಬಲ್ಲರು. ವಿಜಯ 'ಮೇಡಂ' ತರಗತಿಯಲ್ಲಿ ಪಾಠ ಮಾಡದಿದ್ದರೂ ಡಾ. ವಿಜಯಲಕ್ಷ್ಮಿ ತಮ್ಮ ಸಂಸ್ಥೆಯಲ್ಲಿ ಓದುತ್ತಿರುವ ಮಕ್ಕಳ ಪಾಲಿಗೆ ಎಂದಿಗೂ ಗುರುವೇ ಆಗಿದ್ದಾರೆ. ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿ ನೌಕರರ ಬಗ್ಗೆಯೂ ಕಾಳಜಿ ತೋರುವ ವಿಜಯಲಕ್ಷ್ಮಿ ತಮ್ಮ ಸಂಸ್ಥೆಯಲ್ಲಿ ಮಕ್ಕಳ ದಾಖಲಾತಿ ಕೋರಿ ಬರುವ ಪಾಲಕರನ್ನು ಎಂದಿಗೂ ಕಡೆಗಣಿಸಿದವರಲ್ಲ. ಬಡವನೇ ಆಗಿರಲಿ, ಬಲ್ಲಿದನೇ ಆಗಲಿ... ಎಲ್ಲರಿಗೂ ಒಂದೇ ರೀತಿಯಲ್ಲಿ, ಆತ್ಮೀಯತೆಯಿಂದಲೇ ಬೆರೆಯುತ್ತಾರೆ. ಕುಟುಂಬ ನೆರವು ಮಕ್ಕಳು ಇಲ್ಲಿ ಓದನ್ನು ಮುಗಿಸಿ, ಹತ್ತಾರು ವರ್ಷಗಳೇ ಕಳೆದಿದ್ದರೂ ತಮ್ಮ ತೋಟದಲ್ಲಿ ಬೆಳೆದ ಹಣ್ಣು, ಹೂವು ಎಂಬುದಾಗಿ ಮಾವು ಸೇರಿದಂತೆ ವಿವಿಧ ಹಣ್ಣಿನ ಬುಟ್ಟಿಗಳನ್ನು ತರುವಂಥ ಪಾಲಕರನ್ನೂ ಇಲ್ಲಿ ಕಾಣಬಹುದು. ಅನೇಕರು ಮನೆಗಳಲ್ಲಿ ವಿಜಯಲಕ್ಷ್ಮಿಯವರ ಭಾವಚಿತ್ರವನ್ನು ಇಟ್ಟುಕೊಂಡಿದ್ದಾರೆ. ಹೀಗೆ ತಮ್ಮ ಸಂಸ್ಥೆಗೆ ಸೇರುವ ಪ್ರತಿ ಮಕ್ಕಳ ಬಗ್ಗೆಯೂ ವಿಶೇಷ ಕಾಳಜಿ ತೋರುವುದು ಚೇತನ ಸಂಸ್ಥೆಯ ಕಳಕಳಿಯಾಗಿದೆ. ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಮಾತ್ರವಲ್ಲ, ಮಹಿಳಾ ಉದ್ಯಮಿಯಾಗಿ, ರೈತರಾಗಿಯೂ ವಿಜಯಲಕ್ಷ್ಮಿ ಅವರ ಸಾಧನೆ ಕಡಿಮೆಯೇನಲ್ಲ. ಡಾ. ವಿಜಯಲಕ್ಷ್ಮಿ ಅವರೊಂದಿಗೆ ಸಂಸ್ಥೆ ನಿರ್ದೇಶಕರಾಗಿ ಪತಿ ವೀರ ಮಾಚಿನೇನಿ ರಾಘವೇಂದ್ರ ಪ್ರಸಾದ್, ಪುತ್ರ ವೀರ ಮಾಚಿನೇನಿ ವೆಂಕಟ್ ಕಿರಣ್, ಸೊಸೆ ಲೇಖಾ ಸಹ ಜೊತೆಯಾಗಿ ನಿಂತಿದ್ದಾರೆ. ವಿದೇಶದಲ್ಲಿರುವ ಪುತ್ರಿ ಜ್ಯೋತಿಯವರ ಸಹಕಾರವನ್ನೂ ಮರೆಯುವಂತಿಲ್ಲ. ಪ್ರತಿ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎಂಬುದು ಅನಾದಿಯಿಂದಲೂ ಬಂದಿರುವ ಗಾದೆ. ಆದರೆ, ವಿಜಯಲಕ್ಷ್ಮಿ ಅವರ ವಿಚಾರದಲ್ಲಿ ಈ ಗಾದೆ ಉಲ್ಟಾ ಆಗಿರಬಹುದು. ಪತಿ ವೀರ ಮಾಚಿನೇನಿ ರಾಘವೇಂದ್ರ ಪ್ರಸಾದ್ ಸಹ ಉದ್ಯಮಿಯಾಗಿ, ಜಮೀನ್ದಾರರಾಗಿದ್ದಾರೆ. ಪತ್ನಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಪತ್ನಿಯ ಸಾಧನೆಗೆ ಹೆಮ್ಮೆಪಡುವಂಥ ದೊಡ್ಡ ಮನಸ್ಸಿನ ವ್ಯಕ್ತಿಯಾಗಿದ್ದಾರೆ. ಕೊಲಂಬಿಯಾ ವಿವಿ ಗೌರವ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಗಳಿಸಿರುವ ವಿಜಯಲಕ್ಷ್ಮಿ, ಕೊಲಂಬಿಯಾ ವಿವಿಯಿಂದ ಡಾಕ್ಟರೇಟ್ ಗೌರವವನ್ನೂ ಪಡೆದಿದ್ದಾರೆ. ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ನವದೆಹಲಿಯ ಇಂಡಿಯನ್ ಅಚೀವರ್ ಫೋರಂ ನೀಡುವ ಶಿಕ್ಷಾ ಭಾರತಿ ಪ್ರಶಸ್ತಿಯನ್ನು 2011ರಲ್ಲಿ ಮುಡಿಗೇರಿಸಿಕೊಂಡ ವಿಜಯಲಕ್ಷ್ಮಿ ಅವರಿಗೆ ನೂರಾರು ಪ್ರಶಸ್ತಿ, ಪುರಸ್ಕಾರಕ್ಕೆ ಪಾತ್ರರಾಗುತ್ತಲೇ ಇದ್ದಾರೆ.