ಸಿದ್ಧಾಪುರ ಸೌಂದರ್ಯ ಕೊಡಗು ಜಿಲ್ಲೆಯ ಸಿದ್ದಾಪುರ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿ. ಈ ಪಟ್ಟಣ ಸಮುದ್ರ ಮಟ್ಟಕ್ಕಿಂತ 1,850 ಅಡಿ ಎತ್ತರದಲ್ಲಿ ಇರುವುದರಿಂದ ತಂಪಾದ ಹವಾಮಾನವು ಇಲ್ಲಿನ ಸೌಂದರ್ಯಕ್ಕೆ ಇಮ್ಮಡಿ ಆಕರ್ಷಣೆ ಒದಗಿಸಿದೆ. ಚಾರಣ ಮತ್ತು ನಿಸರ್ಗ ವೀಕ್ಷಕರಿಗೆ ಮರೆಯಲಾಗದ ಅನುಭವ ನೀಡುತ್ತದೆ. ಅದರಲ್ಲಿಯೂ ಕಾಫಿ, ಏಲಕ್ಕಿ, ಮೆಣಸು ಮತ್ತು ಅನಾನಸ್ ತೋಟಗಳ ನಡುವಿನ ಚಾರಣ ಮಾಡುವವರು ಈ ಊರನ್ನು ಮರೆಯಲಾರರು. ಈ ಪ್ರದೇಶ ದೇವಾಲಯಗಳಿಗೂ ಹೆಸರುವಾಸಿ. ಇಲ್ಲಿನ ಲಕ್ಷ್ಮಿನಾರಾಯಣ ದೇವಾಲಯ, ಕೊಂಡಿ ಮಾರಿಕಾಂಬ ಮತ್ತು ಬಂಕೇಶ್ವರ ದೇವಾಲಯಗಳು ಪ್ರಮುಖ. ಅಮ್ಮತಿ ಪಟ್ಟಣ ಸಿದ್ದಾಪುರಕ್ಕೆ ಸಮೀಪದಲ್ಲಿದ್ದು ತೋಟಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಕೊಡವ ಕುಟುಂಬಗಳ ವಾರ್ಷಿಕ ಹಾಕಿ ಉತ್ಸವ ಭಾರಿ ಜನಸಂದಣಿಯ ನಡುವೆ ಜರುಗುತ್ತದೆ. ಪೊಲ್ಲಿ ಬೆಟ್ಟ ಸಹಾ ಇಲ್ಲಿಗೆ ಸಮೀಪವಿದ್ದು ಬೌದ್ಧರ ದೇವಾಲಯ ಮತ್ತು ಕೋಟೆ ಹೊಂದಿದೆ.