ವನ ರಾಮ ಹಿಂಡೂಮನೆ ರಾಮಪ್ಪನವರು ದೊಡ್ಡ ಜಮೀನ್ದಾರಿ ಕುಟುಂಬದ ಹಿನ್ನೆಲೆಯವರು. ಬಹಳ ಜಮೀನುಗಳು ಗೇಣಿಯಲ್ಲಿ ಕೈಬಿಟ್ಟಿತು. ಇರುವುದನ್ನು... ಹಿಂಡೂಮನೆ ರಾಮಪ್ಪನವರು ದೊಡ್ಡ ಜಮೀನ್ದಾರಿ ಕುಟುಂಬದ ಹಿನ್ನೆಲೆಯವರು. ಬಹಳ ಜಮೀನುಗಳು ಗೇಣಿಯಲ್ಲಿ ಕೈಬಿಟ್ಟಿತು. ಇರುವುದನ್ನು ಸಹೋದರರಿಗೆ ಹಂಚಿ ಪಾಲಿಗೆ ಬಂದ ಎರಡು ಎಕರೆಯಲ್ಲಿ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಜಮೀನಿನಲ್ಲಿ ಕೃಷಿ ಕುಟುಂಬ ನಿರ್ವಹಣೆಗೆ ಆಯಿತು. ಆದರೆ ಸಮಾಜಕ್ಕೆ ಏನಾದರೂ ಉಳಿಸಿ ಹೋಬಗೇಕು ಎನ್ನುವ ಯೋಚನೆ ಬಂದಾಗ ಹೊಳೆದಿದ್ದು ಔಷಧ ವನ. ಸಾಗರ ತಾಲೂಕಿನ ಹೊಸಹಳ್ಳಿಯಲ್ಲಿ 1999ರಲ್ಲಿ ಮೂರು ಎಕರೆ ಜಮೀನಿನಲ್ಲಿ ಔಷಧೀಯ ಸಸಿಗಳನ್ನು ನೆಟ್ಟು ಅದಕ್ಕೆ ಭೂತೇಶ್ವರ ಔಷಧ ವನವೆಂದು ನಾಮಕರಣ ಮಾಡಲಾಯಿತು. ಗ್ರಾಮಸ್ಥರ ಸಹಕಾರದೊಂದಿಗೆ ಹಾಗೂ ಅರಣ್ಯ ಇಲಾಖೆ ಕೊಡ ಮಾಡಿದ ಸ್ವಲ್ಪ ಹಣದೊಂದಿಗೆ ತಂತಿ ಬೇಲಿ ನಿರ್ಮಿಸಿ ಪ್ರಾರಂಭದಲ್ಲಿ 50 ಜಾತಿಯ ಸಸಿಗಳನ್ನು ನೆಡಲಾಯಿತು. ಇಂದು ಇಲ್ಲಿರುವ ಗಿಡಗಳ ಜಾತಿಗಳ ಸಂಖ್ಯೆ 600 ಮೀರಿದೆ ಎಂದರೆ ಅದರ ವೈವಿಧ್ಯತೆ ನಿಮಗೆ ಅರಿವಾಗಬಹುದು. ಅಪರೂಪದ ಸಸ್ಯಗಳಾದ ಆನಂಗಿ, ಸರ್ಪಗಂಧ, ಏಕನಾಥ, ಏಕನಾಯಕ, ಬೇಲ, ಹಿಪ್ಪೆ, ರುದ್ರಾಕ್ಷಿ, ಕದಂಬ, ನಾಗಲಿಂಗ, ಭೂತನಾಥ, ಪುತ್ರಜೀವಿ, ರಕ್ತಚಂದನ, ಮರದರಿಶಿನ, ಕೆಂಪು ದೇವದಾರಿ, ಕೆಂಪು ಮತ್ತು ಬಿಳಿ ಮುರುಗಲು, ಬಿಳಿ ಹಾಲವಾಣ, ಬಿಳಿ ಮತ್ತಿಮರ... ಹೀಗೆ ಔಷಧ ಸಸ್ಯಗಳ ಲೋಕವೇ ಅನಾವರಣಗೊಳ್ಳುತ್ತದೆ. ನೆಟ್ಟ ಸಸ್ಯಗಳಿಗೆ ಬೇಸಿಗೆಯಲ್ಲಿ ನೀರೆರೆಯುವುದು, ಬೇಲಿ ಸರಿಪಡಿಸಿ ಜಾನುವಾರುಗಳಿಂದ ರಕ್ಷಣೆ ಮಾಡುವುದು ಎಲ್ಲಾ ಏಕವ್ಯಕ್ತಿ ಪ್ರದರ್ಶನ. ಇದನ್ನು ಹಲವಾರು ವರ್ಷಗಳಿಂದ ತಪ್ಪದೇ ನಡೆಸಿಕೊಂಡು ಬರುತ್ತಿದ್ದಾರೆ ರಾಮಪ್ಪನವರು. - ಚೇತನಾ ಹಿಂಡೂಮನೆ