ತಳಕೋಣ ಆಂಧ್ರದ ಮುತ್ತಿನಂಥ ಪ್ರವಾಸಿ ತಾಣಗಳಲ್ಲಿ ತಳಕೋಣ ವಾಟರ್‌ಫಾಲ್ಸ್ ಕೂಡ ಒಂದು. ವೆಂಕಟೇಶ್ವರ ಪಾರ್ಕ್ ಎಂದೂ ಕರೆಯಲ್ಪಡುವ ಈ ತಾಣ ಚಿತ್ತೂರು ಜಿಲ್ಲೆಯ ಸಿರಿ. 270 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ. ರಾಜ್ಯದಲ್ಲೇ ಅತಿ ಎತ್ತರದ ಜಲಪಾತ ಕೂಡ ಹೌದು. ಜಲಪಾತದ ಸನಿಹವೇ ಸಿದ್ದೇಶ್ವರಸ್ವಾಮಿ ದೇಗುಲವಿದೆ. ಸ್ವಚ್ಛಂದ ಪರಿಸರವಿರುವ ತಳಕೋಣ ಅರಣ್ಯ ಪ್ರದೇಶವನ್ನು 1989-90ರಲ್ಲಿ ಜೀವವೈವಿಧ್ಯ ತಾಣವಾಗಿ ಘೋಷಿಸಲಾಗಿದೆ. ಕಾಡುಪಾಪ, ಕೆಂದಳಿಲು, ಮೌಸ್‌ಡೀರ್, ಹಳದಿ ಹಲ್ಲಿ, ಮುಳ್ಳುಹಂದಿ, ಹೆಬ್ಬಾವು ಮುಂತಾದ ಜೀವಿಗಳಿವೆ. ಇಲ್ಲಿ 240 ಮೀಟರ್ ಉದ್ದದ ರೋಪ್‌ವೇ ಇದೆ. 35ರಿಂದ 40 ಅಡಿ ಎತ್ತರದಲ್ಲಿರುವ ಈ ರೋಪ್‌ವೇ ಸಂಚಾರ ಥ್ರಿಲ್ಲಿಂಗ್‌ನಿಂದ ಕೂಡಿರುತ್ತದೆ. ದಾರಿಯುದ್ದಕ್ಕೂ ವಿವಿಧ ಪಕ್ಷಿಗಳು, ಕೋತಿಗಳನ್ನು ಕಾಣಬಹುದು. ಇಲ್ಲಿನ ಬೆಟ್ಟದಲ್ಲಿನ ಗುಹೆಗಳಲ್ಲಿ ಸನ್ಯಾಸಿಗಳು ಚಿಕಿತ್ಸೆ ಕೊಡುತ್ತಿದ್ದರೆಂದು ನಂಬಲಾಗಿದೆ. ಹೀಗೆಬನ್ನಿ... ಚಿತ್ತೂರು ಜಿಲ್ಲೆಯ ಎರ್ರವರಿಪಾಲೆಂ ಮಂಡಲದ ನೇರಬೈಲು ಗ್ರಾಮದ ಬಳಿ ತಳಕೋಣ ತಾಣವಿದೆ. ತಿರುಪತಿಯಿಂದ 49 ಕಿ.ಮೀ., ಚೆನ್ನೈನಿಂದ 220 ಕಿ.ಮೀ., ಚಿತ್ತೂರ್‌ನಿಂದ 105 ಕಿ.ಮೀ., ಬೆಂಗಳೂರಿನಿಂದ 250 ಕಿ.ಮೀ. ಅಂತರದಲ್ಲಿದೆ.