ಗೋಪಾಲನ ಪಾರಿವಾಳ ಇಲ್ಲಿರುವ ದೇವರು ಸಂತಾನ ಗೋಪಾಲಕೃಷ್ಣ. ಕರಾವಳಿಯಲ್ಲಿ ತೀರಾ ಅಪರೂಪವಾದ ಸನ್ನಿಧಿ. ಮಕ್ಕಳಿಲ್ಲದ ಲಿಂಗಾಯತ ದಂಪತಿ ಸಂತಾನ ಭಾಗ್ಯ ಪ್ರಾಪ್ತಿಗೆ ಹರಕೆ ಹೊತ್ತು ಇಷ್ಟಾರ್ಥ ಸಿದ್ಧಿಯಾದುದಕ್ಕೆ ನೂರಾರು ವರ್ಷಗಳ ಹಿಂದೆ ಇಲ್ಲಿ ದೇಗುಲ ಕಟ್ಟಿದರಂತೆ. ಮುರಳಿ ಮನೋಹರನ ದಿವ್ಯ ಸುಂದರ ವಿಗ್ರಹವೂ ಇಲ್ಲಿದೆ. ಎರಡು ವರ್ಷಗಳ ಹಿಂದೆ ದೇವಳ ಜೀರ್ಣೋದ್ಧಾರವಾಗಿದೆ. ಆಮೇಲೆ ಸುಮಾರು ಹತ್ತಕಿಂತ ಅಧಿಕ ಮಂದಿಗೆ ಇಲ್ಲಿಗೆ ಹರಕೆ ಹೊತ್ತು ಮಕ್ಕಳಾದ ನಿದರ್ಶನಗಳಿವೆ ಅಂತಾರೆ ಅರ್ಚಕ ರಂಗನಾಥ ನೂರಿತ್ತಾಯರು. ಹೀಗೆ ಸಂತಾನ ಫಲ ಪಡೆದವರಲ್ಲಿ ಸವದತ್ತಿ, ಮೈಸೂರು, ಬೈಂದೂರು ಮುಂತಾದ ದೂರದ ಊರುಗಳವರೂ ಇದ್ದಾರಂತೆ. ನಾವು ರಾಜಸ್ಥಾನದ ಇಲಿಗಳ ದೇಗುಲದ ಕುರಿತು ಕೇಳಿದ್ದೇವೆ. ಕಾರಿಂಜದಲ್ಲಿ ಮಂಗಗಳು ನೈವೇದ್ಯಕ್ಕಾಗಿ ಕಾಯುವುದನ್ನು ಕಂಡಿದ್ದೇವೆ. ಅಂಥದ್ದೇ ಇನ್ನೊಂದು ವಿಶೇಷ ಈ ದೇಗುಲದಲ್ಲಿದೆ. ಗರ್ಭಗುಡಿಯ ಮೇಲುಭಾಗದಲ್ಲಿ ಖಾಲಿ ಕೋಣೆಯಿದೆ. ದೇವಳ ಜೀರ್ಣೋದ್ಧಾರವಾದ ಬಳಿಕ ಎಲ್ಲಿಂದಲೋ ಬಂದ ಪಾರಿವಾಳಗಳ ವಾಸಸ್ಥಾನವಾಗಿದೆ. ಅಂಗಣಕ್ಕೆ ಕಾಲಿಡುವಾಗಲೇ ರೆಕ್ಕೆ ಬಡಿಯುತ್ತ ಹಾರುತ್ತಿರುವ ಅವುಗಳ ಹ್ರೂಂ ಎಂಬ ಬೀಜಮಂತ್ರವೂ ಮೊಳಗುತ್ತದೆ. ಇಲ್ಲಿ ಬೆಳಗಿನ ವೇಳೆ ಮಾತ್ರ ಪೂಜೆ. ಬೆಳಗ್ಗೆ ಒಂಬತ್ತು ಗಂಟೆಗೆ ನೈವೇದ್ಯ ಮಾಡಿದ ಬಳಿಕ ಒಂದು ಎಲೆಯಲ್ಲಿ ತುಂಬ ನೈವೇದ್ಯ ಹಾಕಿ ಬಲಿಕಲ್ಲಿನ ಬಳಿ ತಂದು ಇಡುತ್ತಾರೆ. ಆ ವರೆಗೆ ಮೇಲುಪ್ಪರಿಗೆಯಲ್ಲಿ ಪಾರಿವಾಳಗಳು ಇದ್ದಾವೆ ಅಂತ ಅನಿಸುವುದಿಲ್ಲ. ಆದರೆ ನೈವೇದ್ಯ ಹಾಕುವ ಸಮಯ ಸನ್ನಿಹಿತವಾದಾಗ ಕರಾರುವಕ್ಕಾಗಿ ಅವುಗಳಿಗೆ ತಿಳಿಯುತ್ತದೆ. ಎಂದಿನ ಸಮಯ ತಪ್ಪಿದರೆ ಉಪ್ಪರಿಗೆಯಿಂದ ಭರ್ರನೆ ಹೊರಗೆ ಬಂದು ದೇವಳದ ಮಾಡಿನ ಸುತ್ತಲೂ ಹಾರಾಡುತ್ತವೆ. ಕೆಲವು ನೆತ್ತಿಯ ಕಳಶದ ಮೇಲೆ ಕುಳಿತು ಕಾಯುತ್ತವೆ. ಅರ್ಚಕರಿಗೆ ದೋಸ್ತ್ ಆಗಿದ್ದರೂ ಅಪರಿಚಿತರು ಬಂದರೆ ಕೆಳಗೆ ಬರಲು ನಾಚಿಕೆಪಡುತ್ತವೆ. ಬಲಿಕಲ್ಲಿನ ಬಳಿ ನೈವೇದ್ಯ ಬಡಿಸಿ ಅರ್ಚಕರು ಒಳಗೆ ಸರಿಯುವುದನ್ನೇ ಕಾಯುವ ಪಾರಿವಾಳಗಳಲ್ಲಿ ಒಂದು ಕೆಳಗಿಳಿದು ಎಲೆಯಲ್ಲಿರುವ ನೈವೇದ್ಯವನ್ನು ಬೇಕಾದಷ್ಟು ತಿಂದು ಹಾರಿಹೋಗುತ್ತದೆ. ಬಳಿಕ ಎರಡನೆಯದು, ಮೂರನೆಯದು ಹೀಗೆ ಹತ್ತಾರು ಪಾರಿವಾಳಗಳು ಒಂದೊಂದಾಗಿ ಬಂದು ಹೊಟ್ಟೆ ತುಂಬಿಸಿಕೊಳ್ಳುತ್ತ ಮತ್ತೆ ಮನೆ ಸೇರಿದರೆ ಹೊರಗೆ ಬರುವುದು ಮರುದಿನ ಬೆಳಗ್ಗೆ. ಹತ್ತಕ್ಕಿಂತ ಹೆಚ್ಚು ಜೋಡಿಗಳಿದ್ದರೂ ಒಂದೊಂದಾಗಿ ಬಂದು ಆಹಾರ ಸ್ವೀಕರಿಸುತ್ತವೆ ವಿನಃ ಒಟ್ಟಾಗಿ ಬರುವುದಿಲ್ಲ. ಇದರೊಂದಿಗೆ ಅತಿ ಅಪರೂಪವೇ ಆಗಿರುವ ಗುಬ್ಬಚ್ಚಿಗಳ ಒಂದು ಜೋಡಿಯೂ ಪಾರಿವಾಳಗಳೊಂದಿಗೇ ಸಹಜೀವನ ಮಾಡುತ್ತದೆ. ಕೊನೆಗೆ ಅವು ಬಂದು ಆಹಾರ ತಿನ್ನುತ್ತವೆ. ಈ ಪಾರಿವಾಳಗಳ ಪೈಕಿ ಒಂದಕ್ಕೆ ಕಾಲು ಸರಿಯಿರಲಿಲ್ಲ. ಅದು ಕಾಲೆಳೆಯುತ್ತ ನನ್ನ ಜೊತೆಗೇ ಅಂಗಣದಲ್ಲಿ ಹಿಂಬಾಲಿಸುತ್ತಿತ್ತು ಎಂಬ ಕಥೆ ಹೇಳುತ್ತಾರೆ ರಂಗನಾಥ ನೂರಿತ್ತಾಯರು. ನಾನು ನೈವೇದ್ಯ ಹಾಕುವ ತನಕ ಕಾದು ಅದನ್ನು ತಿಂದ ಮೇಲೆ ಪ್ರಯಾಸದಿಂದ ಮೇಲೆ ಹೋಗುತ್ತಿತ್ತು. ಅದಿನ್ನು ದೇವಸ್ಥಾನದಲ್ಲಿ ಸತ್ತರೆ ಸರಿಯಾಗುವುದಿಲ್ಲ ಎಂಬ ಕಾರಣಕ್ಕೆ ಭಕ್ತರೊಬ್ಬರು ದೂರ ಕೊಂಡು ಹೋಗಿ ಬಿಟ್ಟುಬಂದರು. ದೇವರ ನೈವೇದ್ಯದಿಂದಲೇ ಬದುಕಿಕೊಂಡಿದ್ದ ಅದನ್ನು ಹೀಗೆ ಬಿಟ್ಟುಬಂದ ಬಗೆಗೆ ನನಗೆ ಈಗಲೂ ದುಃಖವಾಗುತ್ತದೆ ಎನ್ನುತ್ತಾರೆ. ಆದರೆ ಇಲ್ಲಿರುವ ಈ ಗೋಪಾಲಕೃಷ್ಣನ ಸಂಗಾತಿಗಳಿಗೆ ನೆಮ್ಮದಿಯಿದೆ. ಕಾಲಕಾಲಕ್ಕೆ ಮೊಟ್ಟೆಯಿಟ್ಟು ಮರಿ ಮಾಡಿ ವಂಶಾಭಿವೃದ್ಧಿ ನಡೆಸಿವೆ. ಈ ಕುರಿತು ಇನ್ನೂ ಕುತೂಹಲವಿದ್ದರೆ ಮೊಕ್ತೇಸರ ಸುಬ್ರಹ್ಮಣ್ಯ ನೂರಿತ್ತಾಯರ (ಮೊ. 94480 03888) ಅವರನ್ನು ಸಂಪರ್ಕಿಸಬಹುದು. -ಪ. ರಾಮಕೃಷ್ಣ ಶಾಸ್ತ್ರಿ