ರೈಲು ರಂಗೀಲಾ 'ಆಹಾ, ಸೂಪರ್‌' ಎನ್ನವ ಬಿಸಿರಕ್ತದ ತರುಣ ತರುಣಿಯರು. 'ಅಬ್ಬಾ ಭಯವಾಗುತ್ತೆ'... 'ಆಹಾ, ಸೂಪರ್‌' ಎನ್ನವ ಬಿಸಿರಕ್ತದ ತರುಣ ತರುಣಿಯರು. 'ಅಬ್ಬಾ ಭಯವಾಗುತ್ತೆ' ಎನ್ನುತ್ತಲೇ ಕಿಡಕಿಯಿಂದ ಇಣುಕುವ ಹೆಂಗಳೆಯರು. 'ಬಾಗಿಲ ಬಳಿ ಸಾಗಬೇಡವೋ, ಬಿದ್ದುಬಿಟ್ಟೀಯ' ಎಂದು ಮಕ್ಕಳಿಗೆ ಕಿವಿಮಾತು ಹೇಳುವ ಹೆತ್ತವರು. ಬೆಂಗಳೂರು-ಮಂಗಳೂರು ಹಗಲು ರೈಲಿನಲ್ಲಿ ಇದ್ದಕ್ಕಿದ್ದಂತೆ ಕೇಳುವ, ಕಾಣುವ ಈ ಮಾತು, ದೃಶ್ಯಗಳಿಂದಲೇ ಗೊತ್ತಾಗುತ್ತದೆ, ರೈಲು ಎಡಕುಮೇರಿಯತ್ತ ಸಾಗುತ್ತಿದೆ ಎಂದು. ಒಂದೆಡೆ ಕಡಿದಾದ ಬೆಟ್ಟ, ಇನ್ನೊಂದೆಡೆ ರಣ ಪ್ರಪಾತ, ನಡುವೆ ಹಳಿಯಲ್ಲಿ ಹಾವಿನಂತೆ ಹಾದು ಹೋಗುವ ರೈಲು. ಮೇಲೆ ಕಣ್ಣೆತ್ತಿ ನೋಡಿದರೆ ನಿಧಾನವಾಗಿ ಸಾಗುತ್ತಿರುವ ಮೋಡಗಳು. ಸಾಲು ಸಾಲು ಬೆಟ್ಟದ ನಡುವಿನಿಂದ ಭುಗಿಲೆದ್ದ ಬೆಂಕಿಯ ದಟ್ಟ ಹೊಗೆಯಂತೆ ಮೇಲೇರುವ ಆವಿ. ಗಿರಿಯ ನಡುವೆ ಕಿರಿದಾಗಿ ಹರಿಯುವ ನೂರಾರು ತೊರೆಗಳು. ವೈಯ್ಯಾರದಿಂದ ಇಳಿಯುವ ಜಲಪಾತಗಳು. ಕಣ್ತುಂಬಿಕೊಂಡಷ್ಟೂ ಸಾಲದು ಎನ್ನುವಂಥ ನಿಸರ್ಗ ವೈಭವ. 'ಈ ಹಸಿರು ಸಿರಿಯಲಿ ಮನಸು ಮೆರೆಯಲಿ...' ಎಂಬ ಹಾಡು ತನ್ನಿಂತಾನೇ ನೆನಪಾಗದಿದ್ದರೆ ಹೇಳಿ. ಕಡಿದಾದ ಇಳಿಜಾರು ಹಾದಿಯಲ್ಲಿ ಸುಮಾರು ಇಪ್ಪತ್ತಕ್ಕೂ ಮಿಕ್ಕಿ ತಿರುವುಗಳು, 57 ಸುರಂಗಗಳು, ನೂರಕ್ಕೂ ಮಿಕ್ಕು ಸಣ್ಣ, ದೊಡ್ಡ ಸೇತುವೆಗಳು, ಹಾಲ್ನೊರೆ ಉಕ್ಕಿಸುತ್ತ ಜಿಗಿಯುವ ನೂರಾರು ತೊರೆಗಳು ನಮ್ಮನ್ನು ಹೊಸದೊಂದು ಲೋಕಕ್ಕೆ ಕೊಂಡೊಯ್ಯುತ್ತದೆ. ತಿರುವುಗಳಲ್ಲಿ ರೈಲು ಬ್ರೇಕ್‌ನ ಕೀ...ರ್ ಕೀ...ರ್ ಶಬ್ದ ಕಿವಿಗಡಚಿಕ್ಕುತ್ತದೆ. ತಿರುವುಗಳಲ್ಲಿ ಸಾಗಿದಂತೆ ಮೇಲಿಂದ ಮೇಲೆ ಒಂದೊಂದೇ ಸುರಂಗಗಳಲ್ಲಿ ಹಾದು ಹೋಗುವಾಗ ಯುವಕರು ಖುಷಿಯಿಂದ ಸಿಳ್ಳು ಹಾಕುತ್ತಾರೆ. ಹಗಲಲ್ಲೂ ಕತ್ತಲಿನಂತೆ ಭಾಸವಾಗುವ ಇಲ್ಲಿ ಸುರಂಗದ ಇನ್ನೊಂದು ತುದಿ ಬಂದ ಕೂಡಲೇ ಜಿಗ್ಗನೆ ಕಾಣುವ ಬೆಳಕು. ಕತ್ತಲು-ಬೆಳಕಿನಾಟದ ಅನುಭವ ರೋಚಕ. ಸುರಂಗ ಮುಗಿಯುತ್ತಿದ್ದಂತೆ ಕಣ್ಣಮುಂದೆ ಬೃಹತ್ ಸೇತುವೆಗಳು ಪ್ರತ್ಯಕ್ಷ. ಈ ಹಾದಿಯಲ್ಲಿ ಸಾಗುವಾಗ ಮೈಮನಗಳೆಲ್ಲ ರೋಮಾಂಚನ. ಬೆಟ್ಟದ ಕಡೆ ನೋಡಿದರೆ ಜುಳುಜುಳು ಜಲಪಾತ, ಕೆಳಗೆ ಕಡಿದಾದ ಪ್ರಪಾತ. ಎತ್ತ ನೋಡುವುದು ಎನ್ನುವ ಗೊಂದಲ. ಇಲ್ಲಿ ಪ್ರತಿ ಸುರಂಗವನ್ನು ಪ್ರವೇಶಿಸುವಾಗ ಸುರಂಗದ ಮುಂಭಾಗದ ಇಕ್ಕೆಡೆಗಳಲ್ಲೂ ಸುರಂಗದ ಸಂಖ್ಯೆ, ಉದ್ದ ಇತ್ಯಾದಿ ವಿವರಗಳುಳ್ಳ ಫಲಕವನ್ನು ಹಾಕಲಾಗಿದೆ. ಕೆಲವು ಸುರಂಗಗಳು 500 ಮೀಟರಿಗಿಂತಲೂ ಮಿಕ್ಕಿ ಉದ್ದವಿದೆ. ಈ ಮಾರ್ಗದಲ್ಲಿ ಪ್ರಯಾಣ ಮಳೆಗಾಲದಲ್ಲೇ ಮೋಜು. ದುರ್ಗಮ ಹಾದಿಯಲ್ಲಿ ಬೆಟ್ಟ ಸೀಳಿ ಸಾಗುವ ರೈಲು ಪ್ರಯಾಣ ಸುಮಾರು ಎರಡು ಗಂಟೆಗಳಿಗೂ ಹೆಚ್ಚು. ನಡುವೆ ಎಡಕುಮೇರಿ ನಿಲ್ದಾಣದಲ್ಲಿ ಬಿಸಿಬಿಸಿ ಚಹಾ, ಕಾಫಿ, ಕುರುಕುರು ತಿಂಡಿಗಳ ಸಪ್ಲೈ ಇರುವುದರಿಂದ ತಿನಿಸುಗಳನ್ನು ಸವಿಯುತ್ತಲೇ ಪ್ರಕೃತಿ ಸೊಬಗು ಆಸ್ವಾದಿಸಬಹುದು. ಚಾರಣಪ್ರಿಯರ ಸ್ವರ್ಗ ಟ್ರೆಕ್ಕಿಂಗ್ ಪ್ರಿಯರು ಇಲ್ಲಿ ಹತ್ತಾರು ಕಿ.ಮೀ. ದೂರ ನಡೆದುಕೊಂಡೇ ಸಾಗುತ್ತಾರೆ. ಸುರಂಗ ಮಾರ್ಗದ ಕತ್ತಲೆಯಲ್ಲಿ ಟಾರ್ಚ್ ಹಿಡಿದು ಮುನ್ನಡೆಯುವ ಅವರು ಅಲ್ಲಲ್ಲಿ ಸಿಗುವ ತೊರೆ, ಧಾರೆಗಳಲ್ಲಿ ತಣ್ಣನೆಯ ನೀರಿಗೆ ಮೈಯೊಡ್‌ಡಿ ಖುಷಿ ಪಡುತ್ತಾರೆ. ಅದಕ್ಕಾಗಿಯೇ ಇದನ್ನು 'ಚಾರಣಪ್ರಿಯರ ಸ್ವರ್ಗ' ಎನ್ನುತ್ತಾರೆ. ಸುತ್ತಲೂ ಕಾಣುವ ಹಸಿರು ಹೊದಿಕೆ ಮನಸ್ಸಿಗೆ ಮುದ ನೀಡುತ್ತದೆ. ಹರಸಾಹಸವೇ ಸೈ ಈ ದುರ್ಗಮ ಹಾದಿಯ ರೂವಾರಿ ಅಂದಿನ ಕೇಂದ್ರ ರೈಲ್ವೆ ಸಚಿವ ದಿವಂಗತ ಟಿ.ಎ. ಪೈ. ಇಂದಿನಂತೆ ಯಾವುದೇ ಜೆ.ಸಿ.ಬಿ. ಯಂತ್ರಗಳ ನೆರವು ಇಲ್ಲದ ಅಂದು ಈ ರೈಲು ಯೋಜನೆಯನ್ನು ರೂಪಿಸಿದ ಧೀಮಂತ ಅವರು. ನಡೆದು ಸಾಗಲೂ ಸರಿಯಾದ ದಾರಿ ಇಲ್ಲದ ಈ ಬೆಟ್ಟ ಪ್ರದೇಶದಲ್ಲಿ ದೈತ್ಯಗಾತ್ರದ ಸೇತುವೆಗಳನ್ನು, ಬೃಹತಸುರಂಗಗಳನ್ನು ಮಾನವ ದುಡಿಮೆಯಿಂದಲೇ ನಿರ್ಮಿಸಿರುವುದು ಹರಸಾಹಸವೇ ಸೈ. ರೈಲು ವೇಳೆ ಬೆಂಗಳೂರಿನಿಂದ ಬೆಳಿಗ್ಗೆ 7.30ಕ್ಕೆ ಬಿಡುವ ಈ ರೈಲು ಮಧ್ಯಾಹ್ನ 1.30ರ ಸುಮಾರಿಗೆ ಸಕಲೇಶಪುರ ತಲುಪುತ್ತದೆ. 2 ಗಂಟೆಗೆ ಅಲ್ಲಿಂದ ಹೊರಡುವ ರೈಲು ದೋಣಿಗಲ್, ಎಡಕುಮೇರಿ, ಶಿರಿಬಾಗಿಲು ನಿಲ್ದಾಣಗಳನ್ನು ದಾಟಿ ಸುಬ್ರಹ್ಮಣ್ಯಕ್ಕೆ ಸಾಗುವ ಮಧ್ಯೆ ಸುಮಾರು 20 ಕಿ.ಮೀ.ಗಳ ಹಸಿರು ಹಾದಿ ನಿಜಕ್ಕೂ ಅದ್ಭುತ. - ಎನ್. ಸ್ವಾತಿ ಉಡುಪಿ