ಜೀಪ್ ಗರ್ಲ್ ಬೆಂಗಳೂರಿಗರು ಮಲೆನಾಡಿಗೆ ಕೇವಲ ಚಾರಣಕ್ಕಷ್ಟೇ ಹೋಗುವುದಿಲ್ಲ. ಜೀಪು ಚಲಾಯಿಸುವ ಸ್ಪರ್ಧೆಗೂ ಹೋಗುವುದುಂಟು. ಮುಂಗಾರಿನ ಜಿಟಿಪಿಟಿಯಲ್ಲಿನ ಈ ಜೀಪು ಚಾಲನೆ ಸಾಹಸಕ್ಕೆ ಬೆಂಗಳೂರಿನ ಮಹಿಳೆ ಎಂಟ್ರಿ ಕೊಟ್ಟಿದ್ದಾಳೆ. ಇಂಥ ಸಾಹಸಗಳೆಲ್ಲ ಪುರುಷರಿಗೆ ಸೀಮಿತ ಅನ್ನೋರು ಕೆಲವರು. ಆದರೆ ಪ್ರವಾಸಿ ರಾಜ್ಯ ಗೋವಾದಲ್ಲಿ ಇಂಥದ್ದೊಂದು ಸಾಹಸಿ ಉತ್ಸವ- ಸ್ಪರ್ಧೆ ಆಯೋಜಿಸಲಾಗಿದೆ. ಬೆಂಗಳೂರಿನ ಸಿಸ್ಕೋ ಸಂಸ್ಥೆಯಲ್ಲಿ ಸಾಫ್ಟವೇರ್ ಎಂಜಿನಿಯರ್ ಸ್ಮಿತಾ ಪ್ರಸಾದ್ ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಂದಹಾಗೆ, ಈ ಸಾಹಸ ಸ್ಪರ್ಧೆಗೆ ಪ್ರವೇಶ ನೀಡುತ್ತಿರುವ ಮೊದಲ ಮಹಿಳಾ ಚಾಲಕಿ ಕೂಡ ಇವರೇ. ಮಳೆ ಬಂತೆಂದರೆ ಬೆಚ್ಚಗೆ ಮಲಗುವ ಸಾಕಷ್ಟು ಜನರ ಮಧ್ಯೆ ಇವರು ವಿಶೇಷವೇ ಸರಿ. ಆಗಸ್ಟ್ 8ರಿಂದ 14ರವರೆಗೆ ದಕ್ಷಿಣ ಗೋವಾದಿಂದ ಉತ್ತರ ಗೋವಾಕ್ಕೆ 250 ಕಿ.ಮೀ. ದೂರವನ್ನು ಇಂಥ ಸಾಹಸಿಗಳ ತಂಡ ಕ್ರಮಿಸಲಿದೆ. ಧೋ ಎಂದು ಸುರಿಯುವ ಮಳೆಯ ಮಧ್ಯೆ ಅಲ್ಲಿಯ ಧರೆಗಳು ಕುಸಿಯುತ್ತಿದ್ದರೆ, ನದಿ-ಕಣಿವೆಗಳು ತುಂಬಿ ಹರಿಯುತ್ತಿರುತ್ತವೆ. ಇದೆಲ್ಲದರ ಮಧ್ಯೆ ಕಾಡು ಪ್ರಾಣಿಗಳು ಹಾಗೂ ಚೇಳುಗಳು ದಾಳಿ ನಡೆಸುತ್ತಿರುತ್ತವೆ. ಇಂಥ ವಿಸ್ಮಯಗಳ ನಡುವೆ ಸುಮಾರು 250 ಕಿ.ಮೀ. ದೂರವನ್ನು ಸಾಹಸಿ ಚಾಲಕರು ಕ್ರಮಿಸಬೇಕು. ಬರೋಬ್ಬರಿ 6 ದಿನಗಳ ಕಾಲಾವಕಾಶವಿರುತ್ತದೆ. ಅಂದರೆ ದಿನಕ್ಕೆ ಅಬ್ಬಬ್ಬಾ ಎಂದರೆ 40-50 ಕಿ.ಮೀ. ಹೋಗಬಹುದು. ಅಂದರೆ ಆ ಮಾರ್ಗ ಎಷ್ಟು ದುರ್ಗಮವಾಗಿರಬಹುದು ಎಂದು ಅಂದಾಜಿಸಿ. ಮಹೀಂದ್ರಾ ಥಾರ್ ಅಥವಾ ಜಿಪ್ಸಿಯನ್ನು ಈ ಸಾಹಸ ಯಾತ್ರೆಗೆ ಬಳಸಲು ಸ್ಮಿತಾ ನಿರ್ಧರಿಸಿದ್ದಾರೆ. ಸ್ನೇಹಿತರ ವಲಯದಲ್ಲಿ ಸ್ಮಿತಾ 'ಜೀಪ್ ಗರ್ಲ್‌' ಅಂತಲೇ ಖ್ಯಾತಿ. 'ಸ್ಪರ್ಧೆಯಲ್ಲಿ ಭಾಗವಹಿಸಲು ನಾನು ಹೋಗುತ್ತಿಲ್ಲ. ಪುರುಷರಿಗೆ ಸರಿಸಾಟಿಯಾಗಿ ಸ್ಪರ್ಧಿಸುವ ಸಲುವಾಗಿ ಪಾಲ್ಗೊಳ್ಳುತ್ತಿದ್ದೇನೆ' ಎನ್ನುತ್ತಾರೆ ಸ್ಮಿತಾ. ಇಂಥ ಆಫ್ ರೋಡ್ ರೈಡಿಂಗ್ ಅನ್ನು ಹೆಚ್ಚು ಇಷ್ಟಪಡುವ ಸ್ಮಿತಾ ಈಗಾಗಲೇ ಹತ್ತಾರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಗುರ್ಖಾ ಆರ್‌ಎಫ್‌ಸಿ ಇಂಡಿಯಾದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆರು ದಿನ ನಡೆಯುವ ಈ ಸ್ಪರ್ಧೆಯನ್ನು 4 ಹಂತಗಳಿವೆ. ಪ್ರಲಾಗ್, ಪ್ರಿಡೇಟರ್, ಟರ್ಮಿನೇಟರ್ ಮತ್ತು ಟ್ವಿಲೈಟ್ ಝೋನ್ ಎಂದಿರುತ್ತದೆ. ಪ್ರತಿ ವಿಭಾಗದಲ್ಲೂ ಭಿನ್ನ-ವಿಭಿನ್ನ ಸ್ಪರ್ಧೆ- ಸವಾಲುಗಳು. ಪ್ರತಿ ವಿಭಾಗದಲ್ಲಿ ಸ್ಪರ್ಧಿಗಳ ಚಾಲನಾ ಚಾತುರ್ಯ ಹಾಗೂ ಜಾಣತನ ಆಧರಿಸಿ ಪಾಯಿಂಟ್ಸ್ ನೀಡಲಾಗುತ್ತದೆ. ಅಂತಿಮವಾಗಿ ಹೆಚ್ಚು ಪಾಯಿಂಟ್ಸ್ ಪಡೆದ ಅಭ್ಯರ್ಥಿಗಳನ್ನು ವಿಜೇತರೆಂದು ಘೋಷಿಸಿ ಮಲೇಷ್ಯಾದಲ್ಲಿ ನಡೆಯುವ ಆರ್‌ಎಫ್‌ಸಿ ಜಾಗತಿಕ ಸ್ಪರ್ಧೆಗೆ ಉಚಿತ ಪ್ರವೇಶ ನೀಡಲಾಗುತ್ತದೆ. ಗೋವಾದಲ್ಲಿ ನಡೆಯುವ ಸ್ಪರ್ಧೆಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ..« ನಲ್ಲಿ ಅರ್ಜಿ ದೊರೆಯುತ್ತದೆ.