ಬೈಕ್ ಬಜಾರ್ ನಿಮಗೆ ಬೆಂಗಳೂರಿನ ಸಂಡೆ ಮಾರ್ಕೆಟ್ ಬಗ್ಗೆ ಗೊತ್ತಿರಬಹುದು. ಹೈದರಾಬಾದ್‌ನ ಸಂಡೆ ಬಜಾರ್ ಕುರಿತು ಕೇಳಿರಬಹುದು. ನಿಮಗೆ ಬೆಂಗಳೂರಿನ ಸಂಡೆ ಮಾರ್ಕೆಟ್ ಬಗ್ಗೆ ಗೊತ್ತಿರಬಹುದು. ಹೈದರಾಬಾದ್‌ನ ಸಂಡೆ ಬಜಾರ್ ಕುರಿತು ಕೇಳಿರಬಹುದು. ಹುಬ್ಬಳ್ಳಿಯ ಸಂಡೆ ಬೈಕ್ ಮೇಳದ ಬಗ್ಗೆ ಗೊತ್ತಾ? ತಮ್ಮ ಬೈಕ್ ಮಾರುವವರು, ಸೆಕೆಂಡ್‌ಹ್ಯಾಂಡ್ ಬೈಕ್ ಕೊಳ್ಳಲು ಬಯಸುವವರು ಇಬ್ಬರಿಗೂ ಲಾಭ ಉಂಟು ಇಲ್ಲಿ. ಅದು ಬೈಕ್‌ಗಳ ಸಾಮ್ರಾಜ್ಯ. ಕಣ್ಣು ಹಾಯಿಸಿದಲ್ಲೆಲ್ಲಾ ಇರುವೆಗಳಂತೆ ಜೋಡಿಸಿರುವ ಬೈಕ್‌ಗಳ ಸಾಲುಸಾಲು. ಸುಮಾರು ಅರ್ಧ ಕಿ.ಮೀ.ಗೂ ಹೆಚ್ಚಿನ ಉದ್ದದ ಸಾಲಿನಲ್ಲಿ ತರಹೇವಾರಿ ಕಂಪೆನಿಗಳ ಬೈಕ್‌ಗಳದ್ದೇ ಕಾರುಬಾರು. ಪಂಚೆಯುಟ್ಟ ಹಳ್ಳಿಗರಿಂದ ಹಿಡಿದು ಸೂಟುಬೂಟು ಧರಿಸಿದ ವ್ಯಕ್ತಿಗಳು ಖರೀದಿ ಮಾತುಕತೆಯಲ್ಲಿ ತೊಡಗಿರುವ ದೃಶ್ಯ. ಇದು ಹುಬ್ಬಳ್ಳಿಯ ಡಾಕಪ್ಪ ಸರ್ಕಲ್ ಬಳಿ ಪ್ರತಿ ಭಾನುವಾರ ನಡೆಯುವ ಸಂಡೆ ಬೈಕ್ ಮೇಳ. ಇಲ್ಲಿ ನಡೆಯುವುದು ಸೆಕೆಂಡ್‌ಹ್ಯಾಂಡ್ ಬೈಕ್ ಮಾರಾಟ ಮತ್ತು ಖರೀದಿ. ಈ ಮೇಳದಿಂದಾಗಿಯೇ ಡಾಕಪ್ಪ ವೃತ್ತಕ್ಕೆ 'ಸಂಡೆ ಸೆಂಕೆಂಡ್‌ಹ್ಯಾಂಡ್ ಬೈಕ್ ಬಜಾರ್‌' ಎಂದೇ ಹೆಸರು ಬಂದಿದೆ. ಪ್ರತಿವಾರ 600ರಿಂದ 800 ಬೈಕ್‌ಗಳು ಮಾರಾಟಕ್ಕೆ ಬಂದರೆ 200ರಿಂದ 250 ಬೈಕ್‌ಗಳು ಮಾರಾಟವಾಗುತ್ತವೆ. ಮಾರಾಟಗಾರ, ಖರೀದಿದಾರ ಇಬ್ಬರಿಗೂ ಅನುಕೂಲ ಕಲ್ಪಿಸುವ ವ್ಯವಸ್ಥೆ ಇದು. ಇರುವ 40 ಕಂಪೆನಿಗಳ ಸುಮಾರು 300ಕ್ಕೂ ಹೆಚ್ಚು ವಿಧದ ಸೆಂಕೆಂಡ್‌ಹ್ಯಾಂಡ್ ಬೈಕ್‌ಗಳು ಇಲ್ಲಿ ಲಭ್ಯ. ನಿಮಗೆ ಹೊಸ ಬೈಕ್ ಖರೀದಿಸುವ ಸಂದರ್ಭ ನೀಡುವ ರೀತಿಯಲ್ಲಿಯೇ ಎಲ್ಲ ಪ್ರಕಾರದ ಮೂಲ ದಾಖಲೆಗಳ ಸಮೇತ ಮಾರಾಟ ಮಾಡಲಾಗುತ್ತದೆ. ಹಾಗಾಗಿ ವಾಹನ ಖರೀದಿಸುವವರಿಗೆ ಯಾವುದೇ ಗೊಂದಲವಿಲ್ಲ. ಆಟೋ ಕನ್ಸಲ್ಟಂಟ್ ಯೂನಿಯನ್ ಇದ್ದು, ಅದರ ನೇತೃತ್ವದಲ್ಲಿಯೇ ಇಲ್ಲಿ ಬೈಕ್ ವ್ಯಾಪಾರ ನಡೆಯುತ್ತದೆ. ಗುರುತು ಕಡ್ಡಾಯ ಇಲ್ಲಿ ಬೈಕ್ ಮಾರಾಟ ಮತ್ತು ಖರೀದಿಯಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಬೈಕ್ ಖರೀದಿದಾರರು ಗುರುತಿನ ಪತ್ರ, ತಮ್ಮ ಭಾವಚಿತ್ರ ಮತ್ತಿತರ ದಾಖಲೆಗಳನ್ನು ಕಡ್ಡಾಯವಾಗಿ ನೀಡಬೇಕು. ಬೈಕ್‌ನ ಟ್ರಾನ್ಸ್‌ಫರ್ ಕೂಡಾ ಮಧ್ಯವರ್ತಿಗಳೇ ಮಾಡಿಸಿಕೊಡುತ್ತಾರೆ. ಹಾಗಾಗಿ ನೀವು ಹಣ ನೀಡಿಯೇ ನಿಮ್ಮಿಷ್ಟದ ಬೈಕ್ ಹತ್ತಬೇಕಾಗುತ್ತದೆ. ಹುಬ್ಬಳ್ಳಿಯಲ್ಲಿ ಕಳೆದ 14-15 ವರ್ಷಗಳ ಹಿಂದಿನಿಂದ ಆರಂಭಗೊಂಡ ಈ ಬೈಕ್ ಮೇಳದಲ್ಲಿ ಈಗ ಸುಮಾರು 18 ಮಾರಾಟ ಮಳಿಗೆಗಳಿವೆ. ಪ್ರತಿ ಭಾನುವಾರ ಧಾರವಾಡ ಸೇರಿದಂತೆ ಬಾಗಲಕೋಟೆ, ಬೀದರ್, ಯಾದಗಿರಿ, ಹಾವೇರಿ, ದಾವಣಗೆರೆ, ಗುಲ್ಬರ್ಗಾ, ಕಾರವಾರ ಮತ್ತಿತರ ಭಾಗಗಳಿಂದ ಬೈಕ್ ಮಾರುವ ಮತ್ತು ಖರೀದಿಸುವವರ ಗುಂಪೇ ಇಲ್ಲಿ ನೆರೆದಿರುತ್ತದೆ. ಹಾಗಾಗಿ ಪ್ರತಿ ಸಂಡೆ ಜನಜಾತ್ರೆ. ನಿಮಗೇನಾದರೂ ಸೆಕೆಂಡ್‌ಹ್ಯಾಂಡ್ ಬೈಕ್ ಬೇಕಿದ್ದರೆ ಅಥವಾ ನಿಮ್ಮ ಬೈಕ್ ಮಾರಲು ಬಯಸಿದ್ದರೆ ಪ್ರತಿ ಸಂಡೇ ಇಲ್ಲಿಗೆ ಭೇಟಿ ನೀಡಿ ನಿಮ್ಮಿಷ್ಟದ ಬೈಕ್ ಒಡೆಯರಾಗಬಹುದು. ಹೆಚ್ಚಿನ ಮಾಹಿತಿಗೆ ಯೂನಿಯನ್‌ನ ಕಾನೂನು ಸಲಹೆಗಾರ ಅಮೃತ ಇಜಾರಿ ಅವರನ್ನು (ಮೊ: 9620325398) ಸಂಪರ್ಕಿಸಬಹುದು. ಆತಂಕಕ್ಕೆ ಆಸ್ಪದವಿಲ್ಲ ಸುಮಾರು 10ರಿಂದ 12 ವರ್ಷಗಳ ಹಿಂದೆ ಮಾರುಕಟ್ಟೆಗೆ ಬಂದ ಬೈಕ್‌ಗಳಿಂದ ಹಿಡಿದು ಕಳೆದ ಎರಡು ವರ್ಷದ ಅವಧಿಯೊಳಗಿನ ವಿವಿಧ ಕಂಪೆನಿಗಳ ತರಹೇವಾರಿ ಸೆಂಕೆಂಡ್‌ಹ್ಯಾಂಡ್ ಬೈಕ್‌ಗಳು ನಮ್ಮಲ್ಲಿವೆ. ತಮ್ಮ ಬೈಕ್ ಮಾರಬೇಕೆಂಬ ಇಚ್ಛೆ ಇದ್ದವರಿಗೂ ಯೋಗ್ಯ ದರದಲ್ಲಿ ಮಾರಾಟ ಮಾಡಿಕೊಡುತ್ತೇವೆ. ಅಲ್ಲದೆ, ಎಲ್ಲ ಮೂಲ ದಾಖಲೆ ಪರಿಶೀಲಿಸಿ ನಂತರ ಖರೀದಿ ಮತ್ತು ಮಾರಾಟಕ್ಕೆ ಮುಂದಾಗುವುದರಿಂದ ಗ್ರಾಹಕರಿಗೆ ಯಾವುದೇ ಆತಂಕವಿರುವುದಿಲ್ಲ. -ಅಮೃತ ಇಜಾರಿ, ಬೈಕ್ ವ್ಯಾಪಾರಿ = ಗಣೇಶ್ ಕಮ್ಲಾಪುರ ಚಿತ್ರಗಳು: ಡಿ.ಹೇಮಂತ