ಹುಲಿ ಗೂಡು ಇಂದಿಗೂ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಕಳಂಜಿ ಮಲೆ ರಕ್ಷಿತಾರಣ್ಯದಲ್ಲಿ ಹುಲಿ ಗೂಡುಗಳು ಅಲ್ಲಲ್ಲಿ ನೋಡಸಿಗುತ್ತವೆ. ಕಳಂಜಿ ಮಲೆ ವಿಟ್ಲದ ದಕ್ಷಿಣಕ್ಕಿರುವ ಒಂದು ದಟ್ಟವಾದ ಅರಣ್ಯ ಪ್ರದೇಶ. ಈ ಪ್ರದೇಶದಲ್ಲಿ ಇಂದಿಗೆ ಸುಮಾರು 60 ದಶಕಗಳ ಹಿಂದೆ ಹುಲಿಗಳು ಅಧಿಕ ಸಂಖ್ಯೆಯಲ್ಲಿ ವಾಸಿಸುತ್ತಿದ್ದವು. ಆ ಹುಲಿಗಳು ಕಾಡಿನ ತಪ್ಪಲಿನ ಜನತೆಗೆ ಬಹಳ ಉಪಟಳವನ್ನು ಕೊಡುತ್ತಿದ್ದವು. ಗುಡ್ಡಕ್ಕೆ ಮೇಯಲು ಬಿಟ್ಟ ದನಗಳನ್ನು ತಿನ್ನುವುದು ಮಾಮೂಲಾಗಿತ್ತು. ಇದರಿಂದ ಜಾನುವಾರುಗಳ ಸಂಖ್ಯೆ ಕ್ಷೀಣಿಸಿ ಕೃಷಿಕರು ಕಂಗಾಲಾದರು. ಹುಲಿಗಳನ್ನು ನೇರವಾಗಿ ಕೊಲ್ಲುವ ಎಂದರೆ ಆ ಕಾಲದಲ್ಲಿ ಕೋವಿಗಳ ಲಭ್ಯತೆ ಇರಲಿಲ್ಲ. ಆ ಸಮಯದಲ್ಲಿ ಅಲ್ಲಿಯ ಜನತೆ ಕಂಡುಕೊಂಡ ಹೊಸ ಉಪಾಯವೇ ಹುಲಿ ಗೂಡು. ಕಾಡಿನ ಮಧ್ಯ ಇರುವ ಬಯಲು ಪ್ರದೇಶದ ಜಾಗದಲ್ಲಿ ಈ ಹುಲಿ ಕೊಲ್ಲುವ ಗೂಡನ್ನು ನಿರ್ಮಿಸುತ್ತಿದ್ದರು. ಇದನ್ನು ದೊಡ್ಡದೊಡ್ಡ ಕಲ್ಲುಗಳು ಮತ್ತು ಮಣ್ಣು ಸೇರಿಸಿ ನಿರ್ಮಿಸಲಾಗುತ್ತಿತ್ತು. ಈ ರಚನೆಯಲ್ಲಿ ಹುಲಿ ಒಳಗೆ ನಿಲ್ಲುವಷ್ಟು ಜಾಗವನ್ನು ಟೊಳ್ಳಾಗಿ ಬಿಡುತ್ತಿದ್ದರು. ಒಂದು ತುದಿಯನ್ನು ಮುಚ್ಚಿ ಮತ್ತೊಂದು ತುದಿಯಲ್ಲಿ ಹುಲಿಗೆ ಪ್ರವೇಶಿಸುವಂತೆ ಜಾಗ ಬಿಡಲಾಗುತ್ತಿತ್ತು. ಗೂಡಿನ ಮೇಲಿನ ಮಧ್ಯಭಾಗದಲ್ಲಿ ಒಂದು ಗೂಟವನ್ನು ನೆಡಲಾಗುತ್ತದೆ. ಆ ಗೂಟಕ್ಕೆ ಒಂದು ಉದ್ದದ ಸಲಾಕೆ ಕಟ್ಟಲಾಗುತ್ತದೆ. ಸಲಾಕೆಯ ಒಂದು ತುದಿಗೆ ಅಂದರೆ ತೆರೆದಿರುವ ಜಾಗದಲ್ಲಿ ಹಲಗೆಯಂತಿರುವ ಒಂದು ಮುಚ್ಚಳ ಕಟ್ಟಲಾಗುತ್ತದೆ. ಇನ್ನೊಂದು ತುದಿಗೆ ಕೊಕ್ಕೆಯಂತಿರುವ ಆಕಾರವನ್ನು ಜೋಡಿಸಲಾಗುತ್ತದೆ. ಈ ಕೊಕ್ಕೆಯಂತಿರುವ ಆಕಾರವನ್ನು ಗೂಡಿನ ಮೇಲ್ಬದಿಯನ್ನು ತೂತು ಮಾಡಿ ಸ್ವಲ್ಪ ಗೂಡಿಗೆ ತಾಗಿಸಿ ಹುಲಿ ಬರುವ ಜಾಗದಲ್ಲಿ ಇಡಲಾಗುತ್ತದೆ. ಜೊತೆಗೆ ನಾಯಿ ಅಥವಾ ಆಡನ್ನು ಇನ್ನೊಂದು ತುದಿ ಅಂದರೆ ಕೊಕ್ಕೆಯಂತಿರುವ ಆಕಾರದ ಎದುರು ಬಿಡಲಾಗುತ್ತದೆ. ಹುಲಿ ನಾಯಿ ಅಥವಾ ಆಡನ್ನು ತಿನ್ನದಂತೆ ಅದರ ಸುತ್ತಲೂ ಸರಳುಗಳನ್ನು ನೆಡಲಾಗುತ್ತದೆ. ಅಂದರೆ ಹುಲಿಗೆ ಗೂಡಿನಲ್ಲಿರುವ ಪ್ರಾಣಿ ಕಾಣಬೇಕೇ ಹೊರತು ಅದನ್ನು ಕೊಲ್ಲಬಾರದು ಎನ್ನುವ ಉದ್ದೇಶಕ್ಕಾಗಿ. ಇಷ್ಟೆಲ್ಲಾ ಮಾಡಿ ಹುಲಿ ಹಿಡಿಯುವವರು ಅಲ್ಲಿಯೇ ಪಕ್ಕದಲ್ಲಿರುವ ಎತ್ತರವಾದ ಮರದಲ್ಲಿ ಹತ್ತಿ ಕುಳಿತುಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಗೂಡಿನೊಳಗಿರುವ ಪ್ರಾಣಿ ಹೆದರಿ ಜೋರಾಗಿ ಕೂಗಲಾರಂಭಿಸುತ್ತದೆ. ಅಲ್ಲೆಲ್ಲೋ ಪಕ್ಕದಲ್ಲಿದ್ದ ಹುಲಿ ಈ ಕೂಗನ್ನು ಕೇಳಿ ಆಹಾರದ ಇರುವಿಕೆಯನ್ನು ತಿಳಿದು ಸದ್ದು ಬಂದ ಕಡೆ ಓಡೋಡಿ ಬರುತ್ತದೆ. ಮೊದಲೇ ಹಸಿವಿನಿಂದಿದ್ದ ಹುಲಿಗೆ ಮನುಷ್ಯ ನಿರ್ಮಿತ ಗೂಡು ಅರಿವಿಗೆ ಬರುವುದೇ ಇಲ್ಲ. ನೇರವಾಗಿ ಗೂಡಿನ ಒಳಗೆ ಹೋಗಿಯೇ ಬಿಡುತ್ತದೆ. ಇನ್ನೇನು... ಕಟ್ಟಿಹಾಕಿದ ಪ್ರಾಣಿಯ ಹತ್ತಿರ ಬರುತ್ತಿದಂತೆ ಆ ಇಕ್ಕಟ್ಟಾದ ಜಾಗದಲ್ಲಿ ಕೊಕ್ಕೆಯಂತಿರುವ ಆಕಾರ ಹುಲಿಗೆ ತಾಗಿಯೇ ತಾಗುತ್ತದೆ. ಆಗ ಆ ಕೊಕ್ಕೆ ತೂತಿನ ಮೂಲಕ ನೇರವಾಗಿ ಮೇಲಕ್ಕೆ ಎಗರುತ್ತದೆ. ಅದು ಮೇಲಕ್ಕೆ ಎಗರಿದಂತೆ ಇತ್ತ ಹಲಗೆಯಿಂದ ಗೂಡು ಮುಚ್ಚುತ್ತದೆ. ಅಲ್ಲಿಗೆ ಹುಲಿ ಗೂಡಿನೊಳಗೆ ಬಂಧಿಯಾಗುತ್ತದೆ. ಇದೇ ಸಮಯಕ್ಕಾಗಿ ಕಾದು ಕುಳಿತ ಹುಲಿ ಹಿಡಿಯುವ ಮಂದಿ ಮರದ ಮೇಲಿಂದ ಇಳಿದು ಗೂಡಿನ ಬಳಿ ಬಂದು ತಾವು ತಂದ ಕತ್ತಿ, ದೊಣ್ಣೆ ಮುಂತಾದವುಗಳಿಂದ ಹುಲಿಯನ್ನು ಹೊಡೆದು, ಚುಚ್ಚಿ, ಕಡಿದು ಕೊಲ್ಲುತ್ತಾರೆ. ಅದರೊಳಗಿನ ಪ್ರಾಣಿಯನ್ನು ರಕ್ಷಿಸುತ್ತಾರೆ. ಈ ರೀತಿ ಹುಲಿಗಳನ್ನು ಸುಲಭವಾಗಿ ಕೊಲ್ಲುತ್ತಿದ್ದರು. ಇದು ಒಂದು ಮಾದರಿಯಷ್ಟೆ. ಇದೇ ರೀತಿಯ ಬೇರೆ ಬೇರೆ ಹುಲಿ ಕೊಲ್ಲುವ ಮಾರ್ಗಗಳನ್ನು ನಮ್ಮ ಪೂರ್ವಜರು ಅನಿವಾರ್ಯವಾಗಿ ಕಂಡುಕೊಂಡಿದ್ದರು. - ಉದಯ ವಿಟ್ಲ