ಮುಂದಿನ ಶೋ... ಮುಂದಿನ ಒಂದು ವರ್ಷದಲ್ಲಿ ಸಣ್ಣ ಕಾರು ಹಾಗೂ ಎಸ್‌ಯುವಿಗಳ ರ್ಯಾಂಪ್ ಶೋ... ಇನ್ನೊಂದು ವರ್ಷದಲ್ಲಿ ಮಾರುಕಟ್ಟೆಗೆ ದಾಳಿ ಇಡುವ ಕೆಲ ಕಾರುಗಳ ಕುರಿತು ಸಣ್ಣ ಪರಿಚಯ ಇಲ್ಲಿ... ಮುಂದಿನ ಒಂದು ವರ್ಷದಲ್ಲಿ ಸಣ್ಣ ಕಾರು ಹಾಗೂ ಎಸ್‌ಯುವಿಗಳ ರ್ಯಾಂಪ್ ಶೋ ಭಾರತೀಯ ಆಟೊಮೊಬೈಲ್ ವೇದಿಕೆಯಲ್ಲಿ ನಡೆಯಲಿದೆ! ಕಳೆದೆರಡು ಆರ್ಥಿಕ ವರ್ಷಗಳಿಂದ ಕಾರು ಮಾರುಕಟ್ಟೆಗೆ ಗರ ಬಡಿದಿದ್ದರೂ ಭಾರತೀಯ ಆಟೊಮೊಬೈಲ್ ಕ್ಷೇತ್ರಕ್ಕೆ ಮತ್ತಷ್ಟು ಹೊಸಗಾಳಿ ಬೀಸುತ್ತಿದೆ. ವಿದೇಶಿ ಕಾರು ಉತ್ಪಾದಕ ಕಂಪನಿಗಳು ಭಾರತದಲ್ಲಿ ನೆಲೆಯೂರಲು ಹರಸಾಹಸ ಪಡುತ್ತಿವೆ. ಭಾರತೀಯ ಗ್ರಾಹಕರ ಸೈಕಾಲಜಿ ಅರಿತಿರುವ ಉತ್ಪಾದಕರು ಡೀಸೆಲ್, ಎಸ್‌ಯುವಿ ಹಾಗೂ ಸಣ್ಣ ಕಾರುಗಳ ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡುತ್ತಿವೆ. ಮುಂದಿನ ವರ್ಷ ಈ ಮಾದರಿಯ 50ಕ್ಕೂ ಅಧಿಕ ಕಾರುಗಳು ಮಾರುಕಟ್ಟೆಗೆ ಬರುತ್ತಿದ್ದು, ರು. 14 ಲಕ್ಷ ದರದೊಳಗಿನ 20ಕ್ಕೂ ಅಧಿಕ ಕಾರುಗಳು ಬರುತ್ತಿವೆ. ವಿಚಿತ್ರವೆಂದರೆ ಹೊಸ ಕಾರುಗಳನ್ನು ಭಾರತಕ್ಕೆ ಕೊಡುವುದನ್ನೇ ಮರೆತಿದ್ದ ಫಿಯಟ್, ಫೋಕ್ಸ್‌ವ್ಯಾಗನ್ ಕಂಪನಿಗಳೂ ನಾಲ್ಕೈದು ಕಾರುಗಳನ್ನು ಮಾರುಕಟ್ಟೆಗೆ ತರುತ್ತಿವೆಯಂತೆ. ಇದರ ಜತೆಗೆ ಡಸ್ಟರ್ ಮೂಲಕ ಭಾರಿ ಸದ್ದು ಮಾಡುತ್ತಿರುವ ರೆನೋ ಕೂಡ ಮತ್ತಷ್ಟು ಹೊಸ ವಿನ್ಯಾಸದ ಕಾರುಗಳೊಂದಿಗೆ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಮುಂದಾಗಿದೆ. ಇನ್ನೊಂದೆಡೆ ಎಸ್‌ಯುವಿನಿಂದ ಸಣ್ಣ ಹಾಗೂ ಮಧ್ಯಮ ಕಾರುಗಳ ವಿಭಾಗದಲ್ಲೂ ಯಶ ಸಾಧಿಸಲು ಮಹೀಂದ್ರಾ ಹವಣಿಸುತ್ತಿದೆ. ಇನ್ನೊಂದು ವರ್ಷದಲ್ಲಿ ಮಾರುಕಟ್ಟೆಗೆ ದಾಳಿ ಇಡುವ ಕೆಲ ಕಾರುಗಳ ಕುರಿತು ಸಣ್ಣ ಪರಿಚಯ ಇಲ್ಲಿ... ಮಹೀಂದ್ರಾ ಎಸ್101 ಫೋರ್ಡ್ ಇಕೋಸ್ಪೋರ್ಟ್ ಹಾಗೂ ರೆನೋ ಡಸ್ಟರ್‌ಗೆ ಸೆಡ್ಡು ಹೊಡೆಯಲು ಮಹೀಂದ್ರಾ ಬಳಿ ಯಾವುದೇ ವಾಹನಗಳಿರಲಿಲ್ಲ. ಎಕ್ಸ್‌ಯುವಿ ಎಸ್‌ಯುವಿನಲ್ಲಿ ಬಂದರೂ ದರದಲ್ಲಿ ಹೆಚ್ಚಾಗಿತ್ತು. ಇನ್ನು ಕ್ಸೈಲೋ ಹಾಗೂ ಕ್ವಾಂಟೊ ಬಳಕೆದಾರರ ಮನಗೆಲ್ಲಲು ಸಫಲವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿ ಹೊರತರಲು ಸಂಸ್ಥೆ ಸಜ್ಜಾಗುತ್ತಿದೆ. ಮಹೀಂದ್ರಾ ಎಸ್101 ಹೆಸರಿನಲ್ಲಿ ಈ ಕಾರು ಮಾರುಕಟ್ಟೆಗೆ ಬರುತ್ತಿದ್ದು, 2014ರ ಜುಲೈನಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಫಿಯಟ್ ಹಾಗೂ ಬಿಎಂಡಬ್ಲ್ಯೂನಲ್ಲಿ ಈಗಾಗಲೇ ಖ್ಯಾತವಾಗಿರುವ 'ಕ್ಲ್ಯಾಮ್‌ಶೇಲ್‌' ಬಾನೆಟ್ ಶೈಲಿಯಲ್ಲಿ ಕಾರು ವಿನ್ಯಾಸವಾಗುತ್ತಿದೆ. 7 ಆಸನಗಳ ಕಾರು ಎಂದು ಕಂಪನಿ ಹೇಳಿಕೊಂಡರೂ ಕಾಂಪ್ಯಾಕ್ಟ್ ಎಸ್‌ಯುವಿ ಆಗಿರುವುದರಿಂದ 5 ಆಸನಕ್ಕೆ ಸೀಮಿತವಾಗಬಹುದು ಎನ್ನಲಾಗುತ್ತಿದೆ. ಅಂದಹಾಗೆ ಕ್ವಾಂಟೊದಲ್ಲಿ ಬಳಸಿರುವ 100 ಬಿಎಚ್‌ಪಿ ಎಂಜಿನ್‌ನನ್ನೇ ಈ ಕಾರಿಗೂ ಬಳಸಲಾಗುತ್ತಿದೆ. ಕಾರಿನ ದರವು 6 ಲಕ್ಷದಿಂದ ಪ್ರಾರಂಭವಾಗಿ 8.50 ಲಕ್ಷದವರೆಗೂ ತಲುಪಬಹುದು ಎಂಬ ವರದಿಯಿದೆ. ಮಹೀಂದ್ರಾ ಎಕ್ಸ್‌ಯುವಿ ವಾಹನವನ್ನೇ ಕೊಂಚ ಚಿಕ್ಕದು ಮಾಡಿ ಮಾರುಕಟ್ಟೆಗೆ ಬಿಡಲೂ ಕಂಪನಿ ಯೋಚಿಸಿದೆಯಂತೆ. ಅದಕ್ಕನೇ ಈ ಹೆಸರಾ ಅಥವಾ ಬೇರೆಯದ್ದೇ ಕಾರಾ ಎಂಬುದು ಸ್ಪಷ್ಟವಾಗಿಲ್ಲ. ಹೋಂಡಾ ಮೊಬಿಲಿಯೋ ಹೋಂಡಾ ಕಂಪನಿಯು ಎಸ್‌ಯುವಿ ಮಾದರಿಯ ಹೊಸ ಕಾರನ್ನು 2014ರ ಫೆಬ್ರವರಿಯಲ್ಲಿ ಮಾರುಕಟ್ಟೆಗೆ ಬಿಡುತ್ತಿದೆ. 4.4 ಮೀಟರ್ ಉದ್ದ ಹಾಗೂ 185 ಎಂಎಂ ಗ್ರೌಂಡ್ ಕ್ಲೀಯರನ್ಸ್ ಇರುವ ಮೊಬಿಲಿಯೋಗೆ ಕೇವಲ ಆರೂವರೆ ಲಕ್ಷದಿಂದ ರು. 9 ಲಕ್ಷ ದರ ನಿಗದಿಮಾಡುವ ಸಾಧ್ಯತೆಯಿದೆ. ಅಮೇಝ್ ಹಾಗೂ ಬ್ರಯೋ ಮಾದರಿಯಲ್ಲಿಯೇ ಒಳ ವಿನ್ಯಾಸವಿರಲಿದ್ದು, ಟರ್ಬೋಚೆಂಡ್ ಅರ್ಥ್ ಡ್ರೀಮ್ ಎಂಜಿನ್ ಅನ್ನು ಬಳಸಿಕೊಳ್ಳಲಾಗಿದೆ. ಮಾರುತಿ ಸುಝುಕಿಯ ಎರ್ಟಿಗಾಗೆ ಸ್ಪರ್ಧಿಯಾಗಿ ಮೊಬಿಲಿಯೋ ಮಾರುಕಟ್ಟೆಗೆ ಬರುತ್ತಿದೆ. ಈಗಾಗಲೇ ಈ ಕಾರುಗಳು ಇಂಡೋನೇಷ್ಯಾದಲ್ಲಿ ಜನಮನ್ನಣೆ ಪಡೆದಿದೆ. ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಎರಡೂ ಮಾದರಿಯ ಎಂಜಿನ್‌ಗಳಲ್ಲಿ ಕಾರುಗಳು ಸಿಗಲಿವೆ. ಫಿಯಟ್ ಭಾರತದ ಮಾರುಕಟ್ಟೆಗೆ ಹೊಸ ಕಾರುಗಳನ್ನು ಬಿಡುಗಡೆ ಮಾಡುವುದನ್ನು ಮರೆತ ಕಂಪನಿಯಲ್ಲಿ ಫಿಯಟ್ ಕೂಡ ಒಂದು. ಪುಂಟೋ ಹಾಗೂ ಲೀನಿಯಾ ಕಾರುಗಳನ್ನು ಹೊರತುಪಡಿಸಿ ಮತ್ಯಾವುದೇ ಉತ್ಪನ್ನಗಳನ್ನು ಭಾರತೀಯರಿಗೆ ಪ್ರದರ್ಶಿಸಬಾರದು ಎಂದು ಕಂಪನಿ ನಿರ್ಧರಿಸಿದಂತಿತ್ತು. ಆದರೆ ಈಗ ಒಂದು ಸಣ್ಣ ಕಾರು ಹಾಗೂ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಮಾರುಕಟ್ಟೆಗೆ ಬಿಡುತ್ತಿದೆ. ಫಿಯಟ್‌ನ ಬ್ರಾಂಡ್ ಡಿಸೈನ್ ಆದ 'ಕ್ಲ್ಯಾಮ್‌ಶೇಲ್‌' ಮಾದರಿಯಲ್ಲಿಯೇ ಪಾಂಡಾ ಕಾರು ರೂಪುಗೊಂಡಿದೆ. ಈ ಕಾಂಪ್ಯಾಕ್ಟ್ ಎಸ್‌ಯುವಿ ಈಗಾಗಲೇ ಯುರೋಪಿಯನ್ ಮಾರುಕಟ್ಟೆಯಲ್ಲಿದೆ. ಇದರಲ್ಲಿಯೇ ಸಣ್ಣಪುಟ್ಟ ಬದಲಾವಣೆ ತಂದು ಹೊಸ ಪಾಂಡಾ ಕಾರನ್ನು ಭಾರತಕ್ಕೆ ತರಲಾಗುತ್ತಿದೆ. ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಯಲ್ಲಿ ಇದು ಲಭ್ಯವಿರುತ್ತಿದ್ದು, ವಿಶ್ವವಿಖ್ಯಾತ ಮಲ್ಟಿ ಟರ್ಬೊ ಜೆಟ್ ಎಂಜಿನ್ ಅನ್ನೇ ಬಳಸಿಕೊಳ್ಳಲಾಗುತ್ತಿದೆ. ಕಾರಿನ ಬೆಲೆ 10 ಲಕ್ಷ ಮಿತಿಯನ್ನು ದಾಟುವುದಿಲ್ಲ ಎಂದು ಸಂಸ್ಥೆ ಹೇಳಿದೆ. ಇನ್ನು ಸಣ್ಣ ಕಾರಿಗೆ ಹೆಸರನ್ನಿಟ್ಟಿಲ್ಲ. ಆದರೆ ಕಾರಿನ ದರವು 3 ಲಕ್ಷದಿಂದ ಪ್ರಾರಂಭವಾಗುತ್ತಿದೆ ಹಾಗೂ 2014 ಜನವರಿಯಲ್ಲಿಯೇ ದೊರೆಯಲಿದೆ. ಮಾರುತಿ ವ್ಯಾಗನ್‌ಆರ್ ಡೀಸೆಲ್ ಸಣ್ಣ ಕಾರುಗಳ ವಿಭಾಗದಲ್ಲಿ ಮಾರುತಿ ವ್ಯಾಗನ್‌ಆರ್ ಮಾರುಕಟ್ಟೆಯಲ್ಲಿ ಉತ್ತಮ ಹೆಸರು ಹೊಂದಿದೆ. ಆದರೆ, ಪೆಟ್ರೋಲ್ ಎಂಜಿನ್‌ಗೆ ಮಾತ್ರ ಸೀಮಿತವಾಗಿತ್ತು. ಈಗ ಡೀಸೆಲ್ ಎಂಜಿನ್ ಕಾರನ್ನು ಉತ್ಪಾದಿಸಲು ಮಾರುತಿ ಸುಝುಕಿ ಮುಂದಾಗಿದೆ. 2014ರ ಜೂನ್ ತಿಂಗಳೊಳಗೆ ಭಾರತದ ರಸ್ತೆಗಳಿಗೆ ಈ ಕಾರು ಇಳಿಯಲಿದೆ. ಡೀಸೆಲ್ ಎಂಜಿನ್ ಇಲ್ಲದೆಯೇ ಪ್ರತಿ ತಿಂಗಳು 10 ಸಾವಿರಕ್ಕೂ ಅಧಿಕ ವ್ಯಾಗನ್‌ಆರ್ ರಸ್ತೆಗಳಿಯುತ್ತಿದೆ. ಮಾರುತಿ ಸುಝುಕಿ ಬಳಿ ಇರುವ ಏಕೈಕ ಡೀಸೆಲ್ ಎಂಜಿನ್ ಎಂದರೆ ಫಿಯೆಟ್‌ನ 1.3 ಮಲ್ಟಿ ಜೆಟ್ ಎಂಜಿನ್. ಸುಝುಕಿ ಕಂಪನಿಯೇ ಪ್ರತ್ಯೇಕ ಡೀಸೆಲ್ ಎಂಜಿನ್ ಅನ್ನು ರೂಪಿಸಲು ತಯಾರಿ ನಡೆಸಿದೆ. ಇಲ್ಲವಾದಲ್ಲಿ ಮಲ್ಟಿಜೆಟ್ ಎಂಜಿನ್‌ನ ಸಾಮರ್ಥ್ಯವನ್ನು ತಗ್ಗಿಸಿ ಉಪಯೋಗಿಸಲು ಕಂಪನಿ ನಿರ್ಧರಿಸಿದೆ. ಒಟ್ಟಿನಲ್ಲಿ 2014 ಮಧ್ಯಾವಧಿಯೊಳಗೆ ಡೀಸೆಲ್ ಕಾರನ್ನು ಮಾರುಕಟ್ಟೆಗೆ ಬಿಡುವುದು ಸಂಸ್ಥೆಯ ಉದ್ದೇಶ. ಅಂದಹಾಗೆ ಈ ಕಾರಿನ ದರವು ರು. 4.20 ಲಕ್ಷದಿಂದ ರು. 5.30 ಲಕ್ಷದವರೆಗೆ ಇರಲಿದೆ. ರೆನೊ ಲಾಜಿ ದೇಶದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಕಳೆದೊಂದು ವರ್ಷದಿಂದ ರೆನೋ ಭರ್ಜರಿ ಸದ್ದುಮಾಡುತ್ತಿದೆ. ಇದಕ್ಕೆ ಪ್ರಮುಖ ಕಾರಣ ಎಸ್‌ಯುವಿ ಡಸ್ಟರ್ ಕ್ಲಿಕ್ ಆಗಿದ್ದು. ಈಗ ಟೊಯೋಟಾ ಇನೋವಾ ಕಾರಿಗೆ ಸ್ಪರ್ಧೆ ನೀಡುವ ಉದ್ದೇಶದಿಂದ ಲಾಜಿ ಎಂಬ ಎಸ್‌ಯುವಿಯನ್ನು ಮಾರುಕಟ್ಟೆಗೆ ತರುತ್ತಿದೆ. ದರ ಹಾಗೂ ಕಂಫರ್ಟ್‌ನಲ್ಲಿ ಇನೋವಾಗೆ ಸ್ಪರ್ಧೆ ನೀಡುವುದೇ ನಮ್ಮ ಗುರಿ ಎಂದು ಕಂಪನಿ ಹೇಳಿಕೊಂಡಿದೆ. ರು. 10ರಿಂದ ರು. 15 ಲಕ್ಷದವರೆಗೆ ಕಾರಿನ ದರ ನಿಗದಿಮಾಡುವ ಸಾಧ್ಯತೆಯಿದ್ದು, 2014ರ ಫೆಬ್ರವರಿಯಲ್ಲಿ ಕಾರು ಮಾರುಕಟ್ಟೆಗೆ ಬರುತ್ತಿದೆ. ಕೊನೆಯ ಎರಡು ಆಸನಗಳಲ್ಲಿ 144 ಎಂಎಂ ಲೆಗ್‌ರೂಮ್ ಹಾಗೂ 866 ಎಂಎಂ ಹೆಡ್‌ರೂಮ್ ನೀಡಲಾಗಿದೆ. ಹೀಗಾಗಿ ದೊಡ್ಡವರೂ ಆರಾಮದಿಂದ ಕೂರಬಹುದಾಗಿದೆ. ಇದು 1.5 ಲೀಟರ್ ಕೆ9ಕೆ ಡೀಸೆಲ್ ಎಂಜಿನ್‌ನಲ್ಲಿ ಮಾತ್ರ ಲಭ್ಯವಿರಲಿದೆ. ನ್ಯಾನೋ ಡೀಸೆಲ್ ಪೆಟ್ರೋಲ್‌ಗಿಂತ ಡೀಸೆಲ್ ದರವು ಕಡಿಮೆ ಇರುವುದರಿಂದ ಡೀಸೆಲ್ ಎಂಜಿನ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿರುವುದು ತಿಳಿದ ವಿಚಾರ. ಈಗ ನ್ಯಾನೋ ಕೂಡ ಡೀಸೆಲ್ ಎಂಜಿನ್ ಕಾರನ್ನು ಮಾರ್ಚ್ 2014ರಲ್ಲಿ ಮಾರುಕಟ್ಟೆಗೆ ಬಿಡುತ್ತಿದೆ. ಗುಜರಾತ್‌ನಲ್ಲಿರುವ ಉತ್ಪಾದನಾ ಘಟಕದಲ್ಲಿ ಈಗಾಗಲೇ ಕಾರುಗಳನ್ನು ತಯಾರಿಸಲು ಚಾಲನೆ ನೀಡಲಾಗಿದೆ. 800ಸಿಸಿ 3-ಸಿಲಿಂಡರ್ ಟರ್ಬೋಚೇಂಜ್ ಎಂಜಿನ್ ಅನ್ನು ಇದಕ್ಕೆ ಬಳಸಲಾಗಿದೆ. ರು. 2.40 ಲಕ್ಷದಿಂದ ರು. 3.25 ಲಕ್ಷದವರೆಗೆ ದರ ನಿಗದಿಯಾಗುವ ಸಾಧ್ಯತೆಯಿದೆ. ಎಂಜಿನ್ ಹೊರತುಪಡಿಸಿ ನ್ಯಾನೋದಲ್ಲಿ ಮತ್ಯಾವುದೇ ದೊಡ್ಡ ಬದಲಾವಣೆ ಮಾಡಲಾಗಿಲ್ಲ. ಮಿಸ್ಟುಬಿಷಿ ಮಿರಾಜ್ ಲ್ಯಾನ್ಸರ್ ಸೆಡಾನ್ ಹಾಗೂ ಪಜೆರೊ ಎಸ್‌ಯುವಿನಿಂದ ಭಾರತದಲ್ಲಿ ಮಿಸ್ಟುಬಿಷಿ ಪರಿಚಿತವಾಗಿದೆ. ಆದರೆ ಸಣ್ಣ ಕಾರುಗಳ ವಿಭಾಗದಲ್ಲಿ ಖಾತೆಯನ್ನೇ ತೆರೆದಿಲ್ಲ. ಈಗ ಮಿರಾಜ್ ಎಂಬ ಸಣ್ಣ ಕಾರಿನ ಮೂಲಕ ಮಾರುಕಟ್ಟೆಗೆ ಪ್ರವೇಶಿಸುವ ಯತ್ನದಲ್ಲಿದೆ. ಇದರೊಂದಿಗೆ ತನ್ನ ಮಾರುಕಟ್ಟೆ ಪಾಲಿಸಿಯನ್ನೇ ಕಂಪನಿ ಬದಲಾಯಿಸಿಕೊಂಡಿದೆ. 2014ರ ಮೇನಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆಯಿರುವ ಮಿಸ್ಟುಬಿಷಿ ಮಿರಾಜ್ 3.50 ಲಕ್ಷದಿಂದ 5 ಲಕ್ಷದೊಳಗೆ ದರವಿರುವ ಸಾಧ್ಯತೆಯಿದೆ. ಪ್ರಾರಂಭದಲ್ಲಿ ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರ ಕಾರು ದೊರೆಯಲಿದೆ. ಸಣ್ಣ ಕಾರಿನ ವಿಭಾಗದಲ್ಲಿ ಅತಿ ಹೆಚ್ಚು ಇಂಧನ ಕ್ಷಮತೆಯನ್ನು ನಾವು ನೀಡಲಿದ್ದೇವೆ ಎಂದು ಕಂಪನಿ ಹೇಳಿಕೊಂಡಿದೆ. ಇದರ ಪ್ರಕಾರ, ಪ್ರತಿ ಲೀಟರ್ ಡೀಸೆಲ್‌ಗೆ 30 ಕಿ.ಮೀ.ಗೂ ಹೆಚ್ಚು ಇಂಧನ ಕ್ಷಮತೆ ಸಿಗುವ ಸಾಧ್ಯತೆಯಿದೆಯಂತೆ. - ರಾಧೆ