ಶಿಲಾಯುಗದ ಪಳೆಯುಳಿಕೆ ಕೇಳುವವರಿಲ್ಲ ರಾತ್ರಿ ಮುದಗಲ್ ಮೂಲಕ ಪ್ರಯಾಣಿಸುವವರಿಗೆ ಅಪರೂಪದ ದೃಶ್ಯ ಕಾಣಸಿಗುತ್ತಿದೆ. ನೂರಾರು ಜನ ಹಾರೆ, ಗುದ್ದಲಿ, ಪಿಕಾಸಿ ಹಿಡಿದು ನೆಲ ಅಗೆಯುತ್ತಿರುತ್ತಾರೆ. ವಾರದ ಬಳಿಕ ಮತ್ತದೇ ದಾರಿಯಲ್ಲಿ ಪ್ರಯಾಣಿಸಿದರೂ ಅದೇ ದೃಶ್ಯ. ಅವರೆಲ್ಲ ನಿಧಿ ಶೋಧನೆಗಾಗಿ ಅಷ್ಟೆಲ್ಲ ಪರಿಶ್ರಮಪಡುತ್ತಿದ್ದಾರೆ! ಸುಲಭವಾಗಿ ಶ್ರೀಮಂತರಾಗಲು ಯಾರಿಗೆ ತಾನೆ ಇಷ್ಟವಿಲ್ಲ? ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಮುದಗಲ್ ಬಳಿಯ ಮುದಗಲ್‌ನ ಕಲ್ಲಿನ ಬಂಡೆಗಳಿಗೆ ಐತಿಹಾಸಿಕ ಮಹತ್ವವಿದೆ. ಶಿಲಾಯುಗದ ಕಾಲದಲ್ಲಿ ಇಲ್ಲಿ ಮನುಷ್ಯರು ವಾಸವಿದ್ದರು ಎನ್ನುವುದು ಸಂಶೋಧಕರ ಅಭಿಪ್ರಾಯ. ಪಟ್ಟಣದಿಂದ ಮೂರೇ ಕಿ.ಮೀ ದೂರದಲ್ಲಿವೆ ಒಂಬತ್ತು ಶಿಲಾ ಬೆಟ್ಟಗಳು. ಇದರ ಮಹತ್ವದ ಬಗ್ಗೆ ಇತಿಹಾಸಕಾರರನ್ನು ಹೊರತುಪಡಿಸಿದರೆ ಬೇರೆಯವರಿಗೆ ಅಷ್ಟಾಗಿ ಗೊತ್ತಿರಲಿಲ್ಲ. ಅವರ ಪ್ರಕಾರ ಇವು ಕಲ್ಲು ಗುಡ್ಡವಾಗಿದ್ದವು ಅಷ್ಟೆ. ಒಮ್ಮೆ ಆಕಸ್ಮಾತ್ ಇಲ್ಲಿ ಶಿಲಾಯುಗದ ಸಾಮಗ್ರಿಗಳು ಕಂಡುಬಂದವು ನೋಡಿ, ಶುರುವಾಯಿತು ಗುನ್ನ. ದಶಕಗಳ ಹಿಂದೊಮ್ಮೆ ನಡೆದ ಉತ್ಖನನದ ವೇಳೆ ಹೊರ ಬಿದ್ದಿದ್ದ ಪಳೆಯುಳಿಕೆಗಳಿರಬೇಕು ಅವು. ಅವುಗಳನ್ನು ಗಮನಿಸಿದ ಕೆಲವರು 'ಇಲ್ಲಿ ನಿಧಿ ಅಡಗಿದೆ' ಎನ್ನುವ ತೀರ್ಮಾನಕ್ಕೆ ಬಂದುಬಿಟ್ಟರು. ತಗೊಳ್ಳಿ, ರಾತ್ರೋರಾತ್ರಿ ನಿಧಿ ಶೋಧನೆ ಕಾರ್ಯಾಚರಣೆ ಚಾಲೂ. ಕೆಲವರಿಗೆ ನಿಧಿ ಸಿಕ್ಕಿದೆ ಎನ್ನುವ ಗುಲ್ಲು ಹರಡಿದ್ದು ಸುತ್ತಮುತ್ತಲಿನ ಹಳ್ಳಿಗಳ ಜನರ ಕಿವಿಗೂ ಬಿತ್ತು. ಅಕೊ, ಈಗ ಶುರುವಾಯಿತು ನೆಲ ಅಗೆಯುವ ಪೈಪೋಟಿ. ಒಂದು ಲಾಭವಂತೂ ಆಗುತ್ತಿದೆ. ಏನೆಂದರೆ ಮಣ್ಣಲ್ಲಿ ಅಡಗಿ ಕುಳಿತಿದ್ದ ಮಾನವನ ಅಸ್ಥಿ ಪಂಜರ, ಕಲ್ಲು ದೋಣಿ, ಒರಳು ಕಲ್ಲು, ಶಿಲೆಯ ಕೆಲ ಆಯುಧಗಳು, ಗುಂಡು, ಮಡಕೆಯ ಚೂರುಗಳು ಒಂದೊಂದಾಗಿ ಹೊರ ಬರುತ್ತಿವೆ. ಪ್ರಾಚ್ಯವಸ್ತು ಇಲಾಖೆಯ ಕಿವಿಗೆ ಈ ಸುದ್ದಿ ಬೀಳದ ಕಾರಣ ಅವೆಲ್ಲ ಅನಾಥವಾಗಿ ಬಿದ್ದಿವೆ. ನೂತನ ಶಿಲಾ ಯುಗದಲ್ಲಿ ವಸತಿ? ಕ್ರಿ.ಪೂ 1300 ದಿಂದ 800 ವರ್ಷಗಳ ಮಧ್ಯೆ ಅಂದರೆ ನೂತನ ಶಿಲಾ ಯುಗದ ಕಾಲದಲ್ಲಿ ಇಲ್ಲಿ ಮಾನವರು ಬದುಕಿ ಬಾಳಿದ್ದರು ಎಂದು ಅಂದಾಜಿಸಲಾಗಿದೆ. ಪ್ರತಿ ಮೂರು ಶಿಲಾ ಬೆಟ್ಟಗಳು ತ್ರಿಕೋನ ಆಕಾರದಲ್ಲಿ ವಿಭಜನೆಯಾದಂತೆ ಗೋಚರಿಸುತ್ತವೆ. ಈ ಬೆಟ್ಟಗಳ ಮಧ್ಯೆ ಶಿಲಾಯುಗಕ್ಕೆ ಸಂಬಂಧಿಸಿದ ಕುರುಹುಗಳು ಕಾಣಸಿಗುತ್ತವೆ. ಪ್ರಾಕ್ಸನ್ ಶೋಧದ ಪ್ರಕಾರ ನೂತನ ಶಿಲಾಯುಗದ ಮೂರು ನೆಲೆಗಳು ಇಲ್ಲಿ ಪತ್ತೆಯಾಗಿವೆ. ಲಿಂಗಸೂರು ತಾಲೂಕಿನ ಪಿಕಳಿಹಾಳ, ಮಸ್ಕಿ, ಬಿಲ್ಲಮರಾಯನ ಗುಡ್ಡ ಮತ್ತು ಹೊನ್ನಳ್ಳಿ ನೂತನ ಶಿಲಾಯುಗದ ಜನವಸತಿ ಕೇಂದ್ರಗಳಾಗಿದ್ದವು ಎನ್ನುವ ವಾದವಿದೆ. -ಪಂಪಯ್ಯಮಠ