ರಂಗೇರುತ್ತದೆ ಮಾಳಂ! ತಮಿಳುನಾಡಿನ ಗಡಿಗ್ರಾಮ ಗೇರುಮಾಳಂನಲ್ಲಿ ಇದೇ ನವೆಂಬರ್ 13ರಿಂದ ಮೂರು ದಿನ ಜಾತ್ರಾ ಸಡಗರ. ಕನ್ನಡಿಗರೇ ನಡೆಸಿಕೊಡುವ ಮಹೋತ್ಸವವಾದರೂ ಭಾಷಾ ಸಾಮರಸ್ಯದ ಪ್ರತೀಕವಾಗಿಯೂ ನಿಲ್ಲುತ್ತದೆ... ಗೇರುಮಾಳಂ ದಾಖಲೆಗಷ್ಟೇ ತಮಿಳುನಾಡು ರಾಜ್ಯದ ವ್ಯಾಪ್ತಿಯಲ್ಲಿರುವ ಗ್ರಾಮ. ಅಲ್ಲಿ ವಾಸಿಸುವ ಶೇ.80ರಷ್ಟು ಮಂದಿ ಕನ್ನಡಿಗರು. ಇಲ್ಲಿನ ಗ್ರಾಮ ಪಂಚಾಯಿತಿಯೂ ಅಷ್ಟೇ, 'ಕನ್ನಡಿಗರ ಪಂಚಾಯಿತಿ' ಎಂದೇ ಖ್ಯಾತ. ಪ್ರತಿವರ್ಷ ನವೆಂಬರ್‌ನಲ್ಲಿ ಮೂರು ದಿನ ನಡೆಯುವ ಗೇರುಮಾಳಂ ಜಾತ್ರೆ ಕನ್ನಡ-ತಮಿಳು ಭಾಷಿಕರನ್ನು ಬೆಸೆಯುತ್ತದೆ. ಕರ್ನಾಟಕದ ಅರ್ಧನಾರೀಪುರ, ಹೊಸದೊಡ್ಡಿ, ಹೊಸಪೋಡು, ಒಡೆಯರಪಾಳ್ಯ, ಪಿಜಿಪಾಳ್ಯ, ಕೊಳ್ಳೇಗಾಲ, ಹನೂರು, ಮಹದೇಶ್ವರಬೆಟ್ಟ, ಲೊಕ್ಕನಹಳ್ಳಿ, ಯಳಂದೂರು, ಚಾಮರಾಜನಗರ ಸೇರಿದಂತೆ ವಿವಿಧೆಡೆಯಿಂದ ಕನ್ನಡಿಗರ ದಂಡೇ ಆಗಮಿಸುತ್ತದೆ. ತಮಿಳುನಾಡಿನ ಕೊಯಮತ್ತೂರು, ಸತ್ತಿ, ಗರಿಕೆಕಂಡಿ ಸೇರಿದಂತೆ ತಮಿಳುನಾಡಿನ ಕೊಯಮತ್ತೂರು, ಸತ್ತಿ, ಗರಿಕೆಕಂಡಿ ಸೇರಿದಂತೆ ಆ ರಾಜ್ಯದ ಭಕ್ತರೂ ಆಗಮಿಸುತ್ತಾರೆ. ಇಬ್ಬರೂ ಉತ್ಸಾಹದಿಂದಲೇ ಪಾಲ್ಗೊಳ್ಳುವ ಮೂಲಕ ಜಡೇರುದ್ರ ಕುಂಭೇಶ್ವರ ಮಹದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಹರಕೆ ತೀರಿಸುತ್ತಾರೆ. ಕೊನೆದಿನ ರಥೋತ್ಸವಕ್ಕೆ ಹಣ್ಣ-ಜವನ ಎಸೆದು ಪುನೀತರಾಗುತ್ತಾರೆ. ಜಾತ್ರೆಯಲ್ಲಿ ಕನ್ನಡ ಹಾಗೂ ತಮಿಳಿನಲ್ಲಿ ಘೋಷಣೆಗಳನ್ನು ಮಾಡಲಾಗುತ್ತದೆ. ಆ ಮೂಲಕ ಉಭಯ ಭಾಷೆಗಳನ್ನೂ ಸಮಾನ ಗೌರವ ಸಲ್ಲಿಸಲಾಗುತ್ತದೆ. ಸಂತಾನ ಪ್ರಾಪ್ತಿ ನವದಂಪತಿ ಈ ಜಾತ್ರೆಯಲ್ಲಿ ಪಾಲ್ಗೊಂಡು ಪೂಜೆ ಹರಕೆ ಸಲ್ಲಿಸಿದರೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ಪ್ರತೀತಿ ಇದೆ. ಹೀಗಾಗಿ ಹೊಸದಾಗಿ ಮದುವೆಯಾದ ಜೋಡಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತವೆ. ತಮಿಳುನಾಡಿನಲ್ಲಿ ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಕೂಡಿ ಆಚರಿಸುವ ಜಾತ್ರೆ ಇದಾಗಿದೆ. ಉಭಯ ರಾಜ್ಯಗಳ ಭಕ್ತರು ಜಾತಿ ಭೇದವಿಲ್ಲದೆ ಪಾಲ್ಗೊಂಡು ಸಾಮರಸ್ಯ ಮೆರೆಯುತ್ತಾರೆ. ಚಿತ್ರ-ಲೇಖನ: ಎನ್. ನಾಗೇಂದ್ರಸ್ವಾಮಿ