ಅಬ್ಬಿ ಅಬ್ಬರ ಮಡಿಕೇರಿಯಿಂದ ಕೇವಲ 7-8 ಕಿ.ಮೀ ದೂರದಲ್ಲಿರುವ ಅಬ್ಬಿ ಜಲಪಾತ ಕೊಡಗಿನಲ್ಲಿ ತುಂಬಾ ಪ್ರವಾಸಿಗರು ಭೇಟಿ ನೀಡುವ ಸ್ಥಳ. ಕಾಫಿ ತೋಟಗಳ ಮಧ್ಯೆ ಸಣ್ಣದಾಗಿ ಹರಿಯುವ ತೊರೆಯ ಅಬ್ಬಿ ಜಲಪಾತ ನಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಮಡಿಕೇರಿಯ ಮೊದಲ ಕ್ಯಾಪ್ಟನ್ ನೆನಪಿಗೆ ಅವರ ಮಗಳು ಜೆಸ್ಸಿ ಹೆಸರಿನಲ್ಲಿ ಬ್ರಿಟಿಷರು ಈ ಜಲಪಾತವನ್ನು ಗುರುತಿಸುತ್ತಿದ್ದರು. ಈಗಿನ ಹೆಸರು ಅಬ್ಬಿ ಅಥವಾ ಅಬ್ಬೆ ಎಂದರೆ ಕೊಡವ ಭಾಷೆಯಲ್ಲಿ ಜಲಪಾತ. ಈ ಜಲಪಾತದ ಕರ್ಣಕಠೋರ ಶಬ್ದ ಹೊರತುಪಡಿಸಿ ಸುತ್ತಲಿನ ಇಡೀ ಪರಿಸರವು ಪ್ರಶಾಂತವಾಗಿದೆ. ಬೀಳುವ ನೀರಿನಿಂದಾಗಿ ಸುತ್ತಲಿನ ಪ್ರದೇಶದಲ್ಲಿ ಮಂಜಿನ ಪದರ ನಿರ್ಮಾಣಗೊಳ್ಳುತ್ತದೆ. ಇದು ಕೆಳಗಿನಿಂದ ನೋಡುವವರಿಗೆ ಸುಂದರವಾಗಿ ಕಾಣುತ್ತದೆ. ಮಳೆಗಾಲದಲ್ಲಿ ಈ ಜಲಪಾತದ ಅಬ್ಬರ ಹೇಳತೀರದು. ಜಲಪಾತದ ಎದುರಿಗೆ ಒಂದು ತೂಗುಸೇತುವೆಯಿದೆ.