ಬಂದೆ ಸಾಧನಕೇರಿಗೆ... ಧಾರವಾಡಕ್ಕೆ ಕಾಲಿಟ್ಟಾಗ ಮನಸ್ಸಿನಲ್ಲಿ ಪುಳಕ. ದ.ರಾ. ಬೇಂದ್ರೆ, ಚೆನ್ನವೀರ ಕಣವಿ ಅವರಂಥ ಕವಿಗಳು, ಹೆಸರಾಂತ ಸಂಗೀತಗಾರರನ್ನು ಕೊಟ್ಟ ಊರಿದು... ಧಾರವಾಡಕ್ಕೆ ಕಾಲಿಟ್ಟಾಗ ಮನಸ್ಸಿನಲ್ಲಿ ಪುಳಕ. ದ.ರಾ. ಬೇಂದ್ರೆ, ಚೆನ್ನವೀರ ಕಣವಿ ಅವರಂಥ ಕವಿಗಳು, ಹೆಸರಾಂತ ಸಂಗೀತಗಾರರನ್ನು ಕೊಟ್ಟ ಊರಿದು. ಮಧ್ಯಾಹ್ನ ಜೋಳದರೊಟ್ಟಿ, ಮುಳ್ಳು ಬದನೆಯ ಎಣ್ಗಾಯಿಯ ಊಟ ಮುಗಿಯುತ್ತಿದ್ದಂತೆ ತೆರಳಿದ್ದು ಸಾಧನಕೇರಿಗೆ. ಅದೊಂದು ಅದ್ಭುತ ಅನುಭವ. ಬೇಂದ್ರೆಯವರ ಮನೆ ಸನಿಹವೇ ಕೆರೆ. ಅದಕ್ಕೆ ತಾಗಿಕೊಂಡಂತೆ ಉದ್ಯಾನ. ಕಾಲಿಡುತ್ತಿದ್ದಂತೆ ತಾಯಿಮಗುವಿನ ಕಲಾಕೃತಿಯ ಸ್ವಾಗತ. ಹಸಿರು ರಾಶಿಯ ನಡುವೆ ಅಲ್ಲಲ್ಲಿ ಬೇಂದ್ರೆಯವರ ಕವನದ ಸಾಲುಗಳ ಫಲಕಗಳು. ಮುಂದಡಿ ಇಡುತ್ತಿದ್ದಂತೆ 'ಸಮರಸವೇ ಜೀವನ' ಎಂದು ಸಾರುವ ದಂಪತಿಯ ಆಕೃತಿ. ಅದನ್ನು ನೋಡುತ್ತಿದ್ದಂತೆ ನೆನಪಾಗುವುದು, 'ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು' ಗೀತೆ. ಅಲ್ಲಿನ ಒಂದೊಂದು ಕೃತಿಯೂ ಬೇಂದ್ರೆಯವರ ಕವನಗಳನ್ನು ನೆನಪಿಸುತ್ತವೆ. ಕೆರೆಯಲ್ಲಿ ಬೋಟಿಂಗ್ ಮಜಾ. ಇತ್ತ ಉಗಿಬಂಡಿಯಲ್ಲಿ ಮಕ್ಕಳು, ದೊಡ್ಡವರು, ಮುದುಕರು ಖುಷಿಪಡುತ್ತಿರುವ ಚೇತೋಹಾರಿ ದೃಶ್ಯ. ಜೋಕಾಲಿ, ಜಾರುಬಂಡೆಯಂಥ ಆಟಿಕೆಗಳು ಮಕ್ಕಳಿಗೆ ಅಚ್ಚುಮೆಚ್ಚು. ಇವಕ್ಕೆಲ್ಲ ಕಳಸಪ್ರಾಯವಾಗಿರುವುದು ಅಚ್ಚುಕಟ್ಟಾದ ಉದ್ಯಾನ. ಜಿಲ್ಲಾಡಳಿತ ಬಹಳ ಚೆನ್ನಾಗಿ ಇದನ್ನು ನಿರ್ವಹಿಸುತ್ತಿದೆ. ಇನ್ನು ಬೇಂದ್ರೆ ಅಜ್ಜನ ಮನೆಯೊಳಗೆ ಕಾಲಿಡುತ್ತಿದ್ದಂತೆ ಬೇಂದ್ರೆಯವರ ಸೊಸೆಯಿಂದ ಆತ್ಮೀಯ ಸ್ವಾಗತ. ಮಾವನವರ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾ ಅವರು ಬಳಸುತ್ತಿದ್ದ ವಸ್ತುಗಳು, ಜ್ಞಾನಪೀಠ ಪ್ರಶಸ್ತಿ ಫಲಕ ಇತ್ಯಾದಿಗಳನ್ನೆಲ್ಲ ತೋರಿಸಿದರು. ಹೊರಡುವಾಗ ನಮಗೆ ಸಕ್ಕರೆ ನೀಡಿ ಬಾಳು ಸಿಹಿಯಾಗಿರಲೆಂದು ಹಾರೈಸಿದರು. ಎಷ್ಟೋ ದಿನದವರೆಗೂ ನಮ್ಮ ಕಿವಿಯಲ್ಲಿ ಮೊರೆಯುತ್ತಲೇ ಇತ್ತು, 'ಬಾರೋ ಸಾಧನೆಕೇರಿಗೆ...' ಎನ್ನುವ ಗೀತೆ.ಟಿ - ಸವಿತಾ ನಾಗೇಶ್