ಭದ್ರೆಯ ಬಿನ್ನಾಣ ನಾಡಿನ ಪುಣ್ಯದ ಪೂರ್ವ ದಿಗಂತದಿ ನವ ಅರುಣೋದಯ ಹೊಮ್ಮುತಿದೆ..! ಚಿರನೂತನ ಚೇತನದುತ್ಸಾಹದಿ ನವೀನ ಜೀವನ ಚಿಮ್ಮುತಿದೆ! ಹೀಗೆಂದು ಜೀವ ಪ್ರಕೃತಿ ಚೇತನವನ್ನು ಅಕ್ಷರಗಳಲ್ಲಿ ಸೆರೆ ಹಿಡಿದಿದ್ದು ರಾಷ್ಟ್ರಕವಿ ಕುವೆಂಪು. ಇಂಥ ಅಪೂರ್ವ ಅನುಭವ ಜಗತ್ತು ನಿಮ್ಮದಾಗಬೇಕೆ? ಕುವೆಂಪು ವಿ.ವಿ.ಯ ಪಕ್ಕದಲ್ಲೇ ಇರುವ ಭದ್ರಾ ಹಿನ್ನೀರಿಗೆ ಭೇಟಿ ಕೊಡಿ. ಶಿವಮೊಗ್ಗದಿಂದ ಭದ್ರಾವತಿ ಮಾರ್ಗವಾಗಿ ಇಲ್ಲಿಗೆ ಕೇವಲ 30 ಕಿಲೋಮೀಟರ್ ಅಂತರ. ಚುಮು ಚುಮು ಚಳಿಯ ಹಿತವಾದ ಸ್ಪರ್ಶದೊಂದಿಗೆ ಜುಳು ಜುಳು ನಾದದಲ್ಲಿ ಭೋರ್ಗರೆಯುತ್ತ ಸ್ವಾಗತ ನೀಡುತ್ತಾಳೆ ಭದ್ರೆ. ಲಕ್ಕವಳ್ಳಿ ಜಲಾಶಯದಿಂದ ಧುಮ್ಮಿಕ್ಕುವ ಭದ್ರಾ ನದಿಯ ಭಿನ್ನಾಣ ನಯನ ಮನೋಹರ. ಜಲಪಾತದಲ್ಲಿ ಸಿಡಿಯುವ ಹನಿಗಳ ಸ್ಪರ್ಶ ಮುದ ನೀಡುತ್ತವೆ. ಹಸಿರು ಹುಲ್ಲಿನ ಮೇಲೆ ಹೊಳೆವ ವಜ್ರದ ಅಮೃತ ಬಿಂದುಗಳಂತೆ ಕಂಗೊಳಿಸುವ ಇಬ್ಬನಿ ಹನಿಗಳು, ಪ್ರಕೃತಿ ನಿರ್ಮಿತ ಮರದ ಕಲಾಕೃತಿ ನೋಡುವುದೇ ಕಣ್ಣಿಗೆ ಹಬ್ಬ. ಇಂಥ ಪ್ರಾಕೃತಿಕ ಸೌಂದರ್ಯ ಕಂಡಾಗ ಜೀವನುತ್ಸಾಹ ಹೊಸತನದೆಡೆಗೆ ಮಿಡಿಯುತ್ತದೆ. ಭದ್ರಾ ಅಭಯಾರಣ್ಯದ ಒಡಲ ಶಿಶುಗಳಂತೆ ಆಗೊಮ್ಮೆ, ಈಗೊಮ್ಮೆ ಇಣುಕುವ ಕಾಡುಕೋಣ, ಜಿಂಕೆ, ಹಂದಿ, ಚಿರತೆ, ಹುಲಿ, ಕಾಡುಕೋಳಿ, ಕೆಂಬೂತ, ಕಪಿಹಿಂಡು, ಗಜಪಡೆ ವನಸಂಸ್ಕೃತಿಯ ಪ್ರತಿನಿಧಿಗಳು. ಇನ್ನು ಕುವೆಂಪು ವಿಶ್ವವಿದ್ಯಾಲಯದ ಆವರಣ ಪ್ರವೇಶಿಸುತ್ತಿದ್ದಂತೆ ಮೈ ಜುಂ ಎನಿಸುವ ನಿಶ್ಯಬ್ದ. ಬೆರಗು ಹುಟ್ಟಿಸುವ ಪಂಪವನ. ಹೃನ್ಮನ ಕೆದಕುವ ವಿವಿಧ ಸಸ್ಯಸಂಕುಲ. ಕುವೆಂಪು ಸೇರಿದಂತೆ ಜಿರಾಫೆ, ಆನೆ, ಡೈನೋಸಾರ್ ಕಲಾಕೃತಿಗಳು. ಕನ್ನಡ ಭಾರತಿ ವಿಭಾಗದ ಜನಪದ ವಸ್ತು ಸಂಗ್ರಹಾಲಯ ಒಂದು ಕ್ಷಣ ಸ್ತಬ್ಧರನ್ನಾಗಿಸುತ್ತದೆ. ಶಂಕರಘಟ್ಟ ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಹೊಂದಿಕೊಂಡಿದೆ. ಇಲ್ಲಿ ಶಿವನ ಸ್ವರೂಪ ಹೋಲುವ ಆಕೃತಿ ಇರುವುದರಿಂದ ಶಂಕರಘಟ್ಟ ಎನ್ನಲಾಗುತ್ತದೆ. ಪ್ರೇಮಕವಿ ಕೆ.ಎಸ್. ನರಸಿಂಹಸ್ವಾಮಿ ಭದ್ರಾನದಿಯ ಹಿನ್ನೀರಿನ ದಡದಲ್ಲಿ ಕುಳಿತು ಕುವೆಂಪು ವಿವಿಯ ಆವರಣದಲ್ಲಿ ತಿರುಗಾಡಿ ಬರೆದಂತೆ ತೋರುವ ಕುವೆಂಪು ವಿಶ್ವವಿದ್ಯಾನಿಲಯ ಗೀತೆ ಸುಮಧುರ. -ಸಂಪತ್ ಬೆಟಗೆರೆ ಚಿತ್ರ: ಪ್ರದೀಪ್ ಸಿರಿಬಡಿಗೆ