ಸಫಾರಿ ಸ್ಟಾರ್ಮ್ ಎಕ್ಸ್‌ಫ್ಲೋರರ್ ಎಡಿಷನ್ ಸಫಾರಿ ಪ್ರಿಯರಿಗೊಂದು ಸಿಹಿ ಸುದ್ದಿ. ಸಫಾರಿ ಸ್ಟಾರ್ಮ್ ಮಾದರಿಯನ್ನು ಕೊಂಚ ಬದಲಾವಣೆಯೊಂದಿಗೆ ಸಫಾರಿ ಸ್ಟಾರ್ಮ್ ಎಕ್ಸ್‌ಫ್ಲೋರರ್ ಎಡಿಷನ್.. ಸಫಾರಿ ಪ್ರಿಯರಿಗೊಂದು ಸಿಹಿ ಸುದ್ದಿ. ಸಫಾರಿ ಸ್ಟಾರ್ಮ್ ಮಾದರಿಯನ್ನು ಕೊಂಚ ಬದಲಾವಣೆಯೊಂದಿಗೆ ಸಫಾರಿ ಸ್ಟಾರ್ಮ್ ಎಕ್ಸ್‌ಫ್ಲೋರರ್ ಎಡಿಷನ್ ಹೆಸರಿನಲ್ಲಿ ದೀಪಾವಳಿ ವೇಳೆ ಮಾರುಕಟ್ಟೆಗೆ ಬಿಡಲಾಗಿದೆ. ಟಾಟಾ ಕಂಪನಿ ಸಫಾರಿ ಮಾದರಿ ವಾಹನವನ್ನು ಸಾಕಷ್ಟು ಬದಲಾವಣೆಗಳೊಂದಿಗೆ ಸಫಾರಿ ಸ್ಟಾರ್ಮ್ ಹೆಸರಿನಲ್ಲಿ ಹೊಸದಾಗಿ ಪರಿಚಯಿಸಿತ್ತು. ಅದನ್ನೇ ಇನ್ನಷ್ಟು ಬದಲಾಯಿಸಿ ಸಫಾರಿ ಸ್ಟಾರ್ಮ್ ಎಕ್ಸ್‌ಫ್ಲೋರರ್ ಎಡಿಷನ್ ಎಂದು ಹೆಸರಿಟ್ಟಿದೆ. ಎಂಜಿನ್ ಅಥವಾ ವಿನ್ಯಾಸದಲ್ಲಿ ಹೆಚ್ಚಿನ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆದರೆ, ನೋಡಿದರೆ ತಕ್ಷಣಕ್ಕೆ ಇದು ಕೇವಲ ಸಫಾರಿ ಸ್ಟಾರ್ಮ್ ಅಲ್ಲ ಎಂಬುದನ್ನು ಗುರುತಿಸುವಂತೆ ಮಾಡಲಾಗಿದೆ. ಒಳಾಂಗಣ ವಿನ್ಯಾಸದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಎರಡು ಬಣ್ಣಗಳ ಲೆದರ್ ಸೀಟು ಹಾಗೂ ಟಟ್‌ಸ್ಕ್ರೀನ್ ಮ್ಯೂಸಿಕ್ ಸಿಸ್ಟಂ ಇದೆ. ಇದು ರಿವರ್ಸ್ ಪಾರ್ಕಿಂಗ್ ಅಸಿಸ್ಟ್ ಅಥವಾ ವೀಡಿಯೋ ಸ್ಕ್ರೀನ್ ಆಗಿಯೂ ಕೆಲಸ ಮಾಡುತ್ತದೆ. ಜತೆಗೆ ಜಿಪಿಎಸ್ ಇರುವ ಮ್ಯಾಪ್ ಪ್ರದರ್ಶಿಸುವ ಸ್ಕ್ರೀನ್ ಆಗಿಯೂ ಕೆಲಸ ಮಾಡುತ್ತದೆ. ನಿಮ್ಮ ಫೋನ್ ಸ್ಕ್ರೀನ್ ಆಗಿಯೂ ಕಾರ್ಯನಿರ್ವಹಿಸಬಲ್ಲದು. ಇನ್ನು ಹೊರಭಾಗದಲ್ಲಿ ಹೆಡ್ ಲೈಟ್ ಮತ್ತು ಬ್ರೇಕ್‌ಲೈಟ್‌ಗಳಿಗೆ ಕ್ರೋಮ್ ಲೈನಿಂಗ್ ನೀಡಲಾಗಿದೆ. ಮುಂಭಾಗದಲ್ಲಿ ಕ್ರ್ಯಾಶ್‌ಗಾರ್ಡ್ ಇದೆ. ಎಕ್ಸ್‌ಫ್ಲೋರರ್ ಎಡಿಷನ್ ಎಂಬ ಹೆಸರಿಗೆ ತಕ್ಕಂತೆ ಬಾನೆಟ್ ಮೇಲೆ ದಿಕ್ಸೂಚಿ ಅಥವಾ ಕಂಪಾಸ್‌ನ ಡಿಸೈನ್ ಇರಲಿದೆ. ಇದೆಲ್ಲದರ ಜತೆಗೆ ನೀವು ಹೆಚ್ಚುವರಿಯಾಗಿ ರು. 57,000 ಪಾವತಿಸಿದರೆ, ಕ್ಯಾರಿಯರ್, ಹಿಂಭಾಗದಲ್ಲಿ ಸೈಕಲ್ ಇಡಬಹುದಾದ ಸ್ಟ್ಯಾಂಡ್ ಸೇರಿದಂತೆ ಹಲವು ವಿಶೇಷ ಆಕ್ಸೆಸರಿಗಳು ಲಭ್ಯವಿದೆ. ಅಂದಹಾಗೆ, ಟಾಟಾ ಸಫಾರಿ ಸ್ಟಾರ್ಮ್ ಎಕ್ಸ್‌ಫ್ಲೋರರ್ ಎಡಿಷನ್ ಎಕ್ಸ್ ಶೋರೂಂ ಬೆಲೆ ದೇಶಾದ್ಯಂತ ರು. 10.86 ಲಕ್ಷ.