ಚೇತೋಹರ ಸಾನಿಧ್ಯದಲ್ಲೊಂದು ಶಿವನ ಭಜನೆ ಮಾರ್ಚ್ 10ಕ್ಕೆ ಶಿವರಾತ್ರಿ ಬಂತು. ಮನೇಲೆ ಇದ್ರೆ ಎಂದಿನಂತೆ ಜಾಗರಣೆ, ಭಜನೆ ಇದ್ದಿದ್ದೆ. ಮಾರ್ಚ್ 10ಕ್ಕೆ ಶಿವರಾತ್ರಿ ಬಂತು. ಮನೇಲೆ ಇದ್ರೆ ಎಂದಿನಂತೆ ಜಾಗರಣೆ, ಭಜನೆ ಇದ್ದಿದ್ದೆ. ಅದೇ ಸ್ವಲ್ಪ ಡಿಫರೆಂಟಾಗಿ ಶಿವನ ನೆಪದಲ್ಲಿ ಟ್ರಿಪ್ ಹೊರಟರೆ? ಹಾಗೇನಾದರೂ ಪ್ರವಾಸದ ಮನಸ್ಸಾದರೆ, ಮುರ್ಡೇಶ್ವರ- ಗೋಕರ್ಣದತ್ತ ಸಾಗಿ... ಈ ಬಾರಿಯ ಶಿವರಾತ್ರಿಯನ್ನು ವಿಶೇಷವಾಗಿ ಆಚರಿಸಿಕೊಳ್ಳಿ ಮುರ್ಡೇಶ್ವರ ನಾಡಿನ ನೈಸರ್ಗಿಕ ಹಾಗೂ ಧಾರ್ಮಿಕ ಪ್ರಸಿದ್ಧ ಪ್ರವಾಸಿ ತಾಣ. ಕಡಲಿನ ಮೋಜು, ಕಮನೀಯ ಸೌಂದರ್ಯ, ಮಾನವ ನಿರ್ಮಿತ ಅದ್ಭುತಗಳ ಸಂಗಮವಿದು. ಆದರೆ, ಶಿವರಾತ್ರಿಯಲ್ಲಿ ಮುರ್ಡೇಶ್ವರದಲ್ಲಿ ಉಂಟಾಗುವ ಅನುಭವವೇ ಬೇರೆ. ಸಾವಿರ ಸಾವಿರ ಶಿವಭಕ್ತರ ನಡುವೆ ಮುರ್ಡೇಶ್ವರ ಅಪ್ಪಟ ಧಾರ್ಮಿಕ ತಾಣವಾಗಿ ಕಂಗೊಳಿಸುತ್ತದೆ. ಪೌರಾಣಿಕ ಹಿನ್ನೆಲೆ ಗಣಪತಿ ಬ್ರಾಹ್ಮಣ ಅವತಾರದಲ್ಲಿದ್ದಾಗ ರಾವಣನ ಅಪೇಕ್ಷೆ ಮೇರೆಗೆ ಆತ್ಮಲಿಂಗ ಹಿಡಿದುಕೊಂಡಿದ್ದ. ನಂತರ ಉಪಾಯವಾಗಿ ಆತ್ಮಲಿಂಗ ಕೆಳಕ್ಕಿಟ್ಟ ಮೇಲೆ ಆ ಆತ್ಮಲಿಂಗದ ಒಂದು ಭಾಗ ಮುರ್ಡೇಶ್ವರದಲ್ಲಿದೆ ಎನ್ನುವುದು ಪ್ರತೀತಿ. ಹೀಗಾಗಿ, ಮುರ್ಡೇಶ್ವರಕ್ಕೆ ಪೌರಾಣಿಕ ಪ್ರಸಿದ್ಧಿ ಇದೆ. ಶಿವರಾತ್ರಿ ಸಂದರ್ಭ ಸಾವಿರಾರು ಮಂದಿ ಶಿವಪೂಜೆಗಾಗಿ ಆಗಮಿಸುತ್ತಾರೆ. ಸಮುದ್ರ ಸ್ನಾನದ ನಂತರ, ಭಜನೆ ಇಲ್ಲಿನ ವಿಶೇಷ. ಮಂತ್ರಪಠಣ, ಅಭಿಷೇಕ, ಶಿವಾರಾಧನೆ ಇಲ್ಲಿ ನಿರಂತರ. ಮುರ್ಡೇಶ್ವರ ಬೀಚ್‌ಗೆ ಆಧುನಿಕ ಟಚ್‌ಅಪ್ ದೊರೆತಿದೆ. ಬೃಹತ್ ಶಿವನ ಮೂರ್ತಿ ಹಾಗೂ ಅತಿ ಎತ್ತರದ ರಾಜಗೋಪುರ ಮುರ್ಡೇಶ್ವರಕ್ಕೆ ಹೊಸ ಆಕರ್ಷಣೆ ಹುಟ್ಟಿಸಿದೆ. 123 ಅಡಿ ಎತ್ತರದ ಶಿವನ ಭವ್ಯ ಮೂರ್ತಿ ಮುರ್ಡೇಶ್ವರಕ್ಕೆ ಮುಕುಟಪ್ರಾಯ. ಜೊತೆಗೆ 20 ಅಂತಸ್ತುಗಳುಳ್ಳ ರಾಜಗೋಪುರ ಮುರ್ಡೇಶ್ವರದ ಕಿರೀಟಕ್ಕೆ ಗರಿ ತೊಡಿಸಿದಂತಿದೆ. ದ್ರಾವಿಡ ಶೈಲಿಯಲ್ಲಿ ಕಟ್ಟಲಾದ ಈ ರಾಜಗೋಪುರದ 18ನೇ ಮಹಡಿಯ ತನಕ ಲಿಫ್ಟ್ ವ್ಯವಸ್ಥೆ ಇದೆ. ಇಲ್ಲಿಂದ ಸೂರ್ಯಾಸ್ತದ ದೃಶ್ಯ ಮನ ಸೆಳೆಯುತ್ತದೆ. ಇನ್ನು ಇಲ್ಲಿನ ಕಡಲ ತೀರ ಪ್ರಮುಖ ಆಕರ್ಷಣೆ. ವಿಶಾಲ ಕಡಲತೀರದಲ್ಲಿ ವಿಹರಿಸುವುದು, ಅಲೆಗಳೊಂದಿಗೆ ಆಟವಾಡಲು ಜನತೆ ಮುಗಿಬೀಳುತ್ತಾರೆ. ಜಲಸಾಹಸ ಕ್ರೀಡೆಗಳಿಗೂ ಅವಕಾಶ ಕಲ್ಪಿಸಲಾಗಿದೆ. ಸ್ಪೀಡ್ ಬೋಟ್, ವಾಟರ್ ಬೈಕ್, ಬನಾನಾ ಬೋಟ್, ಕಯಾಕಿಂಗ್ ಮೊದಲಾದ ಬೋಟ್‌ಗಳಲ್ಲಿ ಸವಾರಿ ಮಾಡಬಹುದು. ಕಡಲಿನಲ್ಲಿ ವಿಹರಿಸಿ ಖುಷಿ ಪಡಬಹುದು. ಹೀಗೆ ಬನ್ನಿ... ಮುರ್ಡೇಶ್ವರ ಭಟ್ಕಳದಿಂದ 15 ಕಿ.ಮೀ. ದೂರವಿದೆ. ಕೊಂಕಣ ರೇಲ್ವೆ ಸಂಪರ್ಕವೂ ಇದೆ. ಸಮೀಪದ ವಿಮಾನ ನಿಲ್ದಾಣ ಮಂಗಳೂರಿನಿಂದ 154 ಕಿ.ಮೀ. ದೂರದಲ್ಲಿದೆ. ಬೆಂಗಳೂರಿನಿಂದ 480 ಕಿ.ಮೀ. ದೂರದಲ್ಲಿದೆ. Goಕರ್ಣ ದಕ್ಷಿಣ ಕಾಶಿ ಗೋಕರ್ಣದಲ್ಲಿ ಶಿವರಾತ್ರಿಯಂದು ಆತ್ಮಲಿಂಗ ಸ್ಪರ್ಶಿಸಿ ಪೂಜೆ ಸಲ್ಲಿಸಲು ಅವಕಾಶವಿದೆ. ಹೀಗಾಗಿ, ಪ್ರತಿ ಶಿವರಾತ್ರಿಯಲ್ಲೂ 50 ಸಾವಿರಕ್ಕೂ ಹೆಚ್ಚು ಭಕ್ತರು ಸೇರುತ್ತಾರೆ. ಆತ್ಮಲಿಂಗದ ಪೂಜೆಗಾಗಿ ಮುಗಿಬೀಳುತ್ತಾರೆ. ವಟುರೂಪಿ ಗಣಪತಿ ರಾವಣ ಕೈಯಿಂದ ಆತ್ಮಲಿಂಗ ಪಡೆದು ಗೋಕರ್ಣದಲ್ಲಿ ಪ್ರತಿಷ್ಠಾಪಿಸಿದ ಎನ್ನುವುದು ಪುರಾಣ ಕಥೆ. ಇಲ್ಲಿನ ಮಹಾಬಲೇಶ್ವರ ದೇಗುಲ ವಿಶ್ವವಿಖ್ಯಾತ. ಅದರಲ್ಲೂ ದೇವಾಲಯ ರಾಮಚಂದ್ರಾಪುರ ಮಠದ ಆಡಳಿತಕ್ಕೆ ಒಳಪಟ್ಟ ಮೇಲೆ ಇನ್ನಷ್ಟು ಸುಧಾರಣೆಯಾಗಿದ್ದು, ಶಿವರಾತ್ರಿ ಸಂದರ್ಭ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುವುದರಿಂದ ಇನ್ನಷ್ಟು ಭಕ್ತರ ಆಕರ್ಷಣೆಗೆ ಕಾರಣವಾಗಿದೆ. ಶಿವರಾತ್ರಿಯ ಮುನ್ನಾ ದಿನವೇ ಸಾವಿರ ಸಾವಿರ ಭಕ್ತರು ಮಹಾಬಲೇಶ್ವರ ದೇವಾಲಯದ ಬಳಿ ಮೈಲುದ್ದ ಸರದಿ ನಿಂತಿರುತ್ತಾರೆ. ಅಂದು ನಸುಕಿನಿಂದಲೆ ಆರಂಭವಾಗುವ ಪೂಜೆ, ಪುನಸ್ಕಾರಗಳು ಮಧ್ಯರಾತ್ರಿ ತನಕ ಮುಂದುವರಿಯುತ್ತದೆ. ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಆತ್ಮಲಿಂಗ ಪೂಜಿಸುವುದು ವಿಶೇಷಗಳಲ್ಲೊಂದಾಗಿದೆ. ಶಿವರಾತ್ರಿಯನ್ನು ನವರಾತ್ರಿಯಂತೆ 9 ದಿನಗಳ ಕಾಲ ಆಚರಿಸಲಾಗುವುದು ಎಂದು ರಾಘವೇಶ್ವರ ಭಾರತಿ ಸ್ವಾಮೀಜಿ ಪ್ರಕಟಿಸಿ, ಅದರಂತೆ ಆಚರಿಸುತ್ತಿದ್ದಾರೆ. ಭಜನೆ, ಮಂತ್ರಪಠಣ, ಶಿವನಾಮ ಸ್ಮರಣೆ ನಿರಂತರ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಹಾಗೂ ಬೇರೆ ಬೇರೆ ರಾಜ್ಯಗಳಿಂದಲೂ ಆತ್ಮಲಿಂಗ ದರ್ಶನ, ಪೂಜೆಗೆ ಭಕ್ತರು ಆಗಮಿಸುತ್ತಾರೆ. ವಿದೇಶಿಗರಿಗೆ ಆತ್ಮಲಿಂಗ ಪೂಜಿಸಲು ಅವಕಾಶ ಇಲ್ಲದಿದ್ದರೂ ವಿದೇಶಿಗರೂ ಸಹ ದೇವಾಲಯದ ಹೊರ ಪ್ರಾಂಗಣದಲ್ಲೇ ನಿಂತು ಶಿವರಾತ್ರಿ ಆಚರಣೆಯನ್ನು ಕುತೂಹಲದಿಂದ ವೀಕ್ಷಿಸುವುದು, ಕೆಲವರು ಅರ್ಚಕರ ಮೂಲಕ ಪೂಜೆ ಸಲ್ಲಿಸುವುದು ವಿಶೇಷ. ಗೋಕರ್ಣದ ಓಂ ಬೀಚ್, ಕುಡ್ಲೆ ಬೀಚ್ ಹಾಗೂ ಹಾಫ್‌ಮೂನ್ ಬೀಚುಗಳು ವಿಶ್ವವಿಖ್ಯಾತ. ಈ ತೀರಗಳಲ್ಲಿ ಇಂಗ್ಲೆಂಡ್, ಅಮೆರಿಕ, ಫ್ರಾನ್ಸ್, ಇಸ್ರೇಲ್, ಫ್ರಾನ್ಸ್ ಮತ್ತಿತರ ದೇಶಗಳ ಪ್ರವಾಸಿಗರು 5-6 ಸಾವಿರದಷ್ಟು ಸಂಖ್ಯೆಯಲ್ಲಿ ಸೇರುತ್ತಾರೆ. ಹೀಗೆ ಬನ್ನಿ... ಗೋಕರ್ಣ ಬೆಂಗಳೂರಿನಿಂದ 470 ಕಿ.ಮೀ. ದೂರ ಇದೆ. ಬೆಂಗಳೂರಿನಿಂದ ನೇರ ಬಸ್ ಸೌಲಭ್ಯವೂ ಇದೆ. ಕೊಂಕಣ ರೈಲು ಸಂಪರ್ಕವಿದೆ. ಸಮೀಪದ ವಿಮಾನ ನಿಲ್ದಾಣ ಗೋವಾದ ವಾಸ್ಕೋ. ಇಲ್ಲಿಂದ 120 ಕಿ.ಮೀ. ಕ್ರಮಿಸಬೇಕು. ಕುಮಟಾ ಹಾಗೂ ಅಂಕೋಲಾದಿಂದ ಬಸ್ ಸೌಲಭ್ಯ ಇದೆ. - ಚಿತ್ರ-ಲೇಖನ: ವಸಂತಕುಮಾರ್ ಕತಗಾಲ vasant800@.