ಮಂಜ್ರಾಬಾದ್ ಅದೊಂದು ಅಷ್ಟಭುಜಾಕೃತಿಯ ಪ್ರದೇಶ. ಎಂಟು ಮೂಲೆಯಲ್ಲೂ ಒಳಗೆ ಒಬ್ಬ ವ್ಯಕ್ತಿ... ಅದೊಂದು ಅಷ್ಟಭುಜಾಕೃತಿಯ ಪ್ರದೇಶ. ಎಂಟು ಮೂಲೆಯಲ್ಲೂ ಒಳಗೆ ಒಬ್ಬ ವ್ಯಕ್ತಿ ನಿಂತುಕೊಳ್ಳಬಹುದಾದಷ್ಟು ಎತ್ತರದ ಗುಮ್ಮಟ. ಸುತ್ತಲೂ ಕಟ್ಟಿರುವ ಇಟ್ಟಿಗೆಯ ಗೋಡೆ ಮೇಲಿನಿಂದ ನೋಡಿದರೆ ಕೆಳಭಾಗದಲ್ಲಿ ಕಾಣುವ ಹಸಿರು ಕಾಡು... ಕಣ್ಣೆತ್ತಿ ನೋಡಿದಷ್ಟೂ ದೂರ ಮಂಜಿನ ಮುಸುಕು... ಬೆಂಗಳೂರು- ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 48ರ ಮಧ್ಯಭಾಗದಲ್ಲಿರುವ ಮಂಜ್ರಾಬಾದ್ ಕೋಟೆ ಮೇಲೆ ಕಂಡುಬರುವ ದೃಶ್ಯ ವೈಭವವಿದು. ಸಕಲೇಶಪುರದಿಂದ 6 ಕಿ.ಮೀ. ದೂರವಿರುವ ಈ ಪ್ರದೇಶ ಅಂದು ಯುದ್ಧ ಸಾಮಗ್ರಿ ತಯಾರಿಕಾ ಅಥವಾ ಸಂಗ್ರಹಣಾ ಪ್ರದೇಶವಾಗಿದ್ದರೆ, ಇಂದು ಉತ್ತಮ ಪ್ರವಾಸಿ ಸ್ಥಳವಾಗಿದೆ. ರಾ.ಹೆ. ಹೆದ್ದಾರಿಯ ಪಕ್ಕದಲ್ಲೇ ಇದ್ದರೂ ಫಕ್ಕನೆ ಇದರ ಇರುವಿಕೆ ತಿಳಿಯದು. ಆದರೆ ಸುಮಾರು 250 ಮೆಟ್ಟಿಲುಗಳನ್ನು ಹತ್ತಿ ನೋಡಿದರೆ ಕಣ್ಣಿಗೆ ಕಾಣುತ್ತದೆ ಈ ಸುಂದರ, ಪುಟ್ಟಕೋಟೆ. ಇಸ್ಲಾಮಿಕ್ ವಾಸ್ತು ಶೈಲಿ ಮೆಟ್ಟಿಲೇರಿದಂತೆ ಸುಂದರ ಕಲ್ಲಿನ ಗೋಡೆಗಳು ನಮ್ಮನ್ನು ಸ್ವಾಗತಿಸುತ್ತವೆ. ಇಸ್ಲಾಮಿಕ್ ವಾಸ್ತು ಶೈಲಿಯಲ್ಲಿರುವ ಮುಖ್ಯದ್ವಾರ, ಅಕ್ಕಪಕ್ಕದಲ್ಲಿ ಕಾವಲುಗಾರರ ಗೂಡು, ಬೆಂಕಿ ಹೊತ್ತಿಸಿ, ಬೆಳಕು ಮೂಡಿಸಲು ಇರುವ ಜಾಗ... ಹೀಗೆ ಪ್ರತಿಯೊಂದು ಕಲ್ಲು. ಮಣ್ಣುಗಳು ನೂರಾರು ವರ್ಷದ ಇತಿಹಾಸವನ್ನು ಕಣ್ಮುಂದೆ ತಂದು ನಿಲ್ಲಿಸುತ್ತದೆ. ಪ್ರಕೃತಿ ರಮ್ಯ ತಾಣ ಮಂಜಿರಾಬಾದ್ ಕೋಟೆ ಪ್ರಕೃತಿ ವೀಕ್ಷಣೆಗೆ ಸೂಕ್ತವಾಗಿರುವ ತಾಣಗಳಲ್ಲೊಂದಾಗಿದ್ದು, ಇಲ್ಲಿಂದ ಪಶ್ಚಿಮ ಘಟ್ಟಗಳ ವೈಮಾನಿಕ ನೋಟ ರಮಣೀಯವಾಗಿ ಕಾಣುತ್ತದೆ. ಸುಮಾರು ಎರಡು ಎಕರೆಗಳಿರಬಹುದಾದ ಈ ಪ್ರದೇಶದ ಒಳಗೆ ಹಲವು ಕುದುರೆ ಲಾಯಗಳು, ನಾಲ್ಕು ದಿಕ್ಕುಗಳಲ್ಲಿಯೂ ಮೆಟ್ಟಿಲಿರುವ ಒಂದು ಆಳವಾದ ಕೆರೆ, ಸೈನಿಕರ ವಸತಿಗೃಹಗಳು ಪಳೆಯುಳಿಕೆಯ ರೂಪದಲ್ಲಿ ಮಳೆ, ಗಾಳಿ, ಚಳಿ ಎನ್ನದೇ ಪ್ರವಾಸಿಗರಿಗೆ ಒಂದು ಹಳೆಯ ಲೋಕವನ್ನೇ ತೆರೆದಿಡುತ್ತದೆ. ಎರಡು ಸುರಂಗ ಮಾರ್ಗ ಹಸಿರು ಹಾಸಿನ ಕೋಟೆಯೊಳಗೆ ಎರಡು ಸುರಂಗ ಮಾರ್ಗದ ದ್ವಾರಗಳು ಕಾಣುತ್ತವೆ. ಒಂದು ದ್ವಾರದಲ್ಲಿ ಸಾಗಿದರೆ ಕಾಸರಗೋಡು ಸಮೀಪದ ಬೇಕಲಕೋಟೆಗೆ ಸಾಗಬಹುದಾದರೆ, ಇನ್ನೊಂದು ಮಾರ್ಗ ಮೈಸೂರಿಗೆ ಸಂಪರ್ಕವನ್ನು ಹೊಂದುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ. ಪ್ರಸ್ತುತ ಎರಡೂ ಮಾರ್ಗಗಳನ್ನು ಸ್ವಲ್ಪ ದೂರದಲ್ಲಿ ಮುಚ್ಚಲಾಗಿದೆ ಎಂಬುದು ಗಮನಾರ್ಹ. ಶತ್ರುಗಳು ಒಳ ನುಸುಳದಂತೆ ಕೋಟೆಯ ಸುತ್ತಲೂ ಸುಮಾರು 5 ಅಡಿ ಅಗಲದ ಕಾಲುವೆಯನ್ನು ಮಾಡಲಾಗಿದ್ದು, ಇದೀಗ ಅದು ನೀರಿಲ್ಲದೆ ಇಂಗಿ ಹೋಗಿದೆ. ಕನ್ನಡದ ಹಲವು ಚಲನಚಿತ್ರಗಳನ್ನು ಇಲ್ಲಿ ಚಿತ್ರೀಕರಿಸಿದ್ದು, ಪ್ರಕೃತಿಯೇ ಸಹಜ ಸೆಟ್ ಹಾಕಿದಂತಿದೆ. ಟಿಪ್ಪುವಿನ ಕೋಟೆ ಟಿಪ್ಪು ಸುಲ್ತಾನ್ ಮೈಸೂರು ಸಂಸ್ಥಾನವನ್ನು ಆಳುತ್ತಿದ್ದಾಗ ನಿರ್ಮಿಸಿದ ಕೋಟೆ ಇದು. ಕ್ರಿ.ಶ. 1785 ರಲ್ಲಿ ಕೋಟೆ ಕಟ್ಟಲು ಪ್ರಾರಂಭವಾಗಿ 1792 ರಲ್ಲಿ ಮುಗಿಯಿತು. ಇತರ ಕೋಟೆಗಳಿಗಿಂತ ಭಿನ್ನವಾಗಿರುವ ಮಂಜಿರಾಬಾದ್ ಕೋಟೆಯನ್ನು ಮದ್ದುಗುಂಡುಗಳ ಸಂಗ್ರಹಕ್ಕೆ ಬಳಸಲಾಗುತ್ತಿತ್ತು ಎಂದು ಇತಿಹಾಸ ಹೇಳುತ್ತದೆ. ಎತ್ತರವಾದ ದಿಣ್ಣೆಯಂತಹ ಆಯಕಟ್ಟಿನ ಪ್ರದೇಶದಲ್ಲಿರುವ ಇದು ಸಮುದ್ರ ಮಟ್ಟಕ್ಕಿಂತ 3,240 ಅಡಿ ಎತ್ತರದಲ್ಲಿದೆ. ಒಂದು ಗಂಟೆ ಕೊಡಿ ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ವಾಹನದಲ್ಲಿ ಹೋಗುವವರು ಸಕಲೇಶಪುರದಿಂದ 6 ಕಿಮೀ ದೂರದಲ್ಲಿ ಹೆದ್ದಾರಿಯ ಪಕ್ಕದಲ್ಲೇ ಇರುವ ಈ ಸ್ಥಳಕ್ಕೆ ಭೇಟಿ ನೀಡಬಹುದು. ಕೇವಲ ಒಂದುಗಂಟೆ ಇಂತಹ ಪ್ರಕೃತಿ ರಮ್ಯ ತಾಣವನ್ನು ನೋಡಿ ಮನಸ್ಸು ರಿಲ್ಯಾಕ್ಸ್ ಮಾಡಿಕೊಳ್ಳಬಹುದು. - ಸುಧೀಂದ್ರ ಜಮ್ಮಟಿಗೆ