ಪಂಚ ಲಿಂಗಗಳ ನಾಡು ನೀರಿಗೆ ಬಿದ್ದ ನಾಣ್ಯದ ಸದ್ದು, ನಂದಿ ಕೊಂಬಿನ ನಡುವೆ ಹಾಯುವ ಸೂರ್ಯಕಿರಣ ಲಿಂಗದ ಮೇಲೆ... ನೀರಿಗೆ ಬಿದ್ದ ನಾಣ್ಯದ ಸದ್ದು, ನಂದಿ ಕೊಂಬಿನ ನಡುವೆ ಹಾಯುವ ಸೂರ್ಯಕಿರಣ ಲಿಂಗದ ಮೇಲೆ ನೇರವಾಗಿ ಬೀಳುವುದು, ಪಂಚಲಿಂಗಗಳಿಗೆ ಐದು ಗರ್ಭಗುಡಿಯ ವಿನ್ಯಾಸ, ಐದು ಲಿಂಗಗಳ ಮೃದುವಾದ ತಾಡನದಿಂದ ಹೊರ ಹೊಮ್ಮುವ ಪಂಚಸ್ವರಗಳು, ಒಂಬತ್ತು ಗರ್ಭಗುಡಿ, ಒಂಬತ್ತು ಗೋಪುರ... ಇಂಥ ಹತ್ತುಹಲವು ವಿಶೇಷಗಳ ಆಗರ ಬೆಟ್ಟಹಳ್ಳಿ ಪಂಚಲಿಂಗೇಶ್ವರ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕುದೂರು-ಶಿವಗಂಗೆ ರಸ್ತೆಯಲ್ಲಿರುವ ಬೆಟ್ಟಹಳ್ಳಿಯಲ್ಲಿದೆ ಪುರಾಣ ಪ್ರಸಿದ್ಧ ಪಂಚಲಿಂಗೇಶ್ವರ ಗುಡಿ. 1200 ವರ್ಷ ಹಳೆಯದಾದ ಈ ದೇವಾಲಯ ಚೋಳರ ಕಾಲದ್ದಿರಬಹುದೆಂಬ ನಂಬಿಕೆ ಗ್ರಾಮಸ್ಥರಲ್ಲಿದೆ. ಈ ದೇವಾಲಯ ಗ್ರಾಮಸ್ಥರ ಪ್ರಯತ್ನ ಹಾಗೂ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಸಮಿತಿ ನೆರವಿನಿಂದ ಜೀರ್ಣೋದ್ಧಾರವಾಗುತ್ತಿದೆ. ತಲಕಾಡಿನ ಗಂಗರ ದೇವಾಲಯಗಳ ಮಾದರಿಯಲ್ಲಿವೆ ಗುಡಿ ಗೋಪುರಗಳು. ಪೂರ್ವ, ದಕ್ಷಿಣ ಹಾಗೂ ಉತ್ತರಕ್ಕೆ ಬಾಗಿಲುಗಳು ಇವೆ. ಒಂಬತ್ತು ಗರ್ಭಗುಡಿಗಳನ್ನು ಹೊಂದಿರುವ ಈ ದೇವಾಲಯವನ್ನು ಪ್ರವೇಶಿಸಿದಾಗ ಪೂರ್ವಾಭಿಮುಖವಾಗಿ ಮಹಾಬಲೇಶ್ವರ, ದಕ್ಷಿಣಕ್ಕೆ ಅರಕೇಶ್ವರ, ವೈದ್ಯನಾಥೇಶ್ವರ ಹಾಗೂ ಉತ್ತರಕ್ಕೆ ಪಾತಾಳೇಶ್ವರ, ಮಲ್ಲಿಕಾರ್ಜುನ ನಾಮಾಂಕಿತ ಲಿಂಗಗಳಿವೆ. ಇದಕ್ಕಾಗಿಯೇ ಈ ದೇವಾಲಯಕ್ಕೆ ಪಂಚಲಿಂಗೇಶ್ವರ ಎಂದು ಹೆಸರು ಬಂದಿದೆ. ಮಹಾಬಲೇಶ್ವರ ಲಿಂಗವು ಮುಖ್ಯ ಲಿಂಗವಾಗಿದ್ದು ಇದರ ಎದುರಿನಲ್ಲಿ ನಮ್ರತೆಯಿಂದ ಕುಳಿತಿರುವ ನಂದಿ ವಿಗ್ರಹವಿದೆ. ಹಾಗೆಯೇ ಪ್ರಾಂಗಣದತ್ತ ನಡೆದಾಗ ಮತ್ತೆ ನಾಲ್ಕು ಗರ್ಭಗುಡಿಗಳು ಎದುರಾಗಿ ವೀರಭದ್ರಸ್ವಾಮಿ, ಮತ್ತೆಲ್ಲಿಯೂ ಕಂಡುಬಾರದ ವೃಷಭಾರೂಢ ಉಮಾಮಹೇಶ್ವರಿ, ಭದ್ರಕಾಳಮ್ಮ ಹಾಗೂ ಚಾಮುಂಡೇಶ್ವರಿ ವಿಗ್ರಹಗಳು ಪ್ರತಿಷ್ಠಾಪನೆಗೊಂಡಿವೆ (ಈಗ ಭದ್ರಕಾಳಮ್ಮನ ವಿಗ್ರಹ ಕಣ್ಮರೆಯಾಗಿದೆ). ಇದರ ನಡುವೆ ದೊಡ್ಡನಂದಿ ವಿಗ್ರಹವಿದ್ದು ಸೂಕ್ಷ್ಮ ಕೆತ್ತನೆಯಿಂದ ಕಣ್ಮನ ಸೆಳೆಯುವಂತಿದೆ. ಮತ್ತೊಂದೆಡೆ ಚಿಕ್ಕನಂದಿಯೂ ಇದೆ. ಸೂರ್ಯೋದಯದ ಸಮಯದಲ್ಲಿ ಇಲ್ಲಿಗೆ ಬಂದರೆ ಅಪೂರ್ವ ದೃಶ್ಯವೊಂದನ್ನು ನೋಡಬಹುದು. ಪ್ರತಿನಿತ್ಯ ಸೂರ್ಯನ ಕಿರಣ ದೇವಾಲಯದ ಪೂರ್ವ ಬಾಗಿಲಿನಿಂದ ಎರಡೂ ನಂದಿಗಳ ಕೊಂಬುಗಳ ಮಧ್ಯದಿಂದ ನುಸುಳಿ ಮುಖ್ಯ ಲಿಂಗದ ಮೇಲೆ ಬೀಳುತ್ತದೆ! ದೇವಾಲಯದ ಅಂಗಳದಲ್ಲಿರುವ ನಂದೀಶ್ವರನ ಸುತ್ತ ಚಪ್ಪಡಿ ಕಲ್ಲುಗಳ ಮಧ್ಯೆ ನಾಣ್ಯವೊಂದನ್ನು ಹಾಕಿದರೆ ಒಂದೆರಡು ಸೆಕೆಂಡುಗಳ ನಂತರ ನಾಣ್ಯ ನೀರಿಗೆ ಬಿದ್ದಂತಹ ಶಬ್ದ ಕೇಳಿಸುತ್ತದೆ. ನಂದೀಶ್ವರನ ಕೆಳಗೆ ಪುರಾತನ ಕಲ್ಯಾಣಿಯಿದೆ ಎಂದು ನಂಬಲಾಗಿದೆ. ಇಲ್ಲಿ ಇಂದಿಗೂ ಸರ್ಪಕಾವಲಿದೆ ಎಂಬ ಪ್ರತೀತಿ ಇದೆ. ಬೆಂಗಳೂರಿನಿಂದ ಕೇವಲ 65 ಕಿ.ಮೀ ದೂರದಲ್ಲಿದೆ ಬೆಟ್ಟಹಳ್ಳಿ. ಶಾಪ ವಿಮೋಚನೆ ಕ್ಷೇತ್ರದ ಬಗ್ಗೆ ಜಾನಪದ ಕಥೆಯೊಂದಿದೆ. ಬಹಳ ಹಿಂದೆ ಮಹಾಮುನಿಯೊಬ್ಬರು ಶಿವನನ್ನು ಕುರಿತು ದೀರ್ಘಕಾಲ ತಪಸ್ಸು ಮಾಡಿದ ಸ್ಥಳವಿದು. ತಪಸ್ಸು ಮಾಡುತ್ತಿದ್ದಾಗ ಮುನಿಗಳ ಸುತ್ತಲೂ ಗಿಡಗೆಂಟಿಗಳು ಬೆಳೆದು ದೊಡ್ಡ ಹುತ್ತವೇ ಎದ್ದು ನಿಂತಿತ್ತು. ಹೀಗಾಗಿ ಮುನಿಗಳು ಅನ್ಯರ ಕಣ್ಣಿಗೆ ಗೋಚರಿಸುತ್ತಿರಲಿಲ್ಲ. ಆದರೆ, ಹುತ್ತದ ಕೋವೆಗಳಿಂದ ಓಂಕಾರ ಮಂತ್ರ ಕ್ಷೀಣ ಧ್ವನಿಯಲ್ಲಿ ಕೇಳಿಬರುತ್ತಿತ್ತು. ಬೇಟೆಗಾಗಿ ಅಡವಿಗೆ ಬಂದ ಶಿವಭಕ್ತ ರಾಜನೊಬ್ಬ ಕುತೂಹಲದಿಂದ ಈ ಧ್ವನಿಯ ಬೆನ್ನತ್ತಿ ಅಶ್ವಾರೂಢನಾಗಿ ಹುಡುಕುತ್ತಾ ಬರುತ್ತಿರುವಾಗ ಆಕಸ್ಮಿಕವಾಗಿ ಕುದುರೆಯ ಮೇಲಿದ್ದ ರಾಜನ ಕಾಲು ಹುತ್ತಕ್ಕೆ ತಗುಲಿತು. ಇದರಿಂದ ಮುನಿಯ ತಪಸ್ಸು ಭಂಗವಾಯಿತು. ಪೂರ್ವಾಪರ ಯೋಚಿಸದ ಮುನಿಗಳು ಕೋಪದಿಂದ, 'ನೀನು ತಿನ್ನುವ ಅನ್ನ ಹುತ್ತದ ಮಣ್ಣಾಗಲಿ' ಎಂದು ಶಾಪವಿತ್ತರು. ರಾಜ ಮುನಿಗಳ ಕಾಲಿಗೆ ಬಿದ್ದು ಪರಿಪರಿಯಾಗಿ ಕ್ಷಮೆಯಾಚಿಸಿದ ಮೇಲೆ ಶಾಂತರಾದ ಮುನಿಗಳು ಆ ಸ್ಥಳದಲ್ಲಿ ಪಂಚಲಿಂಗಗಳನ್ನು ಪ್ರತಿಷ್ಠಾಪಿಸಲು ಆದೇಶವನ್ನಿತ್ತು ಹೊರಟು ಹೋದರು. ಹೀಗೆ ಇಲ್ಲಿ ದೇವಾಲಯ ನಿರ್ಮಾಣಗೊಂಡಿತು. ಬೆಂಗಳೂರು ನಗರಕ್ಕೆ ಸನಿಹವಿದ್ದರೂ ಬೆಟ್ಟಹಳ್ಳಿಯ ಪಂಚಲಿಂಗೇಶ್ವರ ಗುಡಿ ಹೆಚ್ಚು ಪ್ರಚಲಿತವಿಲ್ಲದಿರುವುದು ದುರಂತ. - ಗಂಗಬೈಲಪ್ಪ, ಬೆಟ್ಟಹಳ್ಳಿ ಮೂಲದ ನಿವೃತ್ತ ಶಿಕ್ಷಕರು ಶಿವಗಂಗೆ ಬೆಟ್ಟದ ತಪ್ಪಲಲ್ಲಿ ಇಂತಹ ಪುರಾತನ ಐತಿಹಾಸಿಕ ದೇವಳಗಳು ಶಿಥಿಲವಾಗಿ ಮರೆಯಾಗಿ ಹೋಗಿವೆ. ಅವುಗಳನ್ನು ಪತ್ತೆ ಹಚ್ಚಿ ಜೀರ್ಣೋದ್ಧಾರ ಮಾಡುವಂತಾಗಬೇಕು. - ತಿಮ್ಮೇಗೌಡ, ಬೆಂಗಳೂರು (ಬೆಟ್ಟಹಳ್ಳಿ ಮೂಲವಾಸಿ) - ರಘುಪತಿ ಡಿ.