ಸುಲಭದಲ್ಲಿ ವೋಲ್ವೊ? ಭಾರತದಲ್ಲಿನ ಐಷಾರಾಮಿ ಬಸ್‌ಗಳನ್ನು ನೆನೆಸಿಕೊಂಡಾಗ ನೆನಪಾಗುವುದು ವೋಲ್ವೊ ಕಂಪನಿ. ಆದರೆ ವಿದೇಶದಲ್ಲಿ ವೋಲ್ವೊ ಕಂಪನಿಯು ಐಷಾರಾಮಿ ಕಾರುಗಳಿಂದಲೂ ಚಿರಪರಿಚಿತವಾಗಿದೆ. ಭಾರತದಲ್ಲಿ ಈ ಕಾರುಗಳಿಗೆ ಮಾರುಕಟ್ಟೆಯಿದ್ದರೂ ಅಧಿಕ ಸೇವಾ ತೆರಿಗೆಯ ಕಾರಣದಿಂದ ಸಾಮಾನ್ಯ ಗ್ರಾಹಕರಿಗೆ ಗಗನ ಕುಸುಮವಾಗಿದೆ. ಇದೇ ಕಾರಣದಿಂದ ಬೆರಳೆಣಿಕೆಯ ವೋಲ್ವೊ ಕಾರುಗಳು ಮಾತ್ರ ರಸ್ತೆಯಲ್ಲಿ ಕಾಣುತ್ತವೆ. ಆದರೆ ಭಾರತೀಯ ಮಾರುಕಟ್ಟೆಯ ಬೂಮ್ ಅರಿತಿರುವ ವೋಲ್ವೊ ಕಂಪನಿಯು ದೇಶದಲ್ಲಿ ಕಾರು ತಯಾರಿಕೆ ಘಟಕ ಪ್ರಾರಂಭಿಸಲು ಮುಂದಾಗಿದೆ.ಭಾರತದ ತೆರಿಗೆ ನಿಯಮದ ಅನ್ವಯ ಸ್ವೀಡಿಷ್ ಮೂಲದ ಪ್ರತಿ ವೋಲ್ವೊ ಕಾರುಗಳ ಮೇಲೆ ಶೇ.108-ಶೇ.110 ಸೇವಾ ತೆರಿಗೆ ಹಾಕಲಾಗುತ್ತದೆ. ಇದರಿಂದ ಕಾರುಗಳ ಬೆಲೆ ದುಪ್ಪಟ್ಟಾಗುತ್ತದೆ. ಇದೇ ಕಾರಣದಿಂದ ಭಾರತದಲ್ಲಿನ ಗ್ರಾಹಕರು ವೋಲ್ವೊ ಕಾರುಗಳಿಂದ ದೂರವಾಗಿದ್ದಾರೆ. 2020ರ ವೇಳೆಗೆ ಕಾರು ಮಾರಾಟವನ್ನು ವಾರ್ಷಿಕ 4.40 ಲಕ್ಷದಿಂದ 8 ಲಕ್ಷಕ್ಕೆ ಏರಿಸಲು ಕಂಪನಿ ನಿರ್ಧರಿಸದೆ. ಭಾರತೀಯ ಗ್ರಾಹಕರು ಪ್ರತಿವರ್ಷ 20 ಸಾವಿರ ಕಾರುಗಳನ್ನು ಕೊಳ್ಳಲಿದ್ದಾರೆ ಎಂಬ ಆಶಾಭಾವನೆಯಲ್ಲಿ ಕಂಪನಿಯಿದೆ. ಭಾರತದಲ್ಲಿ ತಯಾರಿಕೆ ಘಟಕವಿಲ್ಲದಿದ್ದರೂ ಪ್ರತಿವರ್ಷ ಸುಮಾರು 820 ಕಾರುಗಳು ಮಾರಾಟವಾಗುತ್ತಿವೆ. ಕಾರು ತಯಾರಿಕೆ ಘಟಕವು ಕರ್ನಾಟಕ ಅಥವಾ ಗುಜರಾತ್‌ನಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ.