ಕಂಗಳು ವಂದನೆ ಹೇಳಿದೆ ನಗರಜೀವನದ ಒತ್ತಡದಿಂದ 'ಮುಕ್ತಿ'ಗಾಗಿ ನೋಡಲೇ ಬೇಕಾದ ಅಪರೂಪದ ಸ್ಥಳ- ಶರಾವತಿ ಮತ್ತು ನುಸಿಕೋಟೆ ಕಾಂಡ್ಲಾ ವನ (ಮ್ಯಾಂಗ್ರೋವ್ ಕಾಡುಗಳ ತಾಣ). ಇದು ಇರುವುದು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಶರಾವತಿ ನದಿ ಮುಖಜಭೂಮಿ ಮತ್ತು ಗೋಕರ್ಣ ಸಮೀಪದ ಅಘನಾಶಿನಿ ನದಿಯ ಹಿನ್ನೀರಿನ ಪ್ರದೇಶವಾದ ನುಸಿಕೋಟೆ ಎಂಬ ಸ್ಥಳದಲ್ಲಿ. ಬೆಳೆದು ನಿಂತ ಕಾಂಡ್ಲಾ ವನಗಳು ನಯನ ಮನೋಹರ.ಕಾಂಡ್ಲಾ ಗಿಡಗಳನ್ನು ನಾವು ಹೆಚ್ಚಾಗಿ ಅಂಡಮಾನ್ ನಿಕೋಬಾರ್ ದ್ವೀಪ ಪ್ರದೇಶದಲ್ಲಿ ಮಾತ್ರ ಕಾಣಬಹುದು. ಅದನ್ನು ಬಿಟ್ಟರೆ ಈ ಮ್ಯಾಂಗ್ರೋವ್ ಗಿಡಗಳನ್ನು ದೇಶದ ಯಾವುದೇ ಭಾಗದಲ್ಲಿ ಕಾಣಲು ಸಾಧ್ಯವಿಲ್ಲ. ಕಾಂಡ್ಲಾ ಸಸ್ಯಗಳ ಉಪಯೋಗ? ಶರಾವತಿ ಮತ್ತು ನುಸಿಕೋಟೆ ಸಮೀಪ ಸೊನರೇಷಿಯಾ ಎಂಬ ಪ್ರಭೇದದ ಕಾಂಡ್ಲಾ ಸಸ್ಯಗಳು ಪ್ರಮುಖವಾಗಿವೆ. ನೋಡಲು ತೆಂಗಿನ ಮರದ ಬೇರುಗಳಂತೆ ದಪ್ಪ ಕಾಂಡಗಳನ್ನು ಹೊಂದಿರುತ್ತವೆ. ಇಲ್ಲಿ ಸರ್ಬೆರಾ, ಡೆರಿಸ್, ಪ್ರಭೇದದ ಕಾಂಡ್ಲಾಗಳನ್ನು ನೋಡಬಹುದು. ಕಾಂಡ್ಲಾ ಸಸ್ಯಗಳು ಪರಿಸರ ಸಂರಕ್ಷಣೆಯ ವಿಷಯದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಸುನಾಮಿ, ಭೂಸವಕಳಿ, ಚಂಡಮಾರುತ, ಇವೆಲ್ಲವನ್ನೂ ತಡೆಗಟ್ಟುವಲ್ಲಿ ಇವುಗಳ ಪಾತ್ರ ಮುಖ್ಯ. ಮತ್ತೊಂದು ವಿಶೇಷವೆಂದರೆ ಹಲ ಜಲಚರ ಜೀವಿಗಳು ತಮ್ಮ ಸಂತಾನೋತ್ಪತ್ತಿ ಕಾರ್ಯವನ್ನು ಮಾಡಲು ಕಾಂಡ್ಲಾವನಗಳು ಬಹಳ ಸಹಾಯಕಾರಿ. ಇಲ್ಲಿ ಹನ್ನೆರಡು ಜಾತಿಯ ನೈಜ ಕಾಂಡ್ಲಾಗಳು, ಇಪ್ಪತ್ತು ಜಾತಿಯ ಸಹಚರ ಕಾಂಡ್ಲಾಗಳನ್ನು ಕಾಣಬಹುದು. ಪಕ್ಷಿಗಳ ವಲಸೆ ವಿದೇಶದ ಹಕ್ಕಿಗಳು ಇಲ್ಲಿ ಬಂದು ತಮ್ಮ ಸಂತಾನೋತ್ಪತ್ತಿ ಕಾರ್ಯವನ್ನು ಮಾಡುತ್ತದೆ. ಎಲ್ಲಿಯೂ ನೋಡಿರದ ಪಕ್ಷಿ ಸಂಕುಲವನ್ನು ಇಲ್ಲಿ ನೋಡಬಹುದು. ಇದರ ಮುಖ್ಯ ಕಾರ್ಯವನ್ನು ಹೊನ್ನಾವರದ ಅರಣ್ಯ ಇಲಾಖೆ ಕಾಳಜಿಯಿಂದ ಮಾಡುತ್ತಿದೆ. ಕಾಂಡ್ಲಾ ಪ್ರವಾಸೋದ್ಯಮದಲ್ಲಿ ಅಘನಾಶಿನಿ ನದಿಯ ಹಿನ್ನೀರಿನ ಪ್ರದೇಶವಾದ ನುಸಿಕೋಟೆ ಪ್ರದೇಶದಲ್ಲಿ 1800 ಎಕರೆ ಪ್ರದೇಶದಲ್ಲಿ ಬೃಹತ್ ಮ್ಯಾಂಗ್ರೋವ್ ಕಾಡಿದೆ. ಕಾಂಡ್ಲಾ ಸಸ್ಯಗಳ ವೀಕ್ಷಣೆ, ಪ್ರಭೇದಗಳ ಬಗ್ಗೆ ವಿವರಣೆ, ನಿಸರ್ಗ ಅಧ್ಯಯನ, ಮತ್ತು ಸಂಶೋಧನೆ ಮಾಡುವ ವಿದ್ಯಾರ್ಥಿಗಳಿಗೆ ಇದು ಹೇಳಿ ಮಾಡಿಸಿದ ಜಾಗ. ವಿಶೇಷ ತರಬೇತಿ ಪಡೆದ ಮಾಹಿತಿಕಾರರು, ಕಾಂಡ್ಲಾ ಪ್ರವಾಸದ ಬಗ್ಗೆ ವಿವರಣೆಯನ್ನು ಕೊಡುತ್ತಾರೆ. ಹತ್ತಿರದ ಪ್ರೇಕ್ಷಣೀಯ ಸ್ಥಳಗಳು ಓಂ ಕಡಲ ತೀರ, ದಕ್ಷಿಣ ಕಾಶಿಯಲ್ಲಿ ಪ್ರಸಿದ್ಧವಾದ ಗೋಕರ್ಣ, ಮಹಾಬಲೇಶ್ವರ ದೇವಾಲಯದ ಕೂಗಳತೆ ದೂರದಲ್ಲಿದೆ. ಇದು ರಾಜಧಾನಿ ಬೆಂಗಳೂರಿನಿಂದ ಸುಮಾರು 450 ಕಿ.ಮೀ. ದೂರದಲ್ಲಿದೆ. ಏಪ್ರಿಲ್ ಮೇ ತಿಂಗಳು ಪ್ರವಾಸಕ್ಕೆ ಸೂಕ್ತ. ಜೂನ್ ತಿಂಗಳಲ್ಲಿ ಈ ಭಾಗದಲ್ಲಿ ಹೆಚ್ಚಾಗಿ ಮಳೆ ಬೀಳುವುದರಿಂದ ಪ್ರವಾಸ ಕಷ್ಟಕರವಾಗಬಹುದು. ಇಲ್ಲಿ ಊಟ ವಸತಿ ವ್ಯವಸ್ಥೆ ಇದೆ. ರವೀಂದ್ರನಾಥ್ ಠಾಗೂರ್ ಕಡಲ ತೀರ (ಕಾರವಾರ) ಇದು ನುಸಿಕೋಟೆಯಿಂದ 25 ಕಿ.ಮೀ. ದೂರದಲ್ಲಿದೆ. ಇಲ್ಲಿ ಸೂರ್ಯೋದಯ ಸೂರ್ಯಾಸ್ತ ನೋಡಲು ಪ್ರವಾಸಿಗರದಂಡೇ ಸೇರಿರುತ್ತದೆ. ಇಲ್ಲಿಂದ ಗೋವಾ ಬರೀ 75 ಕಿ.ಮೀ. ಮಾತ್ರ. ಇಲ್ಲಿ ಊಟ ವಸತಿ ವ್ಯವಸ್ಥೆ ಇದೆ. ಕಾಸರಕೋಡ್ ಇಕೋ ಬೀಚ್ ಇದು ಶರಾವತಿ ನದಿಯ ಎಡದಂಡೆಯಲ್ಲಿದೆ. ಹೊನ್ನಾವರದಿಂದ 2 ಕಿ.ಮೀ. ದೂರದಲ್ಲಿದೆ. ಇಲ್ಲಿ ಊಟ ವಸತಿ ವ್ಯವಸ್ಥೆ ಇದೆ. ಕರ್ನಲ್ ಹಿಲ್ ಇದು ಹೊನ್ನಾವರದಲ್ಲಿದೆ. 18ನೇ ಶತಮಾನದಲ್ಲಿ ಬ್ರಿಟೀಷ್ ಕರ್ನಲ್ ಸಾವನ್ನಪ್ಪಿದಾಗ ಅವನ ನೆನಪಿಗಾಗಿ ಗುಡ್ಡದ ಮೇಲೆ ಒಂದು ದೊಡ್ಡ ಗೋರಿಯಾಕಾರದಲ್ಲಿ ಕಟ್ಟಲಾಗಿದೆ. ಇಲ್ಲಿಯ ಉದ್ಯಾನವನ ಹೈಲೈಟ್. ಹೀಗೆ ಬನ್ನಿ: ನುಸಿಕೋಟೆ ಮತ್ತು ಶರಾವತಿ ಕಾಂಡ್ಲಾ ಪ್ರದೇಶ- ಬೆಂಗಳೂರಿನಿಂದ ಸುಮಾರು 450ಕಿ.ಮೀ. ದೂರದಲ್ಲಿದೆ. ನುಸಿ ಕೋಟೆ ಅಘನಾಶಿನಿ ನದಿಯ ಹಿನ್ನೀರಿನ ಪ್ರದೇಶವಾಗಿದ್ದು ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಕುಮಟಾ ಕಾರವಾರ ರಸ್ತೆಯ ಮಧ್ಯದಲ್ಲಿ ಸಿಗುವ ಹಿರೇಗುತ್ತಿ ಸಮೀಪದ ನುಸಿಕೋಟೆ ಕ್ರಾಸ್ ಮೂಲಕ 1 ಕಿ.ಮೀ. ಸಾಗಿದರೆ ನಿಮ್ಮನ್ನು ಸ್ವಾಗತಿಸುತ್ತಿದೆ ನುಸಿಕೋಟೆ ಕಾಂಡ್ಲಾ ಪ್ರವಾಸೋದ್ಯಮ. ಶರಾವತಿ ಕಾಂಡ್ಲಾ ವೀಕ್ಷಣೆಗಾಗಿ ಹೊನ್ನಾವರಕ್ಕೆ ಬಂದರೆ ನದಿಯ ಎರಡೂ ಬದಿಯಲ್ಲಿ ವಿಫುಲವಾಗಿ ಬೆಳೆದಿರುವ ಕಾಂಡ್ಲಾ ಸಸ್ಯಗಳನ್ನು ಕಾಣಬಹುದು.ಹೊನ್ನಾವರ ಅರಣ್ಯ ಇಲಾಖೆಯ ಪ್ರವಾಸೋದ್ಯಮ ಘಟಕವು ಬೋಟಿನ ವ್ಯವಸ್ಥೆ ಮಾಡಿದೆ. ಕಾಂಡ್ಲಾವನಗಳ ವೀಕ್ಷಣೆಗಾಗಿ ಸಂಪರ್ಕಿಸಿ: ಜಗದೀಶ್ ಹರಿಕಾಂತ್‌ಮೊ: 99457 95619 ನಾರಾಯಣ ಭಟ್‌ಮೊ: 94826 34237 ಟಿ -ಚಿತ್ರಲೇಖನ: ಬಳಕೂರು ಶ್ರೀ ವಿ.ಎಸ್. ನಾಯಕ @.