ಕಾಡಂಚಿನ ಕಣ್ಣೀರು ಜನಪ್ರತಿನಿಧಿಗಳ ತಿರಸ್ಕಾರ ಮನೋಭಾವ ವೊ? ಇಚ್ಛಾಶಕ್ತಿ ಕೊರತೆಯೊ? ಕೊಳ್ಳೇಗಾಲ.. ಜನಪ್ರತಿನಿಧಿಗಳ ತಿರಸ್ಕಾರ ಮನೋಭಾವವೊ? ಇಚ್ಛಾಶಕ್ತಿ ಕೊರತೆಯೊ? ಕೊಳ್ಳೇಗಾಲ ತಾಲೂಕಿನ ಕಾಡಂಚಿನ ಭಾಗಗಳಲ್ಲಿ ವಾಸವಾಗಿರುವ ಮುಗ್ಧ ಜನರಿಗೆ ಮೂಲಸೌಕರ್ಯ ಎನ್ನುವುದು ಇಂದಿಗೂ ಮರೀಚಿಕೆಯಾಗಿಯೇ ಉಳಿದುಕೊಂಡಿದೆ. ಈ ಭಾಗಗಳಲ್ಲಿ ಹಿಂದುಳಿದ ಬೇಡಗಂಪಣರು ಹಾಗೂ ಸೋಲಿಗರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ವ್ಯವಸಾಯ, ಹೈನುಗಾರಿಕೆ ಇವರ ಮೂಲ ಕುಲಕಸುಬು. ಇದನ್ನು ಹೊರತು ಪಡಿಸಿದರೆ ಬೇಡಗಂಪಣರಲ್ಲಿ ಕೆಲವರು ಮಲೈಮಹದೇಶ್ವರ ಬೆಟ್ಟದ ಮಹದೇಶ್ವರ ಪೂಜೆಯಲ್ಲಿ ಸರದಿಯಂತೆ ತೊಡಗಿಸಿಕೊಳ್ಳುತ್ತಾರೆ. ಈ ಭಾಗದಲ್ಲಿ ಏನು ಸಮಸ್ಯೆಗಳಿವೆ ಇಲ್ಲಿ ಏನೇನು ಸಮಸ್ಯೆಗಳಿಲ್ಲ ಎಂಹುದನ್ನು ಪಟ್ಟಿ ಮಾಡುವುದಕ್ಕಿಂತ ಏನೇನು ಸೌಲಭ್ಯಗಳಿವೆ ಎಂದು ಹೇಳುವುದೇ ಸುಲಭ! ಕುಡಿಯುವ ನೀರು ಬೆರಳೆಣಿಕೆಯ ಗ್ರಾಮಗಳಲ್ಲಿ ದೊರಕಬಹುದು, ಕೆಲವು ಗ್ರಾಮಗಳಲ್ಲಿ ಪಡಿತ ಮನೆಗೆ ತಲುಪಬಹುದು, ಕೆಲವೇಕೆಲವು ಗ್ರಾಮಗಳ ವಾಸಿಗಳಿಗೆ ಮಾತ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುವ ಸೌಲಭ್ಯ ಇರಬಹುದು. ಇದನ್ನು ಬಿಟ್ಟು ಇನ್ನುಳಿದ ನೂರಾರು ಗ್ರಾಮಗಳ ನಿವಾಸಿಗಳಿಗೆ ಕುಡಿಯುವ ನೀರಿಗೂ ತತ್ವಾರ, ಪಡಿತರ ಪಡೆಯಲು ಮೈಲುಗಟ್ಚಳೇ ದೂರ ಕ್ರಮಿಸಬೇಕು, ಪ್ರಾಥಮಿಕ ವೈದ್ಯೋಪಚಾರ ದೂರವೇ ಉಳಿಯಿತು. ಕೆಲವು ಹಳ್ಳಿಗಳ ಸ್ಥಿತಿ ಎಷ್ಟು ಶೋಚನೀಯವಾಗಿದೆ ಎಂದರೆ ಸರಿಯಾಗಿ ಮಳೆಯಾಗದಿದ್ದರೆ ಹಳ್ಳದಲ್ಲಿ ಹರಿಯುವ ನೀರೇ ಜೀವಜಲ! ಇನ್ನು ಬೇಸಿಗೆಯಲ್ಲಿ ಅವರು ಪಡಿಪಾಟಲು ಯಾರಿಗೂ ಬೇಡ. ಆಗ ಪುಟ್ಟ ಹಳ್ಳದಲ್ಲಿನ ನೀರನ್ನೇ ಬಾಚಿ ಶೋಧಿಸಿ ಕಾಯಿಸಿ ಕುಡಿಯುತ್ತಾರೆ. ಬಹುತೇಕ ಗ್ರಾಮಗಳು ಹನೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ದೊಡ್ಡಾಣೆ ಗ್ರಾಮಕ್ಕೆ ಸುಮಾರು 15 ಕಿ.ಮೀ.ನಷ್ಟು ದೂರವನ್ನು ಬೆಟ್ಟ ಗುಡ್ಡಗಳನ್ನು ಹತ್ತಿಳಿದು ಕ್ರಮಿಸಬೇಕು. ತುಳಸಿಕೆರೆ, ಕೀರನಹೊಲ, ಕಾಡು ಹೊಲ, ನಾಗಮಲೆಗೂ ಕಾಡಂಚಿನಲ್ಲಿ ಹಾಗೂ ಜಮೀನಿನ ಮೇಲೆ ನಡೆಯಬೇಕು. ಇವು ಒಂದೆರಡು ಉದಾಹರಣೆಗಳಷ್ಟೇ. ಯಾರಾದರೂ ಹುಷಾರು ತಪ್ಪಿದರೆ ಹಾಗೂ ಗರ್ಭಿಣಿಯರನ್ನು ಹೆರಿಗೆಗಾಗಿ ಒಯ್ಯಬೇಕಿದ್ದರೆ... ಅದು ಬಿಡಿ, ಆಸ್ಪತ್ರೆಯಲ್ಲಿ ಯಾರಾದರೂ ಅಸು ನೀಗಿದರೂ ಅವರ ಹೆಣ ತರಬೇಕಿದ್ದರೂ ವಾಹನ ವ್ಯವಸ್ಥೆ ಇಲ್ಲ. ದಾರಿಯೇ ಇಲ್ಲ ಎಂದಮೇಲೆ ವಾಹನ ಬರುವುದಾದರೂ ಹೇಗೆ? ಗಳುಗಳ ನೆರವಿನಿಂದ ನ್ಯಾಣೆ ಕಟ್ಟಿ ಎತ್ತಿಕೊಂಡು ಸಾಗಬೇಕಾದ ದುರಂತ. ಆ ಮಹದೇಶ್ವರ ಎಂದು ಕಣ್ಣು ಬಿಡುವನೊ! ಚಿತ್ರ- ಲೇಖನ: ಎನ್. ನಾಗೇಂದ್ರಸ್ವಾಮಿ