ಕಾರ್‌ಪ್ರಾಣಿ! ತಂತ್ರಜ್ಞಾನ ಎಷ್ಟೇ ಮುಂದುವರಿದಿರಲಿ, ಮಾನವ ಎಷ್ಟೇ ಸಾಧನೆ ಮಾಡಿರಲಿ, ಪ್ರಕೃತಿಯ ಸೃಷ್ಟಿಯ ನೆರಳು ಇದ್ದೇ ಇರುತ್ತದೆ. ಪ್ರಾಣಿಗಳನ್ನು ಮೀರಿಸಿ ರೊಂಯ್ಯನೆ ಓಡುವ ಕಾರುಗಳ ಶೈಲಿಯ ಮೂಲ ಪ್ರಾಣಿಗಳೇ ಅಂದರೆ ನೀವು ನಂಬಲಿಕ್ಕಿಲ್ಲ. ಪ್ರಕೃತಿ ನಿರ್ಮಿಸಿರುವ ಪ್ರಾಣಿಗಳಲ್ಲಿ ದೊಡ್ಡದಿವೆ. ಚಿಕ್ಕದಿವೆ. ದಢೂತಿಗಳಿವೆ. ಸಣಕಲಿವೆ. ಅವು ಹೇಗೇ ಇರಲಿ ಪ್ರತಿ ಪ್ರಾಣಿಗೂ ಅದರದ್ದೇ ಆದ ಸಾಮರ್ಥ್ಯವಿದೆ. ವೈಶಿಷ್ಟ್ಯವಿದೆ. ಅದಕ್ಕಿಂತ ಹೆಚ್ಚಾಗಿ ದೇಹ ಸಮತೋಲನ ಅತ್ಯಂತ ಸರಿಯಾಗಿದೆ. ಆಧುನಿಕ ತಂತ್ರಜ್ಞಾನದಿಂದ ಸಾಕಷ್ಟು ಕಾರುಗಳು ಮಾರುಕಟ್ಟೆಯಲ್ಲಿ ಬಂದಿವೆ. ಆದರೆ ಅದರಲ್ಲಿ ಕೆಲವು ಕಾರುಗಳ ಮೂಲ ಶೈಲಿ ಪರಿಸರದಲ್ಲಿರುವ ಪ್ರಾಣಿಗಳನ್ನು ಹೋಲುವಂತಿದೆ. ಕಾರು ವಿನ್ಯಾಸ ಮಾಡುವ ಎಂಜಿನಿಯರ್‌ಗಳು ನಿಜವಾಗಿಯೂ ಈ ಪ್ರಾಣಿಗಳನ್ನು ನೋಡಿ ಅಥವಾ ಮನಸಿನಲ್ಲಿಟ್ಟುಕೊಂಡು ಈ ಕಾರುಗಳನ್ನು ರಚಿಸಿದ್ದಾರೋ ಇಲ್ಲವೋ ಎಂಬುದು ಗೊತ್ತಿಲ್ಲ. ಆದರೆ ಈ ಕಾರುಗಳನ್ನು ಪ್ರಾಣಿಗಳನ್ನು ಹೋಲುವುದಂತೂ ನಿಜ. ಅಂಥ ಕೆಲವು ಇಲ್ಲಿವೆ ನೋಡಿ... ಸಿಟ್ರಾನ್ ಸಿ3- ಬಸವನಹುಳು ಎಸ್- ಕಾರ್ಗೊ ವಾಹನದ ವಿನ್ಯಾಸಕ್ಕೆ ಬಸವನಹುಳುವೇ ಸ್ಫೂರ್ತಿ ಎಂದು ನಿಸಾನ್ ಕಂಪನಿ ಬಹಿರಂಗವಾಗಿಯೇ ಹೇಳಿತ್ತು. ಹಾಗೆಯೇ ಸಿ-3 ಕಾರಿನ ವಿನ್ಯಾಸದ ಬಗ್ಗೆ ಬಸವನಹುಳುವಿನ ಪ್ರಭಾವವಿದೆ ಎಂದು ಕಂಪನಿ ಬಹಿರಂಗವಾಗೇನೂ ಹೇಳಿಲ್ಲ. ಆದರೆ ಕಾರಿನ ಮಧ್ಯದಲ್ಲಿ ಡುಬ್ಬದಂತಿರುವ ವಿನ್ಯಾಸ ನೋಡಿದರೆ ಕೊಂಚ ಮಟ್ಟಿಗೆ ಬಸವನಹುಳುವಿನ ಸ್ಫೂರ್ತಿ ಪಡೆದಂತಿದೆ. ಬಿಎಂಡಬ್ಲ್ಯು 8 ಈ ಕಾರಿಗೆ ಮೇಲೊಂದು ರೆಕ್ಕೆ ಥರದ್ದನ್ನು ಕೂರಿಸಿ ಸಮುದ್ರಕ್ಕೆ ಬಿಟ್ಟರೆ ಶಾರ್ಕ್ ಅಲ್ಲ ಅಂತ ಯಾರೂ ಹೇಳಲಿಕ್ಕಿಲ್ಲ. ಇಲ್ಲಿ ವೈಟ್ ಶಾರ್ಕ್ ಮತ್ತು ಕಾರು ಎರಡೂ ಒಟ್ಟಿಗೆ ಇರುವುದರಿಂದ ನೀವೇ ಇದನ್ನು ಗಮನಿಸಬಹುದು. ಉದ್ದದ ಮೂತಿ, ಅದಕ್ಕೆ ತಕ್ಕ ಡಿಕ್ಕಿ, ಶಾರ್ಕ್ ದೇಹವನ್ನೇ ಹೋಲುವ ಮಧ್ಯಭಾಗ. ಇವನ್ನೆಲ್ಲ ನೋಡಿದರೆ ಈ ಕಾರು ವಿನ್ಯಾಸಗಾರ ಬಿಳಿ ಶಾರ್ಕ್‌ನಿಂದ ಸ್ಫೂರ್ತಿ ಪಡೆದಿದ್ದ ಎಂಬುದರಲ್ಲಿ ಅನುಮಾನವಿಲ್ಲ. ಹೆಬ್ಬಾವಿನೊಂದಿಗೆ ಆಡಿ ಪ್ರತಿಷ್ಠೆಗೆ ಮತ್ತು ಆಕರ್ಷಕ ವಿನ್ಯಾಸಕ್ಕೆ ಹೆಸರಾಗಿರುವ ಆಡಿ ಕಂಪನಿಯ ಎ5 ಕಾರು ಥಟ್ಟನೆ ನೋಡಿದರೆ ಹೆಬ್ಬಾವನ್ನು ಹೋಲುವಂತೆ ಕಾಣಲಿಕ್ಕಿಲ್ಲ. ಆದರೆ, ಕಾರಿನ ಚಿತ್ರ ಮತ್ತು ಹೆಬ್ಬಾವಿನ ಚಿತ್ರ ಒಟ್ಟಿಗಿಟ್ಟು ನೋಡಿ! ಅರೆ.. ಹೌದಲ್ವಾ ಅನಿಸುವಂತಿದೆ. ಕಾರಿನ ಎರಡೂ ಬದಿಯಲ್ಲಿರುವ ಶೋಲ್ಡರ್ ಲೈನ್‌ಗಳನ್ನು ನೋಡಿ, ಹಾವಿನ ಸೈಡ್‌ಲೈನ್‌ನಂತೆ ಕಾಣಿಸುವುದಿಲ್ಲವೇ? ಅದೂ ಕಾಣಿಸಿಲ್ಲವೆಂದಾದರೆ ಆಡಿಯ ಎಲ್‌ಇಡಿ ರನ್ನಿಂಗ್ ಲೈಟ್ ಮತ್ತು ಹಾವಿನ ಮೂತಿಯ ತಿರುವುಗಳನ್ನು ನೋಡಿ ಹೋಲಿಕೆ ಕಾಣಿಸದಿರದು. ಮಾರ್ಗನ್ ಏರೋ ಮಾರ್ಗನ್ ಏರೋ ಹೆಡ್‌ಲೈಟ್‌ಗಳು ಮತ್ತು ಬುಶ್‌ಬೇಬಿ ಕಣ್ಣುಗಳು ಒಂದೇ ರೀತಿ ಇವೆ. ಮಧ್ಯದಲ್ಲಿರುವ ಗ್ರಿಲ್ ಬುಶ್‌ಬೇಬಿಯ ಮೂಗಿನಂತಿದೆ. ಮಾರ್ಗನ್ ಏರೋ ಮನುಷ್ಯ ನಿರ್ಮಿತ ಸ್ಲೀಕ್ ಬಾಡಿ ಹೊಂದಿದ್ದು, ಪವರ್‌ಫುಲ್ ಎಂಜಿನ್ ಹೊಂದಿದೆ. ಸೂಪರ್ ಕಾರುಗಳ ವ್ಯಾಪ್ತಿಗೆ ಹೋಗುವ ಅರ್ಹತೆ ಹೊಂದಿದೆ. ಆದರೆ ಅದರ ಹೆಡ್‌ಲೈಟ್ ಮತ್ತು ಮುಂಭಾಗ ಬುಶ್‌ಬೇಬಿಯನ್ನು ಹೋಲುವುದು ಮಾತ್ರ ಸತ್ಯ. ಕುರೂಪಿ? ಹೌದು. ದಪ್ಪಗಿದೆ? ಹೌದು. ಮಣ್ಣು ನೀರಲ್ಲಿ ಹೊರಳಾಡಲು ಇಷ್ಟಪಡುತ್ತದೆ? ಅದೂ ಹೌದು. ಪೋರ್ಶೆ ಕಾಯ್ನೆ ಮತ್ತು ನೀರಾನೆ ಇವೆರಡೂ ಇದೇ ರೀತಿ ಇವೆ. ನೀರಾನೆಯಂತೆ ದೊಡ್ಡ ದೇಹ, ಕಣ್ಣುಗಳನ್ನು ಹೋಲುವ ಹೆಡ್‌ಲೈಟ್‌ಗಳು, ಮೂಗಿನ ಹೊಳ್ಳೆಗಳನ್ನು ಹೋಲುವ ಬಂಪರ್ ಹೋಲ್‌ಗಳು, ನೀರಾನೆಯಂತೆ ಕಾಯ್ನೆ ಕೂಡ ಮಣ್ಣು. ನೀರಿನಲ್ಲಿ ಓಡಾಡಿ ಯಶಸ್ವಿಯಾಗಿ ಮೇಲೆದ್ದು ಬರಬಲ್ಲದು. ದೊಡ್ಡ ದೊಡ್ಡ ಪ್ರಾಣಿಗಳ ಕತೆಯಾಯಿತು. ಶಾರ್ಕ್ ಆಯಿತು. ಉತ್ತರ ಅಮೆರಿಕದಲ್ಲಿ ಮಾರಾಟವಾಗುವ ಟೊಯೊಟಾ ಐಕ್ಯೂ ಕಾರು ಪೊರ್ಕ್ಯುಫೈನ್ ಎಂಬ ಮೀನನ್ನು ಹೋಲುತ್ತದೆ. ಮೂತಿ, ಮೀನಿನ ಕಿವಿಯಂತೆ ಬದಿಯ ಕನ್ನಡಿಗಳು ಕಾರನ್ನು ಥೇಟ್ ಮೀನಿನಂತೆ ಮಾಡಿವೆ. ಫಿಯೆಟ್ ಮಲ್ಟಿಪ್ಲಾ ಬಹುಶಃ ಪ್ರಪಂಚದಲ್ಲಿ ಅತ್ಯಂತ ಕೆಟ್ಟದಾಗಿ ವಿನ್ಯಾಸಗೊಂಡಿದ್ದಲ್ಲದೆ ಮಾರುಕಟ್ಟೆಗೂ ಬಂದ ಕಾರುಗಳಲ್ಲಿ ಫಿಯೆಟ್ ಮಲ್ಟಿಪ್ಲಾ ಕೂಡ ಒಂದು. ಆದರೆ ವಿಚಿತ್ರವೆಂದರೆ ಈ ಕಾರು ಡಕ್ ಬಿಲ್ಡ್ ಪ್ಲಾಟಿಪಸ್ (ಬಾತುಕೋಳಿ ಕೊಕ್ಕಿನ ಪ್ರಾಣಿ) ಹೋಲುತ್ತದೆ. ಈ ಪ್ರಾಣಿಯಾದರೆ ಕಾಲಾಂತರದ ಬದಲಾವಣೆ ಎಂದು ಸಹಿಸಿಕೊಳ್ಳಬಹುದು. ಆದರೆ ಫಿಯೆಟ್ ಕಂಪನಿಯವರು ಏನು ಸ್ಪಷ್ಟೀಕರಣ ಕೊಡುವುದು? ಯಾರನ್ನು ದೂರುವುದು? ಮರ್ಸಿಡೀಸ್ ಬೆನ್ಝ್ ಬಾಕ್ಸ್ ಫಿಶ್ 2005ರಲ್ಲಿ ಬಯೋನಿಕ್ ಕಾರ್ ಕಾನ್ಸೆಪ್ಟ್ ಮೇಳದಲ್ಲಿ ಮರ್ಸಿಡೀಸ್ ಕಂಪನಿ ಒಂದು ಮಾದರಿಯನ್ನು ಪ್ರದರ್ಶಿಸಿತ್ತು. ಅದರ ಹೆಸರೇ ಬಾಕ್ಸ್‌ಫಿಶ್ ಎಂದು. ಬಾಕ್ಸ್ ಫಿಶ್ ಎಂಬ ಮೀನಿದೆ. ಅದನ್ನೇ ಹೋಲುವ ಕಾರು ಮಾದರಿಯನ್ನು ನಿರ್ಮಿಸಿದ ಕಂಪನಿ ಅದಕ್ಕೆ ಬಾಕ್ಸ್ ಫಿಶ್ ಎಂದೇ ಹೆಸರಿಟ್ಟಿತ್ತು. ಈ ಮೀನು ಅತ್ಯಂತ ವೇಗವಾಗಿ ಚಲಿಸುವುದು. ಏರೋಡೈನಾಮಿಕ್ ದೇಹ ಹೊಂದಿದೆ. ಇದನ್ನೇ ಕಾರಿನ ನಿರ್ಮಾದಲ್ಲೂ ಅಳವಡಿಸಿಕೊಳ್ಳಲಾಗಿದೆ. ನಿಸಾನ್ ಕ್ಯೂಬ್ ನಿಸಾನ್ ಕಾರು ವಿನ್ಯಾಸಕಾರರು ಬುಲ್‌ಡಾಗ್ ನೋಡಿಯೇ ನಿಸಾನ್ ಕ್ಯೂಬ್ ಎಂಬ ಕಾರು ತಯಾರಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ಹೋಲಿಸಿ ಹೋಳಲು ಏನೂ ಉಳಿದಿಲ್ಲ. ಬುಲ್‌ಡಾಗ್ ಒಂದು ಕೂಲಿಂಗ್ ಗ್ಲಾಸ್ ಹೊಕಿಕೊಂಡಿರುವ ಕಲ್ಪನೆಯಲ್ಲಿ ಕಾರನ್ನು ರೂಪಿಸಲಾಗಿದೆಯಂತೆ. ಕಾಡಿನಿಂದ ಕಾಂಕ್ರೀಟ್ ಕಾಡಿಗೆ! ಕಾರುಗಳ ವಿನ್ಯಾಸ ಮಾತ್ರವಲ್ಲ ಅವುಗಳ ಹೆಸರಿನೊಂದಿಗೂ ಪ್ರಾಣಿಗಳ ನಂಟು ಥಳಕು ಹಾಕಿಕೊಂಡಿದೆ. ನಾವು ಬಳಸುತ್ತಿರುವ, ಪ್ರಯಾಣಿಸುವ ಅಥವಾ ನೋಡಿರುವ ಹತ್ತಾರು ಕಾರುಗಳು ಪ್ರಾಣಿಗಳ ಹೆಸರು ಹೊಂದಿವೆ. ಈ ಮೂಲಕ ಕಾಂಕ್ರೀಟ್ ಕಾಡಿನಲ್ಲೂ ಕಾರುಗಳ ಹೆಸರು ನೋಡಿ ಪ್ರಾಣಿಗಳನ್ನು ನೆನಪು ಮಾಡಿಕೊಳ್ಳಬಹುದು. ಕೆಲ ಕಾರುಗಳ ಹೆಸರು, ಪ್ರಾಣಿ ಹಾಗೂ ವಿನ್ಯಾಸಕ್ಕೂ ಸಂಬಂಧವಿಲ್ಲದಿರಬಹುದು. ಆದರೆ ಬಹುತೇಕ ಕಾರುಗಳಲ್ಲಿ ಸಾಮ್ಯತೆಯಿದೆ. ಬಾನಂಗಳದ ಹಕ್ಕಿಗಳು, ಸಮುದ್ರ ತಟದ ಮೀನುಗಳು ಹಾಗೂ ದಟ್ಟಾರಣ್ಯದಲ್ಲಿ ಪ್ರಾಣಿಗಳು ಈ ಹೆಸರಿನಲ್ಲಿ ಸೇರಿವೆ. ಒಂದು ವಿಶೇಷ ಸಂಗತಿಯೆಂದರೆ, ಬಹುತೇಕ ಹೆಸರುಗಳು ವ್ಯಗ್ರ ಪ್ರಾಣಿ ಅಥವಾ ಹಕ್ಕಿಗಳಾಗಿವೆ. ಪ್ಲೈ ಮೌತ್ ಕಂಪನಿಯು ಮೀನನ್ನು ಬಿಟ್ಟರೆ, ಫೋಕ್ಸ್‌ವ್ಯಾಗನ್ ಜೀರುಂಡೆಯನ್ನು ಹಾರಿಸುತ್ತ ಮೊಲದ ನೆಗೆತವನ್ನು ರಸ್ತೆಗೆ ತಂದಿದೆ. ಫೋರ್ಡ್ ಕಂಪನಿಗೆ ಕುದುರೆಯ ಮೇಲೆ ತುಸು ಹೆಚ್ಚು ಪ್ರೀತಿ ಇದ್ದಂತಿದೆ. ನಿಸಾನ್ ಕಂಪನಿಯು ಜೇನುನೋಣ ಹಾಗೂ ಪಕ್ಷಿಗಳ ಮೇಲೆ ಹೆಚ್ಚು ವ್ಯಾಮೋಹ ಬೆಳಸಿಕೊಂಡಿದೆ. 4ಕ್ಕೂ ಅಧಿಕ ಕಾರುಗಳನ್ನು ಕುದುರೆಯ ನಾನಾ ಪ್ರಬೇಧಗಳ ಹೆಸರಲ್ಲಿ ಹೊರತಂದಿದೆ. ಒಟ್ಟಿನಲ್ಲಿ ಹಕ್ಕಿಗಳ ಕಲರವ, ಕಾಡು ಪ್ರಾಣಿಗಳ ಗರ್ಜನೆ, ಸಮುದ್ರ ಜೀವಿಗಳ ನೆಗೆದಾಟಗಳು ಕಾರುಗಳ ಹೆಸರು ನೋಡಿದರೆ ನೆನಪು ಮಾಡುತ್ತವೆ. ಕಾಡಿನಲ್ಲಿ ಆ ಪ್ರಾಣಿಗಳ 'ಬಾಡಿ' ಅಳಿಯುತ್ತಿದ್ದರೂ ನಾಡಿನಲ್ಲಿ ಕಾರುಗಳ 'ಬಾಡಿ'ಯ ಮೇಲೆ ಹೆಸರನ್ನಾದರೂ ಕಾಣಬಹುದು. ಬ್ಯಾರಾಕೂಡ್ (ಮೀನು)- ಪ್ಲೈಮೌತ್ ಬೀಟಲ್ (ಜೀರುಂಡೆ)- ಫೋಕ್ಸ್‌ವ್ಯಾಗನ್ ಬ್ಲ್ಯಾಕ್‌ಹಾಕ್ (ಕಪ್ಪು ಗಿಡುಗ)- ಸ್ಟಝ್ ಬ್ಲೂಬರ್ಡ್ (ಅಮೆರಿಕ ಮೂಲದ ಪಕ್ಷಿ)- ನಿಸಾನ್ ಬ್ರೊಂಕೊ (ಕಾಡುಕುದುರೆ)- ಫೋರ್ಡ್ ಚೀತಾ- 1960ರ ಸ್ಪೋರ್ಟ್ಸ್ ಕಾರು ಕೋಬ್ರಾ (ಸರ್ಪ)- ಶೆಲ್ಬಿ ಫೋರ್ಡ್ ಕೂಗರ್ (ದೊಡ್ಡ ಬೆಕ್ಕು)- ಮರ್ಕ್ಯೂರಿ ಫಾಕ್ಸ್ (ನರಿ)- ಆಡಿ, ಫೋಕ್ಸ್‌ವ್ಯಾಗನ್ ಹನಿ ಬೀ(ಜೇನು ನೊಣ)- ನಿಸಾನ್ ಇಂಪಲಾ (ಚಿಗರೆ)- ಶೆವರ್ಲೆ ಜಾಗ್ವಾರ್ (ಚಿರತೆ)- ಎಸ್‌ಎಸ್ ಕಾರ್ಸ್ ಲಾರ್ಕ್ (ಕುಣಿಯುವ ಪಕ್ಷಿ)- ಸ್ಟುಡ್‌ಬೇಕರ್ ಮಾರ್ಲಿನ್ (ದೊಡ್ಡ ಮೀನು)- ಎಎಂಸಿ ಮುಸ್ತಂಗ್ (ಕುದುರೆ)- ಫೋರ್ಡ್ ರ್ಯಾಬಿಟ್ (ಮೊಲ)- ಫೋಕ್ಸ್‌ವ್ಯಾಗನ್ ಸ್ಪೈಡರ್ (ಜೇಡ)- ಪೋರ್ಶೆ ಸ್ಟಿಂಗ್ ರೇ (ಸಮುದ್ರ ಜೀವಿ)- ಶೆವರ್ಲೆ ಥಂಡರ್ ಬರ್ಡ್ (ರಣಹದ್ದು ಥರದ ಹಕ್ಕಿ)- ಫೋರ್ಡ್ - ವಕ್ರದಂತ