ಶಿಖರದ ತಡಿ ತಡಿಯಾಂಡ ಮೋಳ್ ರಾಜ್ಯದ ಎರಡನೇ ಅತಿ ಎತ್ತರದ ಶಿಖರ. ಈ ಶಿಖರ ಕೊಡಗು ಜಿಲ್ಲೆಯ ಕಕ್ಕಬ್ಬೆ ಪಟ್ಟಣದ ಸನಿಹದಲ್ಲಿದೆ. ಇದು ಕರ್ನಾಟಕ- ಕೇರಳ ಗಡಿಯಲ್ಲಿದ್ದು, ಸಮುದ್ರಮಟ್ಟದಿಂದ 1748 ಮೀಟರ್ ಎತ್ತರದಲ್ಲಿ ಭವ್ಯವಾಗಿ ನಿಂತಿದೆ. ಶಿಖರಗಾಮಿಗಳು ಮತ್ತು ಆರೋಹಿಗಳಿಗೆ ಈ ಶಿಖರ ಕಠಿಣ ಸವಾಲು. ತಡಿಯಾಂಡ ಮೋಳ್ ಮಲೆಯಾಳಂ ಮೂಲದ ಪದ. ಇದರರ್ಥ ಬೃಹತ್ ಪರ್ವತ. ಇದರ ಅರ್ಧ ದೂರವನ್ನು ವಾಹನದಲ್ಲಿ ಕ್ರಮಿಸಬಹುದು. ಶಿಖರದ ಕೆಳಗಿರುವ ನಲಕ್‌ನಾಡು ಆರಮನೆಗೆ ಚಾರಿತ್ರಿಕ ಮಹತ್ವವಿದೆ. ತನ್ನ ಸೈನ್ಯಕ್ಕೆ ಸುರಕ್ಷಿತ ತಂಗುದಾಣವಾಗಿ ಇದನ್ನು ಮಹಾರಾಜಾ ದೊಡ್ಡವೀರರಾಜೇಂದ್ರರು 1792ರಲ್ಲಿ ಕಟ್ಟಿಸಿದರು.