ಹೊಂಡಾ ಜಾಝ್ ನಿಂತಿತು, ಮುಂದೆ...? ಹೊಂಡಾ ಕಂಪನಿಯ ಆಕರ್ಷಕ ಮಾದರಿಗಳಲ್ಲಿ ಒಂದಾಗಿದ್ದ, ಸಾಕಷ್ಟು ಜನಪ್ರಿಯವೂ ಆಗಿದ್ದ ಜಾಝ್ ಕಾರುಗಳ ಉತ್ಪಾದನೆ ಸ್ಥಗಿತಗೊಳಿಸಿದೆ. ಮಾರಾಟಗಾರರು ಕೂಡ ಹೊಸದಾಗಿ ಜಾಝ್ ಕಾರುಗಳ ಬುಕಿಂಗ್ ಸ್ಥಗಿತಗೊಳಿಸಿದ್ದಾರೆ. ಈವರೆಗೆ ಯಾರು ಕಾರನ್ನು ಬುಕ್ ಮಾಡಿದ್ದಾರೋ ಅವರಿಗೆ ಜಾಝ್ ಕಾರು ನೀಡುವುದಾಗಿ ಕಂಪನಿ ಹೇಳಿದೆ. 2011ರಲ್ಲಿ ಹೊಂಡಾ ಕಂಪನಿ ಜಾಝ್ ಸೇರಿದಂತೆ ಕೆಲವು ಕಾರುಗಳ ದರ ಕಡಿತ ಮಾಡಿತ್ತು. ಬಳಿಕ ಜಾಝ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ದರ ಕಡಿತದಿಂದ ಕಂಪನಿಗೆ ನಷ್ಟವಾಗುತ್ತಿತ್ತು. ಇದೇ ಕಾರಣಕ್ಕೆ ಜಾಝ್ ಉತ್ಪಾದನೆ ಸ್ಥಗಿತಗೊಳಿಸಲು ನಿರ್ಧರಿಸಲಾಯಿತು ಎನ್ನಲಾಗುತ್ತಿದೆ. ಇನ್ನೊಂದು ಮೂಲದ ಪ್ರಕಾರ ಹೊಂಡಾ 'ಅಮೇಝ್‌' ಎಂಬ ಹೊಸ ಕಾರನ್ನು ಮಾರುಕಟ್ಟೆಗೆ ಬಿಡಲು ಸಿದ್ಧವಾಗಿದೆ. ಮೊದಲ ಬಾರಿಗೆ ಡೀಸೆಲ್ ಎಂಜಿನ್ ಅಳವಡಿಸಲೂ ನಿರ್ಧರಿಸಿದೆ. ಹೊಸ ಕಾರಿನ ಉತ್ಪಾದನೆಗೆ ಅನುಕೂಲ ಮಾಡಿಕೊಡಲು ಜಾಝ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ ಎಂದೂ ಹೇಳಲಾಗುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ಗ್ರಾಹಕರಿಂದ ಬೇಡಿಕೆ ಹೆಚ್ಚಿದ್ದರೂ ತಿಂಗಳಿಗೆ 400 ಜಾಝ್ ಕಾರುಗಳನ್ನು ಮಾತ್ರ ನೀಡಲಾಗುತ್ತಿತ್ತು. ಇದರಿಂದಾಗಿ ಗ್ರಾಹಕರು ಜಾಝ್‌ಗಾಗಿ ಸಾಕಷ್ಟು ಕಾಯುವಂತಾಗಿತ್ತು. ಆದರೆ ಹೊಂಡಾ ಸಿವಿಕ್‌ನಂತೆ ಜಾಝ್ ಉತ್ಪಾದನೆಯನ್ನು ಕಾಯಂ ಸ್ಥಗಿತಗೊಳಿಸುವುದಿಲ್ಲ. ಕೆಲಸಮಯದ ನಂತರ ಮತ್ತೆ ಹೊಸ ಅವತಾರದಲ್ಲಿ ಬರಲಿದೆ ಎಂದು ಕಂಪನಿ ಮೂಲಗಳು ಹೇಳುತ್ತಿವೆ.