ಹಂಪಿ ಹೊಳೆ ಈ ದಿನಗಳಲ್ಲಿ ತುಂಗಭದ್ರೆ ಥೇಟ್ ಬಿನ್ನಾಣಗಿತ್ತಿ. ನರ್ತಿಸುತ್ತಾ, ವಯ್ಯಾರ ಮಾಡುತ್ತಾ,... ಈ ದಿನಗಳಲ್ಲಿ ತುಂಗಭದ್ರೆ ಥೇಟ್ ಬಿನ್ನಾಣಗಿತ್ತಿ. ನರ್ತಿಸುತ್ತಾ, ವಯ್ಯಾರ ಮಾಡುತ್ತಾ, ಅಂಕುಡೊಂಕಾಗಿ ತಳಕುತ್ತ-ಬಳಕುತ್ತ, ಒಮ್ಮೊಮ್ಮೆ ಗಜ ಗಾಂಭೀರ್ಯ ತೋರುತ್ತ, ಮಗದೊಮ್ಮೆ ರಭಸವಾಗಿ ಅಬ್ಬರಿಸುತ್ತ...ಹೇಗೆ ಹರಿದರೂ ರುದ್ರರಮಣೀಯ. ನೋಡುಗರ ಮನಸ್ಸಿಗೆ ಮುದ, ಆಹ್ಲಾದ. ಈ ವೇಳೆ ತನ್ನ ಹರಿವಿನ ಉದ್ದಕ್ಕೂ ಅದು ಸೃಷ್ಟಿಸುವ ಸಂಗೀತ, ಜುಳು-ಜುಳು ನಿನಾದದ ಸೊಬಗಿಗೆ ಅವಳಿಗೆ ಅವಳೇ ಸಾಟಿ. ತುಂಗಭದ್ರೆ ಮೈದುಂಬಿ ಹರಿಯುವಾಗ ಹಂಪಿಯ ಸ್ಮಾರಕಗಳು, ಮಂಟಪಗಳು, ದೊಡ್ಡದೊಡ್ಡ ಬಂಡೆಗಳು ನೀರಿನ ಮೇಲೆ ತೇಲುತ್ತಿವೆಯೇನೋ ಎನ್ನುವ ಭಾವ ಹುಟ್ಟಿಸುತ್ತವೆ. ಮತ್ತೆ ಕೆಲವೆಡೆ ನೀರು ಚದುರುವುದು, ಮತ್ತೆ ಸಂಗಮವಾಗಿ ಇನ್ನಷ್ಟು ವೇಗ ಪಡೆದುಕೊಂಡು ಹಾಲ್ನೊರೆ ಸೃಷ್ಟಿಸುವುದು. ನಡುನಡುವೆ ಸಣ್ಣಸಣ್ಣ ತೊರೆ, ಝರಿಗಳ ಆಟೋಟ... ಹೀಗೆ ಹೊಳೆಯ ಪಾರುಪತ್ಯ ಹಿಡಿ ಹಂಪಿಯನ್ನು ತನ್ನ ತೆಕ್ಕೆಗೆ ಎಳೆದುಕೊಂಡು ಅನಿರ್ವಚನೀಯ ಅನುಭವಕ್ಕೆ ಅನುವು ಮಾಡಿಕೊಡುತ್ತದೆ. ಇದರೊಂದಿಗೆ ಆಗಸದಲ್ಲಿ ಕಪ್ಪು ಕಟ್ಟಿದ ಮೋಡಗಳ ದಿಬ್ಬಣ. ಸೂರ್ಯೋದಯ, ಸೂರ್ಯಾಸ್ತಗಳ ಹೊತ್ತಿನಲ್ಲಿ ಅವಳ ಮೈಮೇಲೆ ಬೀಳುವ ಹೊಂಗಿರಣಗಳು ಹೊಸತೇ ಆದ ಸೌಂದರ್ಯ ಲೋಕವೊಂದನ್ನು ಅನಾವರಣ ಮಾಡುತ್ತವೆ. ಒಟ್ಟಾರೆಯಾಗಿ ಮೈದುಂಬಿ ಹರಿಯುವ ಹೊಳೆಯಿಂದ ಹುಟ್ಟುವ ಆ ಅದ್ಭುತ, ಅಸೀಮ ಸೌಂದರ್ಯ ಒಂದು ತೆರನಾದ ಉನ್ಮಾದತೆ ಮೂಡಿಸುತ್ತದೆ. ಹೊಳೆ ತುಂಬಿ ಹರಿಯುತ್ತಿದೆ ಎನ್ನುವುದು ಗೊತ್ತಾದರೆ ಸಾಕು, ಸಾವಿರಾರು ಪ್ರವಾಸಿಗರು ಹಂಪಿಯತ್ತ ಮುಖ ಮಾಡುತ್ತಾರೆ. ಮಳೆಗಾಲದಲ್ಲಿ ಹಂಪಿಗೆ ಹೊಳೆ ವಿಶೇಷ ಮೆರಗು ನೀಡುತ್ತದೆ. ಪುಷ್ಕರಣಿಗಳು, ಕೊಳಗಳು ಮೈದುಂಬಿಕೊಂಡರೆ, ನದಿಯ ಇಕ್ಕೆಲಗಳಲ್ಲಿ ಹಸಿರು ನಳನಳಿಸುತ್ತದೆ. ಸೊಬಗು ಸವಿಯೋಣ ಮಳೆಗಾಲದಲ್ಲಿ ತುಂಗಭದ್ರೆಯ ವಿಭಿನ್ನ ಅವತಾರ, ಆಯಾಮಗಳನ್ನು ಕಣ್ಣುತುಂಬಿಕೊಳ್ಳಲು ಕೆಲವು ಸೂಕ್ತ ಸ್ಥಳಗಳಿವೆ. ಮುಖ್ಯವಾಗಿ ಮಾತಂಗ ಪರ್ವತ ಇದಕ್ಕೆ ಹೇಳಿ ಮಾಡಿಸಿದ ತಾಣ. ಇಲ್ಲಿಂದ ಹೊಳೆಯ ಸೌಂದರ್ಯ ವೀಕ್ಷಣೆಯಷ್ಟೇ ಅಲ್ಲ, ಹಂಪಿಯ ವಿಹಂಗಮ ನೋಟ ಸಾಧ್ಯ. ಇನ್ನು, ಆನೆಗೊಂದಿ ಸೇತುವೆ, ಚಕ್ರತೀರ್ಥ, ಕೋದಂಡರಾಮ, ಚಂದ್ರಮೌಳಿ ದೇವಸ್ಥಾನ, ತುಂಗಭದ್ರಾ ಆಣೆಕಟ್ಟೆ, ಅಂಜನಾದ್ರಿ ಪರ್ವತ... ಇತ್ಯಾದಿ ತಾಣಗಳಿಂದ ಹೊಳೆಯ ಸೊಬಗು ಸವಿಯಲು ಅಡ್ಡಿಯಿಲ್ಲ. ಮಳೆಗಾಲದ ಜಲ ವೈಭವ ತಗ್ಗಿದರೂ ಹೊಳೆಯ ಜಾಡು ಹಿಡಿದು ಸಾಗಿದರೆ ಮತ್ತೊಂದು ಸೊಬಗು ಸವಿಯಲು ಸಾಧ್ಯವಿದೆ. ಅದುವೇ ತುಂಗಭದ್ರೆಯ ಕೈಚಳಕದಿಂದ ಸೃಷ್ಟಿಯಾದ ಅಸಂಖ್ಯಾತ ಕಲಾಕೃತಿಗಳು. ಅದಕ್ಕೆ ಇಲ್ಲಿನ ವಂಡರ್ ಫಾಲ್ಸ್ ಸಾಕ್ಷಿ. ಇಲ್ಲೆಲ್ಲಾ ಅಮೂರ್ತ, ಕಲ್ಪನೆಗೂ ಮೀರಿದ ಕಲಾಕೃತಿಗಳು ಸೃಷ್ಟಿಯಾಗಿವೆ. ಜಕಣಾಚಾರಿಯನ್ನೂ ಮೀರಿಸುವಂತಹ ಚಾಕಚಕ್ಯತೆ ಅಡಗಿರುವ ಕಲಾಕೃತಿಗಳಿವೆ. ನೀರಿನ ರಭಸ, ಕೊರೆತಕ್ಕೆ ಇಲ್ಲೆಲ್ಲಾ ಕಲ್ಲರಳಿ ಕಲೆಯಾಗಿ ನಿಂತಿವೆ. ತುಂಗಭದ್ರೆಯ ಕೈಚಳಕಕ್ಕೆ ಕರಗದ ಕಲಾರಾಧಕನಿಲ್ಲ. ಹೊಳೆಯ ಉದ್ದಕ್ಕೂ ಪ್ರತಿ ಕಲ್ಲಿನಲ್ಲಿಯೂ ಕಲೆ ಹುದುಗಿದೆ. ಹೀಗಾಗಿ ಪ್ರವಾಸಿಗರಿಗೆ ಹಂಪಿ ಮಡಿಲಲ್ಲಿ ಹೊಳೆ ಹರಿದರೂ ಚೆನ್ನ ಬತ್ತಿದರೂ ಚೆನ್ನ. - ಸ್ವರೂಪಾನಂದ ಎಂ. ಕೊಟ್ಟೂರು