ಓ ಬಬಿಯಾ... ನೀನೆಷ್ಟು ನಿಗೂಢ! ಸುಂದರ ಪರಿಸರದಲ್ಲಿರುವ, ನೋಡಿದಷ್ಟೂ ಸಾಕೆನಿಸದ ಕೊಳ, ಕೊಳದ ತುಂಬೆಲ್ಲಾ... ಸುಂದರ ಪರಿಸರದಲ್ಲಿರುವ, ನೋಡಿದಷ್ಟೂ ಸಾಕೆನಿಸದ ಕೊಳ, ಕೊಳದ ತುಂಬೆಲ್ಲಾ ತುಂಬಿಕೊಂಡಿರುವ ದೇವರ ಮೀನು, ಕ್ಷೇತ್ರದ ಆರಾಧ್ಯದೈವ ಅನಂತಪದ್ಮನಾಭ ಮುನಿಸಿಕೊಂಡು ತಿರುವನಂತಪುರಕ್ಕೆ ಈ ಮೂಲಕ ಸಾಗಿದನೆಂದು ಸಾರುವ ಗುಹೆ....ಇವಿಷ್ಟರ ಬಗ್ಗೆಯೇ ಮೊಗೆದಷ್ಟೂ ವಿಷಯಗಳಿರುವಾಗ....ಈ ಕೊಳದ ಒಂಟಿ ಮೊಸಳೆ ಕೂಡ ಅಚ್ಚರಿಯ ಸಂಗತಿ. ವೈಕುಂಠದ ಕಾವಲುಗಾರ ವರುಣ. ಆ ವರುಣನೇ ಅನಂತಪುರ ಕ್ಷೇತ್ರದ ಕಾವಲುಗಾರ ಮೊಸಳೆ ಎಂಬುದು ಪುರಾಣತಜ್ಞರ ಅಭಿಮತ. ಎಲ್ಲರೂ ಪ್ರೀತಿಯಿಂದ ಬಬಿಯಾ ಎಂದು ಕರೆಯುವ ಈ ಮೊಸಳೆ ಯಾವಾಗ, ಎಲ್ಲಿಂದ, ಹೇಗೆ ಬಂತು ಎಂಬುದು ನಿಗೂಢ. ಅದು ಗಂಡೋ ಅಥವಾ ಹೆಣ್ಣೋ ಎಂದೂ ತಿಳಿದಿಲ್ಲ. ಆದರೆ ಸ್ವಾತಂತ್ರ್ಯಪೂರ್ವದಿಂದಲೂ ಇದು ಇಲ್ಲಿ ಇದೆ ಎಂದು ಬಲ್ಲ ಹಿರಿಯರು ಹೇಳುತ್ತಾರೆ. ಈಗ ಇಲ್ಲಿರುವುದು ಎರಡನೇ ಮೊಸಳೆಯಂತೆ. ಇದರ ಪ್ರಾಯವೇ 60ರ ಮೇಲಾಗಿರಬಹುದೆಂದು ಅಂದಾಜಿಸಲಾಗಿದೆ. ಸಾಮಾನ್ಯವಾಗಿ ಮಾಂಸಾಹಾರಿ ಮೊಸಳೆ ಆಹಾರ ದೊರೆಯದಾದಾಗ ಎದುರು ಸಿಕ್ಕ ಪ್ರಾಣಿಯ ಮೇಲೆ ಸಹಜವಾಗೇ ದಾಳಿ ನಡೆಸುತ್ತದೆ. ಆದರೆ ಇಲ್ಲಿರುವ ದೇವರ ಮೊಸಳೆ ಯಾರ ಮೇಲೂ ಈವರೆಗೂ ದಾಳಿ ನಡೆಸಿದ ಉದಾಹರಣೆ ಇಲ್ಲ. ದೇವಸ್ಥಾನದ ಕೊಳದಲ್ಲಿ ಒಂಟಿಯಾಗಿ ಹೀಗೆ ಜೀವಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ವಿಜ್ಞಾನದಲ್ಲಿ ಉತ್ತರವಿಲ್ಲ. ಗುಂಡಿಟ್ಟು ಕೊಂದವ ತಾನೂ ಸತ್ತ ಬಬಿಯಾ ಬಗ್ಗೆ ಹಲವು ದಂತಕಥೆಗಳಿವೆ. ಅವುಗಳಲ್ಲಿ ಒಂದು ಹಿಂದಿನ ಮೊಸಳೆ ಬಗ್ಗೆ. ಮಧ್ಯಾಹ್ನದ ಪೂಜೆ ವೇಳೆ ಅರ್ಚಕರಿಂದ ಅನ್ನ ನೈವೇದ್ಯ, ಪ್ರಸಾದ ಸ್ವೀಕರಿಸಿ ಹೋಗುತ್ತಿದ್ದ ಈ ಮೊಸಳೆ ಕೊಳದ ಅವಿಭಾಜ್ಯ ಅಂಗವಾಗಿತ್ತು. ಬಬಿಯಾ ಎಂದು ಕೂಗಿದೊಡನೆ ಸರ್ರನೆ ಬಂದು ಯಾರಾದರೂ ಆಹಾರ ನೀಡಿದರೆ ಸಂತೋಷದಿಂದ ಸ್ವೀಕರಿಸಿ ತೆರಳುತ್ತಿತ್ತು. ಸ್ವಾತಂತ್ರ್ಯಪೂರ್ವದಲ್ಲಿ (ಸುಮಾರು 1945ರಲ್ಲಿ) ಈ ವಿಷಯಗಳನ್ನು ಹೇಗೋ ಕೇಳಿ ತಿಳಿದ ಬ್ರಿಟಿಷ್ ಸೈನಿಕರು ಇದನ್ನು ತಮಾಷೆಯಾಗಿ ಪರಿಗಣಿಸಿ ಪರೀಕ್ಷಿಸಲು ಬಂದರಂತೆ. ಬಂದವರು 'ಬಬಿಯಾ' ಎಂದು ಕರೆದಾಗ ಸಹಜವಾಗಿಯೇ ಕೊಳದ ಮೇಲೆ ಬಂತು. ಆಗ ಒಬ್ಬ ಸೈನಿಕ ತನ್ನ ಬಂದೂಕಿನಿಂದ ಅದರ ಹಣೆಗೆ ಗುರಿಯಿಟ್ಟು ಗಂಡು ಹಾರಿಸಿದ. ಬಬಿಯಾ ಸತ್ತಿತು. ಆದರೆ ಸೈನಿಕ ಬಂದೂಕಿನ ಗುಂಡಿ ಅದುಮಿ ತೆಗೆಯುವಷ್ಟರಲ್ಲೇ ದೇವಸ್ಥಾನದ ಪರಿಸರದಲ್ಲಿರುವ ಅಶ್ವತ್ಥ ಮರದಿಂದ ವಿಷಜಂತುವೊಂದು ಆತನ ಮೈಮೇಲೆ ಹಾರಿ ಘಾಸಿಗೊಳಿಸಿತಂತೆ. ಆತ ಆಸ್ಪತ್ರೆ ದಾರಿಯಲ್ಲೇ ಮರಣವನ್ನಪ್ಪಿದ. ದೇವ ಮೊಸಳೆಯೆಂಬ ನಂಬಿಕೆ ಭಕ್ತರಲ್ಲಿ ಇದ್ದುದರಿಂದ ಮನುಷ್ಯನಿಗೆ ಮಾಡುವಂತೆ ಮೊಸಳೆಗೂ ಸಂಸ್ಕಾರ ಮಾಡಿದರು. ಈ ಬಗ್ಗೆ ಸ್ಪಷ್ಟ ನೆನಪುಗಳನ್ನು ಹೊಂದಿರುವ ಹಿರಿಯರು ಪರಿಸರದಲ್ಲಿ ಇದ್ದಾರೆ. ಬಬಿಯಾ ಮತ್ತೆ ಪ್ರತ್ಯಕ್ಷ ಕೆಲವೇ ಸಮಯದಲ್ಲಿ ಈ ನೋವು ಮರೆಸಲೆಂಬಂತೆ ಹಿಂದಿನ ಮೊಸಳೆ ಜಾಗದಲ್ಲಿ ಮತ್ತೊಂದು ಮೊಸಳೆ ಕಾಣಿಸಿಕೊಂಡಿತ್ತು. ಭಕ್ತರು ಅದನ್ನೂ ಬಬಿಯಾ ಎಂದೇ ಕರೆದರು. ಅದೇ ಈಗಿರುವ ಮೊಸಳೆ. ಇದು ಸುಖಾಸುಮ್ಮನೆ ಕಾಣಿಸಿಕೊಳ್ಳುವುದಿಲ್ಲ. ಒಂದು ಬಾರಿ ಮಾನವನಿಂದ ಆಗಿರುವ ಮೋಸವೇ ಇದಕ್ಕೆ ಕಾರಣ ಎಂಬುದು ಭಕ್ತರ ಅಂಬೋಣ. ಮೊದಲು ದೇವಸ್ಥಾನದ ಕೊಳದಲ್ಲೇ ಓಡಾಡುತ್ತಿದ್ದುದು, ಈಗ 100 ಮೀ. ದೂರದಲ್ಲಿರುವ ವನಶಾಸ್ತಾರ ಬನಕ್ಕೆ ತಾಗಿಕೊಂಡಿರುವ ಮಗದೊಂದು ಕೊಳದಲ್ಲೂ ವಿಶ್ರಾಂತಿ ಪಡೆಯುತ್ತದೆ. ರಾತ್ರಿ ಹೊತ್ತು ಎರಡು ಕೊಳಗಳ ನಡುವಿನ ಅಂತರದಲ್ಲಿ ತೆವಳಿಕೊಂಡೇ ಸಾಗುವುದು ಇದರ ದಿನಚರಿಯಲ್ಲೊಂದು. ಇದರ ಹಾದಿಯಲ್ಲಿ ದನಕರುಗಳು ಮಲಗಿಕೊಂಡೇ ಇದ್ದರೂ ಸಮಸ್ಯೆ ಎದುರಾಗಿಲ್ಲ. ಅದೃಷ್ಟವಿದ್ದರೆ ದರ್ಶನ ಭಾಗ್ಯ ದೇವಸ್ಥಾನದ ಆರಾಧ್ಯದೈವ ಅನಂತಪದ್ಮನಾಭನ ದರ್ಶನದೊಂದಿಗೆ ಜನ ಇದರ ದರ್ಶನಕ್ಕೂ ಕಾತುರದಿಂದ ಕಾಯುತ್ತಾರೆ. ತನಗೆ ಮನಸಾದರೆ ಮಾತ್ರ ಕಾಣಿಸಿಕೊಳ್ಳುವ ಬಬಿಯಾ ಕಂಡರೆ ಬಹಳ ಅದೃಷ್ಟವೆಂಬ ನಂಬಿಕೆ ಜನರಲ್ಲಿದೆ. ನೋಡಲೆಂದೇ ಬಂದು ದಿನವಿಡೀ ಕಾದು ನಿರಾಸೆಯಾಗುವುದೂ ಇದೆ. ಬಬಿಯಾ ಎದುರು ಸಿಕ್ಕಾಗ ಇಷ್ಟಗಳನ್ನು ಬೇಡಿಕೊಂಡರೆ ಸಿದ್ಧಿಸುತ್ತದೆಂದು ಹರಕೆ ಹೊತ್ತುಕೊಳ್ಳುವವರಿದ್ದಾರೆ. ಎಂಟು ಅಡಿ ಉದ್ದವಿರುವ ಮೊಸಳೆ ವಿಶ್ರಾಂತಿ ತೆಗೆದುಕೊಳ್ಳಲೆಂದು ಕೊಳದ ಮೇಲೆ ಬಂದು ಮಲಗುವುದಿದೆ. ಅದೃಷ್ಟವಿದ್ದರೆ ಸದ್ದು ಮಾಡದೆ ನೋಡಿ ಹೋಗಬಹುದು. ಸದ್ದುಗದ್ದಲ ಮಾಡಿ ಅದಕ್ಕೆ ಕಿರಿಕಿರಿಯಾಯಿತೆಂದರೆ, ಒಡನೆಯೇ ನೀರಿಗೆ ಹಾರುತ್ತದೆ. ಮತ್ತೆ ಎಷ್ಟು ಕರೆದರೂ ಬಬಿಯಾ ಬರುವುದು ಅದಕ್ಕೆ ಮನಸಾದಾಗಲೇ... ಹೀಗೆ ಬನ್ನಿ ಕಾಸರಗೋಡಿನ ಕುಂಬ್ಳೆಗೆ ಮಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬರುವುದಾದರೆ 38 ಕಿ.ಮೀ. ಅಲ್ಲಿಂದ ಬದಿಯಡ್ಕ ದಾರಿಯಲ್ಲಿ 4 ಕಿ.ಮೀ. ದೂರದಲ್ಲಿರುವ ನಾಯ್ಕಾಪಿನಿಂದ ಬಲಕ್ಕೆ ತಿರುಗಿ ಸಾಗಿದರೆ 1 ಕಿ.ಮೀ.ನೊಳಗಿದೆ ಅನಂತಪುರ ದೇವಸ್ಥಾನ. ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಉಪ್ಪಿನಂಗಡಿ (ಬೆಂಗಳೂರಿನಿಂದ 300 ಕಿ.ಮೀ.)ಯಿಂದ ಪುತ್ತೂರು- ವಿಟ್ಲ- ಬದಿಯಡ್ಕ ಮಾರ್ಗವಾಗಿ ಸಾಗಿದರೆ 67 ಕಿ.ಮೀ. - ಗಣೇಶ ಪ್ರಸಾದ್ ಕುಂಬ್ಳೆ ಚಿತ್ರಗಳು- ಉಮಾಶ್ರೀ ಯು.ಎಸ್.