ಏನ್ರಿ.... ಕೆಲ್ಸ ಇದೆಯಾ? ರಾಯಚೂರಿನ ಹೃದಯ ಭಾಗವಾದ ತೀನ್ಕಂದಿಲ್ ವೃತ್ತದಲ್ಲಿ ಬೆಳ್ಳಂಬೆಳಗ್ಗೆ ಹಾಗೆ ಸುಮ್ಮನೆ ಹೋಗಿ, ಅಲ್ಲಿನ ಕಲ್ಲಾನೆ ಮುಂದೆ ಸ್ವಲ್ಪ ಹೊತ್ತು ನಿಲ್ಲುತ್ತಲೇ 'ಏನ್ರೀ ಕೆಲ್ಸ ಇದೆಯಾ?' ಎಂದು ಹತ್ತಾರು ಕೂಲಿ ಕಾರ್ಮಿಕರು ನಮ್ಮನ್ನು ಆವರಿಸಿ ಬಿಡುತ್ತಾರೆ! ಈ ಪ್ರಮಾಣದ ನಿರುದ್ಯೋಗದ ಸಮಸ್ಯೆ ರಾಯಚೂರಿನಲ್ಲಿದೆ. ಸುಮಾರು 50ಕ್ಕಿಂತಲೂ ಹೆಚ್ಚು ಕೂಲಿ ಕಾರ್ಮಿಕರು ದಿನಗೂಲಿಗಾಗಿ ಜಿಲ್ಲೆಯ ಸುತ್ತಮುತ್ತಲಿನ ಹಳ್ಳಿಗಳಿಂದ ಬುತ್ತಿಕಟ್ಟಿಕೊಂಡು ಜೊತೆಗೆ ಕೆಲಸದ ಪರಿಕರಗಳಾದ ಸಲಾಕೆ, ಪುಟ್ಟಿ, ಗುದ್ದಲಿ, ಹಾರೆ ಇನ್ನೂ ಮುಂತಾದ ಸಲಕರಣೆಗಳ ಸಮೇತ ಕೆಲಸ ಅರಸುತ್ತಾ ಬರುತ್ತಾರೆ. ಆದರೆ ಗುಂಪು ಗುಂಪಾಗಿ ಬರುವ ಇವರಲ್ಲಿ ಕೆಲವರಿಗೆ ಮಾತ್ರ ಕೆಲಸ. ಸಿಕ್ಕ ಕೆಲಸದಿಂದ ಬರುವ ಹಣ ಅತ್ಯಲ್ಪ. ಹಲವು ಬಾರಿ ಮರಳಿ ತಮ್ಮೂರಿಗೆ ಹೋಗುವುದಕ್ಕೂ ಇವರ ಬಳಿ ಕಾಸಿರುವುದಿಲ್ಲ. 'ಬದುಕು ಭಾಳ ಕಷ್ಟ ಆಗೈತೆ ಬುದ್ದಿ, ವಸಿ ಕೆಲ್ಸ ಕೊಡ್ಸಿ' ಎನ್ನುವ ಇವರನ್ನು ನೋಡಿದರೆ ನಮ್ಮ ಸರ್ಕಾರದ ವಿವಿಧ ಯೋಜನೆಗಳು ಎಲ್ಲಿ ಕಾಣೆಯಾಗಿವೆ ಎಂದು ಹುಡುಕುವಂತಾಗುತ್ತದೆ. ಕೆಲಸವನ್ನು ಅರಸಿ ಬೆಂಗಳೂರಿನಂಥ ದೊಡ್ಡ ಪಟ್ಟಣಗಳಿಗೆ ವಲಸೆ ಹೋಗುವುದು ಇಲ್ಲಿ ನಿರಂತರ ಪ್ರಕ್ರಿಯೆ. -ಈರಣ್ಣ ಬೆಂಗಾಲಿ