ಮ್ಯಾಕ್ಸಿಕೋಗೆ ಫಿಗೋ ಫೋರ್ಡ್ ಸಂಸ್ಥೆಗೆ ಭಾರತದಲ್ಲೊಂದು ನೆಲೆ ದೊರಕಿಸಿದ್ದೇ ಫಿಗೋ ಎಂಬ ಸಣ್ಣ ಕಾರು. ಈಗಾಗಲೇ 80,000 ಫಿಗೋ ಮಾರಾಟವಾಗಿದ್ದು ಇದಕ್ಕೆ ಸಾಕ್ಷಿ. ಇತರೆ ಸಣ್ಣ ಕಾರುಗಳಿಗೆ ಹೋಲಿಸಿದರೆ ಸ್ವಲ್ಪ ಶಬ್ದ ಜಾಸ್ತಿ ಮತ್ತು ಎತ್ತರ ಕಡಿಮೆ ಎಂಬುದು ಬಿಟ್ಟರೆ, ಸಕತ್ ಕಾರು ಇದು. ಅದಕ್ಕೆ ಬಿಡುಗಡೆಯಾದ ಮೊದಲ ವರ್ಷದಲ್ಲಿ ಅತ್ಯಂತ ಹೆಚ್ಚು ಪ್ರಶಸ್ತಿ ಪಡೆದ ಕಾರು ಎಂಬ ಹೆಮ್ಮೆಗೆ ಪಾತ್ರವಾಯಿತು. ಫೋರ್ಡ್ ಸಂಸ್ಥೆಯ ಕಾರು ಮಾರಾಟದಲ್ಲಿ ಸಿಂಹಪಾಲು ಫಿಗೋ ಕಾರಿನದ್ದು. ಇದರ ಪರಿಣಾಮವಾಗಿಯೇ ಫೋರ್ಡ್ ಇಂಡಿಯಾ ಸಂಸ್ಥೆ ಫಿಗೋ ಕಾರಿನ ರಫ್ತು ಅವಕಾಶಗಳತ್ತ ಗಮನಹರಿಸುತ್ತಿದೆ. ಈಗಾಗಲೇ 50 ದೇಶಗಳಿಗೆ ಫಿಗೋ ರಫ್ತಾಗುತ್ತಿದೆ. ಸದ್ಯದ ಹೊಸ ಸುದ್ದಿಯೆಂದರೆ ಫೋರ್ಡ್ ಫಿಗೋ ಮೆಕ್ಸಿಕೋಗೂ ರಫ್ತಾಗಲಿದೆ. ಇದು ಮೆಕ್ಸಿಕೋದಲ್ಲಿ ಮಾರಾಟವಾಗುವ ಭಾರತದಿಂದ ಆಮದಾದ ಮೊದಲ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಮೊದಲ ಕಂತಿನಲ್ಲಿ ಮೆಕ್ಸಿಕೋಗೆ 1500 ಫಿಗೋ ಕಾರುಗಳು ತೆರಳಲಿವೆ. ಫೋರ್ಡ್‌ಫಿಗೋ ನಮ್ಮ ಪಕ್ಕದ ಚೆನ್ನೈನಲ್ಲಿ ತಯಾರಾಗುತ್ತಿದೆ. ರಫ್ತು ಹಾಗೂ ಭಾರತೀಯ ಮಾರುಕಟ್ಟೆಯ ಬೇಡಿಕೆಗನುಗುಣವಾಗಿ ಫಿಗೋ ಉತ್ಪಾದನೆ ಹೆಚ್ಚಿಸುವ ಅಗತ್ಯದ ಕುರಿತೂ ಕಂಪನಿ ಯೋಜನೆ ರೂಪಿಸುತ್ತಿದೆ. 2015ರ ಒಳಗೆ 8 ಹೊಸ ಕಾರುಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುವ ಉದ್ದೇಶಹೊಂದಿದೆ.