ಗೋಲಾರಿ ವಯ್ಯಾರಿ ಗುಡ್ಡದ ತುದಿಯಿಂದ ಹಾಲ್ನೊರೆ ಉಕ್ಕಿದಂತೆ ಕಣಿವೆ ಆಳಕ್ಕೆ ಧುಮ್ಮಿಕ್ಕುವ ಸೊಬಗು, ಅಕ್ಕಪಕ್ಕದ ಕಾನನದ ನಡುವಿನಿಂದ ಕಿವಿಯನ್ನು ಇಂಪಾಗಿ ತಟ್ಟುವ ಹಕ್ಕಿಗಳ ದನಿ, ಜೊತೆ ಜೊತೆಯಲ್ಲಿ ಜಲಪಾತ ವೀಕ್ಷಣೆಗೆ ಬಂದ ಪ್ರವಾಸಿಗರ ಹರ್ಷದ ಕೇಕೆ. ಈ ಎಲ್ಲವೂ ಮಿಳಿತವಾಗಿರುವುದು ಕಾರವಾರ ತಾಲೂಕಿನ ತೊಡೂರು ಗ್ರಾಮದ ಅರಣ್ಯದ ನಡುವೆ ಇರುವ ಗೋಲಾರಿ ಜಲಪಾತದಲ್ಲಿ. ಒಂದೆಡೆ ತಲೆಯೆತ್ತಿ ನೋಡಿದರೂ ಕಾಣಿಸದ ಹಸಿರಿನಿಂದಾವೃತವಾದ ಕಡಿದಾದ ಗುಡ್ಡ. ಇನ್ನೊಂದೆಡೆ ಅರಣ್ಯ. ನಡುವೆ ಧೋ ಎಂದು ಅಬ್ಬರಿಸುತ್ತ ಸೊಬಗನ್ನು ಕಟ್ಟಿಕೊಡುವ ಗೋಲಾರಿ ಜಲಪಾತವನ್ನು ನೋಡುವುದೇ ಚೆಂದ. ಗೋಲಾರಿ ಜಲಪಾತ ವೀಕ್ಷಣೆಗೆ ಕಾಲದ ಸಮಸ್ಯೆ ಅಡ್ಡಿಯಾಗದು. ಕಡು ಬೇಸಿಗೆಯಲ್ಲೂ ಜಲಪಾತದಲ್ಲಿ ಸಾಕಷ್ಟು ನೀರಿರುವ ಕಾರಣ ವರ್ಷದ ಎಲ್ಲ ದಿನಗಳಲ್ಲೂ ಸೌಂದರ್ಯ ಕುಂದುವುದಿಲ್ಲ. ಮಳೆಗಾಲದಲ್ಲಂತೂ ಜಲಪಾತದ ಸೌಂದರ್ಯ ಇಮ್ಮಡಿಸುತ್ತದೆ. ಬೆಟ್ಟದ ತುದಿಯಿಂದ 65 ಅಡಿ ಎತ್ತರದಿಂದ ದುಮ್ಮಿಕ್ಕುವ ಗೋಲಾರಿ ಜಲಪಾತ ನೋಡಲು ಸದಾ ಜನಜಾತ್ರೆ ಸೇರಿರುತ್ತದೆ. ಚಾರಣ ಮಾಡುವವರಿಗೆ, ವಾರದ ತುಂಬ ಬಿಡುವಿಲ್ಲದೆ ದುಡಿದು ವಾರಂತ್ಯದಲ್ಲಿ ಬದಲಾವಣೆ ಬಯಸುವವರಿಗೆ ಈ ಜಲಪಾತ ಹೇಳಿ ಮಾಡಿಸಿದ ತಾಣ. ಜಲಪಾತಕ್ಕೆ ತೆರಳುವವರು ಕುಡಿಯುವ ನೀರು, ಆಹಾರಗಳನ್ನು ಒಯ್ಯುವುದು ಕಡ್ಡಾಯ. ಹೇಗೆ ಹೋಗುವುದು? ಉತ್ತರ ಕನ್ನಡ ಜಿಲ್ಲೆಯ ಕಾರವಾರದಿಂದ 17 ಕಿ.ಮೀ. ಅಂತರದಲ್ಲಿರುವ ತೋಡೂರಿಗೆ ಹೋಗಿ, ಅಲ್ಲಿಂದ 4 ಕಿ.ಮೀ. ಕಚ್ಚಾ ರಸ್ತೆಯಲ್ಲಿ ಸಾಗಿದರೆ ಅರಣ್ಯ ಪ್ರದೇಶ ಸಿಗುತ್ತದೆ. ಇಲ್ಲಿಯವರೆಗೆ ವಾಹನಗಳು ತೆರಳುತ್ತವೆ. ಅವನ್ನು ಇಲ್ಲಿಯೇ ನಿಲ್ಲಿಸಿ 2-3 ಕಿ.ಮೀ. ಅರಣ್ಯ ಪ್ರದೇಶದಲ್ಲಿ ಸಾಗಿದರೆ ಗೋಲಾರಿ ಫಾಲ್ಸ್ ಕಣ್ಣೆದುರು ಪ್ರತ್ಯಕ್ಷವಾಗುತ್ತಾಳೆ. ಬೆಂಗಳೂರಿನಿಂದ ಆಗಮಿಸುವವರು ಶಿವಮೊಗ್ಗ ಶಿರಸಿ ಮೂಲಕ ಅಥವಾ ಹುಬ್ಬಳ್ಳಿ-ಅಕೋಲಾ ಮೂಲಕ ತೊಡೂರಿಗೆ ಆಗಮಿಸಿ ಅಲ್ಲಿಂದ ಬರಬಹುದು. -ವಿನಯ ದಂಟಕಲ್