ಮೊಬಿಲಿಯೋ ಮಾರುತ ಹೋಂಡಾದಿಂದ ಮತ್ತೆರಡು ಅದ್ಭುತಗಳು ತೆರೆಕಾಣುತ್ತಿವೆ. ಅಮೇಝ್ ಹಾಗೂ ಸಿಟಿಯ ಡೀಸೆಲ್ ಮಾದರಿಗಳಿಂದ.. ಹೋಂಡಾದಿಂದ ಮತ್ತೆರಡು ಅದ್ಭುತಗಳು ತೆರೆಕಾಣುತ್ತಿವೆ. ಅಮೇಝ್ ಹಾಗೂ ಸಿಟಿಯ ಡೀಸೆಲ್ ಮಾದರಿಗಳಿಂದ ಮಾರುಕಟ್ಟೆಯಲ್ಲಿ ಕ್ಲಿಕ್ಕಾಗಿದ್ದೇ ಆಗಿದ್ದು, ಈ ವರುಷ ಇನ್ನೆರಡು ಮಾದರಿಗಳನ್ನು ಮಾರುಕಟ್ಟೆಗೆ ಬಿಡುತ್ತಿದೆ. ಈಗಾಗಲೇ ಇಂಡೋನೇಷ್ಯಾದಲ್ಲಿ ಸದ್ದು ಮಾಡುತ್ತಿರುವ ಮೊಬಿಲಿಯೋ ಎಂಪಿವಿಯನ್ನು 2014-15ನೇ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡುವುದಾಗಿ ಹೋಂಡಾ ಘೋಷಿಸಿದೆ. ಇದರ ಬೆನ್ನಲ್ಲೇ ವರ್ಷಾಂತ್ಯಕ್ಕೆ ಬಹು ನಿರೀಕ್ಷಿತ ನೂತನ ಜಾಝ್ ಕೂಡ ಮಾರುಕಟ್ಟೆಗೆ ಬರಲಿದೆಯಂತೆ. ಹೀಗಂತ ಹೋಂಡಾ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಜ್ಞಾನೇಶ್ವರ ಸೇನ್ 'ಕನ್ನಡಪ್ರಭ'ಕ್ಕೆ ಸೀಕ್ರೆಟ್ ಬಿಟ್ಟುಕೊಟ್ಟರು. ಭಾರತದಲ್ಲಿ ಡೀಸೆಲ್ ಎಂಜಿನ್‌ಗಳು ಪ್ರಭುತ್ವ ಸಾಧಿಸಿ ಅರ್ಧ ದಶಕಗಳು ಕಳೆದಿವೆ. ಅಮೇಝ್ ಮೂಲಕ ಡೀಸೆಲ್ ವಿಭಾಗಕ್ಕೆ ಪ್ರವೇಶ ನೀಡಿದ್ದ ಹೋಂಡಾ, ಈಗ ಮೊಬಿಲಿಯೋ ಮೂಲಕ ಎಂಪಿವಿ ವಿಭಾಗಕ್ಕೆ ಕಾಲಿರಿಸಿದೆ. ಈಗಾಗಲೇ ಈ ವಿಭಾಗದಲ್ಲಿ ಹೆಸರು ಮಾಡಿರುವ ಇನೋವಾ, ಎಕ್ಸ್‌ಯುವಿ 500, ಟಾಟಾ ಆರಿಯಾ ಹಾಗೂ ಅಲ್ಪಮಟ್ಟಿಗೆ ಮಾರುತಿ ಅರ್ಟಿಗಾಗೆ ಸ್ಪರ್ಧೆ ನೀಡಲು ತಡವಾಗಿ ಹೋಂಡಾ ಹೊರಟಿದೆ. ಇದಲ್ಲದೇ ಈ ವರ್ಷ ಮಾರುಕಟ್ಟೆಗೆ ಬರುತ್ತಿರುವ ಇವೆರಡು ಕಾರುಗಳ ಮೂಲಕ ಭಾರತದಲ್ಲಿ ತನ್ನ ಷೇರನ್ನು ಹೆಚ್ಚಿಸಿಕೊಳ್ಳಲು ತವಕಿಸುತ್ತಿದೆ. ವರ್ಷದ ಆರಂಭದಲ್ಲೇ ಇಂಡೋನೇಷ್ಯಾದಲ್ಲಿ ಮೊಬಿಲಿಯೋ ಬಿಡುಗಡೆಯಾಗಿದೆ. ಅಲ್ಲಿ ಪೆಟ್ರೋಲ್ ಮಾದರಿಯಲ್ಲಿ ಮಾತ್ರ ಕಾರು ಮಾರುಕಟ್ಟೆಗೆ ಬಂದಿದ್ದು, ಭಾರತದಲ್ಲಿ ಡೀಸೆಲ್ ಹಾಗೂ ಪೆಟ್ರೋಲ್ ವಿಭಾಗಗಳಲ್ಲಿ ಮಾರುಕಟ್ಟೆಗೆ ಬರುತ್ತಿದೆ. ಇನೋವಾಗಿಂತ ಸ್ವಲ್ಪ ಸಣ್ಣ ಹಾಗೂ ಅರ್ಟಿಗಾಗಿಂತ ಸ್ವಲ್ಪ ದೊಡ್ಡದಾಗಿ ಈ ಕಾರು ಮಾರುಕಟ್ಟೆಗೆ ಬರಲಿದೆಯಂತೆ. ಆದರೆ ಇದರ ನಿಖರ ಬೆಲೆ ಇನ್ನೂ ತಿಳಿದುಬಂದಿಲ್ಲ. ಮಾರುಕಟ್ಟೆಯ ಅಂದಾಜಿನ ಪ್ರಕಾರ, ರು. 7 ಲಕ್ಷದಿಂದ 10 ಲಕ್ಷದ ಆಸುಪಾಸಿನಲ್ಲಿರಬಹುದು. ಎಂಪಿವಿ ವಿಭಾಗದಲ್ಲಿ 4.4 ಮೀ. ಉದ್ದದ ಮೊಬಿಲಿಯೊ ಕ್ರಾಂತಿ ಮಾಡಲಿದೆ ಎನ್ನುವುದು ಸೇನ್ ವಿಶ್ವಾಸ. ಭಾರತದ ಎಂಪಿವಿ ವಿಭಾಗಕ್ಕೆ ಹೊಸ ಭಾಷ್ಯ ಬರೆಯಲಿದೆ ಎಂದು ಉತ್ಸುಕತೆ ತೋರುತ್ತಾರವರು. ಗಾತ್ರದಲ್ಲಿ ಇನೋವಾಗಿಂತಲೂ ಸಣ್ಣದಿದ್ದರೂ ಒಳ ವಿನ್ಯಾಸದ ವಿಶೇಷದಿಂದಾಗಿ ಗ್ರಾಹಕರಿಗೆ ಇಷ್ಟವಾಗಲಿದೆ. ಅಂದಹಾಗೆ, ಇದು 7 ಸೀಟುಗಳನ್ನು ಹೊಂದಿರುವ ಕಾರಾಗಿದೆ. ಮೊಬಿಲಿಯಾದ ಮೂತಿಯು ಹೋಂಡಾ ಸಿಟಿಯನ್ನೇ ಹೋಲುತ್ತದೆ. ಆದರೆ ಉಳಿದ ವಿನ್ಯಾಸವು ಅಲ್ಪಮಟ್ಟಿಗೆ ಇನೋವಾ ನೋಡಿದ ಹಾಗೆ ಅನಿಸುತ್ತದೆ. ಅಮೇಝ್‌ನಲ್ಲಿ ಬಳಸಿರುವ 1.5 ಲೀ. ಡೀಸೆಲ್ ಎಂಜಿನ್ ಅನ್ನೇ ಇಲ್ಲೂ ಬಳಸಲು ಸಂಸ್ಥೆ ನಿರ್ಧರಿಸಿದೆ. ಆದರೆ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಮೊಬಿಲಿಯೋಗಿಂತ ವಿನ್ಯಾಸದಲ್ಲಿ ಅಲ್ಪಮಟ್ಟಿನ ಬದಲಾವಣೆಯಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಇನ್ನು ಬಹು ನಿರೀಕ್ಷಿತ ಜಾಝ್ ಕಾರು ಕೂಡ ವರ್ಷಾಂತ್ಯದಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ. ದರ ಹೆಚ್ಚಾದ ಕಾರಣದಿಂದ ಹಳೇ ಜಾಝ್ ಯಶಸ್ವಿಯಾಗಿರಲಿಲ್ಲ. ಈಗ ಕೆಲ ಬದಲಾವಣೆಯೊಂದಿಗೆ ಡೀಸೆಲ್ ಹಾಗೂ ಪೆಟ್ರೋಲ್ ಎಂಜಿನ್‌ನಲ್ಲಿ ಮತ್ತೆ ಜಾಝ್ ಬರುತ್ತಿದೆ. ಈ ಬಾರಿ ಸಾಕಷ್ಟು ಹೊಸತನದೊಂದಿಗೆ ಜಾಝ್ ಮಾರುಕಟ್ಟೆಗೆ ಬರುತ್ತಿದೆ ಎಂದು ಹೋಂಡಾ ಹೇಳಿದೆ. ಇದರ ಜತೆಗೆ ದರದಲ್ಲೂ ಕಡಿಮೆಯಾಗುವ ಸಾಧ್ಯತೆಯಿದೆ. ಹೋಂಡಾ 'ಡೀಸೆಲ್‌' ಪ್ರೀತಿ ಪೆಟ್ರೋಲ್ ಎಂಜಿನ್‌ನಲ್ಲಿ ಖ್ಯಾತಿಯಾಗಿರುವ ಹೋಂಡಾ ಕಳೆದ ವರ್ಷ ಅಮೇಝ್ ಮೂಲಕ ಡೀಸೆಲ್ ವಿಭಾಗಕ್ಕೆ ಕಾಲಿಟ್ಟಿತ್ತು. ಆರಂಭದಲ್ಲಿ ಅಮೇಝ್‌ನ ಶೇ.70ರಷ್ಟು ಗ್ರಾಹಕರು ಡೀಸೆಲ್ ಎಂಜಿನ್‌ನತ್ತ ಮುಖ ಮಾಡಿದ್ದರು. ಈಗ ಇದು ಶೇ.55ಕ್ಕೆ ಇಳಿದಿದೆ. ಆದಾಗ್ಯೂ ಮಾರುಕಟ್ಟೆಯಲ್ಲಿ ಹೋಂಡಾ ಉತ್ತಮ ಫಲಿತಾಂಶ ಪಡೆಯಲು ಇದು ಸಹಕಾರಿಯಾಗಿದೆ. ಪ್ರಸಕ್ತ ವರ್ಷದಲ್ಲಿ ಸಂಸ್ಥೆಯು ಶೇ.83ರಷ್ಟು ಬೆಳವಣಿಗೆ ಕಂಡಿದೆ. ಇದರಲ್ಲಿ ಸಿಟಿ ಹಾಗೂ ಅಮೇಝ್ ಡೀಸೆಲ್ ಎಂಜಿನ್‌ನ ದೊಡ್ಡ ಪಾಲಿದೆ. ಮತ್ತೆ ಹೊಸದಾಗಿ ಮಾರುಕಟ್ಟೆಗೆ ಬರುತ್ತಿರುವ ಇನ್ನೆರಡು ಕಾರುಗಳಲ್ಲೂ ಕಡ್ಡಾಯವಾಗಿ ಡೀಸೆಲ್ ಎಂಜಿನ್ ಬಳಸಿಕೊಳ್ಳಲಾಗುತ್ತಿದೆ. ಆದರೆ ಮತ್ತ್ಯಾವ ಹಳೇ ಕಾರುಗಳನ್ನು ಡೀಸೆಲ್ ಎಂಜಿನ್‌ನಲ್ಲಿ ಮಾರುಕಟ್ಟೆಗೆ ತರುವ ಆಲೋಚನೆಯಿಲ್ಲ ಎನ್ನುತ್ತಾರೆ ಸೇನ್. ಬೆಂಗಳೂರಿಗೆ ಸ್ಥಾನ ಮೂರು ಕಳೆದ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ 1.53 ಲಕ್ಷ ಕಾರುಗಳನ್ನು ಹೋಂಡಾ ಮಾರಿತ್ತು. ಇದರಲ್ಲಿ ಕರ್ನಾಟಕದ ಪಾಲು 9385 ಕಾರುಗಳಾಗಿವೆ. ಹೋಂಡಾದ ಅತಿ ಹೆಚ್ಚು ಕಾರುಗಳು ಮಾರಾಟವಾಗುವ ಪಟ್ಟಿಯ 3ನೇ ಸ್ಥಾನದಲ್ಲಿ ನಮ್ಮ ಬೆಂಗಳೂರಿದೆ. ರಾಜ್ಯದಲ್ಲಿ ತನ್ನ ಪಾಲನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿಯೇ ಇನ್ನು 5 ಡೀಲರ್‌ಶಿಪ್‌ಗಳನ್ನು ನೀಡಲು ಹೋಂಡಾ ನಿರ್ಧರಿಸಿದೆ. 2016ರ ಅಂತ್ಯದೊಳಗೆ ಭಾರತದಲ್ಲಿ 3 ಲಕ್ಷಕ್ಕೂ ಅಧಿಕ ಹೋಂಡಾ ಕಾರುಗಳನ್ನು ಮಾರುವ ಗುರಿಯಿದೆ. ಈ ಹಿನ್ನೆಲೆಯಲ್ಲಿ ಉತ್ಪಾದನಾ ಘಟಕದ ವಿಸ್ತರಣೆಯೂ ಅನಿವಾರ್ಯವಾಗುತ್ತದೆ. ಪ್ರಸ್ತುತ ಸೌಕರ್ಯದಲ್ಲಿ ಪ್ರತಿವರ್ಷ 2.40 ಲಕ್ಷ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಗ್ರೇಟರ್ ನೋಯ್ಡಾ ಹಾಗೂ ತಪುಕರಾ ಘಟಕಗಳು ಹೊಂದಿವೆ. - ಜ್ಞಾನೇಶ್ವರ ಸೇನ್, ಹೋಂಡಾ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ - ರಾಧೆ