ಮನೆಮನೆಗೆ ಮೇಳ ದಶಕಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇಸಿಗೆ ಕಾಲವಿಡೀ ಜನಮನಕ್ಕೆ ಮುದ ನೀಡಿದ್ದ ಯಕ್ಷಗಾನದ ಸವಿ ಮಳೆಗಾಲದಲ್ಲೂ ಮಾಯವಾಗುತ್ತಿರಲಿಲ್ಲ. ರಾತ್ರಿ ಬೆಳಗಾಗುವವರೆಗೂ ಮನೆಮನೆಗೆ ಯಕ್ಷ ಮೇಳಗಳ ಭೇಟಿ. ಇದರಲ್ಲಿ ಒಂದು ಸ್ತ್ರೀ ವೇಷ, ಮತ್ತೊಂದು ಪುರುಷ ವೇಷ, ಭಾಗವತರು, ಮದ್ದಳೆಯವರು ಸೇರಿ ಆರೇಳು ಮಂದಿ ಜಿಟಿಜಿಟಿ ಮಳೆಯಲ್ಲಿ ಕಾಲ್ನಡಿಗೆಯಲ್ಲಿ ಮನೆಗೆ ಬಂದು ಯಾವುದಾದರೂ ಪ್ರಸಂಗದ ಘಟ್ಟವೊಂದನ್ನು ಜಗುಲಿಯಲ್ಲಿ ಪ್ರದರ್ಶಿಸುತ್ತಿದ್ದರು. ಮನೆಯವರು ಇಷ್ಟಪಟ್ಟು ಕೊಟ್ಟ ಕೊಡುಗೆಯನ್ನೇ ಸ್ವೀಕರಿಸಿ ಹೋಗುತ್ತಿದ್ದರು. ಜನಮನದಿಂದ ಈ ಪದ್ಧತಿ ಮಾಸಿ ದಶಕಗಳೇ ಸಂದವು. ಆದರೆ ಈಗ ಮಳೆಗಾಲದಲ್ಲಿ ಹಿರಿಯರ ಚಿತ್ತಭಿತ್ತಿಯ ಮೂಲೆಯಲ್ಲಿ ಹುದುಗಿದ್ದ ಇಂಥ ನೆನಪಿಗೆ ಪುನಶ್ಚೇತನ ನೀಡುವ ಕೆಲಸ ಬೆಳ್ತಂಗಡಿಯಲ್ಲಿ ಆರಂಭವಾಗಿ ಸಂಜೆಯಾಗುತ್ತಿದ್ದಂತೆ ಮನೆಮನೆಗಳಲ್ಲಿ ಯಕ್ಷ ಹೆಜ್ಜೆಯ ಗೆಜ್ಜೆಯ ನಾದ ಕೇಳುತ್ತಿದೆ. ಹಲವು ವರ್ಷಗಳ ಬಳಿಕ ಮನೆಮನೆಗೆ ಯಕ್ಷಗಾನದ ಸೊಂಪನ್ನು ಉಣಬಡಿಸುವ ಕೆಲಸವನ್ನು ಮಳೆಗಾಲದ ಜುಲೈನಿಂದ ಅಕ್ಟೋಬರ್ ತನಕ ಬೆಳ್ತಂಗಡಿಯಲ್ಲೇ ನೆಲೆಯೂರಿ ಮಾಡುತ್ತಿದ್ದಾರೆ ಕುಂದಾಪುರದ ಮಂದಾರ್ತಿಯ ಶನೈಶ್ಚರ ಮೇಳದ ಕಲಾವಿದರು. ಅವರ ಈ ಮಳೆಗಾಲದ ಕಲಾಸೇವೆ ಇಲ್ಲಿ 4 ವರ್ಷಗಳಿಂದ ಸರಾಗ. ಇದನ್ನು ಮುನ್ನಡೆಸುವವರು ರಾಘವೇಂದ್ರ ಶೆಟ್ಟಿ ಎಂಬ ಕಲಾವಿದರು. ಕೊಲ್ಲೂರಿನ ರಾಘವೇಂದ್ರ ಆಚಾರ್ಯರ ಪುರುಷ ವೇಷ, ಗಣೇಶ ತೊಂಬಟ್ಟು ಅವರ ಸ್ತ್ರೀ ವೇಷವಿದೆ. ಬಸವರಾಜ ಮಂದರ್ತಿ ಎಂಬ ಯುವ ಭಾಗವತರಿದ್ದಾರೆ. ಪೋಲಿಯೋದಿಂದ ಕಾಲುಗಳೆರಡರಲ್ಲೂ ಬಲವಿಲ್ಲದೆ ಊರುಗೋಲಿನ ಆಧಾರದಲ್ಲಿ ನಡೆಯುವ ವಿಜಯಕುಮಾರರ ಮನಮೋಹಕ ಮೃದಂಗ, ನಗರ ಮಂಜುನಾಥರ ಚೆಂಡೆವಾದನವಿದೆ. ತಂಡದಲ್ಲಿ ಆರು ಮಂದಿಯಿದ್ದಾರೆ. ತಾಲೂಕಿನ ಒಂದು ಗ್ರಾಮವನ್ನು ಆರಿಸಿ ಸನಿಹದ ಶಾಲೆಯಲ್ಲೋ, ದೇಗುಲದಲ್ಲೋ ಬೀಡು ಬಿಡುವ ಯಕ್ಷತಂಡಕ್ಕೆ ಸಂಜೆಯಾಗುತ್ತಿದ್ದಂತೆ ಅದೇ ಜಾಗ ಬಣ್ಣದ ಚೌಕಿಯಾಗುತ್ತದೆ. ಮೇಳದ ಯಜಮಾನರು ಹಗಲು ಕೆಲವು ಮನೆಗಳಿಗೆ ಹೋಗಿ ಈ ದಿನ ರಾತ್ರೆ ನಿಮ್ಮಲ್ಲಿಗೆ ಬಂದು ಪ್ರದರ್ಶನ ನೀಡಬಹುದೇ ಎಂದು ಕೇಳುತ್ತಾರೆ. ಅವರು ಒಪ್ಪಿದರೆ ಸಂಜೆ ಆರರಿಂದ ರಾತ್ರೆ 11ರ ತನಕ 15ರಿಂದ 20 ಮನೆಗಳಿಗೆ ಹೋಗುತ್ತಾರೆ. ವೇಷ ಧರಿಸಿದ ಜಾಗದಲ್ಲಿ ಗಣಪತಿಯನ್ನು ಸ್ತುತಿಸಿ ತಮ್ಮದೇ ಮಾರುತಿ ವ್ಯಾನಿನಲ್ಲಿ ಎಲ್ಲರೂ ಕುಳಿತು ಯಾನ ಆರಂಭ. ಮನೆ ಜಗುಲಿಯಲ್ಲಿ ರಾಮಾಯಣ ಮಹಾಭಾರತದಂಥ ಪುರಾಣಗಳಿಗೆ ಸಂಬಂಧಿಸಿದ ಕಥೆಗಳ ಒಂದು ಘಟ್ಟವನ್ನು 15 ನಿಮಿಷ ಪ್ರದರ್ಶಿಸುತ್ತಾರೆ. ಮನೆಯವರು ಅಪೇಕ್ಷಿಸಿದರೆ ಇನ್ನೊಂದಿಷ್ಟು ಹೊತ್ತು ಆಟ ಮುಂದುವರಿಯುತ್ತದೆ. ಭಾಗವತರ ಹಾಡಿಗೆ ಸರಿಯಾಗಿ ವೇಷಧಾರಿಗಳು ನರ್ತಿಸಿ, ಅರ್ಥ ಹೇಳಿ ರಂಜಿಸುವ ಈ ಪುಟ್ಟ ಪ್ರದರ್ಶನದಲ್ಲಿ ಚಂಡೆ ಮೃದಂಗ ವಾದನದ ಹಿಮ್ಮೇಳವೂ ಇದ್ದು, ಅರೆಕ್ಷಣ ಮನೆ ಜಗುಲಿ ಆಟದ ರಂಗಸ್ಥಳವಾಗುತ್ತದೆ. ಕೊನೆಯ ಮನೆಯಲ್ಲಿ ಮಂಗಳ ಹಾಡುತ್ತಾರೆ. ನಾವು ಪೌರಾಣಿಕ ಹೊರತು ಕಟ್ಟುಕಥೆಗಳನ್ನು ಆಡುವುದಿಲ್ಲ ಅಂತಾರೆ ಮೇಳದ ಯಜಮಾನರು. ಇದನ್ನು ಗೆಜ್ಜೆ ಸೇವೆ ಅಂತ ಕರೆಯುತ್ತಾರೆ. ತಾವು ಮನೆಗೆ ಬಂದಾಗ ಮನೆಯವರು ದೀಪ ಉರಿಸಿಟ್ಟು ಗಣಪತಿಗೆ ಒಂದು ಸೇರಕ್ಕಿ, ಎರಡು ತೆಂಗಿನ ಕಾಯಿಗಳ ಸ್ವಸ್ತಿಕ ಇರಿಸಬೇಕು. ತಮಗೆ ಸಂಭಾವನೆಯಾಗಿ ಅವರಿಗೆ ಎಷ್ಟು ಇಷ್ಟವಿದೆಯೋ ಅಷ್ಟು ಕೊಟ್ಟರೆ ಸಾಕು. 10 ರುಪಾಯಿ ಕೊಡುವವರಿದ್ದಾರೆ. ಸಾವಿರ ರು. ಕೊಡುವವರಿದ್ದಾರೆ. ಕೆಲವು ದಿನಗಳಲ್ಲಿ ಎರಡು ಸಾವಿರದಿಂದ ಆರು ಸಾವಿರ ರು. ತನಕ ಸಂಗ್ರಹವಾಗುತ್ತದೆ. ಬೇಸಿಗೆಯಿಡೀ ಮೇಳಗಳಲ್ಲಿ ದುಡಿಯುವ ಕಲಾವಿದರಿಗೆ ಆಸ್ತಿಪಾಸ್ತಿಗಳಿಲ್ಲ. ಮಳೆಗಾಲದಲ್ಲಿ ಸಂಬಳವಿಲ್ಲ. ಅವರ ಬದುಕಿಗೆ ಇದೊಂದು ಆಧಾರವಾಗುತ್ತದೆ ಎನ್ನುತ್ತಾರೆ. ಕೃಷ್ಣ- ರುಕ್ಮಿಣಿ, ರಾಮ- ಸೀತೆ, ಸುಧನ್ವ- ಪ್ರಭಾವತಿ, ಸಹಸ್ರಾನೀಕ- ಮೃಗಾವತಿ ಮೊದಲಾದ ಪಾತ್ರಗಳಾಗಿ ಮನೆಯಲ್ಲಿ ಯಕ್ಷರಂಗದ ಧಿಂಗಣ ತುಂಬುವ ಈ ಗೆಜ್ಜೆಸೇವೆಯಿಂದ ಅನಿಷ್ಟ ನಿವಾರಣೆ ಆಗುತ್ತದೆಂಬ ನಂಬುಗೆಯೂ ಇದೆ. ಈಗ ಬೆಳ್ತಂಗಡಿಗೆ ಬರುವ ಯಾತ್ರಿಗಳಿಗೆ ಇದೊಂದು ಆತಿಥ್ಯದ ರಸಗವಳವೇ ನಿಜ. ವಿವರಗಳಿಗೆ 9902080063 ಸಂಪರ್ಕಿಸಿ. -ಪ. ರಾಮಕೃಷ್ಣ ಶಾಸ್ತ್ರಿ