ಜೋಗಮಗ ಆ ದಿನ ಮಧ್ಯಾಹ್ನದ ಮೇಲೆ ನಾಲ್ಕಾರು ಮಿತ್ರರೊಂದಿಗೆ ಗೇರುಸೊಪ್ಪದ ಜೋಗ ಜಲಪಾತ ವೀಕ್ಷಿಸಲು ಹೋಗಿದ್ದೆ. ಅಂದು ವಾರದ.... ಆ ದಿನ ಮಧ್ಯಾಹ್ನದ ಮೇಲೆ ನಾಲ್ಕಾರು ಮಿತ್ರರೊಂದಿಗೆ ಗೇರುಸೊಪ್ಪದ ಜೋಗ ಜಲಪಾತ ವೀಕ್ಷಿಸಲು ಹೋಗಿದ್ದೆ. ಅಂದು ವಾರದ ಸೂಟಿ (ರವಿವಾರ) ಆಗಿದ್ದರಿಂದ, ವಿಶ್ವ ಪ್ರಸಿದ್ಧ ಜೋಗ ಜಲಪಾತ ವೀಕ್ಷಿಸಲು ಅಸಂಖ್ಯಾತ ಪ್ರವಾಸಿಗರು ಆಗಮಿಸಿದ್ದರು. ಪಾರ್ಕಿಂಗ್ ಸ್ಥಳವಂತೂ ಆಗಲೇ ಫುಲ್ ಆಗಿತ್ತು. ಅದು ಹೇಗೋ ಒಂದು ಪುಟ್ಟ ಜಾಗದಲ್ಲಿ ನಮ್ಮ ಕಾರನ್ನು ನಿಲ್ಲಿಸಿ, ಜಲಪಾತದ ವೈಭವವನ್ನು ಕಣ್ತುಂಬಿಕೊಳ್ಳಲು ಅತ್ತ ಕಡೆ ಧಾವಿಸಿದೆವು. ನನ್ನಲ್ಲಿದ್ದ ಪುಟ್ಟ ಕ್ಯಾಮರಾವನ್ನು ತೆಗೆದು ವಿವಿಧ ಸ್ಥಳಗಳನ್ನು ನಿಂತು ಆ ಜಲಧಾರೆಯ ದೃಶ್ಯ ವೈಭವ ಸೆರೆ ಹಿಡಿಯುತ್ತಿದ್ದೆ. ಮಿತ್ರರಿಗೆ ಜಲಪಾತದ ತಳಕ್ಕೆ ಹೋಗಿ ಆಸ್ವಾದಿಸಬೇಕೆಂಬ ಉಮೇದಿ ಬಂದಿದ್ದರಿಂದ ಎಲ್ಲರೂ ಹೋಗಲು ಸಿದ್ಧರಾದೆವು. ಅಲ್ಲೀಗ ವ್ಯವಸ್ಥಿತವಾದ ಮೆಟ್ಟಿಲಿನ ವ್ಯವಸ್ಥೆ ಮಾಡಿದ್ದರಿಂದ ಇಳಿಯುವುದು ಸುಲಭ. ಅಲ್ಲಲ್ಲಿನ ಗಿಡಗಂಟಿಗಳ ಸಂಧಿಗಳಿಂದ ಜಲಧಾರೆಯ ವೈಯ್ಯಾರವನ್ನು ಕ್ಯಾಮರಾದಲ್ಲಿ ಬಂಧಿಸಿಕೊಂಡೇ ಹೆಜ್ಜೆ ಹಾಕುತ್ತಿದ್ದೆ. ಪ್ರತಿ ದೃಶ್ಯವನ್ನು ಸೆರೆ ಹಿಡಿದಾಗಲೂ ಒಂದೊಂದು ಅನುಭವ. ಒಂದೊಂದು ದೃಶ್ಯವೂ ಒಂದೊಂದು ಕಾವ್ಯ. ಮಳೆಗಾಲ ಮುಗಿದಿರುವುದರಿಂದ ಜಾರಿ ಬೀಳುವ ಭಯವೂ ಇಲ್ಲ. ಮನದಣಿಯುವಷ್ಟು ಹೊತ್ತು ಜಲಧಾರೆಯ ವೈಭವವನ್ನು ಕಣ್ತುಂಬಿಕೊಳ್ಳಲು ಯಾವ ಅಭ್ಯಂತರವೂ ಇಲ್ಲ. ಅಂತೂ ಸಾವಿರಾರು ಮೆಟ್ಟಿಲುಗಳನ್ನು ಅರ್ಧ ಗಂಟೆಯಲ್ಲಿ ಕ್ರಮಿಸಿ, ತಳಭಾಗದಿಂದ ಆ ಪ್ರಸಿದ್ಧ ಜಲಪಾತದ ದೃಶ್ಯಗಳನ್ನು ಕಣ್ಣಾರೆ ಕಂಡಾಗ... ಅಬ್ಬಾ! ಎಂತಹ ಅನುಭೂತಿ, ಎಂತಹ ಆನಂದ! ಒಂದೊಂದು ದಿಕ್ಕಿನಿಂದ ನೋಡಿದಾಗಲೂ ಒಂದೊಂದು ಅದ್ಭುತದ ಅನಾವರಣ. ಅದೊಂದು ರೋಮಾಂಚಕಾರಿ ಅನುಭವ ಎನ್ನುವುದಂತೂ ಸತ್ಯ. - ಚಿತ್ರ - ಬರಹ: ಗಣಪತಿ ಹಾಸ್ಪುರ