ಗೊಡಚಿಯ ವೀರ ವೀರಭದ್ರನ ಯಾರಿಗೆ ಗೊತ್ತಿಲ್ಲ? ದಕ್ಷನ ಯಜ್ಞ ನಿಲ್ಲಿಸಲು ಪರಶಿವನ ಆಜ್ಞೆಯಂತೆ ಉದ್ಭವಿಸಿದ ವೀರಭದ್ರನಿಗೆ ನಮ್ಮ ರಾಜ್ಯದಲ್ಲೂ ಹಲವಾರು ದೇವಸ್ಥಾನಗಳಿವೆ. ಅವುಗಳಲ್ಲಿ ಹೆಚ್ಚಿನವು ಉತ್ತರ ಕರ್ನಾಟಕದಲ್ಲಿಯೇ ಇವೆ. ಗೊಡಚಿ, ಕಾರಟಗಿ, ತಡಕೋಡ, ರಾಯಚೋಟಿ, ಶಿಂಗಟಾಲೂರು, ಬೆಳಗಾವಿ, ಯಡೂರ ವೀರಭದ್ರ ದೇವಾಲಯಗಳು ಬಹಳ ಪ್ರಸಿದ್ಧ. ಗೊಡಚಿ ವೀರಭದ್ರನ ವಿಶೇಷ ಎಂದರೆ ಈತ ಸವದತ್ತಿಯ ರೇಣುಕಾದೇವಿಯ ಸಹೋದರ ಸ್ವರೂಪ. ಪ್ರತಿ ವರ್ಷ ಹೊಸ್ತಿಲ ಹುಣ್ಣಿಮೆಯಂದು ಇಲ್ಲಿ ರಥೋತ್ಸವ (ಈ ವರ್ಷ ಡಿ.17). ಇದು ಬಳವಲ ಹಣ್ಣುಗಳ ಮಾರುಕಟ್ಟೆಯೂ ಹೌದು, ವೃತ್ತಿ ನಾಟಕ ಕಂಪನಿಗಳ ಸುಗ್ಗಿಯೂ ಹೌದು. ಐದು ದಿನ ರಥೋತ್ಸವದ ಸಂಭ್ರಮ. ವಾಹನಗಳೇ ಅಲ್ಲದೆ ಚಕ್ಕಡಿಗಳಲ್ಲಿ ಬರುವವರೂ ಕಡಿಮೆ ಇಲ್ಲ. ಉತ್ತರ ಕರ್ನಾಟಕದ ಯಲ್ಲಮ್ಮ ದೇವಿ ಕ್ಷೇತ್ರ, ಬಾದಾಮಿ ಬನಶಂಕರಿ ಕ್ಷೇತ್ರ ಹೊರತು ಪಡಿಸಿದರೆ ಗೊಡಚಿ ಕ್ಷೇತ್ರವೇ ಹೆಚ್ಚು ಜನಸಂದಣಿ ಹೊಂದುವ ಜಾತ್ರಾ ಸ್ಥಳ. ಅಗ್ನಿ ಕುಂಡ ರಥೋತ್ಸವದ ವಿಶೇಷ. ಬೆಳಗಾವಿಯಿಂದ ಆರಂಭವಾಗುವ ಕಟ್ಟಿಗೆ ಮೆರವಣಿಗೆ ಬೈಲಹೊಂಗಲ, ಹೊಸೂರ ರಥೋತ್ಸವದ ಹಿಂದಿನ ದಿನ ಗೊಡಚಿ ತಲುಪುತ್ತದೆ. ಅಂದು ಪುರವಂತರ ಸಮಾವೇಶ ಮತ್ತು ಅಗ್ನಿಕುಂಡ ಉತ್ಸವ. ರಥೋತ್ಸವದಂದು ಬೆಳಗ್ಗೆ ಶಾಸ್ತ್ರೋಕ್ತವಾಗಿ ಅಗ್ನಿ ಹೊತ್ತಿಸಿ, ದೇವರ ಮೂರ್ತಿಗೆ ಅಲಂಕಾರಿಕ ಪೂಜೆ, ಮಧ್ಯಾಹ್ನ 3 ಕ್ಕೆ ಪುರವಂತರಿಂದ ಅಗ್ನಿ ಪ್ರವೇಶ, ಸಂಜೆ ರಥೋತ್ಸವ ಜರುಗುವುದು. ವಿಜಯನಗಲ ಶೈಲಿಯ ದೇವಾಲಯವಿದು. ಪ್ರಾಂಗಣದಲ್ಲಿ ವೀರಭದ್ರ, ಮುದಿವೀರಭದ್ರ, ಭದ್ರಕಾಳಿ ದೇವಾಲಯಗಳಿವೆ. ದೇವಾಲಯ ಎದುರಿಗೆ ದೀಪಮಾಲಿಕಾ ಕಂಭವಿದೆ. ಗರ್ಭಗುಡಿಯಲ್ಲಿರುವ ವೀರಭದ್ರ ವಿಗ್ರಹವು ಚತುರ್ಭುಜ ಹೊಂದಿದ್ದು, ಬಲ ಮುಂಗೈಯಲ್ಲಿ ಖಡ್ಗ, ಎಡ ಮುಂಗೈಯಲ್ಲಿ ವೃತ್ತಾಕಾರದ ಗುರಾಣಿ, ಬಲ ಹಿಂಗೈಯಲ್ಲಿ ತ್ರಿಶೂಲ, ಎಡ ಹಿಂಗೈಯಲ್ಲಿ ನಾಗರ ಹಡೆ ಹಿಡಿದಿದ್ದಾನೆ. ಸುಮಾರು ನಾಲ್ಕು ಅಡಿ ಎತ್ತರದ ರುಂಡಮಾಲಧಾರಿ ಮೂರ್ತಿ. ಈ ದೇವಾಲಯದ ಪೂರ್ವಕ್ಕೆ ದಿಗಂಬರೇಶ್ವರ ಮುನಿಯ ಗದ್ದುಗೆ ಇದೆ. ದಕ್ಷಿಣಕ್ಕೆ ವಿಭೂತಿಮಠ ಎಂಬ ಗವಿ, ಈಶಾನ್ಯ ದಿಕ್ಕಿಗೆ ಹನ್ನೆರಡನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರಿಗೂ ಮತ್ತು ಶಿವಶರಣರಿಗೂ ನಡೆದ ಯುದ್ದದ ಸ್ಥಳ 'ರಣಬಾಜಿ' ಇದೆ. ರಣಬಾಜಿಯ ಮೂರು ದಿಕ್ಕುಗಳಲ್ಲಿಯೂ ಮೂರು ಕೂಗುಬಸವಣ್ಣನ ಮಾಲಗಂಭಗಳಿವೆ. ಕೊಡಚಿಯೇ ಗೊಡಚಿ ಆಯಿತೆ? ಗೊಡಚಿ ಎಂಬ ಹೆಸರು ಬರಲು ಕಾರಣ ಇಲ್ಲಿ ಕೊಡಚಿ ಕಂಟೆಗಳಿದ್ದವಂತೆ. ಇದರ ಹಣ್ಣಿನ ರುಚಿ ಒಗರು. ಇಂಥ ಕಂಟೆಗಳು ದಟ್ಟವಾಗಿ ಬೆಳೆದಿದ್ದರಿಂದ ತಲೆ ಮರೆಸಿಕೊಳ್ಳುವವರಿಗೆ ಇದು ಹೇಳಿ ಮಾಡಿಸಿದ ಸ್ಥಳವಾಗಿತ್ತಂತೆ. ಕೊಡಚಿಯೇ ಗೊಡಚಿಯಾಗಿದೆ ಎಂದು ಹೇಳುವರು. ಇಲ್ಲಿಗೆ ಸಮೀಪದ 'ರಣಭಾಜಿ'ಯಲ್ಲಿ ಕಲ್ಯಾಣದ ಚಾಲುಕ್ಯರಿಗೂ, ಶಿವಶರಣರಿಗೂ ಘೋರ ಯುದ್ದ ಘಟಿಸಿದ್ದು. ನಂತರ ಶಿವಶರಣರು ಇದೇ ಮಾರ್ಗವಾಗಿ ಉಳುವಿ ಕ್ಷೇತ್ರದತ್ತ ಪಯಣಿಸಿದರು ಎನ್ನುತ್ತದೆ ಇತಿಹಾಸ. ಗೊಡಚಿ ಸೇರಿದಂತೆ ರಾಮದುರ್ಗ ತಾಲ್ಲೂಕು ಬಹುಕಾಲ ತೊರಗಲ್ಲು ಶಿಂಧೆ ಮಹಾರಾಜರ ಆಳ್ವಿಕೆಗೆ ಒಳಪಟ್ಟಿತ್ತು. ಯಲ್ಲಮ್ಮನ ಸಹೋದರ! ಸವದತ್ತಿ ಯಲ್ಲಮ್ಮ ದೇವಿಯ ಸಹೋದರ ಸ್ವರೂಪ ಎಂಬುದಕ್ಕೆ ಕಥೆಯೊಂದಿದೆ. ದಕ್ಷ ಪ್ರಜಾಪತಿಯ ಯಜ್ಞವನ್ನು ತಡೆದ ವೀರಭದ್ರ ರೌದ್ರಾವತಾರದ ಭರದಲ್ಲಿ ಯಜ್ಞಕುಂಡದಲ್ಲಿ ಬೀಳುವ ಸಂದರ್ಭ. ಆಗ ರೇಣುಕಾದೇವಿ ಅವನ ನಡುಪಟ್ಟಿಯನ್ನು ಹಿಡಿದು ಎಳೆದು ಪಾರುಮಾಡಿದಳು ಎಂದು. ಅದರಂತೆ ಪ್ರತಿವರ್ಷ ವೀರಭದ್ರನು ಯಲ್ಲಮ್ಮನ ಜಾತ್ರೆಯ ಕಾಲಕ್ಕೆ ದೇವಿಗೆ ಸೀರೆ, ಕುಪ್ಪುಸ, ಹಸಿರು ಬಳೆ, ಉಲುಪಿ ಸಾಮಗ್ರಿಗಳನ್ನು ಸಹೋದರತ್ವದ ಕಾಣಿಕೆಯಾಗಿ ಕೊಡುವುದು; ಗೊಡಚಿ ಜಾತ್ರೆಯ ಕಾಲಕ್ಕೆ ವೀರಭದ್ರ ದೇವರಿಗೆ ದೋತರ, ಶಲ್ಯ, ನಂದಿಕೋಲು, ಪೂಜಾ ಸಾಮಗ್ರಿಗಳನ್ನು ಸಹೋದರಿ ಕಾಣಿಕೆಯಾಗಿ ಕಳಿಸಿಕೊಡುವ ಸಂಪ್ರದಾಯ ಇಂದಿಗೂ ಇದೆ. ಭದ್ರಕಾಳಿ ವೀರಭದ್ರನ ಹೆಂಡತಿ ಎನ್ನುವ ನಂಬಿಕೆ. ಅದಕ್ಕಾಗಿ ದೇವಾಲಯದ ಆವರಣದಲ್ಲಿ ಭದ್ರಕಾಳಿ ಮಂದಿರವೂ ಇದೆ. ಊಟ, ವಸತಿ ತೊಂದರೆ ಇಲ್ಲ ಗೊಡಚಿಯು ಬೆಳಗಾವಿಯಿಂದ 78 ಕಿ.ಮೀ, ತಾಲ್ಲೂಕು ಕೇಂದ್ರ ರಾಮದುರ್ಗದಿಂದ 14 ಕಿ.ಮೀ ದೂರದಲ್ಲಿದೆ. ಸವದತ್ತಿ, ಮುನವಳ್ಳಿ, ಗೋಕಾಕಗಳಿಂದಲೂ ಸಾರಿಗೆ ಸೌಲಭ್ಯವಿದೆ. ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ವಸತಿ ಮತ್ತು ಅನ್ನದಾಸೋಹ ವ್ಯವಸ್ಥೆ ಇದೆ. ಬೆಂಗಳೂರು, ಗುಲ್ಬರ್ಗ, ಬೀದರ್, ಪುಣೆ, ಮುಂಬೈ, ಕೊಲ್ಲಾಪುರಗಳಿಂದ ಹೆಚ್ಚಿನ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. - ವೈ.ಬಿ. ಕಡಕೋಳ