ಪೆಟ್ರೋಲ್ಲಾ? ಡೀಸೆಲ್ಲಾ? ಪೆಟ್ರೋಲ್ ಬೆಲೆ 3 ಏರಿಕೆ. ಪೆಟ್ರೋಲ್ ಬೆಲೆ 35 ಪೈಸೆ ಏರಿಕೆ... ಇಂತಹ ಸುದ್ದಿ ವಾರಕ್ಕೊಮ್ಮೆಯಾದರೂ ಮಾಧ್ಯಮಗಳಲ್ಲಿ ಪ್ರಕಟವಾಗುತ್ತದೆ. ಪೆಟ್ರೋಲ್ ಬೆಲೆಯ ಅತಿಯಾದ ಏರಿಕೆಯಿಂದಾಗಿ ಪೆಟ್ರೋಲ್ ಕಾರುಗಳ ಮಾರಾಟ ಕುಸಿದಿದೆ. ಸೆಕೆಂಡ್ ಹ್ಯಾಂಡ್ ಕಾರು ಶೋರೂಂಗಳಲ್ಲೂ ಪೆಟ್ರೋಲ್ ಕಾರುಗಳ ಸಾಲುಸಾಲು. ಪ್ರತಿಯೊಬ್ಬರೂ ಕಾರು ಕೊಳ್ಳುವಾಗ ಪೆಟ್ರೋಲ್ ಕಾರಾ? ಡೀಸೆಲ್ ಕಾರಾ? ಎಂಬ ಪ್ರಶ್ನೆಯನ್ನು ಹಲವಾರು ಬಾರಿ ಕೇಳಿಕೊಂಡಿರುತ್ತಾರೆ. ಡೀಸೆಲ್‌ಗೆ ಬೆಲೆ ಕಡಿಮೆ. ಡೀಸೆಲ್ ಕಾರಿಗೆ ಬೆಲೆ ಜಾಸ್ತಿ. ಪೆಟ್ರೋಲ್‌ಗೆ ಬೆಲೆ ಜಾಸ್ತಿ. ಆದರೆ ಪೆಟ್ರೋಲ್ ಕಾರುಗಳಿಗೆ ಬೆಲೆ ಕಡಿಮೆ. ಹೀಗಾಗಿ ಯಾವುದು ಉತ್ತಮ ಎಂದು ನಿರ್ಧರಿಸಲಾರದೇ ಹೋಗುತ್ತಾರೆ. ಈಗ ಕಾರು ಖರೀದಿಸುವ ಪ್ರತಿಯೊಬ್ಬರೂ ಡೀಸೆಲ್ ಕಾರೇ ಬೇಕು ಎಂದು ಬಯಸುತ್ತಿದ್ದಾರೆ. ಉಳಿದ ಅಂಶಗಳತ್ತ ಅವರು ಗಮನಹರಿಸುವುದಿಲ್ಲ. ಬಗೆಹರಿಯದ ಈ ಪ್ರಶ್ನೆಗೆ ಇಲ್ಲಿದೆ ಉತ್ತರ. ನೀವು ಯಾವ ಕಾರು ಕೊಳ್ಳಬೇಕು ಎಂಬುದನ್ನು ನೀವೇ ಸುಲಭವಾಗಿ ನಿರ್ಧರಿಸಬಹುದು. ಡೀಸೆಲ್ ಎಂಜಿನ್‌ಗಳು ಪೆಟ್ರೋಲ್ ಎಂಜಿನ್‌ಗಳಿಗಿಂತ ಉತ್ತಮ ತಂತ್ರಜ್ಞಾನ ಹೊಂದಿವೆ. ಒಂದು ದಶಕದಲ್ಲಿ ಡೀಸೆಲ್ ಎಂಜಿನ್‌ಗಳು ಹಲವಾರು ಸಂಗತಿಗಳಲ್ಲಿ ಪೆಟ್ರೋಲ್ ಎಂಜಿನ್‌ಗಳನ್ನು ಹಿಂದಿಕ್ಕಿವೆ. ಪೆಟ್ರೋಲ್‌ಗಿಂತ ಡೀಸೆಲ್ ಎಂಜಿನ್‌ಗಳೇ ಪ್ರತಿ ಲೀಟರ್‌ಗೆ ಹೆಚ್ಚು ಕಿಲೋಮೀಟರ್ ಚಲಿಸುತ್ತವೆ. ಮೊದಲೆಲ್ಲ, ಡೀಸೆಲ್ ಎಂಜಿನ್‌ಗಳಿಗೆ ಹೆಚ್ಚು ನಿರ್ವಹಣಾ ವೆಚ್ಚ (ಮೆಂಟೆನೆನ್ಸ್) ತಗಲುತ್ತದೆ. ಅವುಗಳನ್ನು ಒಂದೆರಡು ದಿನ ಬಳಸದಿದ್ದರೆ ಸ್ಟಾರ್ಟ್ ಆಗುವುದಿಲ್ಲ. ಚಳಿಗಾಲದಲ್ಲಿ ಸ್ಟಾರ್ಟಿಂಗ್ ಪ್ರಾಬ್ಲೆಮ್ ಎಂಬೆಲ್ಲ ದೂರುಗಳಿದ್ದವು. ಆಧುನಿಕ ಡೀಸೆಲ್ ಎಂಜಿನ್‌ಗಳು ಅದನ್ನೆಲ್ಲ ಮೀರಿನಿಂತಿವೆ. ಹೀಗಾಗಿ ಡೀಸೆಲ್ ಕಾರುಗಳು ಪೆಟ್ರೋಲ್ ಕಾರಿಗಿಂತ ಹೆಚ್ಚು ಬೇಡಿಕೆ ಹೊಂದಿವೆ. ಆದರೆ ಗ್ರಾಹಕರ ಮನಸ್ಸಿನಲ್ಲಿ 'ಡೀಸೆಲ್ ಕಾರಿಗೆ ಹೆಚ್ಚು ಬೆಲೆ ತೆರಬೇಕು. ಅದು ನಿಜಕ್ಕೂ ಸಾರ್ಥಕವಾ' ಎನ್ನುವ ಸಂದೇಹ. ಲೆಕ್ಕದ ನಂಟು ಕಾರು ಖರೀದಿಸುವಾಗ ಡೀಸೆಲ್ ಕಾರಾ? ಪೆಟ್ರೋಲ್ ಕಾರಾ? ಎಂಬುದನ್ನು ನಿರ್ಧರಿಸಲು ಒಂದು ಸಣ್ಣ ಲೆಕ್ಕಾಚಾರದ ಅಗತ್ಯವಿದೆ. ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳಿಗೆ ಸಾಮಾನ್ಯವಾಗಿ ಎಲ್ಲ ಕಂಪನಿಗಳಲ್ಲಿ 1 ಲಕ್ಷದಿಂದ 1.50 ಲಕ್ಷದವರೆಗೆ ದರದಲ್ಲಿ ವ್ಯತ್ಯಾಸವಿದೆ. ನೀವು ವರ್ಷಕ್ಕೆ 10,000-13,000 ಕಿ.ಮೀ. ಅಂದರೆ ತಿಂಗಳಿಗೆ ಸರಾಸರಿ 800-1000 ಕಿ.ಮೀ. ಅಷ್ಟೇ ಕಾರು ಓಡಿಸುವವರಾಗಿದ್ದರೆ ನಿಮಗೆ ಪೆಟ್ರೋಲ್ ಕಾರೇ ಉತ್ತಮ. ಯಾಕೆಂದರೆ ಡೀಸೆಲ್ ಕಾರಿಗೆ ನೀವು 1-1.50 ಲಕ್ಷ ಹೆಚ್ಚು ಪಾವತಿಸುತ್ತೀರಿ. ಸಹಜವಾಗಿ ನಿಮ್ಮ ವಾಹನ ಸಾಲದ ಮೊತ್ತ ಕೂಡ ಹೆಚ್ಚಾಗಿರುತ್ತದೆ. ಅಲ್ಲಿಗೆ ವಾಹನ ದರದ ಮೇಲೆ 1-1.50 ಲಕ್ಷ ಮೇಲ್ನೋಟಕ್ಕೇ ಹೆಚ್ಚು ಪಾವತಿಸಿದ್ದರೆ, ಇದೇ ಮೊತ್ತದ ಮೇಲೆ ಸಾಲದ ಮೇಲಿನ ಬಡ್ಡಿಯನ್ನೂ ಪಾವತಿಸುತ್ತೀರಿ ಎಂಬುದನ್ನು ಮರೆಯಬಾರದು. 1-1.50 ಲಕ್ಷ ಹೆಚ್ಚುವರಿ ಸಾಲವು ನಿಮ್ಮ ತಿಂಗಳ ಕಂತಿನ ಹಣವನ್ನು 3-4 ಸಾವಿರ ಹೆಚ್ಚಿಸುತ್ತದೆ. ನೀವು ಪ್ರತಿ ವರ್ಷ ಕೇವಲ 10-15 ಸಾವಿರ ಕಿ.ಮೀ. ಅಷ್ಟೇ ಕಾರು ಚಲಾಯಿಸುವವರಾಗಿದ್ದರೆ ಈಗಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ವ್ಯತ್ಯಾಸದಲ್ಲಿ ನಿಮ್ಮ ವಾರ್ಷಿಕ ಉಳಿತಾಯ 22-24 ಸಾವಿರ ಮಾತ್ರ. ಇದರಂತೆ ನೀವು ಡೀಸೆಲ್ ಕಾರು ಖರೀದಿಗಾಗಿ ಹೆಚ್ಚು ಪಾವತಿಸಿದ ಹಣ ಮರಳಿ ಪಡೆಯಬೇಕಾದರೆ 5-6 ವರ್ಷ ಬೇಕು. ಅಷ್ಟರಲ್ಲಿ ನಿಮಗೆ ಆ ಕಾರು ಬೇಸರವಾಗಿರುತ್ತದೆ. ಹೊಸ ಕಾರು ಬೇಕು ಅನ್ನಿಸಿರುತ್ತದೆ. ಅದೇ ನೀವು ಪೆಟ್ರೋಲ್ ಕಾರು ಖರೀದಿಸಿದ್ದರೆ, ಆರಂಭದಲ್ಲೇ ನೀವು 1-1.50 ಲಕ್ಷ ಕಡಿಮೆ ಪಾವತಿಸುತ್ತೀರಿ. ಆ ಹಣವನ್ನು ನೀವು ಬ್ಯಾಂಕಿನಲ್ಲಿಟ್ಟರೆ, ಅದರಿಂದ ಬಡ್ಡಿ ಬರುತ್ತಿತ್ತು. ಬ್ಯಾಂಕಿನಲ್ಲಿಡದಿದ್ದರೂ ಅದೇ ಹಣದಲ್ಲಿ ಕಾರು ಮಾರಾಟ ಮಾಡುವವರೆಗೂ ನೀವು ಪೆಟ್ರೋಲ್ ಹಾಕಿಸಿಕೊಳ್ಳಬಹುದಿತ್ತು. ಜತೆಗೆ ಅಷ್ಟು ಹಣಕ್ಕೆ ಕಟ್ಟುವ ಬಡ್ಡಿ ಉಳಿಯುತ್ತದೆ. ಡೀಸೆಲ್‌ಗೆ ಹೋಲಿಸಿದರೆ ಪೆಟ್ರೋಲ್ ಗಾಡಿಗಳ ಬಿಡಿಭಾಗಗಳ ದರವೂ ಕಡಿಮೆ. ಆದರೆ ನೀವು ತಿಂಗಳಿಗೆ 1000-2000 ಅಥವಾ ಅದಕ್ಕಿಂತ ಹೆಚ್ಚು ಕಿ.ಮೀ. ಕಾರು ಚಲಾಯಿಸುವವರಾಗಿದ್ದರೆ, ದಿನವೂ ಕಚೇರಿಗೆ ಮತ್ತು ಇತರ ಕೆಲಸಗಳಿಗೆ ಕಾರು ಬಳಸುವವರಾಗಿದ್ದರೆ ನಿಮಗೆ ಡೀಸೆಲ್ ಕಾರೇ ಉತ್ತಮ. ಯಾಕೆಂದರೆ ನೀವು ಡೀಸೆಲ್ ಕಾರು ಖರೀದಿಸುವಾಗ ಹೆಚ್ಚು ಹಣ ಪಾವತಿಸಿದ್ದರೂ, ಅದು 2-3 ವರ್ಷದಲ್ಲೇ ಮರಳಿ ಬಂದಿರುತ್ತದೆ. ಆದ್ದರಿಂದ ನೀವು ಕಾರು ಹೆಚ್ಚು ಬಳಸುವವರಾಗಿದ್ದರೆ ಡೀಸೆಲ್ ಉತ್ತಮ. ಇಂದು ಪೆಟ್ರೋಲ್ ಕಾರುಗಳಿಗಿಂತ ಡೀಸೆಲ್ ಕಾರುಗಳಿಗೇ ಹೆಚ್ಚು ಮರು ಮಾರಾಟ ಬೆಲೆ ಇರುವುದು ಎಂಬುದನ್ನು ಮರೆಯುವಂತಿಲ್ಲ. ಇಂಧನ ಬೆಲೆ ವ್ಯತ್ಯಾಸ ಮೊದಲಿನಿಂದಲೂ ಪೆಟ್ರೋಲ್‌ಗಿಂತ ಡೀಸೆಲ್‌ಗೆ ಕಡಿಮೆ ದರ. 2008ರಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ನಡುವೆ ಪ್ರತಿ ಲೀಟರ್‌ಗೆ ಕೇವಲ 14.43 ಮಾತ್ರ ವ್ಯತ್ಯಾಸವಿತ್ತು. 2012 ಮೇ ತಿಂಗಳಲ್ಲಿ ಈ ವ್ಯತ್ಯಾಸ 33.29ರಷ್ಟಿತ್ತು. 2012ರ ನವೆಂಬರ್‌ನಲ್ಲಿ ಈ ವ್ಯತ್ಯಾಸ 22.28ಕ್ಕೆ ಇಳಿದಿದೆ. ಈಗ ಡೀಸೆಲ್ ದರವನ್ನೂ ಡಿರೆಗ್ಯುಲೈರೈಸ್ ಮಾಡಲಾಗಿದೆ. ಇನ್ನು ಮುಂದೆ ಪೆಟ್ರೋಲ್ ಮತ್ತು ಡೀಸೆಲ್ ನಡುವೆ ಅಷ್ಟೇನೂ ಅಂತರ ಇರಲಾರದೇನೋ ಅನ್ನಿಸುತ್ತಿದೆ. ಆದರೂ ಪೆಟ್ರೋಲ್‌ನಷ್ಟು ಡೀಸೆಲ್ ದುಬಾರಿಯಾಗಲು ಸಾಧ್ಯವಿಲ್ಲ. - ವಕ್ರದಂತ