ನೆಲ್ಲಿ ನೆಲೆ ನೆಲ್ಲಿತೀರ್ಥ ಗುಹಾಲಯ ರಮಣೀಯ ತಾಣ. ಸೋಮನಾಥೇಶ್ವರ ಅಥವಾ ಶಿವಾ ದೇವಾಲಯ ಇಲ್ಲಿನ ವಿಶೇಷ ಆಕರ್ಷಣೆ. ಗುಹೆಯೊಳಗೆ ತೆರಳುವುದು ತ್ರಾಸದಾಯಕ. ಎಲ್ಲಿಯೂ ಸಂಪೂರ್ಣ ತಲೆಯೆತ್ತಿ ನಿಲ್ಲಲಾಗದು. ಸುಮಾರು 200 ಮೀಟರ್ (660 ಅಡಿ) ಉದ್ದದ ಗುಹೆ. ಎದ್ದರೆ ಮಂಡೆಗೆ ಬಂಡೆ ಬಡಿಯುತ್ತದೆ. ಮುಂದೆ ಪಯಣಿಸಿದಾಗ ಚಿಕ್ಕಗುಡ್ಡ ಎದುರಾಗುತ್ತದೆ. ದಕ್ಷಿಣಾಭಿಮುಖವಾಗಿ ಕೆಳಗಿಳಿಯುತ್ತಿದ್ದಂತೆ ಪ್ರಕೃತಿ ನಿರ್ಮಿತ ಸುಂದರ ಸರೋವರ ಗೋಚರ. ಇದರ ನಂತರದ ದರ್ಶನವೇ ಶಿವಲಿಂಗ. ಗುಹೆ ಒಳಭಾಗದ ಸುತ್ತಮುತ್ತ ತೇಯ್ದ ಗಂಧದ ಉಂಡೆಯಂಥ ಕೆಂಪಗಿನ ಮಣ್ಣಿನ ರಾಶಿಯಿದ್ದು, ಭಕ್ತರು ಇದನ್ನು ಪವಿತ್ರ ತಿಲಕವೆಂದು ಹಣೆಗೆ ಹಚ್ಚಿಕೊಳ್ಳುತ್ತಾರೆ. ಮನೆಗೆ ಪ್ರಸಾದ ರೂಪದಲ್ಲಿ ಕೊಂಡೊಯ್ಯುತ್ತಾರೆ. ಗುಹೆಯ ಮೇಲ್ಭಾಗದಿಂದ ನಿರಂತರ ನೀರು ಸಿಂಚನವಾಗುವುದರಿಂದ ಈ ತಾಣವನ್ನು ನೆಲ್ಲಿತೀರ್ಥ ಎಂದು ಕರೆಯಲಾಗುತ್ತದಂತೆ. ಹೀಗೊಂದು ಕಥೆ... ಜಬಾಲಿ ಹೆಸರಿನ ಮಹರ್ಷಿ ಅರುಣಾಸುರ ಎಂಬ ರಾಕ್ಷಸನಿಗೆ ಗಾಯತ್ರಿ ಮಂತ್ರ ಬೋಧಿಸಿ, ಆತ ಅತ್ಯಂತ ಶಕ್ತಿವಂತನಾಗುತ್ತಾನೆ. ತ್ರಿಮೂರ್ತಿಗಳಿಂದ, ದೇವತೆಗಳಿಂದ ತನಗೆ ಸಾವು ಬರಬಾರದೆಂದು ತನ್ನ ಗುರು ಜಬಾಲಿ ಋಷಿಗಳ ತಪಸ್ಸು ಕೆಡಿಸಲು ಹೊರಟಿದ್ದ. ಉಗ್ರನಾಗಿ ಎಲ್ಲ ಋಷಿಗಳ ಕತ್ತು ಹಿಡಿಯುವಂತೆ ಆದೇಶಿಸಿದ್ದ. ಅವ ಪಾಪದ ಕೊಡ ತುಂಬುತ್ತಿದ್ದಂತೆ ಜಬಾಲಿಯವರಿಗೆ ಪ್ರತ್ಯಕ್ಷಳಾದ ಆದಿಶಕ್ತಿ ನಂದಿನಿಯ ಕಟಿ ಪ್ರದೇಶದಲ್ಲಿ ಬೃಹತ್ ಬಂಡೆಯೊಳಗಿಂದ ಭ್ರಾಮರಿ ರೂಪದಲ್ಲಿ ಅವತರಿಸಿ ಅರುಣಾಸುರನನ್ನು ಸಂಹರಿಸಿದಳು. ಅನಂತರ ಶ್ರೀಕ್ಷೇತ್ರ ನೆಲ್ಲಿತೀರ್ಥದಲ್ಲಿ ಜಬಾಲಿಯನ್ನು ನೆಲೆಗೊಳಿಸಿ ಜನರ ಸೌಖ್ಯ ಕರುಣಿಸುವಂತೆ ನಿಯೋಜಿಸಿದಳೆಂಬ ನಂಬಿಕೆ ಇದೆ. ಗುಹೆಯೊಳಗೆ ಸಾಗುವಾಗ ಬಂಡೆಗಳ ನೆರವಿನಿಂದಲೇ ಹೋಗಬೇಕಾಗುತ್ತದೆ. ದೇವರಿಗೆ ಪೂಜೆ ಸಲ್ಲಿಸಲು ಇಲ್ಲಿ ಭಕ್ತರ ದಂಡೇ ಆಗಮಿಸುತ್ತದೆ. ಮಕ್ಕಳನ್ನು ಕರೆತಂದರೆ ವೀಕ್ಷಣೆಗೇನೂ ಸಮಸ್ಯೆಯಾಗದು. - ಚಿತ್ರ, ಲೇಖನ: ಬಾಲಕೃಷ್ಣ ಶಿರ್ವ