ಪ್ರಯೋಗಶಾಲೆ ನಾನು ಮತ್ತು ಅಪ್ಪ ಕಾರಣಗಿರಿಯ ನಮ್ಮ ಮನೆಯಿಂದ ಶರಾವತಿ ಹಿನ್ನೀರು ದಾಟಿ ಸಮಗೋಡಿನ ಶಾಲೆ ತಲುಪುವಾಗ ... ನಾನು ಮತ್ತು ಅಪ್ಪ ಕಾರಣಗಿರಿಯ ನಮ್ಮ ಮನೆಯಿಂದ ಶರಾವತಿ ಹಿನ್ನೀರು ದಾಟಿ ಸಮಗೋಡಿನ ಶಾಲೆ ತಲುಪುವಾಗ ಮಕ್ಕಳು ತಮ್ಮ ತರಗತಿ ಮುಗಿಸಿ, ಮನೆಗೆ ಹೊರಡುವ ಸಮಯ. ವನರಾಶಿಯ ನಡುವೆ ಹಕ್ಕಿಗಳ ಚಿಲಿಪಿಲಿಯೂ, ಮಕ್ಕಳ ಕಿಚಿಪಿಚಿಯೂ ರಿಮಿಕ್ಸ್ ಆಗಿ ಕಿವಿ ತುಂಬಿಕೊಳ್ಳುತ್ತಾ ಸುತ್ತಲೂ ಕಣ್ಣಾಡಿಸಿದರೆ ಪ್ರಾಕೃತಿಕ ಪ್ರಯೋಗಾಲಯಕ್ಕೆ ಬಂದಂತೆನಿಸಿತು. ಶಿವಮೊಗ್ಗ ಜಿಲ್ಲೆಯ ಹೊಸನಗರದಿಂದ ನಗರ ದಾರಿಯಲ್ಲಿ 25 ಕಿ.ಮೀ. ಸಾಗಿ ಮುಖ್ಯರಸ್ತೆಯಿಂದ ಒಳದಾರಿಗೆ ಹೊರಳಿ ಒಂದು ಕಿ.ಮೀ. ನಡೆದರೆ ಸಿಗುವ ಸಮಗೋಡು ಶಾಲೆ, ಪುಸ್ತಕದ ಬದನೆಕಾಯಿ ಬೋಧಿಸುವ ನಗರದ ದುಬಾರಿ ಇಂಗ್ಲಿಷ್ ಮೀಡಿಯಂ ಶಾಲೆಗಳಿಗೆ ಒಂದು ಅಣಕವೇ ಸೈ. ಒಂದರಿಂದ ಐದನೇ ತರಗತಿವರೆಗಿನ 19 ಮಕ್ಕಳನ್ನೊಳಗೊಂಡ ಈ ಪುಟ್ಟ ಶಾಲೆಗೆ ಇರುವುದು ಇಬ್ಬರು ಶಿಕ್ಷಕರು. ಶಿಕ್ಷಕಿಯರಿಬ್ಬರ ಮಾರ್ಗದರ್ಶನದಲ್ಲಿ ಈ 38 ಪುಟ್ಟ ಕೈಗಳು ಶಾಲೆಯ ಸುತ್ತ ನಿರ್ಮಿಸಿರುವ ಸುಂದರವಾದ ತೋಟವನ್ನು ನೋಡಬೇಕು ನೀವು. ಈ ತೋಟವನ್ನು 8 ವಿಭಾಗವಾಗಿ ವಿಂಗಡಿಸಲಾಗಿದ್ದು, ಪ್ರತಿ ವಿಭಾಗವನ್ನು 2ರಿಂದ 3 ಮಕ್ಕಳ ಗುಂಪು ನಿರ್ವಹಿಸುತ್ತದೆ. ತಮ್ಮ ವಿಭಾಗದ ಎಲ್ಲ ಸಸ್ಯಸಂಕುಲಗಳ ಉಳಿವಿನ ಜವಾಬ್ದಾರಿ ಆ ಗುಂಪಿನದ್ದು. ಇಲ್ಲಿ ಗುಲಾಬಿ, ಮಲ್ಲಿಗೆ ಇತರೆ ಹೂವಿನ ಗಿಡಗಳೊಂದಿಗೆ ಹಲವು ಔಷಧೀಯ ಸಸ್ಯಗಳೂ, ತರಕಾರಿ ಗಿಡಗಳೂ ಇವೆ. ಪ್ರತಿ ಸಸ್ಯದ ಮುಂದೆ ಅದರ ಹೆಸರಿನ ನಾಮಫಲಕ ಹಾಕಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿನ ಎಲ್ಲ ಮಕ್ಕಳಿಗೂ ಈ ಎಲ್ಲ ಸಸ್ಯದ ಹೆಸರು ಹಾಗೂ ಅದರ ಔಷಧೀಯ ಮೌಲ್ಯ ತಿಳಿದಿದೆ! ಇಲ್ಲಿ ಬೆಳೆವ ತರಕಾರಿಗಳನ್ನು ಮಧ್ಯಾಹ್ನದ ಬಿಸಿಯೂಟದೊಂದಿಗೆ ಬಳಸಲಾಗುತ್ತದೆ. ಆಟದೊಂದಿಗೇ ಪಾಠ ಇಲ್ಲಿರುವ ಬೋರ್‌ವೆಲ್ ನೀರನ್ನೇ ಮಕ್ಕಳ ತೋಟಕ್ಕೆ ಹಾಯಿಸಲಾಗುತ್ತದೆ. ಹಾಗಂತ ಈ ಪುಟ್ಟಮಕ್ಕಳು ಬೋರ್‌ವೆಲ್ ಹೊಡೆಯಬೇಕಾಗಿಲ್ಲ. ಆ ಶ್ರಮವನ್ನು ತಪ್ಪಿಸಲೆಂದೇ ಇಲ್ಲಿ ಹಗ್ಗದ ಮೂಲಕ ಜೀಕಮೂಕವನ್ನು(ಡಜಜಡಛಢಿ) ಜಗ್ಗುವ ಬೋರ್‌ವೆಲ್‌ಗೆ ಕಟ್ಟಿದ್ದಾರೆ. ಮಕ್ಕಳು ಜೀಕಮೂಕ ಆಡಿದಾಗಲೆಲ್ಲ, ಬೋರ್‌ವೆಲ್ ನೀರು ಹತ್ತಿರದ ತೊಟ್ಟಿಗೆ ಹರಿಯುತ್ತದೆ. ಈ ತೊಟ್ಟಿಗೆ ಸೈಕಲ್ ಜೋಡಿಸಿದ್ದಾರೆ. ಮಕ್ಕಳು ಸೈಕ್ಲಿಂಗ್ ಮಾಡಿದಾಗಲೆಲ್ಲ ತೊಟ್ಟಿಯ ನೀರು ಗಿಡಕ್ಕೆ ಹರಿಯುತ್ತದೆ. ಎಷ್ಟೊಂದು ಸರಳ ವಿಜ್ಞಾನ! ಆದರೂ ಪ್ರಾಯೋಗಿಕ ಜ್ಞಾನ ನಮ್ಮಲ್ಲೆಷ್ಟು ಮಂದಿಗೆ ಇದೆ? ತೆರೆದ ಗ್ರಂಥಾಲಯ ಸುತ್ತಲೂ ಸಸ್ಯಗಳಿಂದ ತುಂಬಿಹೋಗಿದ್ದ ಸಭಾಂಗಣದತ್ತ ಅಲ್ಲಲ್ಲಿ ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ತಂತಿಗಳನ್ನು ಕಟ್ಟಿದ್ದಾರೆ. ಆ ತಂತಿಗಳ ಮೇಲೆ ಗ್ರಂಥಾಲಯದ ಪುಸ್ತಕಗಳನ್ನು ಇಡುತ್ತಾರೆ. ಮಕ್ಕಳು ತಮ್ಮ ಅಧ್ಯಯನದ ಸಮಯದಲ್ಲಿ ಇಲ್ಲಿ ಕುಳಿತು ಪ್ರಕೃತಿ ನಡುವೆ ಓದಬಹುದು. ಮಲೆನಾಡು ಮನೆ ಮಕ್ಕಳ ಕುಶಲತೆ ಅಲ್ಲಿಗೇ ನಿಲ್ಲುವುದಿಲ್ಲ. ಅವರು ಬಿದಿರು ಮತ್ತು ಅಡಕೆ ದಬ್ಬೆಯಿಂದ ಮಾಡಿರುವ ಮಲೆನಾಡ ಮನೆ ಎಂಥವರ ಗಮನವನ್ನೂ ಹಿಡಿದು ನಿಲ್ಲಿಸೀತು. ಬಿದಿರಿನಿಂದಲೇ ಶೆಲ್ಫ್‌ಗಳನ್ನು ಮಾಡಲಾಗಿದ್ದು, ಸ್ಥಳೀಯರು ನೀಡಿದ ಪುರಾತನ ವಸ್ತುಗಳನ್ನು ಅಲ್ಲಿಡಲಾಗಿದೆ. ಇದು ಮಕ್ಕಳಿಗೆ ಸಿಗುತ್ತಿರುವ ಇತಿಹಾಸ ಪಾಠ. ವಾಹನ ಚಕ್ರದ ಟ್ಯೂಬಿಗೆ ಸಣ್ಣ ಸಣ್ಣ ಪೈಪ್‌ಗಳನ್ನು ಸೇರಿಸಿ ಹನಿ ನೀರಾವರಿ ಪದ್ಧತಿ ಅಳವಡಿಸಲಾಗಿದೆ. ಶಾಲೆಯ ಕೊಠಡಿ ಒಳಗೆ ಪೇಪರ್ ಪ್ಲೇಟ್, ಪೇಪರ್ ಗ್ಲಾಸ್, ಕನ್ನಡಕ ಇವೆಲ್ಲವನ್ನೂ ಸೃಜನಾತ್ಮಕ ರೀತಿಯಲ್ಲಿ ತಮ್ಮ ಪಾಠದ ಕಲಿಕೆಗೆ ಬಳಸಿದ್ದಾರೆ. 6ರಿಂದ 11 ವಯಸ್ಸಿನ ಈ ಪುಟ್ಟ ಮಕ್ಕಳಲ್ಲಿ ಕೆಲ ಮಕ್ಕಳು ನಿತ್ಯ ದಟ್ಟ ಕಾಡಿನಲ್ಲಿ 8 ಕಿ.ಮೀ. ನಡೆದು ಬಂದರೆ, ಉಳಿದವರು 4ರಿಂದ 5 ಕಿ.ಮೀ. ದೂರದಿಂದ ಬರುತ್ತಾರೆ. ಇಲ್ಲಿನ ಇಬ್ಬರು ಶಿಕ್ಷಕಿಯರೂ ಬಸ್‌ಗಳೇ ವಿರಳವಿರುವ ಈ ಭಾಗದಲ್ಲಿ 20 ಕಿ.ಮೀ. ದೂರದಿಂದ ತಪ್ಪಿಸದೆ ಶಾಲೆಗೆ ಬರುತ್ತಾರೆ. ಮಕ್ಕಳನ್ನು ಯಾಂತ್ರಿಕ ಜೀವನಕ್ಕೆ ತಯಾರಿ ಮಾಡುವ ಇಂದಿನ ವೇಗದ ಜಗತ್ತಿನಲ್ಲಿ ಶಿಕ್ಷಕರ ಸ್ವಾರ್ಥರಹಿತ ಸೇವೆ, ಆಸಕ್ತಿ, ಅದ್ಭುತ ಶಾಲಾ ಸಮಿತಿ ಹಾಗೂ ಪೋಷಕರ ಬೆಂಬಲ ಇಲ್ಲೊಂದು ಸೃಜನಾತ್ಮಕ ಮಾದರಿ ಶಾಲೆಯೆಂಬ ಪ್ರಯೋಗಾಲಯವನ್ನೇ ಹುಟ್ಟುಹಾಕಿದೆ. ದಟ್ಟ ಕಾನನದೊಳಗೆ ಪುಟ್ಟ ಮಕ್ಕಳ ಭವ್ಯ ಭವಿಷ್ಯದ ನಕಾಶೆ ಸದ್ದಿಲ್ಲದೆ ಸಿದ್ಧವಾಗುತ್ತಿದೆ. ತ್ಯಾಜ್ಯ ನಿರ್ವಹಣೆ ಹತ್ತಿರದ ಹಳ್ಳಿಗಳಿಂದ ಸಂಗ್ರಹಿಸಿದ ಮತ್ತು ಬಳಕೆಯಾಗದ ವಾಹನಗಳ ಟೃರುಗಳನ್ನು ಜೋಡಿಸಿ ಕಸದ ಬುಟ್ಟಿ ಮಾಡಿರುವ ಮಕ್ಕಳು, ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಜೈವಿಕ ತ್ಯಾಜ್ಯಗಳನ್ನು ಬೇರೆ ಬೇರೆ ಬುಟ್ಟಿಯಲ್ಲಿ ಹಾಕುತ್ತಾರೆ. ನಗರ ನಾಗರಿಕತೆ ಇದನ್ನೆಲ್ಲ ಕಲಿತೀತೆಂದು? ಸೌರ ಒಲೆ ಇನ್ನು ಇಲ್ಲಿನ ಸಿಂಟೆಕ್ಸ್ ಟ್ಯಾಂಕ್ ಮೇಲೆ ಮಳೆ ನೀರು ಶೇಖರಿಸಲು ಹಳೆಯ ಡಿಶ್ ಆಂಟೆನಾವನ್ನು ಜೋಡಿಸಿದ್ದಾರೆ. ಅಲ್ಲೇ ಹತ್ತಿರದಲ್ಲೆ ಇನ್ನೊಂದು ಡಿಶ್ ಆಂಟೆನಾ ಇದೆ. ಈ ಆಂಟೆನಾವನ್ನು ಸಣ್ಣ ಕೊಳವೆಯೊಂದು ಸುರುಳಿ ಸುರುಳಿಯಾಗಿ ಸುತ್ತಿದೆ. ಆ ಸಣ್ಣ ಕೊಳವೆಯ ಒಂದು ತುದಿ ನಲ್ಲಿಗೆ ಕನೆಕ್ಟ್ ಆಗಿದೆ. ನಲ್ಲಿಯಲ್ಲಿ ಬಿಸಿನೀರು ಬರುತ್ತದೆ. ಹೌದು, ಅದು ಸೌರ ಒಲೆ! ಚಿತ್ರ, ಲೇಖನ: ಮಾಧುರಿ ಎಂ.ಎಸ್. ಕಾರಣಗಿರಿ