ಬೆತ್ತಲೆ ಮರ ಬಿತ್ತಲೇ ಮರವೊಂದರ ಗಾತ್ರ ಎಷ್ಟು ದೊಡ್ಡದಿರಬಹುದು? 10 ಅಡಿ, 15 ಅಡಿ? ಶಿರಸಿ ತಾಲೂಕಿನ ಕೆಂಗ್ರೆ ಹೊಳೆಯ ಕಾನಿನಲ್ಲಿದ್ದ ಮರವೊಂದರ ಸುತ್ತಳತೆ ಅರಿಯಲು 15-20 ಮಂದಿ ಅಕ್ಕಪಕ್ಕ ಕೈ ಅಗಲಿಸಿ ನಿಂತು ಮರವನು ತಬ್ಬಿ ಹಿಡಿಯಬೇಕಿತು. ಇಂಥ ಹೆಮ್ಮರ ಅದೀಗ ಮುರಿದು ಬಿದ್ದಿದೆ. ಸ್ಥಳೀಯರ ಬಾಯಲ್ಲಿ 'ಮಲೆಯಾಳಿ ಮರ' ಎಂದು ಕರೆಸಿಕೊಂಡಿದ್ದ ಈ ಹೆಮ್ಮರದ ನೈಜ ಹೆಸರು ಬೊಂಡಾಲೆ. ಮರದ ಸುತ್ತಳತೆ ಬುಡದಲ್ಲಿ 7 ಮೀಟರ್ (22 ಅಡಿ, 9 ಇಂಚು) ಹಾಗು ಎತ್ತರ 52 ಮೀಟರ್ (169 ಅಡಿ) ಇತ್ತು. ಈ ಮರದ ಅಗಲ ಬೇರುಗಳ ಗಾತ್ರ ಗಮನಿಸಿದರೆ, ಈ ಬೇರುಗಳ ನಡುವೆ ಆರೆಂಟು ಅಡಿಯ ಕೋಣೆಗಳನ್ನೂ ನಿರ್ಮಿಸಿ ಬದುಕಬಹುದಿತಿತು! ಅಗಾಧ ಗಾತ್ರ ಹೊಂದಿದ್ದ ಈ ಮರ, ನೂರಾರು ಜೇನು ಕುಟುಂಬಗಳಿಗೆ ಗೂಡು ಕಟ್ಟಲು ಆಶ್ರಯ ನೀಡಿತ್ತು. ಸ್ಥಳೀಯರು ಈ ಮರಕ್ಕೆ ಪೂಜೆ ಮಾಡಿ ಬಳಿಕ ಜೇನುತುಪ್ಪವನ್ನು ಸಂಗ್ರಹಿಸುತ್ತಿದ್ದರು. ಈ ಕಾರಣದಿಂದಾಗಿ ಈ ಮರವನ್ನು ಜೇನುಮರ ಎಂದೂ ಕರೆಯಲಾಗುತ್ತಿತ್ತು. ಶಿರಸಿ ನಗರದಿಂದ 8 ಕಿ.ಮೀ. ದೂರದ ಕೆಂಗ್ರೆ ಹೊಳೆಯ ಅರವಿಂದ ನರ್ಸರಿ ಬಳಿಯ ಕಾಡಿನಲ್ಲಿದ್ದ ಈ ಮರದ ಆಯುಸ್ಸು 350 ರಿಂದ 400 ವರ್ಷವಿರಬಹುದಂತೆ! ಅಂದರೆ ಬ್ರಿಟಿಷರು ಭಾರತಕ್ಕೆ ಬಂದಿದ್ದು, ವ್ಯಾಪಾರ ಮಾಡಿದ್ದು, ಭಾರತವನ್ನು ವಸಾಹತನ್ನಾಗಿ ಮಾಡಿಕೊಂಡಿದ್ದು, ಭಾರತೀಯರ ಸ್ವಾತಂತ್ರ್ಯ ಹೋರಾಟ, ಸ್ವತಂತ್ರವಾಗಿದ್ದು ಇವೆಲ್ಲಕ್ಕೂ ಮರ ಸಾಕ್ಷಿಯಾಗಿತ್ತು. ನಾಲ್ಕು ಶತಮಾನಗಳ ಕಾಲ ಮರಗಳ್ಳರ ಕೊಡಲಿಯೇಟಿಗೆ ಬಲಿಯಾಗದೇ ನಿಂತಿತ್ತು. ಹುಲೇಕಲ್, ಸಾಲಕಣಿ ಕೆಂಗ್ರೆ ಹೊಳೆ, ಓಣಿಕೇರಿ, ವಾಲಳ್ಳಿ ಈ ಭಾಗದ ಜನರಂತೂ ಈ ದೈತ್ಯ ಮರವನ್ನು ಸ್ಥಳೀಯ ಹೆಮ್ಮೆ ಎಂದೇ ಆರಾಧಿಸುತ್ತ ಬಂದಿದ್ದರು. ಸ್ಥಳೀಯ ಸೆಲೆಬ್ರಿಟಿ ಪರಿಸರ ಹೋರಾಟಗಾರ, ಬರಹಗಾರ ಶಿವಾನಂದ ಕಳವೆಯವರ ಪರಿಸರ ಕಾಳಜಿಯಿಂದಾಗಿ ಈ ಮರದ ರಕ್ಷಣೆ ಕಾರ್ಯವನ್ನು ಅರ್ಯಣ ಇಲಾಖೆ ಕೈ ಗೊಂಡಿತ್ತು. ತನ್ನ ಬೃಹತ್ ಗಾತ್ರದಿಂದಲೇ ಪರಿಸರ ಪ್ರಿಯರನ್ನೂ, ಪ್ರವಾಸಿಗರನ್ನೂ ತನ್ನತ್ತ ಸೆಳೆಯುತ್ತಿತ್ತು. ಪ್ರತಿವಾರ ಈ ಮರವನ್ನು ನೋಡಲೇಂದೇ ನೂರಾರು ಜನ ಕೆಂಗ್ರೆ ಹೊಳೆಯ ಈ ಕಾಡಿಗೆ ಪಿಕ್‌ನಿಕ್ ಬಗುತ್ತಿದ್ದರು. ಮರದ ಬುಡದಲ್ಲಿ ಕುಳತು ಫೋಟೋ ಕ್ಲಿಕ್ಕಿಸುತ್ತಿದ್ದರು. ಮರದ ದೈತ್ಯತೆ, ದೊಡ್ಡ ದೊಡ್ಡ ಬೇರುಗಳನ್ನು ನೋಡಿ ಖುಷಿ ಪಡುತ್ತಿದ್ದರು. 'ಪಶ್ಚಿಮ ಘಟ್ಟದಲ್ಲಿ ಇಂಥ ಮರಗಳು ಸಾಕಷ್ಟಿವೆ. ಪ್ರತಿ ಐದು ಕಿ.ಮೀ.ಗೆ ಒಂದು ದೈತ್ಯ ಮರವಿದ್ದು, ಇಂಥ ದೈತ್ಯ ಮರಕ್ಕೆ ಜೇನುಗಳು ಗೂಡು ಕಟ್ಟಲು ಆಗಮಿಸುತ್ತವೆ. ಮೃದು ಜಾತಿಯ ಈ ಮರ ಬೇಸಿಗೆಯಲ್ಲಿ ತನ್ನ ಸಂಪೂರ್ಣ ಎಲೆಗಳನ್ನು ಉದುರಿಸುತ್ತದೆ. ಆದ್ದರಿಂದಲೇ ಈ ಮರವನ್ನು ಬೆತ್ತಲೆ ಮರ ಎಂದೂ ಕರೆಯಲಾಗುತ್ತದೆ' ಎಂದು ಪರಿಸರ ವಿಜ್ಞಾನಿ ಶಿವಾನಂದ ಕಳವೆ ಹೇಳುತ್ತಾರೆ.ಈ ಬಾರಿಯ ಗಾಳಿ - ಮಳೆಯ ಅಬ್ಬರಕ್ಕೆ ಶತಮಾನಗಳ ಕಥೆ ಹೇಳುತ್ತಿದ್ದ ಮಹಾಮರ ಕಣ್ಮುಚ್ಚಿದೆ. ಜೇನುಗೂಡು, ಹಕ್ಕಿಗಳು, ಕೀಟ, ಪತಂಗಗಳಿಂದ ತುಂಬಿ ತುಳುಕುತ್ತಿದ್ದ ಮರದ ರೆಂಬೆ, ಕೊಂಬೆಗೆಳೆಲ್ಲ ಭೂಮಿಗೊರಗಿವೆ. ಮರ ಮುರಿದು ಬಿದ್ದಿರುವುದು ಸ್ಥಳೀಯರ ಮನಸ್ಸಿಗೆ ತೀವ್ರ ಆಘಾತ ನೀಡಿದೆ. ಮರವೊಂದು ಕಟ್ಟಿಕೊಟ್ಟಿದ್ದ ಕಲರವ ಸ್ತಬ್ಧವಾಗಿದೆ. -ವಿನಯ್ ದಂಟಕಲ್