ಲಾವಂಚಾವತಾರ ನಿಸರ್ಗದ ಸಕಲ ವಸ್ತುಗಳಲ್ಲಿ ಕಲೆ ಕುಳಿತಿದೆ. ಸೌಂದರ್ಯ ಅಡಗಿದೆ. ಅಲ್ಲದೆ, ಅವು ಜನಸಾಮಾನ್ಯರನ್ನು ಆಕರ್ಷಿಸುವ ಶಕ್ತಿ, ಸಾಮರ್ಥ್ಯವನ್ನೂ ಹೊಂದಿವೆ. ಈ ಮಾತಿಗೆ ಚಿತ್ರದಲ್ಲಿ ಕಾಣುವ ಲಾವಂಚ ಕಲಾಕೃತಿಗಳೇ ಅತ್ಯುತ್ತಮ ನಿದರ್ಶನ. ಲಾವಂಚ ಎನ್ನುವುದು ಹುಲ್ಲು ಸಸ್ಯ. ಈ ಹುಲ್ಲು ಸಸ್ಯದ ಬೇರಿನಿಂದ ಬೇರಿನಿಂದ ನಿತ್ಯ ಬಳಕೆಯ ಹಾಗೂ ಅಲಂಕಾರದ ವಸ್ತುಗಳನ್ನು ವೈವಿಧ್ಯಮಯವಾಗಿ ಸಿದ್ಧಪಡಿಸಲಾಗುತ್ತಿದೆ. ಲಾವಂಚದಿಂದ ಸಿದ್ಧಗೊಂಡ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯೂ ಇರುವುದರಿಂದ, ಲಾವಂಚ ಕಲಾಕೃತಿಗಳನ್ನು ತಯಾರಿಸುವವರಿಗೆ ಈ ಕೆಲಸವು ವರದಾನವಾಗಿದೆ. ಉ.ಕ. ಜಿಲ್ಲೆಯ ಭಟ್ಕಳದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಲಾವಂಚದಿಂದ ವಿವಿಧ ವಸ್ತುಗಳನ್ನು ಸಿದ್ಧಪಡಿಸಲಾಗುತ್ತಿದೆ. ಆ ಪ್ರದೇಶದಲ್ಲಿ ಲಾವಂಚ ಸಸ್ಯವನ್ನು ಬೆಳೆಯಲು ಯೋಗ್ಯ ಕೃಷಿ ಭೂಮಿ ಇರುವುದರಿಂದ, ಭಟ್ಕಳ ತಾಲೂಕಿನ ಹಲವು ಪ್ರದೇಶಗಳಲ್ಲಿ ಲಾವಂಚದ ಕೃಷಿ ಮಾಡಲಾಗುತ್ತಿದೆ. ಭಟ್ಕಳವೂ ಈಗ ಲಾವಂಚದಿಂದ ಸಿದ್ಧಪಡಿಸಿದ ವೈವಿಧ್ಯಮಯವಾದ ಕಲಾಕೃತಿಗಳಿಗೆ ಸುಪ್ರಸಿದ್ಧ ತಾಣ. ಈ ಲಾವಂಚ ಕೇವಲ ಕಲಾವಿದರನ್ನಷ್ಟೇ ಸೃಷ್ಟಿಸಿಲ್ಲ. ಆ ಮೂಲಕ ಉದ್ಯೋಗವನ್ನೂ ಸೃಷ್ಟಿಸಿದೆ. ಲಾವಂಚದ ಬೇರನ್ನು ಸೂಕ್ಷ್ಮ ಹಾಗೂ ನಾಜೂಕಾಗಿ ಹಣಿದು ಮಾಡುವ ಕೆಲಸ. ಇದಕ್ಕೆ ತಾಳ್ಮೆ, ಸಂಯಮ, ಶ್ರದ್ಧೆ ಇರಲೇಬೇಕು. ವೈವಿಧ್ಯ ಆಕಾರದ ಗಣಪತಿ, ಸ್ತ್ರೀಯ ವಿವಿಧ ಭಂಗಿಯ, ನಾನಾ ಆಕಾರದ ಮುಖಗಳು, ಟೋಪಿ, ಬೀಸಣಿಗೆ, ಹೂ ಬುಟ್ಟಿ, ಯಕ್ಷವೇಷ... ಹೀಗೆ ಹಲವು ಬಗೆಯ ಕಣ್ಮನ ಸೆಳೆಯುವ ಅಲಂಕಾರದ ಲಾವಂಚದ ಕಲಾಕೃತಿಗಳು ಜನಮನ ಸೆಳೆಯುತ್ತವೆ.ಟ -ಚಿತ್ರ, ಲೇಖನ: ಗಣಪತಿ