ಹುಗ್ಗಿ ಮಠ ನಿಡಸೋಸಿ ಮಠ ಅಂದಾಕ್ಷಣ ನೆನಪಿಗೆ ಬರೋದು ಹುಗ್ಗಿ ದಾಸೋಹ (ಮಹಾದಾಸೋಹ). ಇಲ್ಲಿ ಪ್ರತಿವರ್ಷ ನಡೆಯುವ ಜಾತ್ರೆ ಎಲ್ಲ ಜಾತ್ರೆಗಳಂತೆ ಅಲ್ಲ. ಇದು ಸಮಾನತೆ ಸಾರುವ ಹುಗ್ಗಿ ಜಾತ್ರೆ. ನಿಡಸೋಸಿ ಮಠ ಎಂದರೆ ಹುಗ್ಗಿ ದಾಸೋಹದ ಮಠ ಎಂದೇ ಬೆಳಗಾವಿ ಜಿಲ್ಲೆಯಲ್ಲಿ ಖ್ಯಾತಿ. ನಿತ್ಯ ತ್ರಿವಿಧ ದಾಸೋಹ ನಡೆಯುತ್ತಿದ್ದರೂ ವರ್ಷಕ್ಕೊಮ್ಮೆ ನಡೆಯುವ ಹುಗ್ಗಿ ಜಾತ್ರೆಯದ್ದೇ ಸುದ್ದಿ. ಇದು ಮಹಾದಾಸೋಹ. ನಲವತ್ತು ಕ್ವಿಂಟಲ್ ಗೋಧಿ ಹುಗ್ಗಿ ಪ್ರಸಾದ ಮತ್ತು ಸರಿಸುಮಾರು ಅಷ್ಟೇ ಪ್ರಮಾಣದ ಅನ್ನ ದಾಸೋಹದ ವೈಭವ. ಜಾತಿ, ಮತಗಳ ಬೇಧವಿಲ್ಲದೆ ಎಲ್ಲರೂ ಸಮಾನರಾಗಿ ಪ್ರಸಾದ ಸ್ವೀಕರಿಸುತ್ತಾರೆ. ಮಠದ ಎಲ್ಲ ಕಾರ್ಯಕ್ರಮಗಳನ್ನು ನಿಡಸೋಸಿ ಹಾಗೂ ಸುತ್ತಲಿನ ಗ್ರಾಮದವರು ಹಂಚಿಕೊಂಡು ಮಾಡುವ ಭಕ್ತಿ ಸೇವೆಯಂತೂ ಅದ್ಭುತ. ಮಠದ ಹತ್ತನೆಯ ಪೀಠಾಧಿಪತಿ ಶ್ರೀಮನ್ನಿರಂಜನ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳವರು ಸರ್ವಜನಾಂಗದ ಏಳ್ಗೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಅವರ ಪ್ರಯತ್ನದಿಂದಾಗಿ ಮಠ ಈ ಭಾಗದ ಸಾಂಸ್ಕೃತಿಕ ಅನುಭವ ಮಂಟಪವಾಗಿ ಬೆಳೆದಿದೆ. ಪ್ರಾಥಮಿಕ ಶಾಲೆಯಿಂದ ಪದವಿ ಕಾಲೇಜು, ಡಿಪ್ಲೊಮಾ, ಎಂಜನಿಯರಿಂಗ, ಬಿ.ಸಿ.ಎ ಕಾಲೇಜುಗಳನ್ನು ನಡೆಸುತ್ತಿದೆ. ಕೃಷಿ ಹಾಗೂ ಬೃಹತ್ ಗೋಶಾಲೆ ಹೊಂದಿರುವ ಮಠವು, ಕರ್ನಾಟಕ ಮತ್ತು ಮಹಾರಾಷ್ಟ್ರಗಳ ಅಪಾರ ಭಕ್ತರಿಗೆ ಗಡಿಭಾಗದ ಸಂಗಮ ಕ್ಷೇತ್ರ. ದುರದುಂಡೀಶ್ವರರು ನಿಡಸೋಸಿ ಕ್ಷೇತ್ರದಲ್ಲಿ ಧರ್ಮ ಪೀಠ ಸ್ಥಾಪಿಸಲು ನಿಜಲಿಂಗೇಶ್ವರರಿಗೆ ಆನುಗ್ರಹಿಸಿದರು. 26 ಅಗಸ್ಟ್ ೈ1765 (ಶಾ.ಶ.1687) ರಂದು ಮಠ ಸ್ಥಾಪನೆಯಾಯಿತು. ನೂರೈವತ್ತಕ್ಕೂ ಮೇಲ್ಪಟ್ಟು ಶಿಲಾಸ್ಥಂಭಗಳು, 300ಕ್ಕೂ ಅಧಿಕ ಮರದ ಕೆತ್ತನೆಯ ಕಂಬಗಳು ಭವ್ಯ ವಾಸ್ತುಶಿಲ್ಪಕ್ಕೆ ಸಾಕ್ಷಿ. ರೊಟ್ಟಿ ದಾಸೋಹ ನಿಡಸೋಸಿ ಮಠದಲ್ಲಿ ರೊಟ್ಟಿ ದಾಸೋಹ ಬುಧವಾರ ಆರಂಭವಾಗಿದೆ. ಇಂದು (ಸೆ.12) ಹುಗ್ಗಿ ದಾಸೋಹ (ಮಹಾದಾಸೋಹ). ನಾಳೆ ಮುಂಜಾನೆ 11 ಗಂಟೆಗೆ ಜಗದ್ಗುರು ಶ್ರೀ ದುರದುಂಡೀಶ್ವರ ಮಹಾಶಿವಯೋಗಿಗಳವರ ಉತ್ಸವ ಮೂರ್ತಿಯ ಬೆಳ್ಳಿ ಪಲ್ಲಕ್ಕಿ ಮಹೋತ್ಸವ ನಡೆಯಲಿದೆ. - ಚಿತ್ರ-ಲೇಖನ: ರಾಚಯ್ಯಾ ಸೋ. ಕಮತೆ