ವ್ಹಾಹಣೋದ್ಯಮ ಯಾರ್ಯಾರಿಗೆ ಬುರೇ ದಿನ್ ಬಂದಿದೆಯೋ ಗೊತ್ತಿಲ್ಲ, ಆಟೋಮೊಬೈಲ್ ಇಂಡಸ್ಟ್ರಿಗೆ ಮಾತ್ರ ಅಚ್ಛೇ ದಿನ್ ಬಂದಿದೆ. ಕಳೆದ ಮೂರು ವರ್ಷಗಳಿಂದ ಋಣಾತ್ಮಕ ಬೆಳವಣಿಗೆಗೆ ಅಂಟಿಕೊಂಡಿದ್ದ ವಾಹನೋದ್ಯಮ ಇದೀಗ ಚೇತರಿಕೆ ಕಂಡಿದೆ. ನರೇಂದ್ರ ಮೋದಿ ಪ್ರಧಾನಿಯಾಗಿರುವುದು ಕಾಕತಾಳೀಯವೆಂಬಂತೆ ಭಾರತದ ವಾಹನೋದ್ಯಮ ನಿಜವಾಗಿಯೂ ಚೇತರಿಕೆ ಹಾದಿಯಲ್ಲಿ ದಾಟಿದೆ. ಜೂನ್‌ನಲ್ಲಿ ಭಾರತೀಯ ವಾಹನ ತಯಾರಿಕೆ ಸಂಸ್ಥೆಗಳು ಕಳೆದ 3 ವರ್ಷಕ್ಕಿಂತ ಅಧಿಕ ಪ್ರಮಾಣದ ವ್ಯಾಪಾರ ಕಂಡಿವೆ. ಹಿಂದಿನ ಯುಪಿಎ ಸರ್ಕಾರದ ಕೊನೆಯ ಬಜೆಟ್‌ನಲ್ಲೇ ಕಾರುಗಳ ಮೇಲಿನ ಅಬಕಾರಿ ಸುಂಕ ಕಡಿತ ಮಾಡಿರುವುದು ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ. ಆದರೆ ಇರಾಕ್‌ನಲ್ಲಿ ನಡೆಯುತ್ತಿರುವ ಯುದ್ಧದ ಕರಿನೆರಳು ಮತ್ತೆ ವಾಹನೋದ್ಯಮದ ನಿದ್ದೆಗೆಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಆದಾಗ್ಯೂ ಜುಲೈನಲ್ಲಿ ಮಂಡನೆಯಾಗಲಿರುವ ಮೋದಿ ಸರ್ಕಾರದ ಚೊಚ್ಚಲ ಬಜೆಟ್ ಮೇಲೆ ಉದ್ಯಮ ದೊಡ್ಡ ಆಸೆ ಇರಿಸಿಕೊಂಡಿದೆ. 2014ರ ಕೊನೆಯ ತ್ರೈಮಾಸಿಕದಲ್ಲಿ ಹೋಂಡಾ ಕಂಪನಿ ಹೊರತುಪಡಿಸಿ ಉಳಿದವೆಲ್ಲ ಋಣಾತ್ಮಕ ಪಥದಲ್ಲಿ ಸಾಗಿದ್ದವು. ಅಮೇಝ್ ಹಾಗೂ ಸಿಟಿಯ ಡೀಸೆಲ್ ಮಾದರಿಯು ಜನರಲ್ಲಿ ಜೋಶ್ ಮೂಡಿಸಿದ್ದರಿಂದ ಹೋಂಡಾ ಸಂಸ್ಥೆಯು ಶೇ.75ರಷ್ಟು ಅಚ್ಚರಿಯ ಬೆಳವಣಿಗೆ ಕಂಡಿದೆ. ಕಳೆದ 2013ರ ಜೂನ್‌ನ ಮಾರುಕಟ್ಟೆಯನ್ನು ನೋಡಿದಾಗ ಮಾರುತಿ ಸುಝುಕಿ ಶೇ.31.10 ರಷ್ಟು ಹೆಚ್ಚು ಮಾರಾಟ ಕಂಡಿದೆ. ಮೊದಲ ತ್ರೈಮಾಸಿಕದ ಬೆಳವಣಿಗೆ ಕೇವಲ ಶೇ.10.30ಕ್ಕೆ ಸೀಮಿತವಾಗಿದ್ದರೂ ಅಬಕಾರಿ ಸುಂಕ ಇಳಿಕೆ ಪ್ರಭಾವ ಜೂನ್ ತಿಂಗಳ ಮಾರಾಟದಲ್ಲಿ ಕಂಡುಬಂದಿದೆ. ಎಂದಿನಂತೆ ಸಣ್ಣ ಕಾರುಗಳ ವಿಭಾಗವೇ ತನ್ನ ಪಾರುಪತ್ಯ ಸಾಧಿಸಿದ್ದು, ಆಲ್ಟೋ 800, ಆಲ್ಟೋ ಕೆ, ಎ-ಸ್ಟಾರ್ ಹಾಗೂ ವೆಗನ್‌ಆರ್ ವಿಭಾಗದಲ್ಲಿ ಶೇ.51.20ರಷ್ಟು ಏರಿಕೆಯಾಗಿದೆ. ಹೊಸ ಸೆಲೆರಿಯೋ ಕಾರು ಮಾರುಕಟ್ಟೆಯಲ್ಲಿ ಸದ್ದು ಮಾಡಿರುವುದರ ಪರಿಣಾಮವಾಗಿ ಹ್ಯಾಚ್‌ಬ್ಯಾಕ್ ವಿಭಾಗದಲ್ಲೂ ಮಾರುತಿ ಸುಝುಕಿ ಸಂಸ್ಥೆಗೆ ಖುಷಿ ಸುದ್ದಿ ಬಂದಿದೆ. ಹಳೇ ಕಾರುಗಳ ವಿಭಾಗದಲ್ಲಿ ಡಿಝೈರ್ ಎಂದಿನಂತೆ ಮಾರುತಿ ಪಾಲಿಗೆ ಶುಕ್ರದೆಸೆಯಾಗಿದೆ. ಭಾರತದ ಎರಡನೇ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾದ ಹುಂಡೈ ತನ್ನ ಮಾರಾಟದಲ್ಲಿ ಶೇ.9.49ರಷ್ಟು ವೃದ್ಧಿ ಸಾಧಿಸಿದ್ದು, ಜೂನ್‌ನಲ್ಲಿ 33.514 ಕಾರನ್ನು ಗ್ರಾಹಕರ ಮನೆ ಬಾಗಿಲಿಗೆ ನಿಲ್ಲಿಸಿದೆ. ಆದರೆ ರಫ್ತು ವಹಿವಾಟಿನಲ್ಲಿ ಇದೇ ಮೊದಲ ಬಾರಿಗೆ ಕುಸಿತ ಕಂಡಿರುವ ಹುಂಡೈಗೆ ಸ್ವಲ್ಪ ಸಿಹಿ, ಕೊಂಚ ಕಹಿ. ಆದರೆ ಈ ಮಾಸಿಕ ವರದಿ ಮಹೀಂದ್ರಾ ಪಾಲಿಗೆ ಕೇವಲ ಚೇತರಿಕೆ ನೀಡಿದೆಯೇ ಹೊರತು ತ್ರೈ ಮಾಸಿಕದ ಮಾರಾಟ ಪ್ರಮಾಣ ಹೆಚ್ಚಿಸಲು ಸಾಧ್ಯವಾಗಿಲ್ಲ. ಈ ತ್ರೈ ಮಾಸಿಕದಲ್ಲಿ ಋಣಾತ್ಮಕ ಬೆಳವಣಿಗೆ ಕಂಡಿರುವ ಏಕೈಕ ಭಾರತೀಯ ಕಾರು ತಯಾರಕ ಕಂಪನಿ ಇದಾಗಿದೆ. ಯಾವುದೇ ಹೊಸ ವಾಹನಗಳನ್ನು ಮಾರುಕಟ್ಟೆಗೆ ಬಿಡದಿರುವುದರ ಪರಿಣಾಮವಿದು. ಜೂನ್ ತಿಂಗಳ ಮಾರಾಟದಲ್ಲಿ ಶೇ.3ರಷ್ಟು ಮತ್ತೊಂದು ಇಳಿಕೆಯನ್ನು ಸಂಸ್ಥೆ ಕಂಡಿದೆ. ಒಟ್ಟಾರೆ 2014-15ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ.10ರಷ್ಟು ವ್ಯಾಪಾರ ಕುಸಿತ ಕಂಡಿದೆ. ಆದರೆ ರಫ್ತು ವಹಿವಾಟಿನಲ್ಲಿ ಶೇ.6.84ರಷ್ಟು ಏರಿಕೆಯಾಗಿರುವುದು ಮಹೀಂದ್ರಾ ಪಾಲಿಗೆ ಕೊಂಚ ನಿರಾಳ ಮೂಡಿಸಿದೆ. ವರ್ಷದ ಹೈಫೋಕಸ್ ಕಾರು ಈ ವರ್ಷದ ಹೈ ಫೋಕಸ್ ಹಾಗೂ ಜನರ ಆಕರ್ಷಣೆ ಗಿಟ್ಟಿಸಿದ ಕಾರು ಎಂಬ ಹೆಗ್ಗಳಿಕೆಯನ್ನು ಹೋಂಡಾ ಸಿಟಿ ಡೀಸೆಲ್ ಪಡೆದಿದೆ. ಹೋಂಡಾ ಸಿಟಿ ಹಾಗೂ ಸಣ್ಣ ಪ್ರಮಾಣದಲ್ಲಿ ಅಮೇಝ್‌ನಿಂದ ಈ ಆರ್ಥಿಕ ವರ್ಷದಲ್ಲಿ ಹೋಂಡಾ ಸಂಸ್ಥೆಯು ಗುಟುರು ಹಾಕುತ್ತಿದೆ. ಈ ರೇಸಿಗೆ ಸದ್ಯದಲ್ಲೇ ಹೊಸ ಮೊಬಿಲಿಯೋ ಕೂಡ ಸೇರಲಿದೆ. ಇವೆಲ್ಲದರ ಪರಿಣಾಮದಿಂದ ಹೋಂಡಾ ಸಂಸ್ಥೆಯು ಶೇ.75ರಷ್ಟು ಬೆಳವಣಿಗೆ ಸಾಧಿಸಿದೆ. ಆದರೆ ಸಂಸ್ಥೆಯ ಒಟ್ಟು ಮಾರಾಟವು ಮಾರುತಿಯ ಶೇ.20ರಷ್ಟನ್ನು ದಾಟಿಲ್ಲ. ಮೊದಲ ತ್ರೈಮಾಸಿಕದಲ್ಲೂ ಶೇ.40ರಷ್ಟು ಬೆಳವಣಿಗೆ ಸಾಧಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ ಹೆಚ್ಚು ತೇಜಿಯಲ್ಲಿದ್ದ ಕಾರೆಂದರೆ ಫೋರ್ಡ್ ಇಕೋ ಸ್ಪೋರ್ಟ್. ಇದೇ ಕಾರಿನ ಪರಿಣಾಮದಿಂದ ಒಟ್ಟು ಮಾರಾಟದಲ್ಲಿ ಕೊಂಚ ಏರಿಕೆಯಾಗಿದ್ದರೂ, ಉಳಿದ ಕಾರುಗಳ ಮಾರಾಟ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಕುಸಿದಿದೆ. ಅಬಕಾರಿ ಸುಂಕ ಇಳಿಕೆ ಕಾರಣದಿಂದ ರಫ್ತಿನಲ್ಲೂ ಶೇ.36ರಷ್ಟು ಹೆಚ್ಚಳ ಕಂಡಿದೆ. ಇನ್ನು ಟೊಯೋಟಾ ಕೂಡ ಶೇ.9ರಷ್ಟು ಬೆಳವಣಿಗೆ ಕಂಡಿದ್ದು, ಹೊಸ ಇಟಿಯೋಸ್ ಸಂಸ್ಥೆಯ ಕೈ ಹಿಡಿಯುವ ಎಲ್ಲ ಸೂಚನೆ ಕಾಣುತ್ತಿದೆ. = ರಾಜೀವ್ ಹೆಗಡೆ