ಸಣ್ಣ ಜ್ವರ ಬಂದರೂ ನಿರ್ಲಕ್ಷ್ಯ ಬೇಡ, ಎಚ್‌1ಎನ್‌1 ಆಗಿರುವ ಸಾಧ್ಯತೆ! ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಸಾಂಕ್ರಾಮಿತ ರೋಗಗಳ ದಾಳಿ ಹೆಚ್ಚಾಗಿದ್ದು, ಮಹಾಮಾರಿ ಎಚ್ 1 ಎನ್ 1, ಚಿಕುನ್ ಗುನ್ಯಾ ಹಾಗೂ ಡೆಂಘೀ ಜ್ವರಗಳ ಹಾವಳಿ ರಾಜ್ಯದಲ್ಲಿ ಹೆಚ್ಚಾಗಿದೆ. ಬೆಂಗಳೂರು: ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಸಾಂಕ್ರಾಮಿತ ರೋಗಗಳ ದಾಳಿ ಹೆಚ್ಚಾಗಿದ್ದು, ಮಹಾಮಾರಿ ಎಚ್ 1 ಎನ್ 1, ಚಿಕುನ್ ಗುನ್ಯಾ ಹಾಗೂ ಡೆಂಘೀ ಜ್ವರಗಳ ಹಾವಳಿ ರಾಜ್ಯದಲ್ಲಿ ಹೆಚ್ಚಾಗಿದೆ. ಮಳೆಗಾಲದ ವಾತಾವರಣ ಸೊಳ್ಳೆ ಉತ್ಪತ್ತಿಗೆ ಪೂರಕವಾಗಿದ್ದು, ತೀವ್ರ ಚಳಿ ಹಾಗೂ ಕಡಿಮೆ ಬಿಸಿಲು ಸೋಂಕು ವೃದ್ಧಿಗೆ ಕಾರಣವಾಗುತ್ತದೆ. ಮಳೆಗಾಲದಲ್ಲಿ ಸೊಳ್ಳೆಗಳ ಲಾರ್ವಾ ಹೆಚ್ಚಾಗಿ ಉತ್ಪತ್ತಿ ಆಗುವುದರಿಂದ ಡೆಂಘೀ, ಚಿಕೂನ್‌ಗುನ್ಯಾ, ಮಲೇರಿಯಾ ರೋಗಗಳು ಹೆಚ್ಚಾಗಿವೆ. ಮನೆ ಸುತ್ತಮುತ್ತ, ಸಾರ್ವಜನಿಕ ಪ್ರದೇಶಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡಿ ಸ್ವಚ್ಛತೆ ಕಾಪಾಡುವಲ್ಲಿ ಪ್ರಯತ್ನ ಪಟ್ಟರೂ ಸೊಳ್ಳೆ ಕಡಿಮೆಯಾಗುತ್ತಿಲ್ಲ. ಅವು ಶುದ್ಧ ನೀರಿನಲ್ಲಿ ಹರಡುವುದರಿಂದ ಉತ್ಪತ್ತಿ ಆಗದಂತೆ ನಿರ್ಮೂಲನೆ ಕುರಿತಂತೆ ಜನರು ಜಾಗೃತರಾಗಬೇಕು ಎಂದು ಆರೋಗ್ಯಾಧಿಕಾರಿಗಳು ಹೇಳುತ್ತಿದ್ದಾರೆ. ಡೆಂಘೀ ಹಾಗೂ ಚಿಕೂನ್‌ ಗುನ್ಯಾ ಕಾಯಿಲೆ ಈಡಿಸ್‌ ಸೊಳ್ಳೆ ಕಡಿತದಿಂದ ಬರುವುದರಿಂದ ಡೆಂಘೀ ಜತೆಗೆ ಚಿಕೂನ್‌ ಗುನ್ಯಾ ರೋಗವೂ ನಿಧಾನವಾಗಿ ಹರಡುತ್ತಿದೆ. ಬೀದಿ ಬದಿ ವ್ಯಾಪಾರಿಗಳು, ಮಾರುಕಟ್ಟೆ, ಹೋಟೆಲ್‌-ಕ್ಯಾಂಟೀನ್‌ ಗಳಲ್ಲಿ ಹೊರಗೆ ಎಸೆಯುತ್ತಿರುವ ತ್ಯಾಜ್ಯ, ಜತೆಗೆ ನಗರದಲ್ಲಿ ಸರಿಯಾಗಿ ಆಗದ ಕಸ ವಿಲೇವಾರಿ, ಅಲ್ಲಲ್ಲಿ ಗುಂಡಿಮಯವಾದ ರಸ್ತೆಗಳಲ್ಲಿ ನಿಂತ ನೀರು, ಖಾಲಿ ನಿವೇಶನಗಳಲ್ಲಿ ಕಂಡುಬರುತ್ತಿರುವ ಕಸದ ರಾಶಿಗಳ ವಸ್ತುಗಳಲ್ಲಿ ನೀರು ನಿಂತು ಡೆಂಘೀ ಸೊಳ್ಳೆಗಳ ಉತ್ಪತ್ತಿ ತಾಣಗಳಾಗಿ ಪರಿವರ್ತನೆಗೊಂಡಿವೆ. ಹೀಗಾಗಿ ಜನರು ಹೆಚ್ಚು ಜಾಗೃತರಾಗಿರಬೇಕಾಗಿದ್ದು, ಸಣ್ಣ ಜ್ವರ ಕೂಡ ಎಚ್ 1ಎನ್ 1 ಆಗಿರುವ ಸಾಧ್ಯತೆ ಇರುತ್ತದೆ. ಹೀಗಾಗಿ ಆಗ್ಗಿಂದಾಗಲೇ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆಯುವುದು ಉತ್ತಮ. ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ರಾಜೀವ್ ಗಾಂಧಿ ಎದೆರೋಗ ಸಂಸ್ಥೆಯ ನಿರ್ದೇಶಕರಾದ ಡಾ.ಶಶಿಧರ್ ಬುಗ್ಗಿ ಅವರು, ಈ ಹಿಂದೆ ಆಸ್ಪತ್ರೆಗೆ ಸಣ್ಣ ಮಗುವೊಂದು ದಾಖಲಾಗಿತ್ತು. ಸಣ್ಣ ಪ್ರಮಾಣದ ಜ್ವರದಿಂದ ಮಗುವನ್ನು ಆಸ್ಪತ್ರೆಗೆ ದಾಖಲಾಗಿತ್ತು. ಮಗು ಸತತ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿತ್ತು. ಸತತ ಮೂರು ದಿನಗಳ ಚಿಕಿತ್ಸೆ ಬಳಿಕವೂ ಮಗುವಿನ ಆರೋಗ್ಯದಲ್ಲಿ ಸುಧಾರಣೆ ಕಾಣಲಿಲ್ಲ. ಹೀಗಾಗಿ ಮಗುವನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಿದಾಗ ಮಗು ಎಚ್ 1 ಎನ್ 1 ವೈರಾಣು ಸೋಂಕಿನಿಂದ ಬಳಲುತ್ತಿದ್ದ ವಿಚಾರ ಬೆಳಕಿಗೆ ಬಂತು ಎಂದು ಹೇಳಿದ್ದಾರೆ. ಇನ್ನು ಕೆಲವು ಪ್ರಕರಣಗಳಲ್ಲಿ ಡಯೇರಿಯಾ (ಅತಿಸಾರ-ಬೇದಿ)ದಂತಹ ಸಮಸ್ಯೆಗಳು ಕಂಡುಬಂದಿದೆ. ಎಚ್ 1ಎನ್ 1 ಮೇಲ್ನೋಟಕ್ಕೆ ಕಾಣಿಸುವ ಕಾಯಿಲೆಯಲ್ಲ. ಈ ವೈರಾಣುಗಳನ್ನು ಪರೀಕ್ಷೆಗಳಿಂದ ಮಾತ್ರ ಪತ್ತೆ ಹಚ್ಚಬಹುದು ಎಂದು ಬುಗ್ಗಿ ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಇದೇ ವಿಚಾರವಾಗಿ ಮಾತನಾಡಿರುವ ಮಣಿಪಾಲ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಸುದರ್ಶನ್ ಬಳ್ಳಾಲ ಅವರು, ಎಚ್ 1ಎನ್ 1 ನಂತಹ ಮಾರಣಾಂತಿಕ ಕಾಯಿಲೆಗಳನ್ನು ಆರಂಭದಲ್ಲೇ ಗುರುತಿಸಿ ಚಿಕಿತ್ಸೆ ಪಡೆಯುವುದು ಉತ್ತಮ. ಜ್ವರ ಸಣ್ಣ ಪ್ರಮಾಣದಲ್ಲಿರುವಾಗಲೇ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಪರೀಕ್ಷೆಗಳನ್ನು ಮತ್ತು ಚಿಕಿತ್ಸೆ ಪಡೆದರು ಅವುಗಳನ್ನು ತಡೆಯಬಹುದು ಎಂದು ಹೇಳಿದ್ದಾರೆ.