ಮಾಸ್ತರರ ಪಲ್ಲಕ್ಕಿ ರೇವಣಸಿದ್ದಪ್ಪ ಮಾಸ್ತರರ ಪಲ್ಲಕ್ಕಿ ಬರುತ್ತೆ ಎಂದರೆ ಗ್ರಾಮದ ಚಿಕ್ಕವರು, ದೊಡ್ಡವರು ಎಂಬ ಬೇಧವಿಲ್ಲದೆ ಎಲ್ಲರೂ ರಸ್ತೆಯ ಮೇಲೆ ಅಡ್ಡಲಾಗಿ ಮಲಗುತ್ತಾರೆ. ರಸ್ತೆಗೆ ಅಡ್ಡಲಾಗಿ ಮಲಗಿದ ಜನರನ್ನು ದಾಟುತ್ತಾ ಪಲ್ಲಕ್ಕಿ ಮುಂದೆ ಸಾಗುತ್ತದೆ. ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಅಥರ್ಗಾ ಗ್ರಾಮದ ಶಿಕ್ಷಕ ದಿ. ರೇವಣಸಿದ್ದಪ್ಪ ಮಾಸ್ತರರ ಬಗ್ಗೆ ಜನರಲ್ಲಿ ಎಷ್ಟು ಗೌರವ, ಭಕ್ತಿ ಇದೆ ಎನ್ನುವುದಕ್ಕೆ ಇದು ಸಾಕ್ಷಿ. ಗ್ರಾಮಸ್ಥರು ಶಿಕ್ಷಕನನ್ನು ದೇವರ ಸ್ಥಾನದಲ್ಲಿ ಕಂಡಿದ್ದು ನೋಡಿದರೆ, ಒಬ್ಬ ಶಿಕ್ಷಕ ಸರಿಯಾಗಿ ವೃತ್ತಿ ನಿರ್ವಹಿಸಿದರೆ ಜನತೆ ಅವರನ್ನು ಯಾವ ರೀತಿ ಕಾಣುತ್ತಾರೆ ಎಂಬುದಕ್ಕೆ ಇವರು ಒಂದು ನಿದರ್ಶನ. ಲೋಕಕ್ಕೆ ಶಿಕ್ಷಣದ ಬೆಳಕನ್ನು ಹರಡಿ, ಜನ ಮೆಚ್ಚುಗೆಗೆ ಪಾತ್ರನಾಗಿ, ಆದರ್ಶ ಶಿಕ್ಷಕನಾಗಿ ಬಾಳಿದ ರೇವಣಸಿದ್ದಪ್ಪ ಮಾಸ್ತರರ ನೆನಪಿಗಾಗಿ ಇಂಡಿ ತಾಲೂಕಿನ ಅಥರ್ಗಾ ಗ್ರಾಮದಲ್ಲಿ 1925ರಲ್ಲಿ ದೇವಸ್ಥಾನ ನಿರ್ಮಿಸಿ, ಪ್ರತಿ ವರ್ಷ ಶಿವರಾತ್ರಿಯಂದು ರೇವಣಸಿದ್ಧೇಶ್ವರ ಜಾತ್ರೆಯಂದು ಪಲ್ಲಕ್ಕಿ ಉತ್ಸವ ನಡೆಸುತ್ತಾರೆ. ರೇವಣಸಿದ್ದಪ್ಪ ಮಾಸ್ತರ ಪಲ್ಲಕ್ಕಿ ಮೆರವಣಿಗೆ ಬರುವುದನ್ನು ದೂರದಿಂದಲೇ ನೋಡಿ ಮನೆ ಮುಂದೆ ನಿಲ್ಲುವ ಗ್ರಾಮಸ್ಥರು, ಪಲ್ಲಕ್ಕಿ ಹತ್ತಿರ ಬರುತ್ತಿದ್ದಂತೆ ರಸ್ತೆಯ ಮೇಲೆ ಅಡ್ಡಲಾಗಿ ಮಲಗುತ್ತಾರೆ. ಪಲ್ಲಕ್ಕಿ ಹೊತ್ತವರು ಜನರನ್ನು ದಾಟಿ ಮುಂದೆ ಹೋಗುತ್ತಾರೆ. ಶಿಕ್ಷಕರೊಬ್ಬರನ್ನು ಭಕ್ತಿಯಿಂದ ದೇವರ ಸ್ಥಾನದಲ್ಲಿರಿಸಿ ಪೂಜಿಸುತ್ತಾರೆ ಎಂದರೆ ಆ ಶಿಕ್ಷಕ ಹೇಗಿದ್ದರು ಊಹಿಸಿಕೊಳ್ಳಿ! ಆಧ್ಯಾತ್ಮದಲ್ಲಿ ಅಪಾರ ಆಸಕ್ತಿ ಹೊಂದಿದ್ದ ರೇವಣಸಿದ್ದಪ್ಪ ಮಾಸ್ತರ ಅವರು, ಬಿಜಾಪುರ ಜಿಲ್ಲೆಯ ಮನಗೂಳಿ ಗ್ರಾಮದ ಅವರಸಂಗ ಮನೆತನದ ಶಿವಪ್ಪ ಹಾಗೂ ಲಕ್ಷ್ಮೀಬಾಯಿ ದಂಪತಿ ಪುತ್ರ. ಜನನ- ಮೇ 26, 1889. ಶಿಕ್ಷಣ ಮುಗಿಸಿ ಅಥರ್ಗಾ ಗ್ರಾಮದ ಶಾಲೆಗೆ ಶಿಕ್ಷಕರಾಗಿ 1910ರಲ್ಲಿ ಸೇವೆ ಆರಂಭ. ನಿಧನರಾಗುವ ತನಕ ಸೇವೆಯಲ್ಲಿ ಇದ್ದರು. ರೇವಣಸಿದ್ದಪ್ಪ ಅವರ ಪ್ರಾಮಾಣಿಕತೆ, ಪಾಠ ಮಾಡುವ ರೀತಿ, ಗ್ರಾಮದ ಪ್ರತಿ ಮನೆಗೂ ತೆರಳಿ ನೀಡುತ್ತಿದ್ದ ಆಧ್ಯಾತ್ಮಿಕ ಪ್ರವಚನದಿಂದ ಪ್ರಭಾವಿತರಾದ ಗ್ರಾಮಸ್ಥರು, ರೇವಣಸಿದ್ದಪ್ಪ ಅವರನ್ನು ತಮ್ಮೂರಿನ ದೇವರೆಂದು ಭಾವಿಸಿದ್ದರು. ಇಂತಹ ಆದರ್ಶ, ಪ್ರಮಾಣಿಕ ಶಿಕ್ಷಕ 1925 ಫೆಬ್ರುವರಿ 23ರಂದು ನಿಧನರಾದರು. ಅವರ ನೆನಪಿಗಾಗಿ ಅದೇ ವರ್ಷ ಗ್ರಾಮದಲ್ಲಿ ದೇವಸ್ಥಾನ ನಿರ್ಮಿಸಿ ಜಾತ್ರೆ ನಡೆಸುತ್ತಿದ್ದಾರೆ. ಮೊದಲ ನಮನ ಗ್ರಾಮದ ಪ್ರತಿಯೊಬ್ಬರೂ ಇಂದಿಗೂ ತಮ್ಮ ದೈನಂದಿನ ಚಟುವಟಿಕೆಗಳನ್ನು ಮಾಡುವ ಮೊದಲು ರೇವಣಸಿದ್ದಪ್ಪ ಮಾಸ್ತರ ಗುಡಿಗೆ ಭೇಟಿ ನೀಡುತ್ತಾರೆ. ದೇವಸ್ಥಾನದಲ್ಲಿ ರೇವಣಸಿದ್ದಪ್ಪ ಮಾಸ್ತರರ ಆಳೆತ್ತರದ ಪಂಚಲೋಹದಿಂದ ಮೂರ್ತಿಗೆ ಪ್ರತಿನಿತ್ಯ ಪೂಜೆ ನಡೆಸಲಾಗುತ್ತದೆ. ಅದಕ್ಕಾಗಿಯೇ ಒಬ್ಬ ಪೂಜಾರಿಯನ್ನು ಗ್ರಾಮಸ್ಥರು ನೇಮಿಸಿದ್ದಾರೆ. - ಖಾಜು ಸಿಂಗೆಗೋಳ