ಹೋಂಡಾ ಮೊಬಿಲಿಯೊ ಮಧ್ಯಮವರ್ಗದ ಇನೋವಾ! 7 ಜನ ಪ್ರಯಾಣಿಕರಿಗೆ ಸ್ಥಳ ನೀಡುವ ಟೊಯೋಟಾದ 'ಇನೋವಾ', ಮಹೀಂದ್ರಾದ 'ಕ್ಸೈಲೋ' ಕಾರುಗಳು ಮಧ್ಯಮ ವರ್ಗಕ್ಕೆ ಯಾವತ್ತೂ ದುಬಾರಿಯೇ. ಆದರೆ, ಹೋಂಡಾದ ಮೊಬಿಲಿಯೋ ಹಾಗಲ್ಲ... ತುಂಬು ಕುಟುಂಬದ ಜಾಲಿಟ್ರಿಪ್ಪಿಗೆ ಸಣ್ಣ ಕಾರು ಸಾಲದು. ದೊಡ್ಡದೇ ಬೇಕು. ಹೋಂಡಾ ಬಿಡುಗಡೆ ಮಾಡಿರುವ 'ಮೊಬಿಲಿಯೋ' ಈ ಕೊರತೆ ನೀಗಿಸಿದ್ದು, 7 ಜನ ಆರಾಮವಾಗಿ ಕುಳಿತು ಪಯಣಿಸಬಹುದು. ಹೆಚ್ಚು ಜನ ಕುಳಿತುಕೊಳ್ಳುವಂತೆ ಸೀಟುಗಳನ್ನು ಮಡಚಬಹುದಾದ 'ಎಂಪಿವಿ' ವಿಭಾಗಕ್ಕೆ ಮೊಬಿಲಿಯೊ ಮೂಲಕ ಹೋಂಡಾ ಸಂಸ್ಥೆ ಕಾಲಿಟ್ಟಿದೆ. 7 ಜನ ಪ್ರಯಾಣಿಕರಿಗೆ ಸ್ಥಳ ನೀಡುವ ಟೊಯೋಟಾದ 'ಇನೋವಾ', ಮಹೀಂದ್ರಾದ 'ಕ್ಸೈಲೋ' ಕಾರುಗಳು ಮಧ್ಯಮ ವರ್ಗಕ್ಕೆ ದುಬಾರಿ ಎಂದೆನಿಸಿವೆ. ಇವುಗಳಿಗೆ ಹೋಲಿಸಿದರೆ ರು. 6 ಲಕ್ಷ ಆರಂಭ ಬೆಲೆ ಹೊಂದಿರುವ ಮೊಬಿಲಿಯೊ ಮಧ್ಯಮ ವರ್ಗದ ಜೇಬಿಗೆ ಅದೆಷ್ಟೋ ಪಾಲು ಹಿತ. ಮಾರುತಿಯ 'ಎರ್ಟಿಗಾ' ಹಾಗೂ ಟೊಯೋಟಾದ 'ಇನೋವಾ' ಕಾರುಗಳಿಗೆ ಮೊಬಿಲಿಯೊ ಹೋಲಿಕೆಯಾಗುತ್ತಿದ್ದರೂ, ಎರಡೂ ಕಾರುಗಳಿಗೆ ಭಿನ್ನವಾಗಿ ಮೊಬಿಲಿಯೊ ಕಾಣಿಸಿಕೊಂಡಿದೆ. ಕಾರಿನಲ್ಲಿ ಸುಲಭವಾಗಿ ಮಡಚಲು ಸೀಟನ್ನು ತೆಳುವಾಗಿಸಲಾಗಿದೆ. ಕಾರಿನ ಸ್ಪೋರ್ಟಿ ಲುಕ್ಕು ಪ್ರಧಾನ ಆಕರ್ಷಣೆ. ಮುಂಭಾಗದಿಂದ ಹಿಡಿದು ಕಿಟಕಿಗಳ ಅಂಚುಗಳಲ್ಲೂ ಸ್ಪೋರ್ಟಿ ಲುಕ್ ಹಿಡಿದಿಡಲಾಗಿದೆ. ಗಾಳಿಯನ್ನು ಸೀಳಿ ಮುನ್ನುಗ್ಗುವ ಕಾರಿನ ವೇಗಕ್ಕೆ ಅನುಕೂಲವಾಗುವಂತೆ ಸ್ಪೋರ್ಟಿ ಲುಕ್ ನೀಡಲಾಗಿದೆ. ಮುಂಭಾಗ ಹಾಗೂ ಹಿಂಬದಿಯಲ್ಲಿ ಆಕರ್ಷಕವೆನಿಸುವ ಬಂಪರ್‌ಗಳಿವೆ. ಎಲ್‌ಇಡಿ ಪೊಸಿಶನ್ ಪಡೆದಿರುವ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಹಗುರವಾದ ಅಲಾಯ್ ಚಕ್ರಗಳು, ಸ್ಪೋರ್ಟಿ ಎನ್ನಿಸುವ ಕ್ರೋಮ್ ಗ್ರಿಲ್, ಕ್ರೋಮ್ ಎಕ್ಸ್‌ಟೀರಿಯರ್ ಡೋರ್‌ನ ಹ್ಯಾಂಡಲ್‌ಗಳನ್ನು ಆಕರ್ಷಕವಾಗಿ ಅಳವಡಿಸಲಾಗಿದೆ. ಡೀಸೆಲ್ ಎಂಜಿನ್ ಕಾರು 3,600 ಆರ್‌ಪಿಎಂಗೆ 100 ಅಶ್ವಶಕ್ತಿ, 1750 ಅರ್‌ಪಿಎಂಗೆ 200 ಎನ್‌ಎಂ ಗರಿಷ್ಠ ಟಾರ್ಕ್‌ನೊಂದಿಗೆ ಲೀಟರ್‌ಗೆ 24.2 ಕಿ.ಮೀ. ಮೈಲೇಜ್ ನೀಡುತ್ತದೆ. ಪೆಟ್ರೋಲ್ ಎಂಜಿನ್ ಕಾರು 6,600 ಆರ್‌ಪಿಎಂಗೆ 199 ಅಶ್ವಶಕ್ತಿ, 4,600 ಆರ್‌ಪಿಎಂಗೆ 145 ಎನ್‌ಎಂ ಗರಿಷ್ಠ ಟ್ರಾಕ್‌ನೊಂದಿಗೆ ಲೀಟರ್‌ಗೆ 17.7 ಕಿ.ಮೀ. ಮೈಲೇಜ್ ನೀಡುತ್ತದೆ. ಎರಡೂ ವಿಧದ ಕಾರಿಗೆ 5 ಸ್ಪೀಡ್ ಗೇರ್ ಬಾಕ್ಸ್ ಅಳವಡಿಸಲಾಗಿದೆ. ಬ್ರಿಲಿಯಂಟ್ ಗೋಲ್ಡ್ ಮೆಟಾಲಿಕ್, ಟಫೆಟಾ ವೈಟ್, ಕಾರ್ನೇಲಿಯನ್ ರೆಡ್ ಪರ್ಲ್, ಮಜಸ್ಟಿಕ್ ಬ್ಲೂ ಮೆಟಾಲಿಕ್, ಅರ್ಬನ್ ಟೈಟಾನಿಯಂ ಮೆಟಾಲಿಕ್, ಅಲಬಾಸ್ಟರ್ ಸಿಲ್ವರ್ ಮೆಟಾಲಿಕ್ ಹಾಗೂ ಕ್ರಿಸ್ಟಲ್ ಬ್ಲಾಕ್ ಪರ್ಲ್ ಬಣ್ಣಗಳಲ್ಲಿ ಕಾರು ಲಭ್ಯವಿದೆ. ಆಂ್ಯಟಿ-ಲಾಕ್ ಬ್ರೇಕ್‌ಪ್ರಯಾಣಿಕರ ರಕ್ಷಣೆಗೆ ಚಾಲಕ ಹಾಗೂ ಪಕ್ಕದ ಸೀಟಿನ ಮುಂಭಾಗ ಸೇರಿದಂತೆ ಎರಡು ಎಸ್‌ಆರ್‌ಎಸ್ ಏರ್‌ಬ್ಯಾಗ್ ಇಲ್ಲಿದೆ. ಒಮ್ಮೆಗೇ ಬ್ರೇಕ್ ಹಾಕಿದಾಗ ಚಕ್ರಗಳ ಕಾರ್ಯ ಸ್ಥಗಿತಗೊಳ್ಳುವುದನ್ನು ತಡೆಯಲು 'ಆಂ್ಯಟಿ-ಲಾಕ್ ಬ್ರೇಕ್‌' ಇದೆ. ಪಾದಚಾರಿಗಳಿಗೆ ತೊಂದರೆಯಾಗದಂತೆ ಕಾರಿನ ಮುಂಭಾಗ ವಿನ್ಯಾಸಗೊಂಡಿದೆ. ಮೊಬಿಲಿಯೊ ಡೀಸೆಲ್ ಇ ಐ ಡಿಟಿಇಸಿ 8.25 ಲಕ್ಷ ಎಸ್ ಐ ಡಿಟಿಇಸಿ 8.99 ಲಕ್ಷ ವಿ ಐ ಡಿಟಿಇಸಿ 10.18 ಲಕ್ಷ ಆರ್‌ಎಸ್ ಐ ಡಿಟಿಇಸಿ 1.31 ಲಕ್ಷ ಮೊಬಿಲಿಯೊ ಪೆಟ್ರೋಲ್ ಇ ಐ ವಿಟಿಇಸಿ 6.83 ಲಕ್ಷ ಎಸ್ ಐ ವಿಟಿಇಸಿ 7.85 ಲಕ್ಷ ವಿ ಐ ವಿಟಿಇಸಿ 9.06 ಲಕ್ಷ = ಕಾರ್ತಿಕ್ ಭಟ್